4
ಕ್ರಿಸ್ತನ ದೇಹದಲ್ಲಿ ಐಕ್ಯತೆ
ಆದ್ದರಿಂದ ನೀವು ಸ್ವೀಕರಿಸಿದ ನಿಮ್ಮ ಕರೆಯುವಿಕೆಗೆ ಯೋಗ್ಯರಾಗಿ ಬಾಳಬೇಕೆಂದು ಕರ್ತನ ಸೆರೆಯಾಳಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ. ನೀವು ಸಂಪೂರ್ಣ ದೀನತ್ವದಿಂದಲೂ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. ಸಮಾಧಾನದ ಬಂಧನದಲ್ಲಿದ್ದವರಾಗಿ, ಪವಿತ್ರಾತ್ಮ ದೇವರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಒಂದೇ ನಿರೀಕ್ಷೆಗೆ ನೀವು ಕರೆಹೊಂದಿದಂತೆಯೇ ದೇಹವು ಒಂದೇ, ಪವಿತ್ರಾತ್ಮರು ಒಬ್ಬರೇ, ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ, ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬರೇ; ಅವರೇ ಎಲ್ಲರ ಮೇಲಿರುವರೂ ಎಲ್ಲರ ಮೂಲಕ ಕಾರ್ಯನಡಿಸುವವರೂ ಎಲ್ಲರಲ್ಲಿ ವಾಸಿಸುವವರೂ ಆಗಿದ್ದಾರೆ.
ನಮ್ಮಲ್ಲಿ ಪ್ರತಿಯೊಬ್ಬನಿಗೂ ಕ್ರಿಸ್ತ ಯೇಸುವು ನೀಡಿದ ಅಳತೆಗೆ ಅನುಸಾರವಾಗಿ ವರವನ್ನು ಕೊಡಲಾಗಿದೆ. ಆದ್ದರಿಂದ ಪವಿತ್ರ ವೇದದಲ್ಲಿ ಹೀಗೆ ಹೇಳಲಾಗಿದೆ:
“ಅವರು ಉನ್ನತಸ್ಥಾನಕ್ಕೆ ಏರಿಹೋದಾಗ,
ಸೆರೆಯಾಳಾಗಿದ್ದ ಅನೇಕರನ್ನು ಕೊಂಡೊಯ್ದು
ತಮ್ಮ ಜನರಿಗೆ ವರದಾನಗಳನ್ನು ಕೊಟ್ಟರು!”*
“ಅವರು ಏರಿ ಹೋದರೆಂದು,” ಹೇಳಿದ್ದರ ಅರ್ಥವೇನು? ಭೂಮಿಯ ಭೂಗರ್ಭಕ್ಕೂ ಇಳಿದಿದ್ದರು ಎಂದೂ ಹೇಳಿದ ಹಾಗಾಯಿತಲ್ಲವೇ? 10 ಇಳಿದು ಬಂದ ಅವರೇ ಮೇಲಣ ಎಲ್ಲಾ ಆಕಾಶಗಳಿಗಿಂತ ಉನ್ನತವಾಗಿ ಏರಿಹೋಗಿ, ಇಡೀ ವಿಶ್ವವನ್ನೇ ತುಂಬಿಕೊಳ್ಳುವುದಕ್ಕಾಗಿ ಮೇಲೆ ಏರಿ ಹೋಗಿದ್ದಾರೆ. 11 ಕ್ರಿಸ್ತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಕೆಲವರನ್ನು ಉಪದೇಶಿಗಳನ್ನಾಗಿಯೂ ಸಭೆಗೆ ಕೊಟ್ಟರು. 12 ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೂ ದೇವಜನರನ್ನು ಸೇವಾ ಕೆಲಸಕ್ಕಾಗಿ ಪರಿಣಿತರನ್ನಾಗಿ ಮಾಡುವುದಕ್ಕಾಗಿಯೂ ಕ್ರಿಸ್ತನು ಅವರನ್ನು ಕೊಟ್ಟ ಉದ್ದೇಶವಾಗಿತ್ತು. 13 ನಾವೆಲ್ಲರೂ ಕ್ರಿಸ್ತನ ಪರಿಪೂರ್ಣತೆಯ ಬೆಳವಣಿಗೆಯಲ್ಲಿ ವಿಶ್ವಾಸದಲ್ಲಿಯೂ ದೇವಪುತ್ರನ ತಿಳುವಳಿಕೆಯಲ್ಲಿ ಒಂದು ಮನಸ್ಸುಳ್ಳವರಾಗಿ ಪರಿಪಕ್ವತೆಯನ್ನು ಹೊಂದುವುದೇ ಆ ಉದ್ದೇಶವಾಗಿತ್ತು.
14 ಆಗ, ನಾವು ಚಿಕ್ಕಮಕ್ಕಳಂತೆ ಇರುವುದಿಲ್ಲ: ಮನುಷ್ಯರ ವಿವಿಧ ಬೋಧನೆಗಳಿಂದ ಗಾಳಿಯಿಂದ ತೂರಾಡಿಕೊಳ್ಳುವಂತಾಗುವುದಿಲ್ಲ. ಮನುಷ್ಯರ ಕುಯುಕ್ತಿಗೆ, ತಂತ್ರಕ್ಕೆ, ಒಳಸಂಚಿಗೆ ಒಳಗಾಗುವುದಿಲ್ಲ. ಅವರ ಪ್ರತಿಯೊಂದು ಬೋಧನೆಯ ಗಾಳಿಯಿಂದಲೂ ತೂರಾಡಿಕೊಂಡು ಅತ್ತಿತ್ತ ಅಲೆದಾಡುವ ಚಿಕ್ಕಮಕ್ಕಳಂತೆ ಇರಬಾರದು. 15 ಆದರೆ ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ, ನಾವು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ದೇಹದ ಪರಿಪಕ್ವತೆಯೆಡೆಗೆ ಅವರ ಶಿರಸತ್ವದಲ್ಲಿ ಬೆಳೆಯೋಣ. 16 ಹೀಗೆ ದೇಹವೆಲ್ಲಾ ಕ್ರಿಸ್ತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಣೆಹೊಂದಿ, ಪ್ರತಿ ಅಂಗವೂ ತನ್ನ ಕೆಲಸವನ್ನು ಸೂಕ್ತವಾಗಿ ಮಾಡುವಂತೆ ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿ ಹೊಂದುತ್ತದೆ.
ಬೆಳಕಿನ ಮಕ್ಕಳಾಗಿ ಜೀವಿಸುವುದು
17 ಆದ್ದರಿಂದ, ಯೆಹೂದ್ಯರಲ್ಲದವರು ವ್ಯರ್ಥ ಆಲೋಚನೆಯುಳ್ಳವರಾಗಿ ಬಾಳುವ ರೀತಿಯಲ್ಲಿ ನೀವು ಇನ್ನು ಮೇಲೆ ಬಾಳದಂತೆ, ಕರ್ತನಲ್ಲಿ ನಾನು ನಿಮಗೆ ಸಾಕ್ಷಿಕೊಟ್ಟು ಹೇಳುತ್ತೇನೆ. 18 ಅವರು ತಮ್ಮ ಹೃದಯ ಕಠಿಣತ್ವದ ಅಜ್ಞಾನದಿಂದ ತಮ್ಮ ಕತ್ತಲು ಕವಿದ ತಿಳುವಳಿಕೆಯಲ್ಲಿ, ದೇವರ ಜೀವದಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡವರಾಗಿದ್ದಾರೆ. 19 ಅವರು ಸರ್ವ ಸೂಕ್ಷ್ಮತೆಯನ್ನು ಕಳೆದುಕೊಂಡು, ತಮ್ಮನ್ನು ಕಾಮುಕತನಕ್ಕೆ ಒಪ್ಪಿಸಿಕೊಟ್ಟು, ಎಲ್ಲಾ ಅಶುದ್ಧತ್ವವನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.
20 ನೀವಾದರೋ ಕ್ರಿಸ್ತನನ್ನು ಆ ರೀತಿಯಾಗಿ ಅರಿತುಕೊಳ್ಳಲಿಲ್ಲ. 21 ನೀವು ಕ್ರಿಸ್ತನ ಬಗ್ಗೆ ಕೇಳಿ ಬೋಧನೆಯನ್ನು ಪಡೆದಾಗ, ಅದು ಯೇಸುವಿನಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತು. 22 ನಿಮಗೆ ಉಪದೇಶಿಸಿದಂತೆ, ನೀವು ನಿಮ್ಮ ಹಿಂದಿನ ನಡತೆಯ ಪ್ರಕಾರ ಮೋಸಕರವಾದ ಆಶೆಗಳ ಅನುಸಾರವಾಗಿರುವ ಹಳೆಯ ಸ್ವಭಾವವನ್ನು ತೆಗೆದುಹಾಕಬೇಕು. 23 ಹೀಗೆ ನೀವು ನಿಮ್ಮ ಮನೋಭಾವನೆಯನ್ನು ನವೀಕರಿಸಿಕೊಂಡು; 24 ಸತ್ಯವಾದ ನೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ದೇವರ ಹೋಲಿಕೆಯ ಪ್ರಕಾರವಾಗಿರಲು ಸೃಷ್ಟಿಸಲಾದ ಹೊಸ ಸ್ವಭಾವವನ್ನು ಧರಿಸಿಕೊಳ್ಳಿರಿ.
25 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ. ಏಕೆಂದರೆ ನಾವೆಲ್ಲರೂ ಒಂದೇ ದೇಹದ ಅಂಗಗಳು. 26 “ಕೋಪ ಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪವು ಇಳಿಯಲಿ. 27 ಹೀಗೆ ನೀವು ಸೈತಾನನಿಗೆ ಅವಕಾಶಕೊಡಬೇಡಿರಿ. 28 ಕಳ್ಳತನ ಮಾಡುವವನು ಇನ್ನು ಮೇಲೆ ಕಳ್ಳತನ ಮಾಡದೆ, ಕೈಯಿಂದ ಯಾವುದಾದರೊಂದು ಒಳ್ಳೆಯ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವನಿಗೆ ಕೊಡುವುದಕ್ಕೆ ಅವನಿಂದಾಗುವುದು.
29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟಮಾತೂ ಹೊರಡದಿರಲಿ. ಕೇಳುವವರಿಗೆ ಆತ್ಮಿಕ ಹಿತವನ್ನುಂಟು ಮಾಡಿ, ಇತರರಿಗೆ ಅವಶ್ಯವಿರುವ ಮಾತುಗಳನ್ನು ಮಾತ್ರ ಆಡಿರಿ. 30 ದೇವರ ಪವಿತ್ರಾತ್ಮರನ್ನು ದುಃಖ ಪಡಿಸಬೇಡಿರಿ. ಆ ಆತ್ಮನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ. 31 ಎಲ್ಲಾ ಕಹಿತನ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಎಲ್ಲಾ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ನೀವು ದಯೆಯುಳ್ಳವರೂ ಮೃದು ಹೃದಯುಳ್ಳವರೂ ಆಗಿದ್ದು, ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರೊನ್ನಬ್ಬರನ್ನು ಕ್ಷಮಿಸಿರಿ.
* 4:8 4:8 ಕೀರ್ತನೆ 68:18 4:26 4:26 ಕೀರ್ತನೆ 4:4