34
ಕಾನಾನ್ ದೇಶದ ಮೇರೆಗಳು
1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ, ಅವರಿಗೆ ಹೇಳಬೇಕಾದದ್ದೇನೆಂದರೆ, ‘ನೀವು ಕಾನಾನ್ ದೇಶದೊಳಗೆ ಬರುವಾಗ, ನಿಮಗೆ ಸೊತ್ತಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು.
3 “ ‘ನಿಮ್ಮ ದಕ್ಷಿಣ ಕಡೆಯು ಚಿನ್ ಮರುಭೂಮಿಯಿಂದ ಎದೋಮಿಗೆ ಅನುಸಾರವಾಗಿರಬೇಕು. ನಿಮ್ಮ ದಕ್ಷಿಣ ಮೇರೆಯು, ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
4 ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ, ಚಿನ್ಗೆ ಹಾದು, ಕಾದೇಶ್ ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು, ಅಲ್ಲಿಂದ ಹಚರದ್ದಾರಿಗೆ ಹೊರಟು, ಅಚ್ಮೋನಿಗೆ ಹಾದು ಹೋಗಬೇಕು.
5 ಅಚ್ಮೋನಿನಿಂದ ಈಜಿಪ್ಟಿನ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.
6 ಪಶ್ಚಿಮದಲ್ಲಿ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು. ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವುದು.
7 ನಿಮ್ಮ ಉತ್ತರ ಮೇರೆ ಯಾವುದೆಂದರೆ ನೀವು ದೊಡ್ಡ ಸಮುದ್ರದಿಂದ ಹೋರ್ ಪರ್ವತದವರೆಗೂ,
8 ಸಾಲು ಮಾಡಿಕೊಂಡು ಹೋರ್ ಪರ್ವತದಿಂದ ನೀವು ಲೆಬೊ ಹಮಾತಿನ ಪ್ರದೇಶದವರೆಗೆ ಸಾಲು ಮಾಡಿರಿ. ಮೇರೆಯು ಚೆದಾದಿಗೆ ಹೊರಟು
9 ಜಿಫ್ರೋನಿಗೆ ಹೋಗಿ, ಹಚರ್ ಏನಾನಿನಲ್ಲಿ ಮುಗಿಯಲಿ. ಇದು ನಿಮ್ಮ ಉತ್ತರ ಮೇರೆ.
10 ಪೂರ್ವದ ಮೇರೆಗೋಸ್ಕರ ಹಚರ್ ಏನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ.
11 ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಾಕ್ಕೆ ಇಳಿದು, ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ.
12 ಅಲ್ಲಿಂದ ಮೇರೆಯು ಯೊರ್ದನ್ ನದಿಗೆ ಅನುಸಾರವಾಗಿ ಇಳಿದು, ಉಪ್ಪಿನ ಸಮುದ್ರದಲ್ಲಿ ಮುಗಿಯುವುದು.
“ ‘ಇದು ಅದರ ಸುತ್ತಮುತ್ತಲ ಮೇರೆಗಳ ಪ್ರಕಾರ ನಿಮ್ಮ ದೇಶವಾಗಿರಬೇಕು.’ ”
13 ಮೋಶೆಯು ಇಸ್ರಾಯೇಲರಿಗೆ ಆಜ್ಞಾಪಿಸಿ, “ನೀವು ಚೀಟುಹಾಕಿ ಸ್ವಾಧೀನಪಡಿಸಿಕೊಳ್ಳಬೇಕಾದ ದೇಶವು ಒಂಬತ್ತುವರೆ ಗೋತ್ರಗಳಿಗೆ ಕೊಡಬೇಕೆಂದು ಯೆಹೋವ ದೇವರು ಆಜ್ಞಾಪಿಸಿದ ದೇಶವು ಇದೇ.
14 ಏಕೆಂದರೆ ರೂಬೇನ್ಯರ ಮಕ್ಕಳ ಗೋತ್ರವೂ, ಗಾದನ ಮಕ್ಕಳ ಗೋತ್ರವೂ, ಮನಸ್ಸೆಯ ಅರ್ಧ ಗೋತ್ರವೂ ತಮ್ಮ ಪಿತೃಗಳ ಮನೆಯ ಪ್ರಕಾರವಾಗಿ ತಮ್ಮ ಸೊತ್ತನ್ನು ಪಡೆದುಕೊಂಡಿದ್ದಾರೆ.
15 ಎರಡೂವರೆ ಗೋತ್ರಗಳು ತಮ್ಮ ಸೊತ್ತನ್ನು ಯೊರ್ದನಿನ ಈಚೆಯಲ್ಲಿ ಯೆರಿಕೋವಿಗೆ ಸೂರ್ಯನು ಉದಯಿಸುವ ಪೂರ್ವದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ,” ಎಂದನು.
16 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
17 “ದೇಶವನ್ನು ನಿಮಗೆ ಹಂಚಬೇಕಾದ ಜನರ ಹೆಸರುಗಳು ಇವೇ. ಯಾಜಕನಾದ ಎಲಿಯಾಜರನೂ, ನೂನನ ಮಗ ಯೆಹೋಶುವನೂ
18 ದೇಶದ ಸೊತ್ತನ್ನು ಹಂಚುವುದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತೆಗೆದುಕೊಳ್ಳಿರಿ.
19 “ಈ ಜನರ ಹೆಸರುಗಳು ಇವೇ.
“ಯೆಹೂದನ ಕುಟುಂಬದಿಂದ ಯೆಫುನ್ನೆಯ ಮಗ ಕಾಲೇಬನೂ,
20 ಸಿಮೆಯೋನನ ಮಕ್ಕಳ ಗೋತ್ರದಿಂದ ಅಮ್ಮೀಹೂದನ ಮಗ ಶಮುವೇಲನೂ,
21 ಬೆನ್ಯಾಮೀನನ ಗೋತ್ರದಿಂದ ಕಿಸ್ಲೋನನ ಮಗ ಎಲೀದಾದ್,
22 ದಾನನ ಮಕ್ಕಳ ಗೋತ್ರದ ಪ್ರಧಾನನು, ಯೊಗ್ಲೀಯ ಮಗ ಬುಕ್ಕೀ,
23 ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಏಫೋದನ ಮಗ ಹನ್ನೀಯೇಲನೂ,
24 ಎಫ್ರಾಯೀಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗ ಕೆಮೂಯೇಲನೂ,
25 ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗ ಎಲೀಚಾಫಾನ್,
26 ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗ ಪಲ್ಟೀಯೇಲನೂ,
27 ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗ ಅಹೀಹೂದನೂ,
28 ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅಮ್ಮೀಹೂದನ ಮಗ ಪೆದಹೇಲನೂ.”
29 ಕಾನಾನ್ ದೇಶದಲ್ಲಿ ಇಸ್ರಾಯೇಲರಿಗೆ ಸೊತ್ತನ್ನು ಹಂಚುವುದಕ್ಕೆ ಯೆಹೋವ ದೇವರು ನೇಮಿಸಿದ ಮನುಷ್ಯರು ಇವರೇ.