ಇಬ್ರಿಯರಿಗೆ  
ಬರೆದ ಪತ್ರಿಕೆ   
1
ಕ್ರಿಸ್ತ ಯೇಸುವೇ ದೇವರ ಅಂತಿಮ ಮಾತು 
 
1 ಗತಕಾಲದಲ್ಲಿ ನಮ್ಮ ಪಿತೃಗಳ ಸಂಗಡ ವಿವಿಧ ರೀತಿಯಲ್ಲಿಯೂ ಅನೇಕಬಾರಿ ಪ್ರವಾದಿಗಳ ಮುಖಾಂತರವೂ ಮಾತನಾಡಿದ ದೇವರು,  
2 ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ಮುಖಾಂತರ ಮಾತನಾಡಿದ್ದಾರೆ. ಈ ಕ್ರಿಸ್ತ ಯೇಸುವನ್ನೇ ದೇವರು ಎಲ್ಲಕ್ಕೂ ಬಾಧ್ಯರನ್ನಾಗಿ ನೇಮಿಸಿದರು. ಇವರ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದರು.  
3 ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.  
4 ದೇವಪುತ್ರ ಆಗಿರುವ ಕ್ರಿಸ್ತ ಯೇಸುವು ದೇವದೂತರಿಗಿಂತಲೂ ಶ್ರೇಷ್ಠರಾಗಿದ್ದಾರೆ. ಅವರಿಗಿಂತ ಅತಿ ಶ್ರೇಷ್ಠ ಹೆಸರನ್ನು ಬಾಧ್ಯವಾಗಿ ಹೊಂದಿದವರೂ ಆಗಿದ್ದಾರೆ.   
ಪುತ್ರ ಆಗಿರುವ ಕ್ರಿಸ್ತ ಯೇಸು ದೇವದೂತರಿಗಿಂತಲೂ ಶ್ರೇಷ್ಠರು 
 
5 ದೇವರು ತಮ್ಮ ದೂತರೊಳಗೆ ಯಾರಿಗಾದರೂ ಹೀಗೆ ಎಂದಾದರೂ ಹೇಳಿದ್ದುಂಟೋ,  
“ನೀನು ನನ್ನ ಪುತ್ರನು;  
ಇಂದು ನಾನು ನಿನ್ನ ತಂದೆಯಾಗಿದ್ದೇನೆ!”  
ಎಂದೂ,  
“ನಾನು ಆತನ ತಂದೆಯಾಗಿರುವೆನು;  
ಆತನು ನನಗೆ ಮಗನಾಗಿರುವನು!”   
6 ಇದಲ್ಲದೆ ಮೊದಲು ಹುಟ್ಟಿದವರನ್ನು ದೇವರು ಲೋಕದೊಳಗೆ ಬರಮಾಡುವಾಗ,  
“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ!” ಎಂದು ಹೇಳಿದ್ದಾರೆ.   
7 ದೂತರ ವಿಷಯದಲ್ಲಿ ದೇವರು ಮಾತನಾಡುವಾಗ,  
“ಅವರು ತಮ್ಮ ದೂತರನ್ನು ಆತ್ಮಗಳಾಗಿಯೂ  
ತಮ್ಮ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾರೆ!” ಎಂದು ಹೇಳಿದ್ದಾರೆ.   
8 ತಂದೆ ದೇವರು ತಮ್ಮ ಪುತ್ರ ಆಗಿರುವವರ ವಿಷಯದಲ್ಲಿ ಹೀಗೆ ಹೇಳಿದ್ದಾರೆ:  
“ದೇವರೇ, ನಿಮ್ಮ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು.  
ನೀತಿದಂಡವೇ ನಿಮ್ಮ ರಾಜದಂಡವಾಗಿದೆ.   
9 ನೀವು ನೀತಿಯನ್ನು ಪ್ರೀತಿಸಿದ್ದೀರಿ. ಅನೀತಿಯನ್ನು ದ್ವೇಷಿಸಿದ್ದೀರಿ;  
ಆದ್ದರಿಂದ ದೇವರೇ, ನಿಮ್ಮ ದೇವರು ನಿಮ್ಮನ್ನು ನಿಮ್ಮ ಜೊತೆಗಾರರಿಗಿಂತ ಮಿಗಿಲಾಗಿ  
ಆನಂದದ ತೈಲದಿಂದ ಅಭಿಷೇಕಿಸಿದ್ದಾರೆ!”   
10 ಇದಲ್ಲದೆ ದೇವರು ಹೀಗೆಂದರು:  
“ಕರ್ತದೇವರೇ, ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ,  
ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.   
11 ಅವು ನಾಶವಾಗುವವು. ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ.  
ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.   
12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತಿರಿ,  
ಅವು ವಸ್ತ್ರದಂತೆ ಮಾರ್ಪಡುತ್ತವೆ.  
ಆದರೆ ನೀವು ಏಕರೀತಿಯಾಗಿದ್ದೀರಿ.  
ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ!”   
13 ಆದರೆ ದೇವದೂತರಲ್ಲಿ ಯಾರ ವಿಷಯದಲ್ಲಿಯಾದರೂ,  
“ನಾನು ನಿನ್ನ ವಿರೋಧಿಗಳನ್ನು  
ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ  
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು!”  
ಎಂಬುದಾಗಿ ದೇವರು ಎಂದಾದರೂ ಹೇಳಿದ್ದುಂಟೇ?   
14 ಈ ದೇವದೂತರೆಲ್ಲರೂ ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲಾದ ಸೇವೆಯ ಆತ್ಮಗಳು ಅಲ್ಲವೇ?