10
ಒಳ್ಳೆಯ ಕುರುಬ ಮತ್ತು ಆತನ ಕುರಿ
“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಬಾಗಿಲಿನಿಂದ ಕುರಿಹಟ್ಟಿಯೊಳಗೆ ಬಾರದೆ ಬೇರೆ ಎಲ್ಲಿಂದಾದರೂ ಒಳಗೆ ಬರುವವನು ಕಳ್ಳನೂ ದರೋಡೆಕೋರನೂ ಆಗಿದ್ದಾನೆ. ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು. ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ. ಅವನು ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ. ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವವು. ಏಕೆಂದರೆ ಅವು ಅಪರಿಚಿತನ ಸ್ವರವನ್ನು ಗುರುತಿಸುವುದಿಲ್ಲ,” ಎಂದರು. ಯೇಸು ಈ ಸಾಮ್ಯವನ್ನು ಅವರಿಗೆ ಹೇಳಿದರು. ಆದರೂ ಯೇಸು ಅವರ ಸಂಗಡ ಮಾತನಾಡಿದ ವಿಷಯಗಳು ಏನಾಗಿದ್ದವು ಎಂದು ಫರಿಸಾಯರು ಗ್ರಹಿಸಲಿಲ್ಲ.
ಯೇಸು ತಿರುಗಿ ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ. ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ ದರೋಡೆಕೋರರೂ ಆಗಿದ್ದಾರೆ. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ನಾನೇ ಬಾಗಿಲು; ನನ್ನ ಮೂಲಕವಾಗಿ ಯಾರು ಪ್ರವೇಶಿಸುವರೋ ಅವರೇ ಸುರಕ್ಷಿತವಾಗಿರುವರು. ಇದಲ್ಲದೆ ಅವರು ಒಳಗೆ ಹೋಗುವರು, ಹೊರಗೆ ಬರುವರು ಮತ್ತು ಮೇವನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯಲು, ಕೊಯ್ಯಲು ಮತ್ತು ನಾಶಮಾಡಲು ಮಾತ್ರ ಬರುತ್ತಾನೆ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
11 “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ. 12 ಕೂಲಿಯಾಳು ಕುರಿಗಳ ಕುರುಬನಲ್ಲ; ಅವನು ತೋಳ ಬರುವುದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಹಿಂಡನ್ನು ಚದರಿಸುತ್ತದೆ. 13 ಅವನು ಕೇವಲ ಕೂಲಿಯಾಳು ಆಗಿರುವುದರಿಂದ ಅವನಿಗೆ ಕುರಿಗಳ ಚಿಂತೆಯಿಲ್ಲ.
14 “ನಾನೇ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ತಿಳಿದಿದ್ದೇನೆ. ನನ್ನ ಕುರಿಗಳು ನನ್ನನ್ನು ತಿಳಿದಿವೆ. 15 ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ. 16 ಈ ಹಿಂಡಿಗೆ ಸೇರದ ಬೇರೆ ಕುರಿಗಳು ನನಗಿವೆ. ಅವುಗಳನ್ನೂ ಸಹ ನಾನು ತರಬೇಕಾಗಿದೆ. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಹಿಂಡೂ ಒಬ್ಬನೇ ಕುರುಬನೂ ಆಗಿರುವುದು. 17 ಮರಳಿ ಪಡೆಯುವಂತೆ ನನ್ನ ಪ್ರಾಣವನ್ನು ನಾನು ಕೊಡುವುದರಿಂದ ನನ್ನ ತಂದೆಯು ನನ್ನನ್ನು ಪ್ರೀತಿಸುತ್ತಾರೆ. 18 ಯಾರೂ ನನ್ನ ಪ್ರಾಣವನ್ನು ನನ್ನಿಂದ ತೆಗೆಯುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುವೆನು. ನಾನು ಅದನ್ನು ಕೊಡುವುದಕ್ಕೆ ನನಗೆ ಅಧಿಕಾರವಿದೆ. ಅದನ್ನು ಪುನಃ ತೆಗೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಪಡೆದಿದ್ದೇನೆ,” ಎಂದರು.
19 ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಮತ್ತೆ ಭೇದ ಉಂಟಾಯಿತು. 20 ಅವರಲ್ಲಿ ಅನೇಕರು, “ಆತನಿಗೆ ದೆವ್ವ ಹಿಡಿದಿದೆ. ಆತನು ಹುಚ್ಚನಾಗಿದ್ದಾನೆ, ನೀವು ಏಕೆ ಆತನಿಗೆ ಕಿವಿಗೊಡುತ್ತೀರಿ?” ಎಂದರು.
21 ಇನ್ನು ಕೆಲವರು, “ಇವು ದೆವ್ವ ಹಿಡಿದವನ ಮಾತುಗಳಲ್ಲ. ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
ಯೆಹೂದ್ಯರ ಅವಿಶ್ವಾಸ
22 ಆಗ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವಿತ್ತು.* ಅದು ಚಳಿಗಾಲವಾಗಿತ್ತು. 23 ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು. 24 ಆಗ ಯೆಹೂದ್ಯರು ಯೇಸುವನ್ನು ಸುತ್ತುವರೆದು, “ಇನ್ನೆಷ್ಟು ಕಾಲ ನಮ್ಮನ್ನು ಸಂಶಯದಲ್ಲಿರಿಸುವೆ? ನೀನು ಕ್ರಿಸ್ತನಾಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು.
25 ಯೇಸು ಅವರಿಗೆ, “ನಾನು ನಿಮಗೆ ಹೇಳಿದೆನು. ಆದರೆ ನೀವು ನಂಬುತ್ತಾ ಇಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ. 26 ನೀವು ನನ್ನ ಕುರಿಗಳಲ್ಲ, ಆದ್ದರಿಂದಲೇ ನೀವು ನಂಬುವುದಿಲ್ಲ. 27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. 28 ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದಿಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು. 29 ಅವುಗಳನ್ನು ನನಗೆ ಕೊಟ್ಟ ನನ್ನ ತಂದೆ ಎಲ್ಲರಿಗಿಂತಲೂ ಮಹೋನ್ನತರು. ನನ್ನ ತಂದೆಯ ಕೈಯಿಂದ ಅವುಗಳನ್ನು ಯಾರೂ ಕಸಿದುಕೊಳ್ಳಲಾರರು. 30 ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ,” ಎಂದು ಉತ್ತರಕೊಟ್ಟರು.
31 ಆಗ ಯೆಹೂದಿ ನಾಯಕರು ಪುನಃ ಯೇಸುವಿನ ಮೇಲೆ ಕಲ್ಲೆಸೆಯಲು ಕಲ್ಲುಗಳನ್ನು ಎತ್ತಿಕೊಂಡರು. 32 ಅದಕ್ಕೆ ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕಾರ್ಯಗಳನ್ನು ನಾನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕಾರ್ಯಕ್ಕಾಗಿ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದರು.
33 ಅದಕ್ಕೆ ಯೆಹೂದ್ಯರು ಯೇಸುವಿಗೆ, “ಒಳ್ಳೆಯ ಕಾರ್ಯಗಳಿಗಾಗಿಯಲ್ಲ. ನೀನು ಮನುಷ್ಯನಾಗಿದ್ದು ನಿನ್ನನ್ನೇ ದೇವರನ್ನಾಗಿ ಮಾಡಿಕೊಂಡದ್ದಕ್ಕೂ ದೇವದೂಷಣೆ ಮಾಡುತ್ತಿರುವದಕ್ಕೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ,” ಎಂದು ಉತ್ತರಕೊಟ್ಟರು.
34 ಅದಕ್ಕೆ ಯೇಸು, “ ‘ನೀವು ದೇವರುಗಳು,’ ಎಂದು ದೇವರೇ ಹೇಳಿರುವುದಾಗಿ ನಿಮ್ಮ ನಿಯಮದಲ್ಲಿ ಬರೆದಿಲ್ಲವೋ? 35 ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಆತನು ಕರೆದಿರುವುದಾದರೆ, ಪವಿತ್ರ ವೇದವು ಸುಳ್ಳಾಗಲಾರದು. 36 ಹೀಗಿರುವಾಗ ತಂದೆಯು ಪ್ರತಿಷ್ಠಿಸಿ ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಿರುವ ನಾನು, ‘ದೇವರ ಪುತ್ರನಾಗಿದ್ದೇನೆ,’ ಎಂದು ಹೇಳಿದ್ದಕ್ಕೆ, ‘ನೀನು ದೇವದೂಷಣೆ ಮಾಡುತ್ತೀ,’ ಎಂದು ನೀವು ನನಗೆ ಹೇಳುತ್ತೀರಲ್ಲಾ? 37 ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ. 38 ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದಿದ್ದರೂ ಈ ಕಾರ್ಯಗಳನ್ನಾದರೂ ನಂಬಿರಿ. ಆಗ ತಂದೆಯು ನನ್ನಲ್ಲಿಯೂ ನಾನು ತಂದೆಯಲ್ಲಿಯೂ ಇರುವುದು ನಿಮಗೆ ಗೊತ್ತಾಗುವುದು ಹಾಗೂ ಮನದಟ್ಟಾಗುವುದು,” ಎಂದರು. 39 ತಿರುಗಿ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡು ಹೋದರು.
40 ಆಮೇಲೆ ಯೇಸು ಯೊರ್ದನ್ ನದಿಯನ್ನು ದಾಟಿ ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಬಂದು, ಅಲ್ಲಿಯೇ ವಾಸಮಾಡಿದರು. 41 ಆಗ ಅನೇಕರು ಯೇಸುವಿನ ಬಳಿಗೆ ಬಂದು, “ಯೋಹಾನನು ಯಾವುದೇ ಸೂಚಕಕಾರ್ಯವನ್ನು ಮಾಡಲಿಲ್ಲ. ಆದರೆ ಇವರ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲವೂ ಸತ್ಯವಾಗಿದೆ,” ಎಂದರು. 42 ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.
* 10:22 10:22 ಹೀಬ್ರೂ ಭಾಷೆಯಲ್ಲಿ ಹನುಕ್ಕಾ ಹಬ್ಬ 10:34 10:34 ಕೀರ್ತನೆ 82:6