11
ಯೇಸು ಮತ್ತು ಸ್ನಾನಿಕ ಯೋಹಾನನು
ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶ ಕೊಟ್ಟಾದ ಮೇಲೆ, ಗಲಿಲಾಯ ಪ್ರದೇಶದ ಪಟ್ಟಣಗಳಲ್ಲಿ ಬೋಧಿಸುವುದಕ್ಕೂ ಶುಭವರ್ತಮಾನವನ್ನು ಸಾರುವುದಕ್ಕೂ ಅಲ್ಲಿಂದ ಹೊರಟು ಹೋದರು.
ಆಗ ಸೆರೆಮನೆಯಲ್ಲಿ ಯೋಹಾನನು ಕ್ರಿಸ್ತನ ಕಾರ್ಯಗಳನ್ನು ಕೇಳಿ, ತನ್ನ ಶಿಷ್ಯರನ್ನು ಕಳುಹಿಸಿ ಯೇಸುವಿಗೆ, “ಬರಬೇಕಾದ ಮೆಸ್ಸೀಯ ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ವಿಚಾರಿಸಿದನು.
ಯೇಸು, “ನೀವು ಕೇಳುವುದನ್ನೂ ಕಾಣುವುದನ್ನೂ ಯೋಹಾನನಿಗೆ ಹೋಗಿ ತಿಳಿಸಿರಿ; ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ. ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,”* ಎಂದರು.
ಅವರು ಹೊರಟು ಹೋಗುತ್ತಿದ್ದಾಗ, ಯೇಸು ಯೋಹಾನನ ಕುರಿತಾಗಿ ಜನಸಮೂಹಕ್ಕೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ? ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸುವವರು ರಾಜರ ಅರಮನೆಗಳಲ್ಲಿ ಇರುತ್ತಾರೆ. ಆದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ. 10 ಯೋಹಾನನ ಕುರಿತು ಪವಿತ್ರ ವೇದದಲ್ಲಿ ಹೀಗೆ ಬರೆದಿದೆ:
“ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ
ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.’
11 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಹುಟ್ಟಲಿಲ್ಲ; ಆದರೂ ಪರಲೋಕ ರಾಜ್ಯದಲ್ಲಿರುವ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ. 12 ಸ್ನಾನಿಕನಾದ ಯೋಹಾನನ ದಿನಗಳಿಂದ ಇದುವರೆಗೆ, ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಒಳಗಾಗಿದೆ, ಬಲಾತ್ಕಾರಿಗಳು ಅದನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ. 13 ಯೋಹಾನನ ಕಾಲದ ತನಕ ಮೋಶೆಯ ನಿಯಮ ಹಾಗು ಎಲ್ಲ ಪ್ರವಾದಿಗಳು ದೇವರ ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು. 14 ನೀವು ಇದನ್ನು ಸ್ವೀಕರಿಸುವುದಕ್ಕೆ ಮನಸ್ಸಿದ್ದರೆ, ಬರತಕ್ಕ ಎಲೀಯನು ಈ ಯೋಹಾನನೇ. 15 ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
16 “ಆದರೆ ಈ ಸಂತತಿಯನ್ನು ನಾನು ಯಾವುದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ಇತರರನ್ನು ಕರೆಯುತ್ತಾ:
17 “ ‘ನಾವು ನಿಮಗಾಗಿ ಕೊಳಲೂದಿದೆವು,
ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
ನೀವು ಗೋಳಾಡಲಿಲ್ಲ,’
ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.
18 “ಏಕೆಂದರೆ ಯೋಹಾನನು ಅನ್ನಪಾನಗಳನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಅವರು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದರು. 19 ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು. ಅದಕ್ಕೆ ಅವರು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕೃತ್ಯಗಳಿಂದಲೇ ಸಮರ್ಥಿಸಲಾಗುತ್ತದೆ,” ಎಂದು ಹೇಳಿದರು.
ಮಾನಸಾಂತರ ಪಡದ ಊರುಗಳನ್ನು ಗದರಿಸಿದ್ದು
20 ತರುವಾಯ ತಮ್ಮ ಹೆಚ್ಚಾದ ಮಹತ್ಕಾರ್ಯಗಳು ನಡೆದ ಪಟ್ಟಣಗಳು, ದೇವರ ಕಡೆಗೆ ತಿರುಗಿಕೊಳ್ಳದೆ ಇದ್ದುದರಿಂದ ಯೇಸು ಅವುಗಳನ್ನು ಗದರಿಸತೊಡಗಿ, 21 “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು. 22 ಆದರೂ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು. 23 ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ§ ಇಳಿಯುವೆ. ಏಕೆಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ* ನಡೆದಿದ್ದರೆ, ಅದು ಇಂದಿನವರೆಗೂ ಉಳಿಯುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮ್ ಪಟ್ಟಣದ ಗತಿಯು ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
ಕಷ್ಟಪಡುವವರಿಗೆ ವಿಶ್ರಾಂತಿ
25 ಆ ಸಮಯದಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ. 26 ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.
27 “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.
28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29 ನಾನು ಸಾತ್ವಿಕನೂ ದೀನ ಹೃದಯದವನೂ ಆಗಿರುವುದರಿಂದ ನೀವು ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ,” ಎಂದು ಹೇಳಿದರು.
* 11:6 ಕ್ರಿಸ್ತನು ಬಂದಾಗ ಇವೆಲ್ಲವೂ ನೆರವೇರುವಂತೆ ಪ್ರವಾದಿಸಲಾಗಿದೆ. ನೋಡಿರಿ, ಯೆಶಾಯ 35:5-6; 26:19; 29:18-19; 42:18; 61:1 11:10 ಮಲಾಕಿ 3:1 11:12 ಅಂದರೆ, ಒತ್ತಾಯದಿಂದ ಪ್ರಗತಿಯಾಗಿದೆ § 11:23 ಪಾತಾಳ ಅಂದರೆ ಸತ್ತವರ ಸ್ಥಳ * 11:23 ನೋಡಿರಿ ಆದಿ 19:24-29