7
ಪ್ರಾಯಶ್ಚಿತ್ತ ಬಲಿ
1 “ ‘ಇವು ಪ್ರಾಯಶ್ಚಿತ್ತ ಬಲಿಯ ನಿಯಮಗಳು: ಇದು ಮಹಾಪರಿಶುದ್ಧವಾದದ್ದು.
2 ದಹನಬಲಿಯನ್ನು ವಧಿಸಿದ ಸ್ಥಳದಲ್ಲಿಯೇ ಪ್ರಾಯಶ್ಚಿತ್ತದ ಬಲಿಯನ್ನು ವಧಿಸಬೇಕು. ಅದರ ರಕ್ತವನ್ನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು.
3 ಅದರ ಎಲ್ಲಾ ಕೊಬ್ಬನ್ನೂ, ಅಂದರೆ ಬಾಲದ ಕೊಬ್ಬನ್ನೂ ಕರುಳಿನ ಸುತ್ತಲಿರುವ ಕೊಬ್ಬನ್ನು,
4 ಬದಿಯಲ್ಲಿರುವ ಎರಡು ಮೂತ್ರ ಜನಕಾಂಗಗಳನ್ನೂ, ಅವುಗಳ ಮೇಲಿರುವ ಕೊಬ್ಬನ್ನೂ, ಪಕ್ಕೆಯ ಬದಿಯಲ್ಲಿಯ ಪೊರೆಯನ್ನೂ ಮೂತ್ರಜನಕಾಂಗಗಳೊಂದಿಗೆ ತೆಗೆದುಕೊಂಡು ಅರ್ಪಿಸಬೇಕು.
5 ಆಗ ಯಾಜಕನು ಅವುಗಳನ್ನು ಬೆಂಕಿಯಿಂದ ಯೆಹೋವ ದೇವರಿಗೆ ಸಮರ್ಪಿಸುವ ಬಲಿಪೀಠದ ಮೇಲೆ ಸುಡಬೇಕು. ಇದು ಪ್ರಾಯಶ್ಚಿತ್ತದ ಬಲಿಯಾಗಿದೆ.
6 ಯಾಜಕರಲ್ಲಿ ಪ್ರತಿಯೊಬ್ಬ ಪುರುಷನು ಅದನ್ನು ತಿನ್ನಬೇಕು. ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಅದು ಮಹಾಪರಿಶುದ್ಧವಾದದ್ದು.
7 “ ‘ಪಾಪ ಪರಿಹಾರದ ಬಲಿಯ ಹಾಗೆಯೇ ಪ್ರಾಯಶ್ಚಿತ್ತದ ಬಲಿಯೂ ಆಗಿದೆ. ಅವುಗಳಿಗೆ ಇರುವುದು ಒಂದೇ ನಿಯಮ, ಅವುಗಳಿಂದ ಪ್ರಾಯಶ್ಚಿತ್ತ ಮಾಡುವ ಯಾಜಕನೇ ಅವುಗಳನ್ನು ತೆಗೆದುಕೊಳ್ಳಬೇಕು.
8 ದಹನಬಲಿಯನ್ನು ಸಮರ್ಪಿಸುವ ಯಾಜಕನು ತಾನು ಸಮರ್ಪಿಸಿದ ದಹನಬಲಿಯ ತೊಗಲನ್ನು ತಾನೇ ತೆಗೆದುಕೊಳ್ಳಬೇಕು.
9 ಒಲೆಯಲ್ಲಿ ಬೇಯಿಸಿದ ಬಾಂಡ್ಲಿಯಲ್ಲಿಯೂ ಬೋಗುಣಿಯಲ್ಲಿಯೂ ತಯಾರಿಸಿದ ಎಲ್ಲಾ ಧಾನ್ಯ ಸಮರ್ಪಣೆಯು ಸಮರ್ಪಿಸಿದ ಯಾಜಕನದಾಗಿರಬೇಕು.
10 ಎಣ್ಣೆಯಿಂದ ಮಿಶ್ರಿತವಾದ ಮತ್ತು ಒಣಗಿದ್ದ ಪ್ರತಿಯೊಂದು ಧಾನ್ಯ ಸಮರ್ಪಣೆಯನ್ನೂ ಆರೋನನ ಪುತ್ರರು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು.
ಸಮಾಧಾನ ಬಲಿ
11 “ ‘ಅವನು ಯೆಹೋವ ದೇವರಿಗೆ ಸಮರ್ಪಿಸಬೇಕಾದ ಸಮಾಧಾನದ ಬಲಿಗಳ ನಿಯಮವು ಇದೇ.
12 “ ‘ಅವನು ಉಪಕಾರ ಸ್ತುತಿಗಾಗಿ ಅರ್ಪಿಸುವುದಾದರೆ, ಕೃತಜ್ಞತಾಸ್ತುತಿ ಬಲಿಯನ್ನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಗಳೊಂದಿಗೆ, ಎಣ್ಣೆ ಹೊಯ್ದ ಹುಳಿಯಿಲ್ಲದ ದೋಸೆಗಳೊಂದಿಗೆ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದ ರೊಟ್ಟಿಗಳೊಂದಿಗೆ ಸಮರ್ಪಿಸಬೇಕು.
13 ರೊಟ್ಟಿಗಳಲ್ಲದೆ, ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಬಲಿಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸಬೇಕು.
14 ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಕಾಣಿಕೆಯನ್ನಾಗಿ ಯೆಹೋವ ದೇವರಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದ್ದಾಗಬೇಕು.
15 ಉಪಕಾರ ಸ್ತುತಿಗಾಗಿ ಅವನು ಸಮಾಧಾನ ಬಲಿಯ ಮಾಂಸವನ್ನು ಅರ್ಪಿಸಲಾದ ದಿನವೇ ತಿನ್ನಬೇಕು. ಅವನು ಅದರಲ್ಲಿ ಬೆಳಗಿನವರೆಗೆ ಯಾವುದನ್ನೂ ಉಳಿಸಬಾರದು.
16 “ ‘ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಯಿಚ್ಛೆಯಾದ ಸಮರ್ಪಣೆಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ಅದನ್ನು ತಿನ್ನಬೇಕು. ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬಹುದು.
17 ಆದರೆ ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿಯಿಂದ ಸುಡಬೇಕು.
18 ತನ್ನ ಸಮಾಧಾನ ಬಲಿಯ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಬಲಿಯಾಗುವುದಿಲ್ಲ, ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರುವುದಿಲ್ಲ. ಅದು ಅಶುಚಿಯಾಗಿರುವುದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.
19 “ ‘ಅಶುದ್ಧವಾದ ಯಾವುದನ್ನಾದರೂ ಮುಟ್ಟಿದ ಮಾಂಸವನ್ನು ತಿನ್ನಬಾರದು, ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. ಮಾಂಸದ ವಿಷಯದಲ್ಲಿ ಶುದ್ಧವಾಗಿರುವವರೆಲ್ಲರೂ ಅದರಲ್ಲಿ ತಿನ್ನಬಹುದು.
20 ಆದರೆ ಯೆಹೋವ ದೇವರಿಗೆ ಸಂಬಂಧಪಟ್ಟ ಸಮಾಧಾನದ ಬಲಿಯ ಯಜ್ಞದ ಮಾಂಸವನ್ನು ಯಾವನಾದರೂ ಅಶುದ್ಧನಾಗಿದ್ದು ತಿನ್ನುವನೋ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.
21 ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧ ವಸ್ತುವನ್ನೇ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧವಸ್ತುವನ್ನಾಗಲಿ ಮುಟ್ಟಿದರೆ ಮತ್ತು ಯೆಹೋವ ದೇವರಿಗೆ ಸಂಬಂಧಿಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು,’ ” ಎಂದರು.
ಕೊಬ್ಬನ್ನೂ, ರಕ್ತವನ್ನೂ ನಿಷೇಧಿಸಿದ್ದು
22 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
23 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ನೀವು ಎತ್ತು ಇಲ್ಲವೆ ಕುರಿ ಇಲ್ಲವೆ ಮೇಕೆಗಳ ಕೊಬ್ಬನ್ನು ತಿನ್ನಬಾರದು.
24 ತಾನಾಗಿಯೇ ಸತ್ತ ಪ್ರಾಣಿಯ ಕೊಬ್ಬನ್ನೂ, ಕಾಡುಮೃಗಗಳು ಸೀಳಿದ್ದರ ಕೊಬ್ಬನ್ನೂ ಬೇರೆ ಯಾವುದಕ್ಕಾದರೂ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಷ್ಟು ಮಾತ್ರವೂ ತಿನ್ನಬಾರದು.
25 ಏಕೆಂದರೆ ಮನುಷ್ಯರು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಬಲಿ, ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ, ಅಂಥವರನ್ನು ತಮ್ಮ ಜನರಿಂದ ತೆಗೆದುಹಾಕಬೇಕು.
26 ಇದಲ್ಲದೆ ನೀವು ಯಾವ ತರದ ರಕ್ತವನ್ನೂ ಅಂದರೆ ಅದು ಪಕ್ಷಿಯದಾಗಿರಲಿ, ಪ್ರಾಣಿಯದಾಗಿರಲಿ ನಿಮ್ಮ ಯಾವ ನಿವಾಸಗಳಲ್ಲಿಯೂ ತಿನ್ನಬಾರದು.
27 ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ, ಅಂಥವನನ್ನು ತನ್ನ ಜನರಿಂದ ತೆಗೆದುಹಾಕಬೇಕು.’ ”
ಯಾಜಕರ ಪಾಲು
28 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ,
29 “ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳು: ‘ಯೆಹೋವ ದೇವರಿಗೆ ಸಮಾಧಾನ ಬಲಿಯನ್ನು ಅರ್ಪಿಸುವವನು, ಸಮಾಧಾನ ಬಲಿಯ ತನ್ನ ಕಾಣಿಕೆಯನ್ನು ಯೆಹೋವ ದೇವರಿಗೆ ತರಬೇಕು.
30 ಅವನು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಯೆಹೋವ ದೇವರ ಮುಂದೆ ನೈವೇದ್ಯರೂಪವಾಗಿ ನಿವಾಳಿಸುವದಕ್ಕೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು.
31 ಯಾಜಕನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಡಬೇಕು. ಆದರೆ ಎದೆಯು ಆರೋನನ ಮತ್ತು ಅವನ ಮಕ್ಕಳಿಗೆ ಸೇರುವುದು.
32 ಬಲಭುಜವನ್ನು ನೀವು ಯಾಜಕನಿಗೆ ಸಮಾಧಾನದ ಬಲಿಯಾಗಿ ಕೊಡಬೇಕು.
33 ಸಮಾಧಾನದ ಬಲಿಗಳ ರಕ್ತವನ್ನೂ, ಕೊಬ್ಬನ್ನೂ ಸಮರ್ಪಿಸುವ ಆರೋನನ ಪುತ್ರರಲ್ಲಿ ಒಬ್ಬನು ಭುಜದ ಬಲಭಾಗವನ್ನು ತನ್ನ ಪಾಲಾಗಿ ತೆಗೆದುಕೊಳ್ಳಲಿ.
34 ಏಕೆಂದರೆ ನೈವೇದ್ಯ ಮಾಡಿದ ಎದೆಯನ್ನು ಮತ್ತು ನಿವಾಳಿಸುವ ಭುಜವನ್ನು ಇಸ್ರಾಯೇಲಿನ ಮಕ್ಕಳ ಸಮಾಧಾನದ ಬಲಿಗಳ ಯಜ್ಞಗಳಿಂದ ನಾನು ತೆಗೆದುಕೊಂಡು ಯಾಜಕನಾದ ಆರೋನನಿಗೂ, ಅವನ ಪುತ್ರರಿಗೂ ಇಸ್ರಾಯೇಲರಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿ ಅವರಿಗೆ ಕೊಟ್ಟಿದ್ದೇನೆ.’ ”
35 ಆರೋನನ ಅಭಿಷೇಕದ ಮತ್ತು ಅವನ ಮಕ್ಕಳ ಅಭಿಷೇಕದ ದಿನದಲ್ಲಿ ಅವರು ತಮ್ಮನ್ನು ಯಾಜಕನ ಉದ್ಯೋಗದ ಸೇವೆಗಾಗಿ ಯೆಹೋವ ದೇವರಿಗೆ ಒಪ್ಪಿಸಿಕೊಳ್ಳುವಾಗ, ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸುವ ಬಲಿಗಳಲ್ಲಿ ಇರುವ ಪಾಲು ಇದೆ.
36 ಅವರನ್ನು ಅಭಿಷೇಕಿಸಿದ ದಿನದಲ್ಲಿ ಇದನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರ ಎಲ್ಲಾ ಸಂತತಿಗಳಲ್ಲಿ ಒಂದು ನಿರಂತರವಾದ ಕಟ್ಟಳೆಯಾಗಿರುವಂತೆ ಅವರಿಗೆ ಆಜ್ಞಾಪಿಸಿದ್ದಾರೆ.
37 ದಹನಬಲಿ, ಧಾನ್ಯ ಬಲಿ, ಪಾಪ ಪರಿಹಾರದ ಬಲಿ, ಪ್ರಾಯಶ್ಚಿತ್ತದ ಬಲಿ, ಪ್ರತಿಷ್ಠೆಗಳ ಮತ್ತು ಸಮಾಧಾನದ ಬಲಿಗಳ ಉಪದೇಶಗಳು ಇವೇ.
38 ಇವುಗಳನ್ನು ಯೆಹೋವ ದೇವರು ಇಸ್ರಾಯೇಲರಿಗೆ ಅವರು ತಮ್ಮ ಕಾಣಿಕೆಗಳನ್ನು ಸಮರ್ಪಿಸುವಂತೆ ಆಜ್ಞಾಪಿಸಿದ ದಿನದಲ್ಲಿ ಸೀನಾಯಿ ಮರುಭೂಮಿಯ ಸೀನಾಯಿ ಬೆಟ್ಟದಲ್ಲಿ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದರು.