7
ದಾನಿಯೇಲನ ನಾಲ್ಕು ಮೃಗಗಳ ವಿಷಯವಾದ ಕನಸು
1 ಬಾಬಿಲೋನಿನ ಅರಸನಾದ ಬೇಲ್ಯಚ್ಚರನ ಮೊದಲನೆಯ ವರ್ಷದಲ್ಲಿ ದಾನಿಯೇಲನು ಹಾಸಿಗೆಯ ಮೇಲೆ ಮಲಗಿದ್ದಾಗ ಕನಸನ್ನೂ, ದರ್ಶನಗಳನ್ನೂ ಕಂಡು, ತನ್ನ ಕನಸಿನ ತಾತ್ಪರ್ಯವನ್ನು ಬರೆದಿಟ್ಟನು.
2 ದಾನಿಯೇಲನು, “ನಾನು ರಾತ್ರಿ ಕಂಡ ಕನಸಿನಲ್ಲಿ ನಾಲ್ಕು ದಿಕ್ಕುಗಳಿಂದಲೂ ಗಾಳಿಯು ಮಹಾಸಾಗರವನ್ನು ಕಲಕುತ್ತಿದ್ದವು.
3 ಒಂದಕ್ಕೊಂದು ಬೇರೆ ಬೇರೆ ರೂಪದ ನಾಲ್ಕು ದೊಡ್ಡ ಮೃಗಗಳು ಸಮುದ್ರದೊಳಗಿಂದ ಮೇಲೆ ಬಂದವು.
4 “ಮೊದಲನೆಯದು ಸಿಂಹದ ಹಾಗಿತ್ತು, ಆದರೆ ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ನಾನು ಗಮನಿಸಲು, ಅದರ ರೆಕ್ಕೆಗಳನ್ನು ಕಿತ್ತುಹಾಕಲಾಗಿ, ಅದು ನೆಲದಿಂದ ಎತ್ತರಕ್ಕೆ ಮನುಷ್ಯನಂತೆ ಕಾಲೂರಿ ನಿಂತಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲಾಯಿತು.
5 “ಇದಲ್ಲದೆ, ಎರಡನೆಯ ಮೃಗವು ಕರಡಿಯ ಹಾಗಿರುವಂಥದ್ದನ್ನು ಕಂಡೆನು. ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿದ್ದವು. ಅದಕ್ಕೆ, ‘ಎದ್ದೇಳು, ಹೆಚ್ಚು ಮಾಂಸವನ್ನು ತಿನ್ನು,’ ಎಂದು ಹೇಳಿದರು.
6 “ಇದಾದ ಮೇಲೆ ನಾನು ನೋಡಲಾಗಿ, ಚಿರತೆಯ ಹಾಗಿರುವ ಇನ್ನೊಂದು ಮೃಗವಿತ್ತು. ಇದರ ಬೆನ್ನಿನ ಮೇಲೆ ಪಕ್ಷಿಯ ರೆಕ್ಕೆಗಳು ನಾಲ್ಕು ಇವೆ. ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇವೆ. ಇದಕ್ಕೆ ಆಳುವ ಅಧಿಕಾರವು ಕೊಡಲಾಗಿತ್ತು.
7 “ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ, ನಾಲ್ಕನೆಯ ಮೃಗವು ಭಯಂಕರವೂ, ಘೋರವೂ, ಬಹು ಬಲವುಳ್ಳದ್ದೂ ಆಗಿತ್ತು. ಅದಕ್ಕೆ ದೊಡ್ಡ ಕಬ್ಬಿಣದ ಹಲ್ಲುಗಳು ಇವೆ. ಅದು ತಿಂದು ತುಂಡುತುಂಡು ಮಾಡಿ, ಮಿಕ್ಕದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದೂ, ಹತ್ತು ಕೊಂಬುಗಳುಳ್ಳದ್ದೂ ಆಗಿತ್ತು.
8 “ಆ ಕೊಂಬುಗಳ ಬಗ್ಗೆ ನಾನು ಆಲೋಚಿಸುತ್ತಿರುವಾಗ ಇಗೋ, ಮತ್ತೊಂದು ಚಿಕ್ಕ ಕೊಂಬು ಅವುಗಳಲ್ಲಿ ಎದ್ದು ಕಾಣುತ್ತಿದೆ. ಇದರ ಮುಂದೆ ಮೊದಲಿನ ಕೊಂಬುಗಳಲ್ಲಿ ಮೂರನ್ನು ಬೇರುಸಹಿತ ಕೀಳಲಾಯಿತು. ಈ ಕೊಂಬಿನಲ್ಲಿ ಮನುಷ್ಯರ ಕಣ್ಣುಗಳ ಹಾಗೆ ಕಣ್ಣುಗಳೂ, ಬಡಾಯಿ ಕೊಚ್ಚುವ ಬಾಯಿಯೂ ಇದ್ದವು.
9 “ನಾನು ನೋಡುತ್ತಿದ್ದ ಹಾಗೆಯೇ,
“ಸಿಂಹಾಸನಗಳನ್ನು ಜೋಡಿಸಿದರು.
ಅದರ ಮೇಲೆ ಪುರಾತನ ಮನುಷ್ಯನು ಕುಳಿತುಕೊಂಡನು.
ಆತನ ವಸ್ತ್ರವು ಹಿಮದಂತೆ ಬಿಳುಪಾಗಿಯೂ,
ಆತನ ತಲೆಕೂದಲು ಶುದ್ಧ ಉಣ್ಣೆಯಂತೆಯೂ,
ಆತನ ಸಿಂಹಾಸನವು ಅಗ್ನಿ ಜ್ವಾಲೆಯಂತೆಯೂ,
ಆತನ ಚಕ್ರಗಳು ಉರಿಯುವ ಬೆಂಕಿಯಂತೆಯೂ ಇದ್ದವು.
10 ಆತನ ಸನ್ನಿಧಾನದಿಂದ ಅಗ್ನಿಪ್ರವಾಹವು ಹೊರಟುಬಂದು,
ಸಹಸ್ರ ಸಹಸ್ರವಾಗಿ ಆತನಿಗೆ ಸೇವೆ ಮಾಡಿದವು.
ಲಕ್ಷೋಪಲಕ್ಷ ಆತನ ಮುಂದೆ ನಿಂತಿದ್ದವು.
ನ್ಯಾಯ ಸಭೆಯು ಕುಳಿತಿತ್ತು ಮತ್ತು ಪುಸ್ತಕಗಳು ತೆರೆದಿದ್ದವು.
11 “ನಾನು ನೋಡುತ್ತಿರಲು, ಆ ಕೊಂಬು ಬಡಾಯಿಕೊಚ್ಚಿಕೊಂಡದ್ದರಿಂದ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.
12 ಮಿಕ್ಕ ಮೃಗಗಳನ್ನು ಅವುಗಳ ಅಧಿಕಾರದಿಂದ ಹೊರಹಾಕಲಾಯಿತು. ಆದರೆ ಕೆಲವು ಕಾಲದ ಮೇಲೆ ತಕ್ಕ ಸಮಯ ಬರುವವರೆಗೂ ಅವುಗಳ ಜೀವವನ್ನು ಉಳಿಸಿದರು.
13 “ನಾನು ಕಂಡ ರಾತ್ರಿಯ ದರ್ಶನದಲ್ಲಿ ಮನುಷ್ಯಪುತ್ರನಂತಿರುವವನು ಆಕಾಶದ ಮೇಘಗಳ ಸಂಗಡ ಪುರಾತನ ಮನುಷ್ಯನ ಬಳಿಗೆ ಸಮೀಪಿಸಿದನು. ಅವನನ್ನು ಆತನ ಬಳಿಗೆ ತಂದರು.
14 ಆತನನ್ನು ಸಕಲ ಪ್ರಜೆ, ಜನಾಂಗ, ಭಾಷೆಗಳವರು ಸೇವಿಸುವ ಹಾಗೆ ಆತನಿಗೆ ಅಧಿಕಾರವು, ಮಹತ್ವವು, ರಾಜ್ಯವು ಇವುಗಳನ್ನು ಕೊಡಲಾಯಿತು. ಈತನ ಅಧಿಕಾರವು ಎಂದಿಗೂ ಮುಗಿಯದ ನಿತ್ಯ ಅಧಿಕಾರವುಳ್ಳದ್ದು. ಈತನ ರಾಜ್ಯವು ನಾಶವಾಗದಂಥ ರಾಜ್ಯವಾಗಿದೆ.
ಕನಸಿನ ವಿವರಣೆ
15 “ದಾನಿಯೇಲನೆಂಬ ನಾನು ನನ್ನ ಆತ್ಮದಲ್ಲಿ ನೊಂದುಕೊಂಡೆನು. ನನ್ನ ಮನಸ್ಸಿನಲ್ಲಿ ಹಾದುಹೋದ ದರ್ಶನಗಳ ನಿಮಿತ್ತ ಕಳವಳಗೊಂಡೆನು.
16 ನಾನು ಹತ್ತಿರ ನಿಂತವರಲ್ಲಿ ಒಬ್ಬನ ಬಳಿಗೆ ಬಂದು ಇವೆಲ್ಲವುಗಳ ಸತ್ಯಾರ್ಥವನ್ನು ಕೇಳಿದೆನು.
“ಆಗ ಅವನು ಅದನ್ನು ನನಗೆ ಹೇಳಿ ಇವುಗಳ ಅರ್ಥವನ್ನು ನನಗೆ ತಿಳಿಸಿದನು.
17 ‘ಈ ದೊಡ್ಡ ಮೃಗಗಳು ಭೂಮಿಯಿಂದ ಹುಟ್ಟುವ ನಾಲ್ಕು ಅರಸರು.
18 ಆದರೆ ಆ ಮಹೋನ್ನತನ ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಂಡು, ಅದನ್ನು ಎಂದಿಗೂ ಎಂದೆಂದಿಗೂ ವಶಪಡಿಸಿಕೊಳ್ಳುವರು.’
19 “ಆಮೇಲೆ ನಾಲ್ಕನೆಯ ಮೃಗವು ಎಲ್ಲದರಲ್ಲಿ ವ್ಯತ್ಯಾಸವಾಗಿಯೂ, ಅತಿ ಭಯಂಕರವಾಗಿಯೂ, ಕಬ್ಬಿಣದ ಹಲ್ಲುಗಳುಳ್ಳದ್ದಾಗಿಯೂ, ಕಂಚಿನ ಉಗುರುಗಳುಳ್ಳದ್ದಾಗಿಯೂ ತುಂಡುತುಂಡು ಮಾಡಿ, ತಿಂದು ಮಿಕ್ಕಿದ್ದನ್ನು ಕಾಲಿನ ಕೆಳಗೆ ಹಾಕಿ ತುಳಿಯುವಂಥದ್ದೂ ಆಗಿದೆ.
20 ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ, ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲಿಯೇ ಕಣ್ಣುಳ್ಳದ್ದಾಗಿ ಬಡಾಯಿ ಮಾತನಾಡಿದ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇದ್ದ ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನು ತಿಳಿಯಬೇಕೆಂದಿದ್ದೇನೆ.
21 ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧ ಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು.
22 ಪುರಾತನ ಮನುಷ್ಯನು ಬಂದು ಮಹೋನ್ನತನ ಪರಿಶುದ್ಧರಿಗೆ ನ್ಯಾಯತೀರ್ಪು ಕೊಡುವವರೆಗೂ, ಪರಿಶುದ್ಧರು ರಾಜ್ಯವನ್ನು ವಶಪಡಿಸಿಕೊಳ್ಳುವ ಕಾಲದವರೆಗೂ ಅವರ ಮೇಲೆ ಜಯವನ್ನು ಹೊಂದಿತು.
23 “ಆಗ ಅವನು ನನಗೆ: ‘ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗುವುದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ, ಭೂಮಿಯನ್ನೆಲ್ಲಾ ತುಳಿದು ತುಂಡುತುಂಡು ಮಾಡುವಂಥಾದ್ದಾಗಿಯೂ ಇರುವುದು.
24 ಆ ಹತ್ತು ಕೊಂಬುಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸರು. ಅನಂತರ ಇನ್ನೊಬ್ಬ ಅರಸನು ಹುಟ್ಟುವನು. ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು.
25 ಅವನು ಮಹೋನ್ನತ ದೇವರಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ, ಪರಿಶುದ್ಧರನ್ನು ಬಾಧಿಸಿ, ಕಾಲ ನಿಯಮಗಳನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸುವನು. ಪರಿಶುದ್ಧರು ಒಂದುಕಾಲ, ಎರಡುಕಾಲ, ಅರ್ಧಕಾಲದ ತನಕ ಅವರು ಅವನ ಕೈವಶವಾಗಿರುವರು.
26 “ ‘ಆದರೆ ನ್ಯಾಯ ಸಭೆಯು ಕುಳಿತು ಅವನ ಅಧಿಕಾರವನ್ನು ತೆಗೆದುಹಾಕಿ, ಕೊನೆಯವರೆಗೂ ಅದನ್ನು ಸಂಹರಿಸಿ ನಾಶಪಡಿಸುವುದು.
27 ರಾಜ್ಯವೂ, ದೊರೆತನವೂ, ಆಕಾಶದ ಕೆಳಗಿರುವ ಪೂರ್ತಿ ರಾಜ್ಯಗಳ ಮಹತ್ತೂ ಮಹೋನ್ನತನ ಪರಿಶುದ್ಧವಾದ ಜನರಿಗೆ ದೊರಕುವುದು. ಆತನ ರಾಜ್ಯವು ನಿತ್ಯವಾದ ರಾಜ್ಯ. ಎಲ್ಲಾ ದೊರೆತನಗಳೂ ಆತನನ್ನು ಸೇವಿಸುವುವು ಮತ್ತು ವಿಧೇಯವಾಗಿರುವುವು.’
28 “ಇಷ್ಟರಲ್ಲಿ ಇದರ ಪ್ರಸ್ತಾಪವು ಮುಗಿಯಿತು. ದಾನಿಯೇಲನೆಂಬ ನನಗೆ ನನ್ನ ಆಲೋಚನೆಗಳು ಬಹಳವಾಗಿ ಕಳವಳಪಡಿಸಿದವು. ನನ್ನ ಮುಖವು ಕಳೆಗುಂದಿತು. ಆದರೂ ಈ ಸಂಗತಿಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡೆನು.”