3
ಇಗೋ, ನಾವು ದೇವರ ಮಕ್ಕಳೆಂದು ಕರೆಯುವುದರಲ್ಲಿ ತಂದೆಯು ಎಂಥಾ ಮಹಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾರಲ್ಲಾ! ನಿಜಕ್ಕೂ ನಾವು ದೇವರ ಮಕ್ಕಳಾಗಿದ್ದೇವೆ. ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳುವುದಿಲ್ಲ, ಏಕೆಂದರೆ ಅದು ತಂದೆಯನ್ನು ತಿಳಿದುಕೊಳ್ಳಲಿಲ್ಲ. ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು. ಕ್ರಿಸ್ತ ಯೇಸುವಿನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
ಪಾಪಮಾಡುವ ಪ್ರತಿಯೊಬ್ಬನೂ ನಿಯಮವನ್ನು ಮೀರುವವನಾಗಿದ್ದಾನೆ. ನಿಯಮವನ್ನು ಮೀರುವುದೇ ಪಾಪ. ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾದರೆಂಬುದು ನಿಮಗೆ ಗೊತ್ತಾಗಿದೆ. ಕ್ರಿಸ್ತ ಯೇಸುವಿನಲ್ಲಿ ಪಾಪವಿಲ್ಲ. ಕ್ರಿಸ್ತ ಯೇಸುವಿನಲ್ಲಿ ನೆಲೆಗೊಂಡಿರುವವರು ಪಾಪದಲ್ಲಿ ಮುಂದುವರಿಯುವುದಿಲ್ಲ. ಪಾಪದಲ್ಲಿ ಮುಂದುವರೆಯುವವರು ಕ್ರಿಸ್ತ ಯೇಸುವನ್ನು ಕಂಡವರೂ ಅಲ್ಲ, ತಿಳಿದವರೂ ಅಲ್ಲ.
ಪ್ರಿಯ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತ ಯೇಸು ಹೇಗೆ ನೀತಿವಂತರಾಗಿದ್ದಾರೋ ಹಾಗೆಯೇ ನೀತಿಯನ್ನು ಅನುಸರಿಸುವವರು ನೀತಿವಂತರಾಗಿದ್ದಾರೆ. ಪಾಪದಲ್ಲಿ ಮುಂದುವರೆಯುವವರು ಸೈತಾನನಿಗೆ ಸೇರಿದವರು. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ದೇವಪುತ್ರ ಯೇಸು ಸೈತಾನನ ಕೆಲಸಗಳನ್ನು ಲಯ ಮಾಡುವುದಕ್ಕೋಸ್ಕರವೇ ಪ್ರತ್ಯಕ್ಷರಾದರು. ದೇವರಿಂದ ಹುಟ್ಟಿದವನು ಪಾಪವನ್ನು ಅಭ್ಯಾಸ ಮಾಡಲಾರನು, ಏಕೆಂದರೆ ದೇವರ ಬೀಜವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪ ಅಭ್ಯಾಸ ಮಾಡುವುದು ಅವನಿಗೆ ಅಸಾಧ್ಯ. 10 ಇವರು ದೇವರ ಮಕ್ಕಳೆಂಬುದೂ ಅವರು ಸೈತಾನನ ಮಕ್ಕಳೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರ ಮಗುವಲ್ಲ.
ಸಹೋದರರ ಪ್ರೀತಿ
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ. 12 ಕೆಡುಕನಾಗಿದ್ದ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ಅಲ್ಲ.* ಅವನು ಯಾವ ಕಾರಣದಿಂದ ತಮ್ಮನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ ಅಲ್ಲವೇ? 13 ನನ್ನ ಪ್ರಿಯರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ. 14 ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಯಾರೇ ಆದರೂ ಕೊಲೆಗಾರನಾಗಿದ್ದಾನೆ ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.
16 ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರ ಸಹೋದರಿಯರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವವರಾಗಿದ್ದೇವೆ. 17 ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರ ಸಹೋದರಿಯರನ್ನು ನೋಡಿ, ಕರುಣೆ ತೋರಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವುದು ಹೇಗೆ? 18 ನನ್ನ ಪ್ರಿಯ ಮಕ್ಕಳೇ, ನೀವು ಬರೀಮಾತಿನಿಂದಾಗಲಿ, ಹೊಗಳಿಕೆಯ ಮಾತಿನಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರಬೇಕು.
19 ದೇವರ ಸಮಕ್ಷಮದಲ್ಲಿ ನಾವು ನಮ್ಮ ಹೃದಯವನ್ನು ವಿಶ್ರಾಂತಿಗೊಳಿಸಿರುವುದರಿಂದ ನಾವು ಸತ್ಯಕ್ಕೆ ಸೇರಿದವರು ಎಂಬುದು ಇದರಿಂದಲೇ ನಮಗೆ ತಿಳಿಯುತ್ತದೆ: 20 ಏಕೆಂದರೆ ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸುವಾಗಲೆಲ್ಲಾ, ನಮ್ಮ ಹೃದಯಕ್ಕಿಂತ ದೇವರು ದೊಡ್ಡವರಾಗಿದ್ದಾರೆಂತಲೂ ದೇವರು ಎಲ್ಲವನ್ನೂ ಬಲ್ಲವರಾಗಿದ್ದಾರೆಂತಲೂ ತಿಳಿದುಕೊಳ್ಳಿರಿ. 21 ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ಅಪರಾಧಿ ಎಂದು ಖಂಡಿಸದಿದ್ದರೆ ದೇವರ ಮುಂದೆ ಆತ್ಮವಿಶ್ವಾಸ ನಮಗಿರುವುದು. 22 ಮತ್ತು ನಾವು ಏನೇನು ಬೇಡಿಕೊಳ್ಳುತ್ತೇವೋ ಅದನ್ನು ದೇವರಿಂದ ನಾವು ಹೊಂದಿಕೊಳ್ಳುತ್ತೇವೆ. ಏಕೆಂದರೆ ನಾವು ಅವರ ಆಜ್ಞೆಗಳನ್ನು ಕೈಗೊಂಡು ಅವರ ದೃಷ್ಟಿಯಲ್ಲಿ ಮೆಚ್ಚಿಗೆಯಾದವುಗಳನ್ನು ಮಾಡುವವರಾಗಿದ್ದೇವೆ. 23 ನಾವು ದೇವರ ಪುತ್ರ ಆಗಿರುವ ಯೇಸುಕ್ರಿಸ್ತರ ಹೆಸರನ್ನು ನಂಬಿ, ಅವರು ನಮಗೆ ಆಜ್ಞಾಪಿಸಿದ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ದೇವರ ಆಜ್ಞೆಯಾಗಿರುತ್ತದೆ. 24 ದೇವರ ಆಜ್ಞೆಗಳನ್ನು ಕೈಗೊಂಡು ನಡೆಯುವವನು ದೇವರಲ್ಲಿ ವಾಸಮಾಡುತ್ತಾನೆ ಮತ್ತು ದೇವರು ಅವನಲ್ಲಿ ವಾಸಮಾಡುತ್ತಾರೆ. ದೇವರು ನಮ್ಮಲ್ಲಿ ವಾಸಮಾಡುತ್ತಾರೆಂದು ದೇವರು ನಮಗೆ ದಯಪಾಲಿಸಿದ ಆತ್ಮನಿಂದಲೇ ನಾವು ಬಲ್ಲೆವು.
* 3:12 ನೋಡಿರಿ, ಆದಿ 4:8