ತೀತನಿಗೆ
ಪೌಲನು ಬರೆದ ಪತ್ರಿಕೆ
1
1 ದೇವರು ಆಯ್ದುಕೊಂಡವರ ನಂಬಿಕೆಗನುಸಾರವೂ ಭಕ್ತಿಗನುಸಾರವಾದ ಸತ್ಯದ ತಿಳುವಳಿಕೆಗನುಸಾರವೂ ದೇವರ ಸೇವಕನೂ ಕ್ರಿಸ್ತ ಯೇಸುವಿನ ಅಪೊಸ್ತಲನೂ ಆಗಿರುವ ಪೌಲನೆಂಬ ನನಗೆ
2 ಸುಳ್ಳಾಡದ ದೇವರು, ಕಾಲಾರಂಭಕ್ಕೆ ಮುಂಚೆಯೇ ನಿತ್ಯಜೀವದ ನಿರೀಕ್ಷೆಯನ್ನು ವಾಗ್ದಾನಮಾಡಿದ್ದಾರೆ.
3 ತಮ್ಮ ವಾಕ್ಯ ಸಾರುವುದರ ಮೂಲಕ ತಕ್ಕ ಕಾಲದಲ್ಲಿ ಪ್ರಕಟಿಸಿ ನಮ್ಮ ರಕ್ಷಕರಾದ ದೇವರ ಆಜ್ಞೆಗನುಸಾರವಾಗಿ ನನಗೆ ಒಪ್ಪಿಸಿದರು.
4 ನಮ್ಮಲ್ಲಿ ಹುದುವಾಗಿರುವ ವಿಶ್ವಾಸಕ್ಕೆ ಅನುಸಾರವಾಗಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವುದು:
ತಂದೆಯಾದ ದೇವರಿಂದಲೂ ನಮಗೆ ರಕ್ಷಕ ಹಾಗೂ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ.
ಸಭಾಹಿರಿಯರ ಆಯ್ಕೆ
5 ಕ್ರೇತದ್ವೀಪದಲ್ಲಿ ಪೂರ್ಣಗೊಳಿಸದ ಕಾರ್ಯಗಳನ್ನು ನೀನು ಕ್ರಮಪಡಿಸಿ ನಾನು ನಿನಗೆ ಆಜ್ಞಾಪಿಸಿದ ಪ್ರಕಾರ ಪ್ರತಿಯೊಂದು ಪಟ್ಟಣದಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆನು.
6 ಸಭೆಯ ಹಿರಿಯನು, ನಿಂದಾರಹಿತನೂ ಪತ್ನಿಗೆ ನಂಬಿಗಸ್ತನೂ ಆಗಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ದುರ್ಮಾಗಿಗಳು ಇಲ್ಲವೆ ತಿರುಗಿ ಬೀಳುವವರೂ ಎಂಬ ಆರೋಪವನ್ನು ಹೊಂದಿರಬಾರದು.
7 ಏಕೆಂದರೆ ಸಭಾಧ್ಯಕ್ಷನು ದೇವರ ಕಾರ್ಯಭಾರವನ್ನು ಉಳ್ಳವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಗರ್ವಿಷ್ಠನೂ ಮುಂಗೋಪಿಯೂ ಮದ್ಯಪಾನ ಮಾಡುವವನೂ ಹೊಡೆದಾಡುವವನೂ ನೀಚಲಾಭವನ್ನು ಆಶಿಸುವವನೂ ಆಗಿರಬಾರದು.
8 ಆದರೆ, ಅವನು ಅತಿಥಿ ಸತ್ಕಾರ ಮಾಡುವವನೂ ಒಳ್ಳೆಯದನ್ನು ಪ್ರೀತಿಸುವವನೂ ಸ್ವಯಂನಿಯಂತ್ರವುಳ್ಳವನೂ ನ್ಯಾಯವಂತನೂ ಪರಿಶುದ್ಧನೂ ಶಿಸ್ತುಳ್ಳವನಾಗಿರಬೇಕು.
9 ಇತರರನ್ನು ಸ್ವಸ್ಥಬೋಧನೆಯಿಂದ ಪ್ರೋತ್ಸಾಹಿಸುವುದಕ್ಕೂ ಎದುರಿಸುವವರನ್ನು ಖಂಡಿಸುವಂತೆ ಮಾತನಾಡುವುದಕ್ಕೂ ಶಕ್ತನಾಗಿರಲು ಅವನು ಬೋಧಿಸಿದ ಪ್ರಕಾರ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರಬೇಕು.
ಒಳಿತು ಮಾಡದವರನ್ನು ಗದರಿಸುವುದು
10 ಏಕೆಂದರೆ, ಅನೇಕ ದಂಗೆಕೋರ ಜನರೂ ಬರೀ ಮಾತನಾಡುವವರೂ ಮೋಸಗೊಳಿಸುವವರೂ ಮುಖ್ಯವಾಗಿ ಸುನ್ನತಿಯಾಗಬೇಕೆಂದು ಹೇಳುವ ಗುಂಪಿನವರೂ ಇದ್ದಾರೆ.
11 ಅವರು ನೀಚಲಾಭವನ್ನು ಹೊಂದುವುದಕ್ಕಾಗಿ ಮಾಡಬಾರದ ಬೋಧನೆಯನ್ನು ಮಾಡಿ ಇಡೀ ಕುಟುಂಬಗಳನ್ನೇ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಅವರ ಬಾಯಿಗಳನ್ನು ಮುಚ್ಚಿಸಬೇಕಾಗಿದೆ.
12 “ಕ್ರೇತದವರು ಯಾವಾಗಲೂ ಸುಳ್ಳುಗಾರರೂ ದುಷ್ಟಮೃಗಗಳಂಥವರೂ ಸೋಮಾರಿಗಳಾದ ಹೊಟ್ಟೆಬಾಕರೂ ಆಗಿದ್ದಾರೆ!” ಎಂದು ಅವರ ಸ್ವಂತ ಪ್ರವಾದಿಗಳಲ್ಲಿ ಒಬ್ಬನು ಹೇಳಿದನು.
13 ಈ ಸಾಕ್ಷಿಯು ನಿಜವೇ. ಇದರ ದೆಸೆಯಿಂದ ಅವರು ನಂಬಿಕೆಯಲ್ಲಿ ಸ್ವಸ್ಥರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು.
14 ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಸತ್ಯದಿಂದ ದೂರಮಾಡುವ ಮಾನವರ ಆಜ್ಞೆಗಳಿಗೂ ಲಕ್ಷ್ಯಕೊಡಬಾರದು.
15 ಶುದ್ಧರಿಗೆ ಎಲ್ಲವೂ ಶುದ್ಧವೇ. ಆದರೆ ಮಲಿನವಾದವರಿಗೂ ಅವಿಶ್ವಾಸಿಗಳಿಗೂ ಯಾವುದೂ ಶುದ್ಧವಲ್ಲ. ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಮಲಿನವಾಗಿವೆ.
16 ತಾವು ದೇವರನ್ನು ತಿಳಿದವರೆಂದು ಅವರು ವಾದಿಸುತ್ತಾರೆ. ಆದರೆ ತಮ್ಮ ಕೃತ್ಯಗಳಿಂದ ದೇವರನ್ನೇ ಅಲ್ಲಗಳೆಯುವರಾಗಿದ್ದಾರೆ. ಅವರು ಅಸಹ್ಯರೂ ಅವಿಧೇಯರೂ ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೆ ಅಯೋಗ್ಯರಾಗಿದ್ದಾರೆ.