13
ಸಂಸೋನನ ಜನನ
1 ಇಸ್ರಾಯೇಲರು ತಿರುಗಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ, ಯೆಹೋವ ದೇವರು ಅವರನ್ನು ನಾಲ್ವತ್ತು ವರ್ಷದವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟರು.
2 ಆದರೆ ಚೊರ್ಗದವನಾದ ದಾನನ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಮಕ್ಕಳನ್ನು ಹೆರದೆ, ಬಂಜೆಯಾಗಿದ್ದಳು.
3 ಯೆಹೋವ ದೇವರ ದೂತನು ಆ ಸ್ತ್ರೀಗೆ ಪ್ರತ್ಯಕ್ಷವಾಗಿ ಅವಳಿಗೆ, “ಇಗೋ, ನೀನು ಮಕ್ಕಳನ್ನು ಹೆರದೆ ಬಂಜೆಯಾಗಿದ್ದೀಯೆ. ಆದರೆ ನೀನು ಗರ್ಭಧರಿಸಿ ಒಬ್ಬ ಮಗನನ್ನು ಹೆರುವೆ.
4 ಆದ್ದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ, ಅಶುಚಿಯಾದ ಒಂದನ್ನಾದರೂ ತಿನ್ನದೆ, ಎಚ್ಚರಿಕೆಯಾಗಿರಬೇಕು.
5 ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವೆ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರಬಾರದು. ಏಕೆಂದರೆ ಗರ್ಭದಿಂದಲೇ ಆ ಹುಡುಗನು ದೇವರಿಗೆ ಪ್ರತಿಷ್ಠಿತನಾದ ನಾಜೀರನಾಗಿರುವನು. ಅವನು ಇಸ್ರಾಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ, ರಕ್ಷಿಸಲು ಪ್ರಾರಂಭಿಸುವನು,” ಎಂದನು.
6 ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆ, “ಒಬ್ಬ ದೇವರ ಮನುಷ್ಯ ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾ ಭಯಂಕರವಾಗಿತ್ತು. ನಾನು ಅವನನ್ನು ಎಲ್ಲಿಂದ ಬಂದೆ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ.
7 ಅವನು ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಈಗ ನೀನು ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುದ್ಧವಾದ ಒಂದನ್ನಾದರೂ ತಿನ್ನದೆ ಇರು. ಏಕೆಂದರೆ ಆ ಹುಡುಗನು ಹುಟ್ಟಿದಂದಿನಿಂದ ಮರಣಹೊಂದುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು,’ ಎಂದಳು.”
8 ಆಗ ಮಾನೋಹನು ಯೆಹೋವ ದೇವರಿಗೆ ಬೇಡಿಕೊಂಡು, “ನನ್ನ ಕರ್ತದೇವರೇ, ನೀವು ಕಳುಹಿಸಿದ ದೇವರ ಮನುಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು, ಹುಟ್ಟುವ ಕೂಸಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ,” ಎಂದು ಪ್ರಾರ್ಥಿಸಿದನು.
9 ದೇವರು ಮಾನೋಹನ ಬೇಡಿಕೆಯನ್ನು ಕೇಳಿದರು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ, ದೇವದೂತನು ತಿರುಗಿ ಅವಳ ಬಳಿಗೆ ಬಂದನು. ಆಗ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ.
10 ಆದ್ದರಿಂದ ಅವಳು ಬೇಗ ಓಡಿಹೋಗಿ, ತನ್ನ ಗಂಡನಿಗೆ, “ಇಗೋ, ಆ ದಿನ ನನಗೆ ಪ್ರತ್ಯಕ್ಷನಾದ ಮನುಷ್ಯನು ತಿರುಗಿ ನನಗೆ ಪ್ರತ್ಯಕ್ಷನಾಗಿದ್ದಾನೆ,” ಎಂದು ತಿಳಿಸಿದಳು.
11 ಆಗ ಮಾನೋಹನು ಎದ್ದು ತನ್ನ ಹೆಂಡತಿಯೊಡನೆ ಹೋಗಿ, ಅವನ ಬಳಿಗೆ ಬಂದು, ಅವನಿಗೆ, “ಈ ಸ್ತ್ರೀಯ ಸಂಗಡ ಮಾತನಾಡಿದವನು ನೀನೋ?” ಎಂದನು.
ಅವನು, “ನಾನೇ,” ಎಂದನು.
12 ಮಾನೋಹನು, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ಆ ಕೂಸಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು?” ಎಂದನು.
13 ಯೆಹೋವ ದೇವರ ದೂತನು ಮಾನೋಹನಿಗೆ, “ನಾನು ಈ ಸ್ತ್ರೀಗೆ ಹೇಳಿದ್ದೆಲ್ಲದರಲ್ಲಿ ಅವಳು ಎಚ್ಚರಿಕೆಯಾಗಿದ್ದು,
14 ದ್ರಾಕ್ಷಿ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ, ದ್ರಾಕ್ಷಾರಸವನ್ನೂ, ಮದ್ಯವನ್ನೂ ಕುಡಿಯದೆ, ಅಶುಚಿಯಾದ ಒಂದನ್ನೂ ತಿನ್ನದೆ ಇದ್ದು, ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಗೊಳ್ಳಲಿ,” ಎಂದನು.
15 ಮಾನೋಹನು ಯೆಹೋವ ದೇವರ ದೂತನಿಗೆ, “ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವವರೆಗೆ ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ,” ಎಂದನು.
16 ಯೆಹೋವ ದೇವರ ದೂತನು ಮಾನೋಹನಿಗೆ, “ನೀನು ನನ್ನನ್ನು ನಿಲ್ಲಿಸಿಕೊಂಡರೂ, ನಾನು ನಿನ್ನ ರೊಟ್ಟಿಯನ್ನು ತಿನ್ನುವುದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ, ಅದನ್ನು ಯೆಹೋವ ದೇವರಿಗೆ ಅರ್ಪಿಸಬೇಕು,” ಎಂದನು.
17 ಏಕೆಂದರೆ ಅವನು ಯೆಹೋವ ದೇವರ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಯೆಹೋವ ದೇವರ ದೂತನಿಗೆ, “ನೀನು ಹೇಳಿದ ಮಾತುಗಳು ನೆರವೇರುವಾಗ, ನಾವು ನಿನ್ನನ್ನು ಘನಪಡಿಸುವ ಹಾಗೆ ನಿನ್ನ ಹೆಸರೇನು?” ಎಂದನು.
18 ಆದರೆ ಯೆಹೋವ ದೇವರ ದೂತನು ಅವನಿಗೆ, “ನನ್ನ ಹೆಸರು ಏನೆಂದು ನೀನು ಕೇಳುವುದೇನು? ಆ ಹೆಸರು ಆಶ್ಚರ್ಯಕರವಾದದ್ದು,” ಎಂದನು.
19 ಹೀಗೆ ಮಾನೋಹನು ಮೇಕೆಯ ಮರಿಯನ್ನೂ, ಧಾನ್ಯ ಸಮರ್ಪಣೆಯನ್ನೂ ತಂದು, ಅವುಗಳನ್ನು ಬಂಡೆಯ ಮೇಲೆ ಯೆಹೋವ ದೇವರಿಗೆ ಅರ್ಪಿಸಿದನು. ಮಾನೋಹನೂ, ಅವನ ಹೆಂಡತಿಯೂ ನೋಡುವಾಗ, ಯೆಹೋವ ದೇವರ ದೂತನು ಆಶ್ಚರ್ಯಕರವಾದ ಸಂಗತಿಯನ್ನು ಮಾಡಿದನು.
20 ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳುವಾಗ, ಯೆಹೋವ ದೇವರ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋಹನೂ, ಅವನ ಹೆಂಡತಿಯೂ ಕಂಡು, ನೆಲದ ಮೇಲೆ ಬೋರಲು ಬಿದ್ದರು.
21 ಯೆಹೋವ ದೇವರ ದೂತನು ಮಾನೋಹನಿಗೂ, ಅವನ ಹೆಂಡತಿಗೂ ತಿರುಗಿ ಕಾಣಿಸಲಿಲ್ಲ. ಆಗ ಮಾನೋಹನು, ಅವನು ದೇವರ ದೂತನು ಎಂದು ತಿಳಿದುಕೊಂಡನು.
22 ಮಾನೋಹನು ತನ್ನ ಹೆಂಡತಿಗೆ, “ನಾವು ದೇವರನ್ನು ಕಂಡದ್ದರಿಂದ ನಿಶ್ಚಯವಾಗಿ ಸಾಯುವೆವು,” ಎಂದನು.
23 ಅವನ ಹೆಂಡತಿ ಅವನಿಗೆ, “ಯೆಹೋವ ದೇವರು ನಮ್ಮನ್ನು ಕೊಲ್ಲಬೇಕೆಂದಿದ್ದರೆ, ಅವರು ನಮ್ಮ ಕೈಯಿಂದ ದಹನಬಲಿಯನ್ನೂ, ಅರ್ಪಣೆಯನ್ನೂ ಸ್ವೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯಮಾಡುತ್ತಿರಲಿಲ್ಲ,” ಎಂದಳು.
24 ಆ ಸ್ತ್ರೀಯು ಮಗನನ್ನು ಹೆತ್ತು, ಅವನಿಗೆ ಸಂಸೋನ ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
25 ಇದಲ್ಲದೆ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಯೆಹೋವ ದೇವರ ಆತ್ಮರು ಆಗಾಗ್ಗೆ ಪ್ರೇರೇಪಿಸುವುದಕ್ಕೆ ಪ್ರಾರಂಭಿಸಿದರು.