11
ಇಸ್ರಾಯೇಲರಿಗೆ ದೇವರ ಪ್ರೀತಿ 
 
1 “ಇಸ್ರಾಯೇಲನು ಹುಡುಗನಾಗಿದ್ದಾಗ, ನಾನು ಅವನನ್ನು ಪ್ರೀತಿ ಮಾಡಿದೆನು  
ಮತ್ತು ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು.   
2 ನಾನು ಇಸ್ರಾಯೇಲನ್ನು ಹೆಚ್ಚಾಗಿ ಕರೆದ ಹಾಗೆಯೇ,  
ನನ್ನಿಂದ ಅವರು ದೂರ ಹೊರಟು ಹೋದರು.  
ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು.  
ಕೆತ್ತಿದ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.   
3 ನಾನು ಎಫ್ರಾಯೀಮಿನ ತೋಳುಗಳನ್ನು  
ಹಿಡಿದು ನಡೆಯುವುದನ್ನು ಕಲಿಸಿದೆನು.  
ಆದರೆ ನಾನು ಅವರನ್ನು ಸ್ವಸ್ಥ ಮಾಡಿದ್ದೇನೆಂದು  
ಅವರಿಗೆ ತಿಳಿಯಲಿಲ್ಲ.   
4 ನಾನು ಅವರನ್ನು ಮನುಷ್ಯನ ಹಗ್ಗಗಳಿಂದಲೂ,  
ಪ್ರೀತಿಯ ಬಂಧನಗಳಿಂದಲೂ ಎಳೆದೆನು.  
ಅವರಿಗೆ ನಾನು ಚಿಕ್ಕ ಮಗುವನ್ನು  
ಕೆನ್ನೆಯವರೆಗೆ ಎತ್ತುವವರಂತೆ ಇದ್ದೆ,  
ಮತ್ತು ನಾನು ಅವರಿಗೆ ಬಾಗಿ ತಿನ್ನಿಸುತ್ತಿದ್ದೆ.   
   
 
5 “ಅವರು ಮಾನಸಾಂತರಪಡಲು ನಿರಾಕರಿಸಿದ್ದರಿಂದ,  
ಪುನಃ ಈಜಿಪ್ಟಿಗೆ ಹಿಂದಿರುಗುವರು,  
ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವರು.   
6 ಅವರ ಪಟ್ಟಣಗಳಲ್ಲಿ ಖಡ್ಗವು ಹೊಳೆಯುವುದು.  
ಅದು ಅವರ ಸುಳ್ಳು ಪ್ರವಾದಿಗಳನ್ನು ನುಂಗಿಹಾಕುತ್ತದೆ.  
ಮತ್ತು ಅವರ ಯೋಜನೆಗಳನ್ನು ಕೊನೆಗೊಳಿಸುತ್ತದೆ.   
7 ನನ್ನ ಜನರು ನನ್ನ ಕಡೆಯಿಂದ ಹಿಂಜಾರಬೇಕೆಂದು ತೀರ್ಮಾನಿಸಿದ್ದಾರೆ.  
ಅವರು ನನ್ನನ್ನು ಸರ್ವೋನ್ನತ ದೇವರು ಎಂದು ಕರೆದರೂ  
ನಾನು ಅವರನ್ನು ಯಾವುದೇ ರೀತಿಯಲ್ಲಿ ಉನ್ನತೀಕರಿಸುವುದಿಲ್ಲ.   
   
 
8 “ಎಫ್ರಾಯೀಮೇ, ನಿನ್ನನ್ನು ಹೇಗೆ ಬಿಟ್ಟುಬಿಡಲಿ?  
ಇಸ್ರಾಯೇಲೇ, ನಿನ್ನನ್ನು ಹೇಗೆ ಕೈಬಿಡಲಿ?  
ಅದ್ಮದ ಹಾಗೆ ನಿನ್ನನ್ನು ದುರ್ಗತಿಗೆ ಹೇಗೆ ಒಪ್ಪಿಸಲಿ?  
ಚೆಬೋಯಿಮನಂತೆ ನಿನ್ನನ್ನು ಹೇಗೆ ನಾಶಮಾಡಲಿ?  
ನನ್ನ ಹೃದಯವು ನನ್ನಲ್ಲಿ ಮಾರ್ಪಟ್ಟಿದೆ.  
ನನ್ನಲ್ಲಿ ಕರುಣೆ ಉಕ್ಕಿ ಬಂದಿದೆ.   
9 ನನ್ನ ಕೋಪದ ಉರಿಯನ್ನು ನಾನು ತೀರಿಸುವುದಿಲ್ಲ.  
ನಾನು ಎಫ್ರಾಯೀಮನ್ನು ತಿರುಗಿ ನಾಶಮಾಡುವುದಿಲ್ಲ.  
ಏಕೆಂದರೆ ನಾನು ಮನುಷ್ಯನಲ್ಲ, ದೇವರೇ.  
ನಿನ್ನ ಮಧ್ಯದಲ್ಲಿ ಪರಿಶುದ್ಧನಾಗಿದ್ದೇನೆ.  
ನಾನು ಅವರ ಪಟ್ಟಣಗಳ ವಿರುದ್ಧ ಬರುವುದಿಲ್ಲ.   
10 ಅವರು ಯೆಹೋವ ದೇವರ ಹಿಂದೆ ಹೋಗುವರು.  
ಅವರು ಸಿಂಹದ ಹಾಗೆ ಗರ್ಜಿಸುವರು.  
ಅವರು ಗರ್ಜಿಸುವಾಗ  
ಪಶ್ಚಿಮದಿಂದ ಮಕ್ಕಳು ನಡುಗುತ್ತಾ ಬರುವರು.   
11 ಈಜಿಪ್ಟಿನಿಂದ ಪಕ್ಷಿಯಗಳಂತೆಯೂ  
ಅಸ್ಸೀರಿಯದಿಂದ ಪಾರಿವಾಳಗಳಂತೆಯೂ ಅವರು ಬರುವರು.  
ನಾನು ಅವರ ಮನೆಗಳಲ್ಲಿ ಇರುವೆನು,”  
ಎಂದು ಯೆಹೋವ ದೇವರು ಹೇಳುತ್ತಾರೆ.   
ಇಸ್ರಾಯೇಲಿನ ಪಾಪ 
 
12 ಎಫ್ರಾಯೀಮು ಸುಳ್ಳಿನಿಂದ ಮತ್ತು ಇಸ್ರಾಯೇಲಿನ  
ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ.  
ಯೆಹೂದ ಕೂಡ ಪರಿಶುದ್ಧರೂ ನಂಬಿಗಸ್ತರೂ  
ಆದ ದೇವರ ವಿರುದ್ಧ ಅಶಿಸ್ತಿನಿಂದ ಇದೆ.