ಕೀರ್ತನೆ 40
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ. 
 
1 ನಾನು ಯೆಹೋವ ದೇವರಿಗಾಗಿ ತಾಳ್ಮೆಯಿಂದ ಕಾದಿದ್ದೆನು;  
ಅವರು ನನ್ನ ಕಡೆಗೆ ತಿರುಗಿ, ನನ್ನ ಮೊರೆಯನ್ನು ಕೇಳಿದರು.   
2 ನನ್ನನ್ನು ಜಾರುವ ಗುಂಡಿಯೊಳಗಿಂದ ಎತ್ತಿದರು.  
ಕೆಸರಿನ ಮಣ್ಣಿನಿಂದ ಎಬ್ಬಿಸಿದರು.  
ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ,  
ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದರು.   
3 ನನ್ನ ಬಾಯಲ್ಲಿ ನೂತನ ಹಾಡನ್ನು ಹುಟ್ಟಿಸಿದ್ದಾರೆ,  
ಆ ಹಾಡು ನಮ್ಮ ದೇವರ ಸ್ತೋತ್ರವೇ.  
ಅನೇಕರು ಇದನ್ನು ಕಂಡು,  
ಭಯಪಟ್ಟು ಯೆಹೋವ ದೇವರಲ್ಲಿ ಭರವಸೆ ಇಡುವರು.   
   
 
4 ಯೆಹೋವ ದೇವರನ್ನು ತನ್ನ ಭರವಸೆಯಾಗಿ ಮಾಡಿಕೊಂಡು  
ಅಹಂಕಾರಿಗಳನ್ನು ಗೌರವಿಸದೆಯೂ  
ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳದೆಯೂ  
ಇರುವ ಮನುಷ್ಯನು ಧನ್ಯನು.   
5 ನನ್ನ ದೇವರಾದ ಯೆಹೋವ ದೇವರೇ,  
ನೀವು ಮಾಡಿದ ನಿಮ್ಮ ಅದ್ಭುತಕಾರ್ಯಗಳು ಎಷ್ಟೋ!  
ನಮ್ಮ ಕಡೆ ನಿಮಗಿರುವ ಯೋಜನೆಗಳೂ ಬಹಳ,  
ನಿಮಗೆ ಸರಿಸಾಟಿ ಯಾರೂ ಇಲ್ಲ.  
ನಿಮ್ಮ ಕೃತ್ಯಗಳನ್ನು ನಾನು ತಿಳಿಸಿ ಹೇಳಬೇಕಾದರೆ,  
ಅವು ಎಣಿಸಲು ಅಸಾಧ್ಯ.   
   
 
6 ಯಜ್ಞ ಮತ್ತು ಅರ್ಪಣೆಯನ್ನು ನೀವು ಇಷ್ಟಪಡಲಿಲ್ಲ.  
ಆದರೆ ನೀವು ನನ್ನ ಕಿವಿಗಳನ್ನು ತೆರೆದಿರುವಿರಿ.  
ದಹನಬಲಿಗಳನ್ನೂ ಪಾಪ ಪರಿಹಾರದ ಬಲಿಗಳನ್ನೂ ನೀವು ಬಯಸಲಿಲ್ಲ.   
7 ಆಗ ನಾನು, “ಇಗೋ, ನಾನು ಇದ್ದೇನೆ, ನಾನು ಬಂದಿದ್ದೇನೆ.  
ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿದೆ.   
8 ನನ್ನ ದೇವರೇ, ನಿಮ್ಮ ಚಿತ್ತವನ್ನು ಮಾಡಲು ಬಯಸುತ್ತೇನೆ;  
ನಿಮ್ಮ ನಿಯಮವು ನನ್ನ ಅಂತರಂಗದಲ್ಲಿ ಇದೆ.”   
   
 
9 ನಾನು ನಿಮ್ಮ ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿದೆನು;  
ಇಗೋ, ನಾನು ನನ್ನ ತುಟಿಗಳಿಂದ ಸಾರದೆ ಇರಲಿಲ್ಲವೆಂದು  
ನೀವೇ ತಿಳಿದಿದ್ದೀರಿ.   
10 ನಾನು ನಿಮ್ಮ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಿಟ್ಟುಕೊಳ್ಳಲಿಲ್ಲ.  
ನಿಮ್ಮ ನಂಬಿಗಸ್ತಿಕೆಯನ್ನೂ ನಿಮ್ಮ ರಕ್ಷಣೆಯನ್ನೂ  
ನಿಮ್ಮ ಪ್ರೀತಿಯನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ  
ನಾನು ಮರೆಮಾಡದೆ ಸಾರಿದೆನು.   
   
 
11 ಯೆಹೋವ ದೇವರೇ, ನಿಮ್ಮ ಕರುಣೆಯನ್ನು ನನ್ನಿಂದ ಹಿಂತೆಗೆಯಬೇಡಿರಿ;  
ನಿಮ್ಮ ಪ್ರೀತಿಯೂ ನಿಮ್ಮ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.   
12 ಲೆಕ್ಕವಿಲ್ಲದಷ್ಟು ಕೇಡುಗಳು ನನ್ನನ್ನು ಸುತ್ತಿಕೊಂಡಿವೆ.  
ನಾನು ಏನೂ ನೋಡಲಾರದಷ್ಟು ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿವೆ;  
ನನ್ನ ಪಾಪಗಳು ತಲೆಯ ಕೂದಲುಗಳಿಗಿಂತ ಹೆಚ್ಚಾಗಿವೆ,  
ಆದ್ದರಿಂದ ನನ್ನ ಹೃದಯವು ಕುಂದಿಹೋಗಿದೆ.   
13 ಯೆಹೋವ ದೇವರೇ, ನನ್ನನ್ನು ಬಿಡಿಸುವುದಕ್ಕೆ ತ್ವರೆಮಾಡಿರಿ.  
ಯೆಹೋವ ದೇವರೇ, ನನಗೆ ಸಹಾಯಮಾಡಲು ಬೇಗನೆ ಬನ್ನಿರಿ.   
   
 
14 ನನ್ನ ಪ್ರಾಣ ತೆಗೆಯಲು ಯತ್ನಿಸುವವರೆಲ್ಲರು  
ನಾಚಿಕೆಪಟ್ಟು ಗಲಿಬಿಲಿಯಾಗಲಿ.  
ನನ್ನ ಕೇಡಿನಲ್ಲಿ ಸಂತೋಷಪಡುವವರೆಲ್ಲರೂ  
ಹಿಂಜರಿದು ಅವಮಾನ ಹೊಂದಲಿ.   
15 “ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು  
ತಮ್ಮ ನಾಚಿಕೆಯಿಂದಲೇ ವಿಸ್ಮಯಗೊಳ್ಳಲಿ.   
16 ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ  
ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ;  
ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು,  
“ಯೆಹೋವ ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.   
   
 
17 ನಾನು ಬಡವನೂ ಅಗತ್ಯದಲ್ಲಿರುವವನೂ ಆಗಿದ್ದೇನೆ;  
ಆದರೂ ಯೆಹೋವ ದೇವರು ನನ್ನ ಹಿತಚಿಂತಕರಾಗಿದ್ದಾರೆ.  
ನನ್ನ ದೇವರೇ ನೀವೇ ನನ್ನ ಸಹಾಯವೂ ನನ್ನ ವಿಮೋಚಕರೂ ಆಗಿದ್ದೀರಿ,  
ನೀವು ತಡಮಾಡಬೇಡಿರಿ.