6
ನಾಲ್ಕು ರಥಗಳು
1 ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು.
2 ಮೊದಲನೆಯ ರಥಕ್ಕೆ ಕೆಂಪು ಕುದುರೆಗಳಿದ್ದವು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು,
3 ಮೂರನೆಯ ರಥಕ್ಕೆ ಬಿಳಿ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಕುದುರೆಗಳಿದ್ದವು. ಇವೆಲ್ಲವೂ ಬಲವಾದ ಕುದುರೆಗಳು.
4 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇದೇನು?” ಎಂದೆನು.
5 ದೂತನು ನನಗೆ, “ಇವು ಸ್ವರ್ಗದ ನಾಲ್ಕು ಆತ್ಮಗಳು. ಇವು ಇಡೀ ಜಗತ್ತಿನ ಕಡೆಗೆ ಯೆಹೋವ ದೇವರ ಮುಂದೆ ನಿಂತಲ್ಲಿಂದ ಹೊರಟಿವೆ.
6 ಕಪ್ಪು ಕುದುರೆಗಳ ರಥ, ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳು ಪಶ್ಚಿಮಕ್ಕೆ ಹಿಂದೆ ಹೋಯಿತು. ಮಚ್ಚೆ ಮಚ್ಚೆಯ ಕುದುರೆಯ ರಥ ದಕ್ಷಿಣಕ್ಕೆ ಹೊರಟಿತು.”
7 ಕೆಂಪು ಕುದುರೆಗಳ ರಥ ಹೊರಟು ಲೋಕದಲ್ಲಿ ಸಂಚಾರ ಮಾಡಲು ಹೋಗುವುದಕ್ಕೆ ನೋಡಿದವು. ಆಗ ಅವನು, “ಹೋಗಿ ಲೋಕದಲ್ಲಿ ಅತ್ತಿತ್ತ ನಡೆದಾಡುವುದಕ್ಕೆ ಇಲ್ಲಿಂದ ಹೋಗಿರಿ,” ಎಂದನು. ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
8 ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.
ಯೆಹೋಶುವನಿಗೆ ಕಿರೀಟ
9 ಯೆಹೋವ ದೇವರ ವಾಕ್ಯವು ನನಗೆ ಬಂದಿತು:
10 “ಆ ಸೆರೆಯವರಿಂದ, ಅಂದರೆ ಬಾಬಿಲೋನಿನಿಂದ ಬಂದಿರುವ ಹೆಲ್ದಾಯನಿಂದಲೂ, ತೋಬೀಯನಿಂದಲೂ, ಯೆದಾಯನಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು, ಅದೇ ದಿವಸದಲ್ಲಿ ನೀನು ಜೆಫನ್ಯನ ಮಗ ಯೋಷೀಯನ ಮನೆಗೆ ಹೋಗು.
11 ಅಲ್ಲಿ ಬೆಳ್ಳಿ, ಬಂಗಾರವನ್ನು ತೆಗೆದುಕೊಂಡು, ಕಿರೀಟಗಳನ್ನು ಮಾಡಿ, ಅವುಗಳನ್ನು ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನ ತಲೆಯ ಮೇಲೆ ಇಟ್ಟು,
12 ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.
13 ಅವನೇ ಯೆಹೋವ ದೇವರ ದೇವಾಲಯವನ್ನು ಕಟ್ಟಿದ ಮೇಲೆ, ರಾಜವೈಭವವನ್ನು ಧರಿಸಿ ಸಿಂಹಾಸನದ ಮೇಲೆ ಆಸೀನನಾಗಿ ಆಳುವನು. ಅವನ ಸಿಂಹಾಸನದಲ್ಲಿ ಒಬ್ಬ ಯಾಜಕನಾಗಿರುವನು. ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವುದು.
14 ಆ ಕಿರೀಟಗಳು ಹೇಲೆಮ್, ತೋಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ ಇವರ ಜ್ಞಾಪಕಾರ್ಥವಾಗಿ ಯೆಹೋವ ದೇವರ ಆಲಯದಲ್ಲಿ ಇರುವುವು.
15 ದೂರದಲ್ಲಿರುವವರು ಬಂದು ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಸಹಾಯ ಮಾಡುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ನೀವು ತಿಳಿಯುವಿರಿ. ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಜಾಗ್ರತೆಯಾಗಿ ಕಿವಿಗೊಟ್ಟರೆ, ಇದು ನೆರವೇರುವುದು.”