ಕೀರ್ತನೆ 3
ದಾವೀದನ ಕೀರ್ತನೆ. ಅವನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಿದ್ದು. 
 
1 ಯೆಹೋವ ದೇವರೇ, ನನ್ನ ವೈರಿಗಳು ಬಹುಜನ!  
ನನಗೆ ವಿರೋಧವಾಗಿ ಏಳುವವರು ಎಷ್ಟೋ ಜನ!   
2 “ದೇವರು ಅವನನ್ನು ಬಿಡುಗಡೆ ಮಾಡುವುದಿಲ್ಲ,” ಎಂದು  
ಅನೇಕರು ನನ್ನ ಬಗ್ಗೆ ಹೇಳುತ್ತಾರೆ.   
   
 
3 ಆದರೆ ಯೆಹೋವ ದೇವರೇ, ನೀವೇ ನನ್ನ ಸುತ್ತಲಿರುವ ಗುರಾಣಿಯೂ,  
ನನ್ನ ಮಹಿಮೆಯೂ ನನ್ನ ತಲೆ ಮೇಲೆತ್ತುವವರೂ ಆಗಿದ್ದೀರಿ.   
4 ನಾನು ನನ್ನ ಧ್ವನಿಯೆತ್ತಿ ಯೆಹೋವ ದೇವರಿಗೆ ಮೊರೆಯಿಡುವೆನು,  
ಅವರು ತಮ್ಮ ಪರಿಶುದ್ಧ ಪರ್ವತದಿಂದ ನನಗೆ ಉತ್ತರಕೊಡುವರು.   
   
 
5 ನಾನು ಮಲಗಿ ನಿದ್ರಿಸುವೆನು;  
ಯೆಹೋವ ದೇವರು ನನ್ನನ್ನು ಕಾಪಾಡಿದ್ದರಿಂದ ನಾನು ಎಚ್ಚರಗೊಂಡೆನು.   
6 ಸಾವಿರಾರು ಜನರು ನನಗೆ ವಿರೋಧವಾಗಿ  
ನನ್ನ ಸುತ್ತುವರಿದರೂ ನಾನು ಭಯಪಡೆನು.   
   
 
7 ಯೆಹೋವ ದೇವರೇ, ಏಳಿರಿ!  
ನನ್ನ ದೇವರೇ, ನನ್ನನ್ನು ರಕ್ಷಿಸಿರಿ.  
ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ;  
ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.   
   
 
8 ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು.  
ನಿಮ್ಮ ಜನರ ಮೇಲೆ ನಿಮ್ಮ ಆಶೀರ್ವಾದವಿರಲಿ.