13
ಸಾಂಕ್ರಾಮಿಕ ಚರ್ಮರೋಗಗಳ ಕುರಿತ ನಿಯಮಗಳು
1 ಯೆಹೋವ ದೇವರು ಮೋಶೆ ಮತ್ತು ಆರೋನರೊಡನೆ ಮಾತನಾಡಿ ಹೇಳಿದ್ದೇನೆಂದರೆ,
2 “ಒಬ್ಬ ಮನುಷ್ಯನು ತನ್ನ ಚರ್ಮದ ಮೇಲೆ ಬಾವಾಗಲಿ, ಕಜ್ಜಿಯಾಗಲಿ, ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಚರ್ಮದಲ್ಲಿ ಕುಷ್ಠದ ವ್ಯಾಧಿಯಂತಿದ್ದರೆ, ಅವನು ಯಾಜಕನಾದ ಆರೋನನ ಬಳಿಗಾದರೂ ಇಲ್ಲವೆ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗಾದರೂ ಕರೆದುಕೊಂಡು ಬರಬೇಕು.
3 ಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
4 ಅವನ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು, ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದು, ಅಲ್ಲಿನ ಕೂದಲು ಬೆಳ್ಳಗಾಗದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಪ್ರತ್ಯೇಕವಾಗಿ ಇರಿಸಬೇಕು.
5 ಯಾಜಕನು ಏಳನೆಯ ದಿನದಲ್ಲಿ ಅವನನ್ನು ಪರೀಕ್ಷಿಸಿದಾಗ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ, ಆ ವ್ಯಾಧಿ ಚರ್ಮದಲ್ಲಿ ಹರಡಿರದಿದ್ದರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
6 ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ವ್ಯಾಧಿಯು ಸ್ವಲ್ಪ ಕಪ್ಪಾಗಿದ್ದು, ಚರ್ಮದಲ್ಲೆಲ್ಲಾ ಹರಡಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರುವನು.
7 ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ, ಅವನು ತಿರುಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
8 ಯಾಜಕನು ಅದನ್ನು ಪರೀಕ್ಷಿಸಿದಾಗ, ಕಜ್ಜಿಯ ಚರ್ಮವೇ ಹರಡಿರುವುದಾದರೆ ಆಗ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಏಕೆಂದರೆ ಅದು ಚರ್ಮರೋಗವಾಗಿರುವುದು.
9 “ಚರ್ಮರೋಗವು ಮನುಷ್ಯನಲ್ಲಿ ಇರುವುದಾದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
10 ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,
11 ಅದು ಅವನ ಚರ್ಮದಲ್ಲಿ ದೀರ್ಘಕಾಲದ ಚರ್ಮರೋಗವಾಗಿರುವುದು. ಆಗ ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು ಮತ್ತು ಅವನನ್ನು ಪ್ರತ್ಯೇಕವಾಗಿ ಇರಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
12 “ಒಬ್ಬನಲ್ಲಿ ಸಾಂಕ್ರಾಮಿಕ ಚರ್ಮರೋಗ ಹತ್ತಿದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಪಾದದವರೆಗೂ ಹರಡಿವುದುನ್ನು ಯಾಜಕನು ಪರೀಕ್ಷಿಸಿದರೆ,
13 ಆಗ ಯಾಜಕನು ಅದನ್ನು ಗಮನಿಸಬೇಕು. ತೊನ್ನು ಹತ್ತಿದರೆ, ಅವನ ಮೈಯೆಲ್ಲವನ್ನು ಹರಡಿಕೊಂಡಿದ್ದರೆ, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವುದರಿಂದ ಅವನು ಶುದ್ಧನಾಗಿರುವನು.
14 ಆದರೆ ಹಸಿ ಮಾಂಸವು ಅವನಲ್ಲಿ ಕಾಣಿಸಿಕೊಂಡರೆ ಅವನು ಅಶುದ್ಧನಾಗಿರುವನು.
15 ಯಾಜಕನು ಹಸಿ ಮಾಂಸವನ್ನು ಪರೀಕ್ಷಿಸಿ ಅವನು ಅಶುದ್ಧನೆಂದು ನುಡಿಯಬೇಕು. ಏಕೆಂದರೆ ಹಸಿ ಮಾಂಸವು ಅಶುದ್ಧವಾದದ್ದು, ಅದು ಅಶುದ್ಧಗೊಳಿಸುವ ಚರ್ಮರೋಗವೇ.
16 ಹಸಿ ಮಾಂಸವು ಮತ್ತೆ ಬದಲಾಗಿ ಬೆಳ್ಳಗಾದರೆ, ಅವನು ಯಾಜಕನ ಬಳಿಗೆ ಬರಬೇಕು.
17 ಆಗ ಯಾಜಕನು ಅವನನ್ನು ಪರೀಕ್ಷಿಸಿ, ಆ ವ್ಯಾಧಿಯು ಬೆಳ್ಳಗಾಗಿದ್ದರೆ, ಯಾಜಕನು, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅವನು ಶುದ್ಧನಾಗಿರುವನು.
18 “ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
19 ಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.
20 ಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು.
21 ಆದರೆ ಯಾಜಕನು ಅದನ್ನು ಪರೀಕ್ಷಿಸಲು, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದಿದ್ದರೆ ಮತ್ತು ಸ್ವಲ್ಪ ಮಬ್ಬಾಗಿದ್ದರೆ, ಆಗ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
22 ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು. ಅದು ಚರ್ಮರೋಗವಾಗಿದೆ.
23 ಆದರೆ ಆ ಹೊಳಪಾದ ಕಲೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು, ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
24 “ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಸಹ ಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಕಲೆಯಾಗಿದ್ದರೆ,
25 ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಹೊಳಪಾದ ಕಲೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆಯಿಂದ ಒಡೆದ ಚರ್ಮರೋಗವಾಗಿರುವುದು. ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಚರ್ಮವ್ಯಾಧಿಯಾಗಿದೆ.
26 ಆದರೆ ಯಾಜಕನು ಅದನ್ನು ಪರೀಕ್ಷಿಸಿದಾಗ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೋಟಾಗಿದ್ದರೆ, ಯಾಜಕನು ಆಗ ಅವನನ್ನು ಏಳು ದಿನಗಳ ಕಾಲ ಮುಚ್ಚಿಡಬೇಕು.
27 ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ಚರ್ಮರೋಗ.
28 ಆ ಹೊಳಪಾದ ಕಲೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮಬ್ಬಾಗಿದ್ದರೆ, ಬೆಂಕಿ ಸುಟ್ಟ ಬೊಬ್ಬೆಯ ಊತವೆಂದು ಮತ್ತು ಅವನು ಶುದ್ಧನೆಂದು ಯಾಜಕನು ನುಡಿಯಬೇಕು. ಏಕೆಂದರೆ ಅದು ಬೆಂಕಿಯ ಬೊಬ್ಬೆಯಾಗಿರುವುದು.
29 “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ವ್ಯಾಧಿಯು ತಲೆಯ ಮೇಲಾಗಲಿ, ಗಡ್ಡದ ಮೇಲಾಗಲಿ ಕಲೆ ಇದ್ದರೆ,
30 ಆಗ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಬೇಕು. ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ತಲೆಯ ಮೇಲಾಗಲಿ ಇಲ್ಲವೆ ಗಡ್ಡದ ಮೇಲಾಗಲಿ ಇರುವ ಚರ್ಮರೋಗವಾಗಿದೆ.
31 ಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು.
32 ಏಳನೆಯ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಿದಾಗ, ಆ ಇಸಬು ಹರಡದೆ ಮತ್ತು ಅದರಲ್ಲಿ ಹಳದಿ ಕೂದಲು ಇರದೆ, ಆ ಇಸಬು ಮಿಕ್ಕ ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ,
33 ಅವನು ಕ್ಷೌರ ಮಾಡಿಸಿಕೊಳ್ಳಲಿ. ಆದರೆ ಅವನು ಇಸಬನ್ನು ಕ್ಷೌರ ಮಾಡಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
34 ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಆ ಇಸಬು ಚರ್ಮದಲ್ಲಿ ಹರಡಿರದಿದ್ದರೆ ಇಲ್ಲವೆ ನೋಡಲು ಅದು ಮಿಕ್ಕ ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ, ಯಾಜಕನು ಆಗ ಅವನನ್ನು ಶುದ್ಧನೆಂದು ನುಡಿಯಬೇಕು, ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರಬೇಕು.
35 ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿರದಿದ್ದರೆ,
36 ಯಾಜಕನು ಆಗ ಅವನನ್ನು ಪರೀಕ್ಷಿಸಬೇಕು, ಆ ಇಸಬು ಚರ್ಮದಲ್ಲಿ ಹರಡಿದ್ದರೆ, ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ. ಅವನು ಅಶುದ್ಧನು.
37 ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಮತ್ತು ಅದರಲ್ಲಿ ಕಪ್ಪುಕೂದಲು ಬೆಳೆದರೆ, ಇಸಬು ವಾಸಿಯಾಗಿ ಅವನು ಶುದ್ಧನಾಗುವನು, ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
38 “ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ದೇಹದ ಚರ್ಮದಲ್ಲಿ ಬಿಳಿಯ ಹೊಳಪಾದ ಮಚ್ಚೆಗಳು ಅಲ್ಲಲ್ಲಿ ಇದ್ದರೆ,
39 ಅವುಗಳನ್ನು ಯಾಜಕನು ಪರೀಕ್ಷಿಸಬೇಕು, ಅವರ ದೇಹದ ಚರ್ಮದಲ್ಲಿ ಹೊಳಪಾದ ಕಲೆಗಳು ಮಬ್ಬಾಗಿ ಬಿಳುಪಾಗಿದ್ದರೆ, ಅದು ಚರ್ಮದ ಮೇಲೆ ಬಿಸಿಲಿನಿಂದಾದ ಕೆಂಪು ಮಚ್ಚೆಯಾಗಿರುವುದು. ಅವನು ಶುದ್ಧನಾಗಿರುವನು.
40 “ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.
41 ಮುಂದಲೆಯ ಭಾಗದಲ್ಲಿ ಕೂದಲು ಉದುರಿ ಹೋಗಿದ್ದರೆ, ಅವನು ಪಟ್ಟೆ ತಲೆಯವನು, ಆದರೂ ಅವನು ಶುದ್ಧನಾಗಿರುವನು.
42 ಆದರೆ ಆ ಬೋಳು ತಲೆಯಲ್ಲಿ ಇಲ್ಲವೆ ಪಟ್ಟೆ ತಲೆಯಲ್ಲಿ ಕೆಂಪಗಿರುವ ಬಿಳುಪಾದ ಮಚ್ಚೆಯಿದ್ದರೆ, ಅದು ಅವನ ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆ ತಲೆಯಲ್ಲಾಗಲಿ ಹುಟ್ಟುತ್ತಿರುವ ಚರ್ಮರೋಗವೇ.
43 ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು. ಅವನ ಬೋಳು ತಲೆಯಲ್ಲಾಗಲಿ, ಇಲ್ಲವೆ ಅವನ ಪಟ್ಟೆ ತಲೆಯಲ್ಲಾಗಲಿ ಏಳುತ್ತಿರುವ ಆ ಕಲೆಯು ಬಿಳುಪಾಗಿ ಕೆಂಪಾಗಿದ್ದರೆ ಮತ್ತು ಮಾಂಸದ ತೊಗಲಿನಲ್ಲಿ ಇರುವ ಚರ್ಮರೋಗದ ಹಾಗಿದ್ದರೆ, ಅವನು ರೋಗಿ ಎಂದೂ ಅಶುದ್ಧನೆಂದೂ
44 ಅವನ ವ್ಯಾಧಿಯು ಅವನ ತಲೆಯಲ್ಲಿ ಕಾಣಿಸಿದ್ದರಿಂದ ಅವನು ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
45 “ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.
46 ಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
ಬೂಜು ಹಿಡಿದ ವಸ್ತುಗಳು
47 “ಬೂಜು ಚರ್ಮರೋಗದ ಗುರುತು ಅವನ ಉಡುಪಿನಲ್ಲೂ ಇದ್ದು, ಅದು ಉಣ್ಣೆಯ ಉಡುಪಾಗಲಿ ಇಲ್ಲವೆ ನಾರಿನ ಉಡುಪಾಗಲಿ,
48 ನಾರಿನ ಇಲ್ಲವೆ ಉಣ್ಣೆಯ ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ಚರ್ಮದಲ್ಲಾಗಲಿ, ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಇದಲ್ಲದೆ ಹಸುರಾಗಿ ಇಲ್ಲವೆ,
49 ಆ ಬಟ್ಟೆ ತೊಗಲು ಹಾಸು ಇಲ್ಲವೆ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ, ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಬೂಜಾಗಿದೆ. ಅದನ್ನು ಯಾಜಕನಿಗೆ ತೋರಿಸಬೇಕು.
50 ಯಾಜಕನು ಅದನ್ನು ಪರೀಕ್ಷಿಸಿ, ಆ ವಸ್ತುವನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
51 ಅವನು ಏಳನೆಯ ದಿನದಲ್ಲಿ ಅದನ್ನು ಪರೀಕ್ಷಿಸಬೇಕು. ಆ ಬೂಜು ಅವನ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಹರಡಿದ್ದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದು ಅಶುದ್ಧವು.
52 ಆದ್ದರಿಂದ ಅವನು ಆ ಉಡುಪುಗಳನ್ನು ಅಂದರೆ ಅದು ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಎಲ್ಲಿ ಬೂಜಿದೆಯೋ ಅದನ್ನು ಸುಡಬೇಕು. ಏಕೆಂದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದನ್ನು ಬೆಂಕಿಯಿಂದ ಸುಡಬೇಕು.
53 “ಯಾಜಕನು ಪರೀಕ್ಷಿಸಿದಾಗ ಬೂಜು ಉಡುಪಿನಲ್ಲಾಗಲಿ, ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ತೊಗಲಿನ ವಸ್ತುಗಳಲ್ಲಾಗಲಿ ಹರಡದಿದ್ದರೆ,
54 ಆಗ ಯಾಜಕನು ಆ ಬೂಜುಳ್ಳ ವಸ್ತುವನ್ನು ತೊಳೆಯುವಂತೆ ಆಜ್ಞಾಪಿಸಿ, ಅದನ್ನು ಅವನು ಏಳು ದಿನಗಳ ಕಾಲ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
55 ಅದನ್ನು ತೊಳೆದಾದ ಮೇಲೆ ಯಾಜಕನು ಆ ಬೂಜನ್ನು ಪರೀಕ್ಷಿಸಬೇಕು. ಆ ಬೂಜು ಬಣ್ಣವನ್ನು ಬದಲಾಯಿಸದಿದ್ದರೆ ಮತ್ತು ಹರಡದಿದ್ದರೆ ಅದು ಅಶುದ್ಧವಾಗಿರುವುದು. ಅದನ್ನು ನೀನು ಬೆಂಕಿಯಿಂದ ಸುಡಬೇಕು. ಅದು ಒಳಗಿನಿಂದಾಗಲಿ ಇಲ್ಲವೆ ಹೊರಗಿನಿಂದಾಗಲಿ ವ್ಯಾಪಿಸಿದೆ.
56 ಯಾಜಕನು ಅದನ್ನು ಪರೀಕ್ಷಿಸಿದರೆ, ಆ ಬೂಜು ಹಿಡಿದ ವಸ್ತುವನ್ನು ತೊಳೆದ ನಂತರ ಮಬ್ಬಾಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ, ಚರ್ಮದಿಂದಾಗಲಿ, ಹಾಸಿನಿಂದಾಗಲಿ, ಹೊಕ್ಕಿನಿಂದಾಗಲಿ ಹರಿದುಹಾಕಬೇಕು.
57 ಆದರೆ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನಲ್ಲಾಗಲಿ ಕಂಡು ಬಂದರೆ ಅದು ಹರಡುವ ಬೂಜು ಮತ್ತು ಬೂಜಿರುವ ವಸ್ತುವನ್ನು ನೀನು ಬೆಂಕಿಯಿಂದ ಸುಡಬೇಕು.
58 ನೀನು ತೊಳೆದ ಮೇಲೆ ಆ ಬೂಜು ಯಾವ ವಸ್ತುವಿನಿಂದ ಹೊರಟು ಹೋಯಿತೋ, ಆ ಬಟ್ಟೆಯನ್ನೂ, ಹಾಸನ್ನೂ, ಹೊಕ್ಕನ್ನೂ ಇಲ್ಲವೆ ಚರ್ಮದ ಯಾವುದೇ ಸಾಮಗ್ರಿಗಳನ್ನೂ ಎರಡನೆಯ ಸಾರಿ ತೊಳೆಯಬೇಕು. ಆಗ ಅದು ಶುದ್ಧವಾಗಿರುವುದು.”
59 ಉಣ್ಣೆ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಬೂಜು ಹಿಡಿದಿದ್ದರೆ ಪಾಲಿಸತಕ್ಕ ನಿಯಮಗಳಿವು. ಅದನ್ನು ಶುದ್ಧವೆಂದು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇದೇ.