2
ಇಸ್ರಾಯೇಲರ ಗೋತ್ರಗಳು ಪಾಳೆಯದಲ್ಲಿ ಗುಡಾರಗಳನ್ನು ಹಾಕಿಕೊಳ್ಳುವ ಕ್ರಮ
1 ಯೆಹೋವ ದೇವರು ಮಾತನಾಡಿ ಮೋಶೆ ಮತ್ತು ಆರೋನನಿಗೆ ಹೇಳಿದ್ದೇನೆಂದರೆ:
2 “ಇಸ್ರಾಯೇಲರು ಒಬ್ಬೊಬ್ಬರಾಗಿ ಕುಟುಂಬಗಳ ಗುರುತುಗಳ ಪ್ರಕಾರ ತಮ್ಮ ತಮ್ಮ ದಂಡಿನ ಧ್ವಜಗಳ ಬಳಿಯಲ್ಲಿ ಇಳಿದುಕೊಳ್ಳಬೇಕು. ಅವರು ದೇವದರ್ಶನ ಗುಡಾರದ ಎದುರಿನಲ್ಲಿ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.”
3 ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ,
ಸೂರ್ಯೋದಯದ ಕಡೆಗೆ ಯೆಹೂದ ದಂಡಿನ ಧ್ವಜದ ಬಳಿಯಲ್ಲಿ ತಮ್ಮ ಸೈನ್ಯಗಳ ಪ್ರಕಾರ ಇಳಿದುಕೊಳ್ಳಬೇಕು. ಯೆಹೂದ ಮಕ್ಕಳಿಗೆ ಅಮ್ಮೀನಾದಾಬನ ಮಗ ನಹಶೋನನು ಸೈನ್ಯಾಧಿಪತಿ.
4 ಅವನ ಸೈನಿಕರ ಸಂಖ್ಯೆ 74,600 ಮಂದಿ.
5 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಗೋತ್ರದವರು. ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗ ನೆತನೆಯೇಲ್ ಎಂಬ ಸೈನ್ಯಾಧಿಪತಿ.
6 ಅವನ ಸೈನಿಕರ ಸಂಖ್ಯೆ 54,400 ಮಂದಿ.
7 ಅವನ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ಯನ ಗೋತ್ರದವರು. ಜೆಬುಲೂನ್ಯನ ಮಕ್ಕಳಿಗೆ ಹೇಲೋನನ ಮಗ ಎಲೀಯಾಬನು ಸೈನ್ಯಾಧಿಪತಿ.
8 ಅವನ ಸೈನಿಕರ ಸಂಖ್ಯೆ 57,400 ಮಂದಿ.
9 ಯೆಹೂದನ ಪಾಳೆಯದಲ್ಲಿ ಎಣಿಸಲಾದ ಅವರ ಸೈನಿಕರ ಸಂಖ್ಯೆ 1,86,400 ಮಂದಿ. ಅವರು ಮೊದಲು ಹೊರಡತಕ್ಕವರು.
10 ದಕ್ಷಿಣ ದಿಕ್ಕಿನಲ್ಲಿ:
ರೂಬೇನ್ ಕುಲದ ದಂಡಿಗೆ ಸೇರಿದವರು ಅವರವರ ಸೈನ್ಯಗಳ ಪ್ರಕಾರ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ರೂಬೇನನ ಮಕ್ಕಳಿಗೆ ಶೆದೇಯೂರನ ಮಗ ಎಲೀಚೂರನು ಸೈನ್ಯಾಧಿಪತಿ.
11 ಅವನ ಸೈನಿಕರ ಸಂಖ್ಯೆ 46,500 ಮಂದಿ.
12 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನನ ಗೋತ್ರದವರು. ಸಿಮೆಯೋನನ ಮಕ್ಕಳಿಗೆ ಚುರೀಷದ್ದೈಯನ ಮಗನಾದ ಶೆಲುಮೀಯೇಲನು ಸೈನ್ಯಾಧಿಪತಿ.
13 ಅವನ ಸೈನಿಕರ ಸಂಖ್ಯೆ 59,300 ಮಂದಿ.
14 ತರುವಾಯ ಗಾದ್ ಗೋತ್ರದವರು. ಗಾದನ ಮಕ್ಕಳಿಗೆ ದೆವುಯೇಲನ ಮಗ ಎಲ್ಯಾಸಾಫನು ಸೈನ್ಯಾಧಿಪತಿ.
15 ಅವನ ಸೈನಿಕರ ಸಂಖ್ಯೆ 45,650 ಮಂದಿ.
16 ರೂಬೇನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
17 ತರುವಾಯ ದೇವದರ್ಶನ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ, ತಮ್ಮ ತಮ್ಮ ಕಡೆಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
18 ಎಫ್ರಾಯೀಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವುದು:
ಎಫ್ರಾಯೀಮನ ಮಕ್ಕಳಿಗೆ ಅಮ್ಮೀಹೂದನ ಮಗ ಎಲೀಷಾಮಾನು ಸೈನ್ಯಾಧಿಪತಿ.
19 ಅವನ ಸೈನಿಕರ ಸಂಖ್ಯೆ 40,500 ಮಂದಿ.
20 ಅವರ ಬಳಿಯಲ್ಲಿ ಮನಸ್ಸೆ ಗೋತ್ರದವರು. ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗ ಗಮಲಿಯೇಲನು ಸೈನ್ಯಾಧಿಪತಿ.
21 ಅವನ ಸೈನಿಕರ ಸಂಖ್ಯೆ 32,200 ಮಂದಿ.
22 ತರುವಾಯ ಬೆನ್ಯಾಮೀನ್ ಗೋತ್ರದವರು. ಬೆನ್ಯಾಮೀನನ ಮಕ್ಕಳಿಗೆ ಗಿದ್ಯೋನಿಯ ಮಗ ಅಬೀದಾನನು ಸೈನ್ಯಾಧಿಪತಿ.
23 ಅವನ ಸೈನಿಕರ ಸಂಖ್ಯೆ 35,400 ಮಂದಿ.
24 ಎಫ್ರಾಯೀಮನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,08,100 ಮಂದಿ. ಇವರು ಮೂರನೆಯವರಾಗಿ ಹೊರಡತಕ್ಕವರು.
25 ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವರು:
ದಾನನ ಮಕ್ಕಳಿಗೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸೈನ್ಯಾಧಿಪತಿ.
26 ಅವನ ಸೈನಿಕರ ಸಂಖ್ಯೆ 62,700 ಮಂದಿ.
27 ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಆಶೇರ್ ಗೋತ್ರದವರು. ಆಶೇರನ ಮಕ್ಕಳಿಗೆ ಒಕ್ರಾನನ ಮಗ ಪಗೀಯೇಲನು ಸೈನ್ಯಾಧಿಪತಿ.
28 ಅವನ ಸೈನಿಕರ ಸಂಖ್ಯೆ 41,500 ಮಂದಿ.
29 ತರುವಾಯ ನಫ್ತಾಲಿ ಗೋತ್ರದವರು. ನಫ್ತಾಲಿ ಮಕ್ಕಳಿಗೆ ಏನಾನನ ಮಗ ಅಹೀರನು ಸೈನ್ಯಾಧಿಪತಿ.
30 ಅವನ ಸೈನಿಕರ ಸಂಖ್ಯೆ 53,400 ಮಂದಿ.
31 ದಾನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,57,600 ಮಂದಿ. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯ ದಂಡಾಗಿ ಹೊರಡತಕ್ಕದ್ದು.
32 ಇಸ್ರಾಯೇಲರಲ್ಲಿ ತಮ್ಮ ಕುಟುಂಬಗಳ ಪ್ರಕಾರವಾಗಿ ಎಣಿಕೆಯಾದವರು ಇವರೇ. ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 6,03,550 ಮಂದಿ.
33 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲರೊಳಗೆ ಎಣಿಕೆಯಾಗಲಿಲ್ಲ.
34 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಎಲ್ಲವನ್ನೂ ಮಾಡಿದರು. ಹಾಗೆಯೇ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ಕುಟುಂಬಗಳ ಪ್ರಕಾರವೂ ಪಾಳೆಯವನ್ನು ಹಾಕಿಕೊಳ್ಳುತ್ತಾ ಮುಂದುವರಿಯುತ್ತಿದ್ದರು.