4
1 ಸಮುಯೇಲನ ವಾಕ್ಯವು ಇಸ್ರಾಯೇಲದಲ್ಲಿ ಹರಡಿತು.
ಫಿಲಿಷ್ಟಿಯರು ಮಂಜೂಷವನ್ನು ವಶಪಡಿಸಿಕೊಂಡದ್ದು
ಇಸ್ರಾಯೇಲರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು, ಎಬೆನೆಜೆರಿನ ಸಮೀಪದಲ್ಲಿ ದಂಡಿಳಿದರು. ಫಿಲಿಷ್ಟಿಯರು ಅಫೇಕಿನಲ್ಲಿ ದಂಡಿಳಿದರು.
2 ಫಿಲಿಷ್ಟಿಯರು ಇಸ್ರಾಯೇಲಿಗೆ ಎದುರಾಗಿ ವ್ಯೂಹವನ್ನು ಕಟ್ಟಿ ಯುದ್ಧಮಾಡಿದಾಗ, ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಸೋತರು. ಫಿಲಿಷ್ಟಿಯರು ಯುದ್ಧ ರಂಗದಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರ ಜನರನ್ನು ಹತಮಾಡಿದರು.
3 ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, “ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ,” ಎಂದರು.
4 ಕೆರೂಬಿಗಳ ಮಧ್ಯದಲ್ಲಿರುವ ಸೇನಾಧೀಶ್ವರ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬರಲು ಶೀಲೋವಿಗೆ ಜನರನ್ನು ಕಳುಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು.
5 ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ, ಇಸ್ರಾಯೇಲರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.
6 ಅವರ ಆರ್ಭಟವು ಫಿಲಿಷ್ಟಿಯರಿಗೆ ಕೇಳಿದಾಗ, “ಹಿಬ್ರಿಯರ ಪಾಳೆಯದ ಈ ಮಹಾ ಆರ್ಭಟವೇನು?” ಎಂದು ವಿಚಾರಿಸಿದರು.
ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ಪಾಳೆಯದಲ್ಲಿ ಬಂತೆಂದು ತಿಳಿದುಕೊಂಡರು.
7 “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು, ಫಿಲಿಷ್ಟಿಯರು ಭಯಪಟ್ಟು, ಅಯ್ಯೋ! ಪೂರ್ವದಲ್ಲಿ ಇಂಥದ್ದು ಆಗಿರಲಿಲ್ಲ.
8 ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವರ‍್ಯಾರು? ಈಜಿಪ್ಟಿನವರನ್ನು ಮರುಭೂಮಿಯಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
9 ಫಿಲಿಷ್ಟಿಯರೇ, ನೀವು ಬಲಗೊಂಡು ಶೂರರಾಗಿರಿ. ಹಿಬ್ರಿಯರು ನಿಮಗೆ ಗುಲಾಮರಾಗಿ ಮಾಡಿದ ಪ್ರಕಾರ ನೀವು ಅವರಿಗೆ ಗುಲಾಮರಾಗದ ಹಾಗೆ ಶೂರರಾಗಿ ಇದ್ದು, ಯುದ್ಧಮಾಡಿರೆಂದು ಹೇಳಿಕೊಂಡರು.
10 ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲರು ಸೋತು, ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾ ಸಂಹಾರವಾಯಿತು. ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು.
11 ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಮರಣಹೊಂದಿದರು.
ಏಲಿಯ ಮರಣ
12 ಅದೇ ದಿವಸದಲ್ಲಿ ಬೆನ್ಯಾಮೀನನಾದ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಯುದ್ಧರಂಗದಿಂದ ಶೀಲೋವಿಗೆ ಓಡಿಬಂದನು.
13 ಅವನು ಬರುವಾಗ, ಏಲಿಯು ದೇವರ ಮಂಜೂಷಕ್ಕೋಸ್ಕರ ತನ್ನ ಹೃದಯವು ನಡುಗುತ್ತಾ ಇರುವುದರಿಂದ, ಆಸನದ ಮೇಲೆ ಮಾರ್ಗದ ಬಳಿಯಲ್ಲಿ ನಿರೀಕ್ಷಿಸುತ್ತಾ ಕುಳಿತಿದ್ದನು. ಊರಲ್ಲಿ ವರ್ತಮಾನ ತಿಳಿಸಲು ಆ ಮನುಷ್ಯನು ಪಟ್ಟಣದಲ್ಲಿ ಪ್ರವೇಶಿಸಿದಾಗ ಪಟ್ಟಣವೆಲ್ಲಾ ಕೂಗಿತು.
14 ಕೂಗುವ ಶಬ್ದವನ್ನು ಏಲಿಯು ಕೇಳಿದಾಗ, “ಆ ಗುಂಪಿನ ಶಬ್ದ ಏನು?” ಎಂದನು.
ಆಗ ಆ ಮನುಷ್ಯನು ತ್ವರೆಯಾಗಿ ಬಂದು ಏಲಿಗೆ ತಿಳಿಸಿದನು.
15 ಏಲಿಯು ತೊಂಬತ್ತೆಂಟು ವರುಷ ಪ್ರಾಯದವನಾಗಿದ್ದನು. ಅವನು ಕಾಣದ ಹಾಗೆ ಅವನ ಕಣ್ಣುಗಳು ಮಬ್ಬಾಗಿದ್ದವು.
16 ಆ ಮನುಷ್ಯನು ಏಲಿಗೆ, “ಯುದ್ಧರಂಗದಿಂದ ಬಂದವನು ನಾನೇ; ನಾನು ಈ ಹೊತ್ತು ಯುದ್ಧರಂಗದಿಂದ ಓಡಿ ಬಂದೆನು,” ಎಂದನು.
ಆಗ ಅವನು, “ನನ್ನ ಮಗನೇ, ಅಲ್ಲಿ ನಡೆದ ವರ್ತಮಾನವೇನು?” ಎಂದನು.
17 ಅದಕ್ಕೆ ವರ್ತಮಾನ ತಂದವನು, “ಇಸ್ರಾಯೇಲರು ಫಿಲಿಷ್ಟಿಯರ ಮುಂದೆ ಓಡಿಹೋದರು. ಜನರಲ್ಲಿ ದೊಡ್ಡ ಸಂಹಾರವಾಯಿತು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿಯೂ, ಫೀನೆಹಾಸನೂ ಮರಣಹೊಂದಿದರು. ದೇವರ ಮಂಜೂಷವು ಶತ್ರುವಶವಾಯಿತು,” ಎಂದನು.
18 ವೃದ್ಧನೂ ಸ್ಥೂಲಕಾಯನೂ ಆದ ಏಲಿಯು ದೇವರ ಮಂಜೂಷದ ಮಾತನ್ನು ಕೇಳಿದಾಗ, ಆಸನದ ಮೇಲಿಂದ ಬಾಗಿಲಿನ ಕಡೆಗೆ ಹಿಂದಕ್ಕೆ ಬಿದ್ದು, ಕುತ್ತಿಗೆ ಮುರಿದು ಮರಣಹೊಂದಿದನು. ಅವನು ನಾಲ್ವತ್ತು ವರುಷ ಇಸ್ರಾಯೇಲರಿಗೆ ನ್ಯಾಯತೀರಿಸಿದನು.
19 ಇದಲ್ಲದೆ ಫೀನೆಹಾಸನ ಹೆಂಡತಿಯಾದ ಅವನ ಸೊಸೆಯು ಗರ್ಭಿಣಿಯಾಗಿ ಹೆರುವ ಕಾಲದಲ್ಲಿದ್ದಳು. ಅವಳು, ದೇವರ ಮಂಜೂಷವು ಶತ್ರು ವಶವಾಯಿತೆಂಬ ವರ್ತಮಾನವನ್ನೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರೆಂಬುದನ್ನೂ ಕೇಳಿದಾಗ, ಅವಳಿಗೆ ಪ್ರಸವವೇದನೆ ಉಂಟಾಗಿ, ಅವಳು ಗಂಡು ಮಗುವನ್ನು ಹೆತ್ತಳು.
20 ಅವಳು ಸಾಯುವ ವೇಳೆಯಲ್ಲಿ, ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು, “ಭಯಪಡಬೇಡ. ಗಂಡು ಮಗುವನ್ನು ಹೆತ್ತಿದ್ದೀ,” ಎಂದು ಅವಳಿಗೆ ಹೇಳಿದರು. ಆಕೆ ಅವರ ಮಾತಿಗೆ ಲಕ್ಷ್ಯವನ್ನೂ ಕೊಡಲಿಲ್ಲ, ಪ್ರತ್ಯುತ್ತರವನ್ನೂ ಕೊಡಲಿಲ್ಲ.
21 ಆದರೆ ಅವಳು ಅದಕ್ಕೆ ಉತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರು ವಶವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರಿಂದಲೂ ದೇವರ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು ಎಂದು ಹೇಳಿ, ಆ ಕೂಸಿಗೆ, “ಈಕಾಬೋದ್,” ಎಂದು ಹೆಸರಿಟ್ಟಳು.
22 ಏಕೆಂದರೆ ಅವಳು, “ದೇವರ ಮಂಜೂಷವು ಶತ್ರು ವಶವಾಗಿ ಹೋದದ್ದರಿಂದ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು,” ಎಂದು ಹೇಳಿದಳು.