14
ಕುರಿಮರಿ ಹಾಗೂ 1,44,000 ಜನರು
ನಾನು ನೋಡಲಾಗಿ, ಕುರಿಮರಿ ಆಗಿರುವವರು ಚೀಯೋನ್ ಪರ್ವತದ ಮೇಲೆ ನಿಂತಿದ್ದರು. ಕುರಿಮರಿಯವರ ಜೊತೆಯಲ್ಲಿ ಒಂದು ಲಕ್ಷ ನಲವತ್ನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಕುರಿಮರಿಯವರ ಹೆಸರೂ ಕುರಿಮರಿಯವರ ತಂದೆಯ ಹೆಸರೂ ಬರೆಯಲಾಗಿದ್ದವು. ಇದಲ್ಲದೆ ಪರಲೋಕದಿಂದ ಜಲ ಪ್ರವಾಹದಂತೆಯೂ ಮಹಾ ಗುಡುಗಿನ ಶಬ್ದದಂತೆಯೂ ಇದ್ದ ಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ಕಿನ್ನರಿಗಳನ್ನು ನುಡಿಸುತ್ತಿರುವ ಕಿನ್ನರರ ಶಬ್ದದಂತಿತ್ತು. ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸಹಾಡನ್ನು ಹಾಡಿದರು. ಭೂಲೋಕದೊಳಗಿಂದ ಕೊಂಡುಕೊಳ್ಳಲಾದ ಆ ಒಂದು ಲಕ್ಷ ನಲವತ್ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ. ಏಕೆಂದರೆ ಇವರು ಕನ್ಯೆಯರಂತೆ ನಿಷ್ಕಳಂಕರು. ಕುರಿಮರಿ ಆಗಿರುವವರು ಹೋದಡೆಯಲ್ಲೆಲ್ಲಾ ಅವರ ಹಿಂದೆ ಹೋಗುವವರು ಇವರೇ. ಇವರು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿ ದೇವರಿಗೂ ಕುರಿಮರಿಯಾಗಿರುವವರಿಗೂ ಪ್ರಥಮಫಲದಂತಾದರು. ಇವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.
ಮೂವರು ದೇವದೂತರು
ಮತ್ತೊಬ್ಬ ದೇವದೂತನು ಆಕಾಶದ ಮಧ್ಯದಲ್ಲಿ ಹಾರುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ರಾಷ್ಟ್ರ, ಹಿನ್ನಲೆ, ಭಾಷೆ ಹಾಗೂ ಪ್ರಜೆಗಳವರಿಗೂ ಸಾರಿ ಹೇಳುವುದಕ್ಕೆ ನಿತ್ಯ ಸುವಾರ್ತೆಯು ಅವನಲ್ಲಿತ್ತು. ಅವನು, “ನೀವು ದೇವರಿಗೆ ಭಯಪಟ್ಟು ಅವರಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಅವರು ನ್ಯಾಯತೀರ್ಪು ಮಾಡುವ ಸಮಯ ಬಂದಿದೆ. ಭೂಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದ ದೇವರನ್ನೇ ಆರಾಧಿಸಿರಿ!” ಎಂದು ಮಹಾಧ್ವನಿಯಿಂದ ಹೇಳಿದನು.
ಅವನ ಹಿಂದೆ ಎರಡನೆಯವನಾದ ಒಬ್ಬ ದೇವದೂತನು ಬಂದು, “ ‘ಬಿದ್ದಳು, ಬಾಬಿಲೋನ್ ಮಹಾನಗರಿಯು ಬಿದ್ದಳು!’* ಆಕೆಯು ಸಕಲ ಜನಾಂಗಗಳಿಗೆ ತನ್ನ ಅತ್ಯಾಸಕ್ತಿಯ ಅನೈತಿಕತೆವೆಂಬ ದ್ರಾಕ್ಷಾರಸವನ್ನು ಕುಡಿಸಿದಳು,” ಎಂದು ಹೇಳಿದನು.
ಅವರ ಹಿಂದೆ ಮೂರನೆಯವನಾದ ಒಬ್ಬ ದೇವದೂತನು ಬಂದು, “ಯಾವುದಾದರೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ, ಕೈಯ ಮೇಲಾಗಲಿ ಗುರುತು ಹಾಕಿಸಿಕೊಂಡರೆ, 10 ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರೆಸದೆ ಹಾಕಿದ ಅವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಕುರಿಮರಿಯಾಗಿರುವವರ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು. 11 ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರು ಹಗಲಿರುಳೂ ವಿಶ್ರಾಂತಿ ಪಡುವುದಿಲ್ಲಾ!” ಎಂದು ಮಹಾಶಬ್ದದಿಂದ ಹೇಳಿದನು. 12 ಇದಕ್ಕಾಗಿಯೇ ದೇವರ ಆಜ್ಞೆಗಳನ್ನೂ ಯೇಸುವಿನಲ್ಲಿ ನಂಬಿಕೆಯನ್ನೂ ಕಾಪಾಡುವ ದೇವಜನರ ತಾಳ್ಮೆಯ ಸಹಿಷ್ಣುತೆ ಇದರಲ್ಲಿದೆ.
13 ಪರಲೋಕದಿಂದ ಒಂದು ಧ್ವನಿಯು ನನಗೆ, “ಇಂದಿನಿಂದ ಕರ್ತರಲ್ಲಿ ವಿಶ್ವಾಸವುಳ್ಳವರು ಧನ್ಯರು ಎಂಬುದಾಗಿ ಬರೆ!” ಎಂದು ಹೇಳಿತು.
ಅದಕ್ಕೆ ಪವಿತ್ರಾತ್ಮ ದೇವರು, “ಹೌದು, ಅವರ ಪ್ರಯಾಸಗಳು ತೀರಿದವು ಅವರಿಗೆ ವಿಶ್ರಾಂತಿಯಾಗುವುದು, ಅವರ ಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ!” ಎಂದು ಹೇಳುತ್ತಾರೆ.
ಭೂಲೋಕದ ಸುಗ್ಗಿಕಾಲ
14 ನಾನು ನೋಡಲಾಗಿ, ಒಂದು ಬಿಳಿ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯಪುತ್ರರಂತೆ ಒಬ್ಬರು ಕುಳಿತಿರುವುದನ್ನು ಕಂಡೆನು. ಅವರ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು. 15 ಆಗ ಮತ್ತೊಬ್ಬ ದೂತನು ದೇವಾಲಯದೊಳಗಿಂದ ಬಂದು ಮೇಘದ ಮೇಲೆ ಕುಳಿತಿದ್ದವರಿಗೆ, “ಭೂಮಿಯ ಪೈರು ಮಾಗಿದೆ. ಕೊಯ್ಯುವ ಕಾಲ ಬಂದಿರುವುದರಿಂದ, ನಿನ್ನ ಕುಡುಗೋಲನ್ನು ಹಾಕಿ ಕೊಯ್ಯಿ!” ಎಂದು ಮಹಾಧ್ವನಿಯಿಂದ ಕೂಗಿದನು. 16 ಮೇಘದ ಮೇಲೆ ಕುಳಿತಿದ್ದವರು ತಮ್ಮ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದರು. ಆಗ ಭೂಮಿಯ ಪೈರು ಕೊಯ್ಯಲಾಯಿತು.
17 ಮತ್ತೊಬ್ಬ ದೂತನು ಪರಲೋಕದಲ್ಲಿರುವ ದೇವಾಲಯದೊಳಗಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು. 18 ತರುವಾಯ ಬೆಂಕಿಗೆ ಅಧಿಕಾರಿಯಾದ ಇನ್ನೊಬ್ಬ ದೂತನು ಬಲಿಪೀಠದ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ, ಭೂಮಿಯ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರ್ತಿಯಾಗಿ ಮಾಗಿವೆ!” ಎಂದು ಮಹಾಧ್ವನಿಯಿಂದ ಕೂಗಿದನು. 19 ಆಗ ಆ ದೂತನು ತನ್ನ ಕುಡುಗೋಲನ್ನು ಭೂಮಿಗೆ ಹಾಕಿ, ಭೂಮಿಯ ದ್ರಾಕ್ಷಿಹಣ್ಣನ್ನು ಕೂಡಿಸಿ, ದೇವರ ಕೋಪವೆಂಬ ದೊಡ್ಡ ದ್ರಾಕ್ಷಿಯ ತೊಟ್ಟಿಯಲ್ಲಿ ಹಾಕಿದನು. 20 ಆಗ ಪಟ್ಟಣದ ಹೊರಗೆ ದ್ರಾಕ್ಷಿಯ ತೊಟ್ಟಿಯನ್ನು ತುಳಿಯಲಾಯಿತು. ಆ ತೊಟ್ಟಿಯೊಳಗಿಂದ ರಕ್ತವು ಹೊರಟು, ಕುದುರೆಗಳ ಕಡಿವಾಣವನ್ನು ಮುಟ್ಟುವಷ್ಟು ಮುನ್ನೂರು ಕಿಲೋಮೀಟರ್ ದೂರ ಹರಿಯಿತು.
* 14:8 ಯೆಶಾಯ 21:9 14:14 ದಾನಿ 7:13