ಮಲಾಕಿ
1
1 ಒಂದು ಪ್ರವಾದನೆ: ಇಸ್ರಾಯೇಲಿಗೆ ಮಲಾಕಿಯನ ಮುಖಾಂತರ ಬಂದ ಯೆಹೋವ ದೇವರ ವಾಕ್ಯ:
ಯಾಕೋಬನನ್ನು ಪ್ರೀತಿಸಿ, ಏಸಾವನನ್ನು ದ್ವೇಷ ಮಾಡಿದ್ದು
2 “ನಾನು ನಿಮ್ಮನ್ನು ಪ್ರೀತಿ ಮಾಡಿದೆನು” ಎಂದು ಯೆಹೋವ ದೇವರು ಹೇಳುತ್ತಾರೆ.
“ನೀವಾದರೋ, ‘ಯಾವುದರಲ್ಲಿ ನೀವು ನಮ್ಮನ್ನು ಪ್ರೀತಿ ಮಾಡಿದ್ದೀರಿ?’ ಎಂದು ಕೇಳುತ್ತೀರಿ.
“ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದರೂ ನಾನು ಯಾಕೋಬನನ್ನು ಪ್ರೀತಿ ಮಾಡಿದೆನು. ಎಂದು ಯೆಹೋವ ದೇವರು ಅನ್ನುತ್ತಾರೆ.
3 ಏಸಾವನನ್ನು ದ್ವೇಷ ಮಾಡಿದೆನು. ಅವನ ಬೆಟ್ಟಗಳನ್ನು ಹಾಳು ಮಾಡಿ, ಅವನ ಸೊತ್ತನ್ನು ಅಡವಿಯ ನರಿಗಳಿಗೆ ಕೊಟ್ಟೆನು.”
4 ಎದೋಮ್ಯರು, “ನಾವು ಬಡಕಲಾದೆವು, ಆದರೆ ನಾವು ಮತ್ತೆ ಹಾಳಾದ ಸ್ಥಳಗಳನ್ನು ಕಟ್ಟುವೆವು,” ಎಂದು ಹೇಳಬಹುದು.
ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು. ಜನರು ಅವರನ್ನು ದುಷ್ಟತನದ ನಾಡೆಂದೂ, ಯೆಹೋವ ದೇವರು ಎಂದೆಂದಿಗೂ ಸಿಟ್ಟು ಮಾಡುವ ಜನವೆಂದೂ ಕರೆಯುವರು.
5 ನಿಮ್ಮ ಕಣ್ಣುಗಳಿಂದ ನೋಡಿ, ‘ಇಸ್ರಾಯೇಲಿನ ಮೇರೆ ಆಚೆಗೂ ಯೆಹೋವ ದೇವರು ಮಹೋನ್ನತರು!’ ಎಂದು ನೀವು ಹೇಳುವಿರಿ.”
ಅಶುದ್ಧವಾದ ಯಜ್ಞಗಳು
6 “ಮಗನು ತಂದೆಯನ್ನೂ, ದಾಸನು ಯಜಮಾನನನ್ನೂ ಸನ್ಮಾನಿಸುತ್ತಾನೆ. ಹಾಗಾದರೆ ನಾನು ತಂದೆಯಾಗಿದ್ದರೆ ನನ್ನ ಸನ್ಮಾನವೆಲ್ಲಿ? ನಾನು ಯಜಮಾನನಾಗಿದ್ದರೆ ನನಗೆ ತೋರಿಸುವ ಭಯಭಕ್ತಿಯೆಲ್ಲಿ?”
“ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರು ನೀವೇ ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
“ಆದರೆ ನೀವು, ‘ನಿಮ್ಮ ಹೆಸರನ್ನು ಯಾವುದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆ?’ ಎಂದು ಕೇಳುತ್ತೀರಿ.”
7 “ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸುತ್ತೀರಿ.
“ ‘ಯಾವುದರಲ್ಲಿ ನಿಮ್ಮನ್ನು ನಾವು ಅಪವಿತ್ರ ಮಾಡಿದ್ದೇವೆ?’ ಎಂದು ಕೇಳುತ್ತೀರಿ.”
ಯೆಹೋವ ದೇವರ ಮೇಜು ಹೀನವಾದದ್ದೆಂದು ನೀವು ಹೇಳುವುದರಿಂದಲೇ!
8 ಇದಲ್ಲದೆ, ಕುರುಡಾದ ಪಶುಗಳನ್ನು ಬಲಿಗಾಗಿ ಅರ್ಪಿಸಿದರೆ, ಅದು ದೋಷವಲ್ಲವೋ? ಕುಂಟಾದ ಮತ್ತು ರೋಗವುಳ್ಳ ಪಶುಗಳನ್ನು ಅರ್ಪಿಸಿದರೆ, ಅದು ಕೆಟ್ಟದ್ದಲ್ಲವೋ? “ಅದನ್ನು ನಿನ್ನ ರಾಜ್ಯಪಾಲನಿಗೆ ಅರ್ಪಿಸು, ಅವನು ನಿನ್ನನ್ನು ಮೆಚ್ಚುವನೋ? ನಿಮ್ಮನ್ನು ಸ್ವೀಕಾರ ಮಾಡುವನೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
9 “ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ. ನಿಮ್ಮ ಕೈಗಳಿಂದ ಅಂಥ ಅರ್ಪಣೆಯನ್ನು ಅವರು ಸ್ವೀಕರಿಸುವರೋ?” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
10 “ನನ್ನ ಬಲಿಪೀಠದ ಮೇಲೆ ವ್ಯರ್ಥವಾಗಿ ಬೆಂಕಿ ಹಚ್ಚುವುದಕ್ಕಿಂತ, ಬಾಗಿಲು ಮುಚ್ಚುವುದು ಒಳ್ಳೆಯದು. ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವುದಿಲ್ಲ.
11 ಸೂರ್ಯೋದಯವು ಮೊದಲುಗೊಂಡು ಅಸ್ತಮಾನದವರೆಗೂ, ನನ್ನ ಹೆಸರು ಎಲ್ಲಾ ಜನಾಂಗಗಳಲ್ಲಿ ಘನವಾಗಿರುವುದು. ಪ್ರತಿಯೊಂದು ಸ್ಥಳದಲ್ಲಿಯೂ ನನ್ನ ಹೆಸರಿಗೆ ಧೂಪವೂ, ಶುದ್ಧ ಕಾಣಿಕೆಯೂ ಅರ್ಪಿಸಲಾಗುವುದು. ಏಕೆಂದರೆ ನನ್ನ ಹೆಸರು ಇತರ ಜನಾಂಗಗಳಲ್ಲಿ ಘನವಾಗಿರುವುದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
12 “ಆದರೆ ನೀವು ಯೆಹೋವ ದೇವರ ಮೇಜು ಅಶುದ್ಧ, ‘ಅದರ ಫಲವೂ, ಅದರ ಆಹಾರವೂ ಅಸಹ್ಯ,’ ಎಂದು ಹೇಳಿ ಅದನ್ನು ಅಪವಿತ್ರ ಮಾಡಿದ್ದೀರಿ.
13 ಇದಲ್ಲದೆ ನೀವು, ‘ಎಂಥಾ ಭಾರ,’ ಎಂದು ಹೇಳಿ, ನೀವು ಅದನ್ನು ತಿರಸ್ಕಾರದಿಂದ ಊದಿಬಿಟ್ಟಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
“ಗಾಯವಾದದ್ದನ್ನೂ, ಕುಂಟಾದ ರೋಗವುಳ್ಳ ಪಶುವನ್ನೂ ನನಗೆ ಬಲಿಯಾಗಿ ಅರ್ಪಿಸುತ್ತೀರಿ. ನಾನು ಇದನ್ನು ನಿಮ್ಮ ಕೈಯಿಂದ ಅಂಗೀಕರಿಸಬಹುದೋ?” ಎಂದು ಯೆಹೋವ ದೇವರು ಹೇಳುತ್ತಾರೆ.
14 “ಆದರೆ ತನ್ನ ಮಂದೆಯಲ್ಲಿ ದೋಷವಿಲ್ಲದ ಗಂಡು ಪಶು ಇರಲಾಗಿ ಅದನ್ನು ಅರ್ಪಿಸಲು ಪ್ರಮಾಣಮಾಡಿ, ಯೆಹೋವ ದೇವರಿಗೆ ದೋಷವುಳ್ಳದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ, ಏಕೆಂದರೆ ನಾನು ಮಹಾ ಅರಸನು, ನನ್ನ ಹೆಸರು ಇತರ ಜನಾಂಗಗಳಲ್ಲಿ ಭಯಭಕ್ತಿಯುಳ್ಳದ್ದಾಗಿರಬೇಕು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.