17
ಮೃಗದ ಮೇಲಿನ ಸ್ತ್ರೀ
1 ಏಳು ಬೋಗುಣಿಗಳನ್ನು ಹಿಡಿದಿದ್ದ ಏಳು ದೂತರಲ್ಲೊಬ್ಬನು ನನಗೆ, “ಬಾ, ಬಹಳ ನೀರುಗಳ ಮೇಲೆ ಕುಳಿತಿರುವ ಮಹಾಜಾರಸ್ತ್ರೀಗಾಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
2 ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು. ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು,” ಎಂದು ಹೇಳಿದನು.
3 ಅನಂತರ ಅವನು ನನ್ನನ್ನು ಆತ್ಮನಲ್ಲಿ ಅರಣ್ಯಕ್ಕೆ ಒಯ್ದನು. ಅಲ್ಲಿ ಒಬ್ಬ ಸ್ತ್ರೀಯು, ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದು, ದೇವದೂಷಣೆಯ ಹೆಸರುಗಳಿಂದ ತುಂಬಿರುವ ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿರುವುದನ್ನು ಕಂಡೆನು.
4 ಆ ಸ್ತ್ರೀಯು ನೇರಳೆ ಮತ್ತು ಕಡುಗೆಂಪು ಬಣ್ಣದ ವಸ್ತ್ರಗಳನ್ನು ಧರಿಸಿಕೊಂಡು ಚಿನ್ನ, ಅಮೂಲ್ಯವಾದ ಹರಳು, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ ಅಸಹ್ಯವಾದ ವಸ್ತುಗಳಿಂದಲೂ ಮತ್ತು ತನ್ನ ಅಶುದ್ಧ ಅನೈತಿಕತೆಯಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
5 ಆಕೆಯ ಹಣೆಯ ಮೇಲೆ:
“ಮಹಾ ಬಾಬಿಲೋನ್,
ಜಾರ ಸ್ತ್ರೀಯರಿಗೂ
ಭೂಮಿಯ ಎಲ್ಲಾ ಅಸಹ್ಯವಾದವುಗಳಿಗೂ ತಾಯಿ!”
ಎಂದು ನಿಗೂಢ ಹೆಸರು ಬರೆದಿತ್ತು.
6 ಆ ಸ್ತ್ರೀಯು ಪರಿಶುದ್ಧರ ರಕ್ತವನ್ನೂ ಮತ್ತು ಯೇಸುವಿನ ಸಾಕ್ಷಿಗಳಾಗಿದ್ದವರ ರಕ್ತವನ್ನೂ ಕುಡಿದಿರುವುದನ್ನು ನಾನು ಕಂಡೆನು.
ಆಕೆಯನ್ನು ನಾನು ಕಂಡಾಗ, ಬಹು ಆಶ್ಚರ್ಯಗೊಂಡೆನು.
7 ಆಗ ದೂತನು ನನಗೆ: “ನೀನೇಕೆ ಆಶ್ಚರ್ಯಪಟ್ಟೆ? ನಾನು ನಿನಗೆ ಆ ಸ್ತ್ರೀಯ ವಿಷಯವಾಗಿಯೂ ಅವಳು ಹೊತ್ತುಕೊಂಡಿದ್ದ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದ ಮೃಗದ ವಿಷಯವಾಗಿಯೂ ಇರುವ ಗೂಡಾರ್ಥವನ್ನು ನಿನಗೆ ತಿಳಿಸುವೆನು.
8 ನೀನು ಕಂಡ ಮೃಗವು ಒಮ್ಮೆ ಇತ್ತು, ಈಗ ಇಲ್ಲ, ಪಾತಾಳದೊಳಗಿನಿಂದ ಮೇಲೆ ಬಂದು ವಿನಾಶಕ್ಕೆ ಹೊರಡಲಿದೆ. ಲೋಕದ ಸೃಷ್ಟಿಯಾದ ದಿನದಿಂದ ಯಾರ ಯಾರ ಹೆಸರುಗಳು ಜೀವಗ್ರಂಥದಲ್ಲಿ ಬರೆದಿರುವುದಿಲ್ಲವೋ, ಆ ಭೂನಿವಾಸಿಗಳು ಮೃಗವನ್ನು ನೋಡಿ ಆ ಮೃಗವು ಹಿಂದೆ ಇತ್ತು, ಈಗ ಇಲ್ಲ, ಇನ್ನು ಮೇಲೆ ಬರಲಿದೆ ಎಂದು ಆಶ್ಚರ್ಯಗೊಳ್ಳುವರು.
9 “ಆ ಏಳು ತಲೆಗಳು, ಆ ಸ್ತ್ರೀ ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ. ಅವು ಏಳು ರಾಜರುಗಳಾಗಿರುತ್ತವೆ.
10 ಅವರಲ್ಲಿ ಐದು ರಾಜರು ಬಿದ್ದಿದ್ದಾರೆ; ಒಬ್ಬನು ಇದ್ದಾನೆ, ಇನ್ನೊಬ್ಬನು ಇನ್ನೂ ಬಂದಿಲ್ಲ. ಅವನು ಬಂದಾಗ ಸ್ವಲ್ಪಕಾಲ ಇರಬೇಕಾಗುತ್ತದೆ.
11 ಹಿಂದೆ ಇದ್ದು ಈಗ ಇಲ್ಲದ ಆ ಮೃಗವು ಎಂಟನೆಯವನು. ಅವನು ಆ ಏಳು ಜನರಲ್ಲಿ ಸೇರಿದವನಾಗಿದ್ದು, ವಿನಾಶಕ್ಕೆ ಹೋಗುತ್ತಿದ್ದಾನೆ.
12 “ನೀನು ಕಂಡ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ ಒಂದು ಗಳಿಗೆಯವರೆಗೆ ಮೃಗದೊಂದಿಗೆ ಅಧಿಕಾರ ಹೊಂದುವವು.
13 ಅವರು ಏಕ ಮನಸ್ಸುಳ್ಳವರಾಗಿ, ಮೃಗಕ್ಕೆ ತಮ್ಮ ಬಲ ಮತ್ತು ಅಧಿಕಾರವನ್ನು ಕೊಡುವರು.
14 ಅವರು ಕುರಿಮರಿಯಾದವರ ಮೇಲೆ ಯುದ್ಧಮಾಡುವರು. ಆದರೆ ಕುರಿಮರಿಯಾದವರು ಕರ್ತರ ಕರ್ತರೂ ರಾಜಾಧಿರಾಜರೂ ಆಗಿರುವುದರಿಂದ ಅವರನ್ನು ಜಯಿಸುವರು. ಅವರೊಂದಿಗಿದ್ದವರು ದೇವರಿಂದ ಕರೆಹೊಂದಿದವರೂ ಆಯ್ದುಕೊಂಡವರೂ ನಂಬಿಗಸ್ತರೂ ಆಗಿರುವರು.”
15 ಅನಂತರ ದೂತನು ನನಗೆ, “ಜಾರಸ್ತ್ರೀ ಕೂತಿದ್ದ ಕಡೆ ನೀನು ಕಂಡ ನೀರುಗಳು, ಪ್ರಜೆಗಳನ್ನೂ ಸಮೂಹಗಳನ್ನೂ ರಾಷ್ಟ್ರಗಳನ್ನೂ ಭಾಷೆಗಳನ್ನೂ ಸೂಚಿಸುತ್ತವೆ.
16 ನೀನು ಕಂಡ ಆ ಮೃಗ ಮತ್ತು ಹತ್ತು ಕೊಂಬುಗಳು ಆ ಜಾರಸ್ತ್ರೀಯನ್ನು ದ್ವೇಷಿಸಿ, ಆಕೆಯನ್ನು ಗತಿಯಿಲ್ಲದವಳನ್ನಾಗಿಯೂ ಆಕೆಯನ್ನು ಬಟ್ಟೆ ಇಲ್ಲದವಳನ್ನಾಗಿಯೂ ಆಕೆಯ ಮಾಂಸವನ್ನು ತಿಂದು, ಆಕೆಯನ್ನು ಬೆಂಕಿಯಲ್ಲಿ ಸುಟ್ಟುಬಿಡುವವು.
17 ಏಕೆಂದರೆ, ದೇವರು ತಮ್ಮ ಮನಸ್ಸಿನಲ್ಲಿರುವುದನ್ನು ನಡೆಸುವಂತೆಯೂ ಅವುಗಳ ರಾಜ್ಯವನ್ನು ಮೃಗಕ್ಕೆ ಕೊಡಲು ಒಮ್ಮನಸ್ಸಾಗಿರುವಂತೆಯೂ ಮಾಡಿ, ದೇವರು ತಮ್ಮ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಇದನ್ನು ಅವುಗಳ ಹೃದಯದಲ್ಲಿಟ್ಟಿದ್ದಾರೆ.
18 ನೀನು ಕಂಡ ಆ ಸ್ತ್ರೀಯು ಭೂರಾಜರನ್ನು ಆಳುವ ಮಹಾನಗರಿಯೇ,” ಎಂದು ಹೇಳಿದನು.