15
ವಿಶ್ವಾಸದಲ್ಲಿ ಬಲವುಳ್ಳವರಾದ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ, ಬಲಹೀನರ ಬಲಹೀನತೆಗಳನ್ನು ಸಹಿಸಿಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಭಕ್ತಿವೃದ್ಧಿಯ ಹಿತಕ್ಕಾಗಿ ಅವರನ್ನು ಸುಖವನ್ನು ನೋಡಿಕೊಳ್ಳಲಿ. “ನಿಮ್ಮನ್ನು ನಿಂದಿಸುವವರ ನಿಂದೆಗಳು ನನ್ನ ಮೇಲೆ ಬಂದವು,”* ಎಂದು ಬರೆದಿರುವಂತೆ ಕ್ರಿಸ್ತನು ಸಹ ತಮ್ಮ ಸುಖಕ್ಕಾಗಿ ಬಾಳಲಿಲ್ಲ. ಪವಿತ್ರ ವೇದದಲ್ಲಿ ಮುಂಚಿತವಾಗಿ ಬರೆದಿರುವುದೆಲ್ಲವೂ ನಮ್ಮ ಬೋಧನೆಗಾಗಿಯೇ ಬರೆಯಲಾಗಿದೆ. ನಾವು ಆ ಬೋಧನೆಗಳ ಮೂಲಕ ಸಹನೆಯನ್ನೂ ಉತ್ತೇಜನೆಯನ್ನೂ ಹೊಂದಿಕೊಂಡು ನಿರೀಕ್ಷೆಯುಳ್ಳವರಾಗಿರಬೇಕೆಂದು ಬರೆಯಲಾಗಿದೆ.
ಸಹನೆಯನ್ನೂ ಉತ್ತೇಜನವನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವಂತೆ ನಿಮಗೆ ಒಂದೇ ಆತ್ಮವನ್ನು ಕೊಡಲಿ. ಹೀಗೆ ನೀವು ಒಂದೇ ಮನಸ್ಸುಳ್ಳವರಾಗಿ ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯಾದ ದೇವರನ್ನು ಒಂದೇ ಬಾಯಿಂದ ಮಹಿಮೆ ಪಡಿಸುವಿರಿ.
ದೇವರಿಗೆ ಮಹಿಮೆಯಾಗುವುದಕ್ಕಾಗಿ ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿರಿ. ನಾನು ನಿಮಗೆ ಹೇಳುವುದೇನೆಂದರೆ, ದೇವರು ನಂಬಿಗಸ್ತರು ಎಂದು ತೋರಿಸುವುದಕ್ಕಾಗಿ ಕ್ರಿಸ್ತ ಯೇಸು ಯೆಹೂದ್ಯರಿಗೆ ಸೇವಕರಾಗಿ ಬಂದರು. ಹೀಗೆ ದೇವರು ಪಿತೃಗಳಿಗೆ ಕೊಟ್ಟ ವಾಗ್ದಾನಗಳನ್ನು ದೃಢಪಡಿಸಿದರು. ಇದಲ್ಲದೆ ಯೆಹೂದ್ಯರಲ್ಲದವರು ದೇವರ ಕರುಣೆಗಾಗಿ ದೇವರನ್ನು ಮಹಿಮೆ ಪಡಿಸುವಂತೆ ಹೀಗೆ ಮಾಡಿದರು. ಇದು ಪವಿತ್ರ ವೇದದಲ್ಲಿ ಹೀಗೆ ಬರೆದದ್ದನ್ನು ನೆರವೇರಿಸಿತು:
“ಆದ್ದರಿಂದ ಯೆಹೂದ್ಯರಲ್ಲದವರ ನಡುವೆ ನಾನು ನಿನ್ನನ್ನು ಸ್ತುತಿಸುವೆನು,
ನಾನು ನಿನ್ನ ನಾಮವನ್ನು ಸ್ತುತಿಸಿ ಹಾಡುವೆನು.”
10 ಮತ್ತೊಂದು ಕಡೆಯಲ್ಲಿ ಹೀಗೆ ಬರೆಯಲಾಗಿದೆ:
“ಯೆಹೂದ್ಯರಲ್ಲದವರೇ ದೇವಜನರೊಂದಿಗೆ ಸೇರಿ ಸಂತೋಷಪಡಿರಿ.”
11 ಇನ್ನೊಂದು ಕಡೆಯಲ್ಲಿ,
“ಯೆಹೂದ್ಯರಲ್ಲದವರೇ ಕರ್ತನನ್ನು ಸ್ತುತಿಸಿರಿ.
ಸಮಸ್ತ ಜನರೇ ಕರ್ತನಿಗೆ ಸ್ತೋತ್ರಮಾಡಿರಿ.”§
12 ಪುನಃ ಪ್ರವಾದಿ ಯೆಶಾಯನು ಹೇಳುವುದೇನೆಂದರೆ:
“ಇಷಯನ ವಂಶದಿಂದ ಬೇರು ಒಂದು ಚಿಗುರುವುದು,
ಜನಾಂಗಗಳನ್ನು ಆಳುವವರಾಗಿ ಅವರು ಉದಯಿಸುವರು.
ಯೆಹೂದ್ಯರಲ್ಲದವರು ಆತನಲ್ಲಿ ನಿರೀಕ್ಷೆ ಇಡುವರು.”*
13 ನಿರೀಕ್ಷೆಯ ದೇವರು, ನೀವು ಪವಿತ್ರಾತ್ಮನ ಶಕ್ತಿಯಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚಿಸಿ, ನೀವು ನಿಮ್ಮ ವಿಶ್ವಾಸದಿಂದ ಸಕಲ ಸಂತೋಷದಿಂದಲೂ ಸಮಾಧಾನದಿಂದಲೂ ಪ್ರವಾಹಿಸುವಂತೆ ಮಾಡಲಿ.
ಪೌಲನು ಯೆಹೂದ್ಯರಲ್ಲದವರಿಗೆ ಸೇವಕ
14 ನನ್ನ ಪ್ರಿಯರೇ, ನೀವು ಒಳ್ಳೆಯತನದಿಂದ ಪೂರ್ಣವಾದವರೂ ಸಕಲ ತಿಳುವಳಿಕೆಯಿಂದ ತುಂಬಿದವರೂ ಆಗಿದ್ದು, ಒಬ್ಬರಿಗೊಬ್ಬರು ಬುದ್ಧಿ ಹೇಳುವುದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ಬಗ್ಗೆ ನನಗೆ ಭರವಸೆ ಇದೆ. 15 ನಾನು ನಿಮಗೆ ಕೆಲವು ವಿಷಯಗಳನ್ನು ಜ್ಞಾಪಕ ಪಡಿಸುವುದಕ್ಕಾಗಿ ಬಹಳ ಧೈರ್ಯದಿಂದ ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದವರು ಪವಿತ್ರಾತ್ಮನಿಂದ ಪರಿಶುದ್ಧರಾಗಿ, ದೇವರಿಗೆ ಅಂಗೀಕೃತವಾದ ಕಾಣಿಕೆಗಳಾಗಬೇಕೆಂಬ ಕಾರಣದಿಂದ, ನಾನು ಯೆಹೂದ್ಯರಲ್ಲದವರಿಗೆ ಕ್ರಿಸ್ತ ಯೇಸುವಿನ ಸೇವಕನಾಗಿ ದೇವರ ಸುವಾರ್ತೆಯನ್ನು ಪ್ರಕಟಿಸಲು ದೇವರು ನನಗೆ ಕೃಪೆ ನೀಡಿದ್ದಾರೆ.
17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ದೇವರ ಸೇವೆಯ ವಿಷಯವಾಗಿ ಹೊಗಳಿಕೊಳ್ಳುತ್ತೇನೆ. 18 ಯೆಹೂದ್ಯರಲ್ಲದವರನ್ನು ದೇವರಿಗೆ ವಿಧೇಯರಾಗುವುದಕ್ಕಾಗಿ ಕ್ರಿಸ್ತನು ನನ್ನ ಮೂಲಕ ಮಾತಿನಿಂದಲೂ ಕೃತ್ಯದಿಂದಲೂ 19 ಬಲವಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಪವಿತ್ರಾತ್ಮ ಶಕ್ತಿಯಿಂದಲೂ ಮಾಡಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. ಯೆರೂಸಲೇಮಿನಿಂದ ಪ್ರಾರಂಭಿಸಿ, ಇಲ್ಲುರಿಕದವರೆಗೆ ನಾನು ಕ್ರಿಸ್ತನ ಸುವಾರ್ತೆಯನ್ನು ಸಂಪೂರ್ಣವಾಗಿ ಸಾರಿದ್ದೇನೆ. 20 ಬೇರೊಬ್ಬರು ಹಾಕಿರುವ ಅಸ್ತಿವಾರದ ಮೇಲೆ ನಾನು ಕಟ್ಟಬಾರದೆಂದು, ಕ್ರಿಸ್ತನ ಹೆಸರು ತಿಳಿಯಪಡಿಸದೆ ಇರುವಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಆತುರದಿಂದ ಹೋರಾಡುತ್ತಿದ್ದೇನೆ. 21 ಪವಿತ್ರ ವೇದದಲ್ಲಿ ಬರೆದಿರುವಂತೆ :
“ಯಾರಿಗೆ ಆತನ ಸುದ್ದಿ ಮುಟ್ಟಲಿಲ್ಲವೋ ಅವರು ಆತನನ್ನು ಕಾಣುವರು;
ಯಾರು ಆತನ ವರ್ತಮಾನ ಕೇಳಲಿಲ್ಲವೋ ಅವರು ಗ್ರಹಿಸಿಕೊಳ್ಳುವರು.”
22 ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಬಾರಿ ಅಭ್ಯಂತರವಾಯಿತು.
ರೋಮನ್ನು ಸಂದರ್ಶಿಸಲು ಪೌಲನ ಯೋಜನೆ
23 ಈಗಲಾದರೋ ಈ ಪ್ರದೇಶದಲ್ಲಿ ನನಗೆ ಅವಕಾಶವಿಲ್ಲದಿರುವುದರಿಂದಲೂ ಅನೇಕ ವರ್ಷಗಳಿಂದ ನಿಮ್ಮನ್ನು ಸಂದರ್ಶಿಸಬೇಕೆಂಬ ಹಂಬಲವಿರುವುದರಿಂದಲೂ 24 ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನಿಮ್ಮನ್ನು ಸಂದರ್ಶಿಸುವ ನಿರೀಕ್ಷೆಯಲ್ಲಿದ್ದೇನೆ. ಸ್ವಲ್ಪಕಾಲ ನಿಮ್ಮ ಅನ್ಯೋನ್ಯತೆಯ ಆನಂದವನ್ನು ಪಡೆದ ಬಳಿಕ ಅಲ್ಲಿಗೆ ಹೋಗುವ ನನ್ನ ಪ್ರಯಾಣದಲ್ಲಿ ನಿಮ್ಮ ಸಹಕಾರವನ್ನು ಬಯಸುತ್ತೇನೆ. 25 ಈಗಲಾದರೋ ನಾನು ದೇವಜನರ ಸೇವೆಗಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. 26 ಮಕೆದೋನ್ಯ ಮತ್ತು ಅಖಾಯದವರು ಯೆರೂಸಲೇಮಿನ ಭಕ್ತರಲ್ಲಿರುವ ಬಡವರಾಗಿರುವವರಿಗೆ ಸಹಾಯ ಮಾಡುವುದು ಒಳ್ಳೆಯದೆಂದು ಭಾವಿಸಿದ್ದಾರೆ. 27 ಅವರು ಅದನ್ನು ಮಾಡಲು ಇಷ್ಟಪಟ್ಟದ್ದಲ್ಲದೆ, ಅದು ಕರ್ತವ್ಯವೂ ಆಗಿದೆ. ಹೌದು, ಯೆಹೂದ್ಯರಲ್ಲದವರು ಯೆಹೂದ್ಯರ ಆತ್ಮಿಕ ಆಶೀರ್ವಾದಗಳಲ್ಲಿ ಪಾಲುಗೊಂಡಿರುವುದಾದರೆ ತಮ್ಮ ಲೌಕಿಕ ವಿಷಯಗಳಲ್ಲಿ ಅವರೊಂದಿಗೆ ಹಂಚಿಕೊಳ್ಳುವುದು ಅವರ ಕರ್ತವ್ಯವಾಗಿದೆ. 28 ಆದ್ದರಿಂದ ಈ ಕೆಲಸವನ್ನು ಪೂರೈಸಿ ಸಂಗ್ರಹಿಸಿ ಕೊಟ್ಟದ್ದನ್ನು ಅವರಿಗೆ ಒಪ್ಪಿಸಿ ಖಚಿತವಾದ ಬಳಿಕ, ನಾನು ಸ್ಪೇನ್ ದೇಶಕ್ಕೆ ಹೋಗುವ ದಾರಿಯಲ್ಲಿ ನಿಮ್ಮನ್ನು ಸಂದರ್ಶಿಸುತ್ತೇನೆ. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದದಿಂದ ತುಂಬಿದವನಾಗಿ ಬರುತ್ತೇನೆಂದು ಬಲ್ಲೆನು.
30 ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ. 31 ನಾನು ಯೂದಾಯ ಪ್ರಾಂತದಲ್ಲಿ ಅವಿಶ್ವಾಸಿಗಳ ಕೈಯಿಂದ ಕಾಪಾಡಬೇಕೆಂತಲೂ ನನ್ನ ಸೇವೆಯು ಯೆರೂಸಲೇಮಿನಲ್ಲಿರುವ ದೇವಜನರಿಗೆ ಮೆಚ್ಚುಗೆಯಾಗಿರಬೇಕೆಂತಲೂ ಪ್ರಾರ್ಥಿಸಿರಿ. 32 ಆಗ ನಾನು ದೇವರ ಚಿತ್ತಾನುಸಾರ ನಿಮ್ಮ ಬಳಿಗೆ ಸಂತೋಷದಿಂದ ಬಂದು, ನಿಮ್ಮ ಸಂಗಡ ವಿಶ್ರಾಂತಿ ಹೊಂದುವೆನು. 33 ಸಮಾಧಾನದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
 
* 15:3 ಕೀರ್ತನೆ 69:9 15:9 2 ಸಮು 22:50; ಕೀರ್ತನೆ 18:49 15:10 ಧರ್ಮೋ 32:43 § 15:11 ಕೀರ್ತನೆ 117:1 * 15:12 ಯೆಶಾಯ 11:10 15:21 ಯೆಶಾಯ 52:15