6
ಇಸ್ರಾಯೇಲಿನ ಪರ್ವತಗಳಿಗೆ ವಿನಾಶ
1 ಯೆಹೋವ ದೇವರು ಈ ವಾಕ್ಯವು ನನಗೆ ಬಂದಿತು:
2 “ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು, ಅವುಗಳಿಗೆ ವಿರೋಧವಾಗಿ ಹೀಗೆ ಪ್ರವಾದಿಸು,
3 ‘ಇಸ್ರಾಯೇಲಿನ ಪರ್ವತಗಳೇ, ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಹೌದು, ಸಾರ್ವಭೌಮ ಯೆಹೋವ ದೇವರು ಪರ್ವತಗಳಿಗೂ ಗುಡ್ಡಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳುತ್ತಾರೆ, ನಾನೇ ನಿಮ್ಮ ಮೇಲೆ ಖಡ್ಗವನ್ನು ಹಿಡಿದು, ನಿಮ್ಮ ಪೂಜಾಸ್ಥಳಗಳನ್ನು ನಾಶಮಾಡುತ್ತೇನೆ.
4 ನಿಮ್ಮ ಯಜ್ಞವೇದಿಗಳು ಹಾಳಾಗುವುವು. ನಿಮ್ಮ ಧೂಪವೇದಿಗಳು ಚೂರುಚೂರಾಗುವುವು. ನಿಮ್ಮ ಜನರು ನಿಮ್ಮ ವಿಗ್ರಹಗಳ ಮುಂದೆ ಹತರಾಗಿ ಬೀಳುವಂತೆ ಮಾಡುವೆನು.
5 ಇಸ್ರಾಯೇಲರ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಬಲಿಪೀಠಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿ ಬಿಡುವೆನು.
6 ನೀವು ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳಾಗುವುವು. ಪೂಜಾ ಸ್ಥಳಗಳೂ ನಾಶವಾಗುವುವು. ಹೀಗೆ ನಿಮ್ಮ ಬಲಿಪೀಠಗಳು ಸಹ ನಾಶವಾಗಿ, ನಿಮ್ಮ ವಿಗ್ರಹಗಳು ಒಡೆದುಹೋಗಿ ಇಲ್ಲದಂತಾಗುವುವು. ನೀವು ರೂಪಿಸಿದ ಎಲ್ಲವೂ ಕಡಿದು ಬಿದ್ದು ಅಳಿದುಹೋಗುವುವು.
7 ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು. ಆಗ ನೀವು ನಾನೇ ಯೆಹೋವ ದೇವರೆಂದು ತಿಳಿಯುವಿರಿ.
8 “ ‘ಆದರೆ ನಾನು ಕೆಲವರನ್ನು ಉಳಿಸುತ್ತೇನೆ; ಹೇಗೆಂದರೆ, ನೀವು ದೇಶಗಳ ಮತ್ತು ಜನಾಂಗಗಳ ನಡುವೆ ಚದರಿಹೋದಾಗ ನಿಮ್ಮಲ್ಲಿ ಕೆಲವರು ಖಡ್ಗದಿಂದ ತಪ್ಪಿಸಿಕೊಳ್ಳುವಿರಿ.
9 ನಿಮ್ಮಲ್ಲಿ ತಪ್ಪಿಸಿಕೊಂಡವರು, ತಾವು ಸೆರೆಯಾಗಿ ಹೋಗುವಾಗ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ಅನ್ಯದೇವತೆಗಳಲ್ಲಿ ವಿಶ್ವಾಸವಿಟ್ಟು, ನನ್ನನ್ನೂ ತೊರೆದ ತಮ್ಮ ಹೃದಯವನ್ನು ಮತ್ತು ಅನ್ಯ ದೇವರ ವಿಗ್ರಹಗಳಲ್ಲಿ ಮೋಹಗೊಂಡ ತಮ್ಮ ಕಣ್ಣುಗಳನ್ನು ಮುರಿದವನು ನಾನೇ ಎಂಬುದಾಗಿ ಜ್ಞಾಪಕಮಾಡಿಕೊಳ್ಳುವರು. ಅವರು ತಮ್ಮ ಅಸಹ್ಯ ಕಾರ್ಯಗಳನ್ನು ಮಾಡುವ ಕೇಡುಗಳ ನಿಮಿತ್ತ ತಮ್ಮ ಬಗ್ಗೆ ತಾವೇ ಅಸಹ್ಯಪಡುವರು.
10 ನಾನೇ ಯೆಹೋವ ದೇವರೆಂದೂ, ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ, ನಾನು ವ್ಯರ್ಥವಾಗಿ ಹೇಳುವುದಿಲ್ಲವೆಂದೂ ತಿಳಿದುಕೊಳ್ಳುವರು.
11 “ ‘ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ನೀನು ಚಪ್ಪಾಳೆ ಹೊಡೆದು ನೆಲವನ್ನೊದ್ದು ಹೀಗೆ ಹೇಳು, “ಆಹಾ!” ಇಸ್ರಾಯೇಲ್ ವಂಶದವರ ಅಸಹ್ಯವಾದ ಕೆಟ್ಟಕೆಲಸಗಳೆಷ್ಟು! ಅವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸತ್ತೇ ಸಾಯುವರು.
12 ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು. ಹತ್ತಿರದಲ್ಲಿರುವವನು ಖಡ್ಗದಿಂದ ಬೀಳುವನು. ಉಳಿದ ಮುತ್ತಿಗೆಯಲ್ಲಿರುವವನು ಕ್ಷಾಮದಿಂದ ಸಾಯುವನು. ಹೀಗೆ ನಾನು ಅವರ ಮೇಲೆ ನನ್ನ ರೋಷವನ್ನು ತೀರಿಸಿಕೊಳ್ಳುವೆನು.
13 ಆಮೇಲೆ ಅವರಲ್ಲಿ ಹತರಾದವರು, ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಬಲಿಪೀಠಗಳ ಸುತ್ತಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ, ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸಿರಾದ ಮರದ ಕೆಳಗೂ, ಪ್ರತಿಯೊಂದು ದಪ್ಪವಾದ ಏಲಾ ಮರದ ಕೆಳಗಡೆಯೂ, ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವುದರಲ್ಲಿಯೂ ನಾನೇ ಯೆಹೋವ ದೇವರೆಂದು ತಿಳಿಯುವಿರಿ.
14 ನಾನು ಅವರ ವಿರುದ್ಧ ಕೈಯೆತ್ತಿ, ಅವರು ವಾಸವಾಗಿರುವ ದೇಶವನ್ನೆಲ್ಲಾ ಮರುಭೂಮಿಯಿಂದ ದಿಬ್ಲದವರೆಗೂ ಹಾಳುಪಾಳುಮಾಡುವೆನು, ನಾನೇ ಯೆಹೋವ ದೇವರು, ಎಂದು ಅವರಿಗೆ ತಿಳಿಯುವುದು.’ ”