9
ಗಿಬ್ಯೋನ್ಯರ ಮೋಸ
1 ಯೊರ್ದನ್ ನದಿಯ ಈಚೆಯಲ್ಲಿ ಬೆಟ್ಟಗಳಲ್ಲಿಯೂ ತಗ್ಗುಗಳಲ್ಲಿಯೂ ಲೆಬನೋನಿಗೆ ಎದುರಾದ ಮೆಡಿಟೆರಿಯನ್ ಸಮುದ್ರದ ಸಮಸ್ತ ಪ್ರಾಂತಗಳಲ್ಲಿಯೂ ಇರುವ ಹಿತ್ತಿಯರ, ಅಮೋರಿಯರ, ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ ಅರಸರು ಇದನ್ನು ಕೇಳಿದರು.
2 ಆಗ ಅವರು ಯೆಹೋಶುವನಿಗೂ ಇಸ್ರಾಯೇಲರಿಗೂ ವಿರುದ್ಧ ಯುದ್ಧಮಾಡುವುದಕ್ಕೆ ಒಟ್ಟಾಗಿ ಕೂಡಿಕೊಂಡರು.
3 ಆದರೆ ಗಿಬ್ಯೋನಿನ ನಿವಾಸಿಗಳು ಯೆಹೋಶುವನು ಯೆರಿಕೋವಿಗೂ ಆಯಿಗೂ ಮಾಡಿದ್ದನ್ನು ಕೇಳಿದಾಗ,
4 ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ, ಅವರು ರಾಯಭಾರಿಗಳ ಹಾಗೆ ತೋರಿಸುವಂತೆ ಹಳೆಯ ಗೋಣಿ ಚೀಲಗಳನ್ನೂ ತೇಪೆ ಹಾಕಿದ ಹಳೆಯದಾದ ದ್ರಾಕ್ಷಾರಸದ ಬುದ್ದಲಿಗಳನ್ನೂ ಕಟ್ಟಿಕೊಂಡು, ತಮ್ಮ ಕತ್ತೆಗಳ ಮೇಲೆ ಹಾಕಿಕೊಂಡು ಹೋದರು.
5 ತೇಪೆ ಹಾಕಿದ ಹಳೆಯದಾದ ಕೆರಗಳನ್ನು ತಮ್ಮ ಕಾಲುಗಳಲ್ಲಿ ಮೆಟ್ಟಿಕೊಂಡು ಹಳೆಯ ಬಟ್ಟೆಗಳನ್ನು ತೊಟ್ಟುಕೊಂಡು, ಒಣಗಿ ಬೂಷ್ಟು ಹಿಡಿದ ರೊಟ್ಟಿಯನ್ನೂ ತೆಗೆದುಕೊಂಡರು.
6 ಅನಂತರ ಅವರು ಗಿಲ್ಗಾಲಿನಲ್ಲಿ ಇರುವ ಪಾಳೆಯಕ್ಕೆ ಸೇರಿ ಯೆಹೋಶುವನ ಬಳಿಗೆ ಬಂದರು. ಅವರು ಅವನಿಗೂ ಇಸ್ರಾಯೇಲರಿಗೂ, “ನಾವು ದೂರದೇಶದಿಂದ ಬಂದೆವು. ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ,” ಎಂದರು.
7 ಆಗ ಇಸ್ರಾಯೇಲರು ಹಿವ್ವಿಯರಾದ ಅವರಿಗೆ, “ನೀವು ಒಂದು ವೇಳೆ ನಮ್ಮ ಹತ್ತಿರದಲ್ಲಿ ವಾಸಿಸುವವರು ಆಗಿರಬಹುದು. ನಾವು ನಿಮ್ಮ ಸಂಗಡ ಒಡಂಬಡಿಕೆಯನ್ನು ಮಾಡುವುದು ಹೇಗೆ?” ಎಂದರು.
8 ಅದಕ್ಕವರು ಯೆಹೋಶುವನಿಗೆ, “ನಾವು ನಿನ್ನ ಸೇವಕರು,” ಎಂದರು.
ಆಗ ಯೆಹೋಶುವನು ಅವರಿಗೆ, “ನೀವು ಯಾರು? ಎಲ್ಲಿಂದ ಬಂದಿರಿ?” ಎಂದನು.
9 ಅವರು ಅವನಿಗೆ, “ನಿಮ್ಮ ದೇವರಾದ ಯೆಹೋವ ದೇವರ ಹೆಸರಿನ ಮಹತ್ವ ಕೇಳಿ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದಿದ್ದೇವೆ. ಏಕೆಂದರೆ ದೇವರ ಕೀರ್ತಿಯನ್ನೂ, ಅವರು ಈಜಿಪ್ಟಿನಲ್ಲಿ ಮಾಡಿದ ಎಲ್ಲವನ್ನೂ ಕೇಳಿದ್ದೇವೆ.
10 ಯೊರ್ದನ್ ನದಿಗೆ ಆಚೆ ಇರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ, ಅಷ್ಟಾರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದ್ದೇವೆ.
11 ನಮ್ಮ ಹಿರಿಯರೂ, ನಮ್ಮ ದೇಶವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇನೆಂದರೆ, ‘ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದುಕೊಂಡು ಅವರೆದುರಿಗೆ ಹೋಗಿ, ಅವರಿಗೆ ನಾವು ನಿಮ್ಮ ಸೇವಕರು ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ ಎಂದು ಹೇಳಿರಿ,’ ಎಂದರು.
12 ಆದರೆ ನಿಮ್ಮ ಬಳಿಗೆ ಬರುವುದಕ್ಕೆ ನಾವು ಹೊರಟ ದಿನದಲ್ಲಿ ನಮ್ಮ ಮಾರ್ಗ ಪ್ರಯಾಣಕ್ಕೆ ನಮ್ಮ ಮನೆಯೊಳಗೆ ನಮ್ಮ ಒಲೆಯ ಮೇಲೆ ಬಿಸಿ ರೊಟ್ಟಿಗಳನ್ನು ತೆಗೆದುಕೊಂಡೆವು.
13 ಈಗ ಅವು ಒಣಗಿ ಬೂಷ್ಟು ಹಿಡಿದವುಗಳಗಿವೆ. ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸದಾಗಿದ್ದವು. ಇಗೋ, ಈಗ ಅವು ಹರಿದು ಹೋಗಿವೆ. ಇದಲ್ಲದೆ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಪ್ರಯಾಣ ಬಹಳ ದೂರವಾದ್ದರಿಂದ ಹಳೆಯದಾಗಿವೆ,” ಎಂದರು.
14 ಆಗ ಇಸ್ರಾಯೇಲರು ಅವರ ಆಹಾರದಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಅವರು ಯೆಹೋವ ದೇವರಿಂದ ಆಲೋಚನೆಯನ್ನು ಕೇಳಲಿಲ್ಲ.
15 ಯೆಹೋಶುವನು ಅವರ ಸಂಗಡ ಸಮಾಧಾನದ ಒಡಂಬಡಿಕೆ ಮಾಡಿಕೊಂಡನು. ಅವರನ್ನು ಜೀವದಿಂದ ಉಳಿಸುವುದಕ್ಕೆ ಅವರ ಸಂಗಡ ಒಡಂಬಡಿಕೆ ಮಾಡಿದನು. ಇದಲ್ಲದೆ ಸಭೆಯ ಪ್ರಧಾನರು ಅವರಿಗೆ ಪ್ರಮಾಣ ಮಾಡಿದರು.
16 ಆದರೆ ಅವರ ಸಂಗಡ ಒಡಂಬಡಿಕೆ ಮಾಡಿ, ಮೂರು ದಿವಸಗಳಾದ ತರುವಾಯ ಅವರು ತಮ್ಮ ನೆರೆಯವರೆಂದೂ, ತಮ್ಮಲ್ಲಿ ಇರುವವರೆಂದೂ ತಿಳಿದುಬಂತು.
17 ಆಗ ಇಸ್ರಾಯೇಲರು ಪ್ರಯಾಣ ಮಾಡುವಾಗ ಮೂರನೆಯ ದಿವಸದಲ್ಲಿ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ ಯಾರೀಮ್ ಎಂಬ ಅವರ ಪಟ್ಟಣಗಳಿಗೆ ಬಂದರು.
18 ಆದರೆ ಪ್ರಧಾನರು ಅವರಿಗೆ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಪ್ರಮಾಣ ಮಾಡಿದ್ದರಿಂದ ಇಸ್ರಾಯೇಲರು ಅವರ ಮೇಲೆ ದಾಳಿಮಾಡಲಿಲ್ಲ.
ಆದರೆ ಇಸ್ರಾಯೇಲರೆಲ್ಲರೂ ಪ್ರಧಾನರಿಗೆ ವಿರೋಧವಾಗಿ ಗೊಣಗುಟ್ಟಿದರು.
19 ಆಗ ಸಕಲ ಪ್ರಧಾನರು ಎಲ್ಲಾ ಜನರಿಗೆ, “ನಾವು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮೇಲೆ ಅವರಿಗೆ ಪ್ರಮಾಣ ಮಾಡಿದ್ದೇವು. ಆದ್ದರಿಂದ ಅವರನ್ನು ನಾವು ಮುಟ್ಟಕೂಡದು.
20 ನಾವು ಅವರಿಗೆ ಇಟ್ಟ ಆಣೆಯ ನಿಮಿತ್ತ ಕೋಪವು ನಮ್ಮ ಮೇಲೆ ಬಾರದ ಹಾಗೆ ನಾವು ಅವರನ್ನು ಜೀವದಿಂದ ಉಳಿಸಬೇಕು. ಆದರೆ ನಾವು ಅವರಿಗೆ ಹೀಗೆ ಮಾಡೋಣ.
21 ಅದು ಏನೆಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರು ಜೀವದಿಂದ ಇರಲಿ. ಆದರೆ ಅವರು ಇಸ್ರಾಯೇಲಿನ ಎಲ್ಲಾ ಸಮೂಹಕ್ಕೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರಲಿ,” ಪ್ರಧಾನರ ಮಾತಿನಂತೆಯೇ ಆಯಿತು.
22 ತರುವಾಯ ಯೆಹೋಶುವನು ಗಿಬ್ಯೋನ್ಯರನ್ನು ಕರೆಯಿಸಿ ಅವರಿಗೆ, “ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ, ‘ನಾವು ನಿಮಗೆ ಬಹಳ ದೂರವಾಗಿರುವವರು,’ ಎಂದು ಹೇಳಿ ನಮ್ಮನ್ನು ಮೋಸಗೊಳಿಸಿದ್ದೇಕೆ?
23 ಈಗ ನೀವು ಶಾಪಗ್ರಸ್ತರು, ನೀವು ಯಾವಾಗಲೂ ದಾಸತ್ವದಿಂದ ಬಿಡುಗಡೆಯಾಗುವುದಿಲ್ಲ. ನೀವು ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರುವಿರಿ,” ಎಂದು ಹೇಳಿದನು.
24 ಅದಕ್ಕವರು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವುದಕ್ಕೂ, ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡುವುದಕ್ಕೂ ತಮ್ಮ ಸೇವಕ ಮೋಶೆಗೆ ಆಜ್ಞಾಪಿಸಿದ್ದಾರೆಂದು, ನಿಮ್ಮ ಸೇವಕರಾದ ನಾವು ಕೇಳಿದೆವು. ಆದ್ದರಿಂದ ನಾವು ನಮ್ಮ ಪ್ರಾಣಕ್ಕಾಗಿ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
25 ಇಗೋ, ಈಗಲೂ ನಾವು ನಿನ್ನ ಕೈಯಲ್ಲಿಯೇ ಇದ್ದೇವೆ. ನಿನ್ನ ದೃಷ್ಟಿಗೆ ಒಳ್ಳೆಯದಾಗಿಯೂ, ಸರಿಯಾಗಿಯೂ ತೋಚುವ ಹಾಗೆ ನಮಗೆ ಮಾಡು,” ಎಂದು ಉತ್ತರಕೊಟ್ಟರು.
26 ಆ ಪ್ರಕಾರವೇ ಯೆಹೋಶುವನು ಅವರಿಗೆ ಹೇಳಿದಂತೆ ಮಾಡಿದನು. ಅವರನ್ನು ಕೊಂದು ಹಾಕದ ಹಾಗೆ ಇಸ್ರಾಯೇಲರ ಕೈಯಿಂದ ತಪ್ಪಿಸಿದನು.
27 ಯೆಹೋಶುವನು ಆ ದಿನ ಇರುವ ಹಾಗೆ ಗಿಬ್ಯೋನಿನವರ ಸಮೂಹಕ್ಕೂ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿರುವ ಅವರ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ನೇಮಿಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.