2
ನಿಮಗಾಗಿಯೂ ಲವೊದಿಕೀಯದವರಿಗಾಗಿಯೂ ವೈಯಕ್ತಿಕವಾಗಿ ಭೇಟಿಯಾಗದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆ ಎಂಬುದನ್ನು ನೀವು ತಿಳಿದಿರಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರು ಹೃದಯದಲ್ಲಿ ಉತ್ತೇಜನಗೊಂಡು, ಪ್ರೀತಿಯಲ್ಲಿ ಒಂದಾಗಿ, ದೇವರ ರಹಸ್ಯವಾಗಿರುವ ಕ್ರಿಸ್ತ ಯೇಸುವನ್ನು ತಿಳಿದುಕೊಳ್ಳುವಂತೆ ಪೂರ್ಣಜ್ಞಾನದ ಸರ್ವ ಐಶ್ವರ್ಯವನ್ನು ದೃಢವಾಗಿ ಹೊಂದಬೇಕೆಂಬುದೇ ನನ್ನ ಗುರಿಯಾಗಿದೆ. ಏಕೆಂದರೆ, ಜ್ಞಾನ ಮತ್ತು ತಿಳುವಳಿಕೆಯ ಎಲ್ಲಾ ನಿಕ್ಷೇಪಗಳೂ ಕ್ರಿಸ್ತ ಯೇಸುವಿನಲ್ಲಿಯೇ ಮರೆಯಾಗಿವೆ. ಯಾರೂ ತಮ್ಮ ತರ್ಕದ ನಯಮಾತುಗಳಿಂದ ನಿಮ್ಮನ್ನು ವಂಚಿಸಬಾರದೆಂದು ನಾನು ಇದನ್ನು ಹೇಳುತ್ತಿದ್ದೇನೆ. ನಾನು ಶಾರೀರಿಕವಾಗಿ ನಿಮ್ಮಿಂದ ದೂರವಾಗಿದ್ದರೂ ಆತ್ಮದಲ್ಲಿ ನಿಮ್ಮೊಂದಿಗಿದ್ದು ನೀವು ಎಷ್ಟು ಕ್ರಮವುಳ್ಳವರೆಂಬುದನ್ನೂ, ಕ್ರಿಸ್ತ ಯೇಸುವಿನಲ್ಲಿ ನಿಮ್ಮ ವಿಶ್ವಾಸ ಎಷ್ಟು ದೃಢವಾಗಿದೆ ಎಂಬುದನ್ನೂ, ನೋಡಿ ನನಗೆ ಆನಂದವಾಗುತ್ತದೆ.
ಕ್ರಿಸ್ತ ಯೇಸುವಿನಲ್ಲಿರುವ ಪರಿಪೂರ್ಣ ಜೀವನ
ಆದ್ದರಿಂದ ನೀವು ಕ್ರಿಸ್ತ ಯೇಸುವನ್ನು ಕರ್ತ ಎಂದು ಅಂಗೀಕರಿಸಿದಂತೆಯೇ ಅವರಲ್ಲಿ ಬಾಳಿರಿ. ನೀವು ಕ್ರಿಸ್ತ ಯೇಸುವಿನಲ್ಲಿ ಬೇರೂರಿದವರಾಗಿಯೂ ಕಟ್ಟಲಾದವರಾಗಿಯೂ ಇದ್ದು, ನಿಮಗೆ ಬೋಧನೆ ನೀಡಿದ ಪ್ರಕಾರ ನಿಮ್ಮ ವಿಶ್ವಾಸದಲ್ಲಿ ಬಲಹೊಂದಿ ಕೃತಜ್ಞತೆಯಿಂದ ತುಂಬಿ ಪ್ರವಾಹಿಸುವವರಾಗಿರಿ.
ತತ್ವಜ್ಞಾನವೂ ನಿರರ್ಥಕವೂ ವಂಚನೆಯೂ ಆಗಿರುವ ಮನುಷ್ಯರ ಸಂಪ್ರದಾಯದಿಂದ ನಿಮ್ಮಲ್ಲಿ ಯಾರಾದರೂ ಬಂದು ನಿಮ್ಮನ್ನು ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಅಂಥವರು ಕ್ರಿಸ್ತ ಯೇಸುವನ್ನು ಅನುಸರಿಸದೆ, ಪ್ರಾಪಂಚಿಕ ಬಾಲಬೋಧನೆಗಳನ್ನೂ* ಅನುಸರಿಸುವವರಾಗಿದ್ದಾರೆ.
ಏಕೆಂದರೆ ದೇವರ ಸರ್ವಸಂಪೂರ್ಣತೆಯು ಮಾನವ ದೇಹವಾಗಿ ಕ್ರಿಸ್ತ ಯೇಸುವಿನಲ್ಲಿಯೇ ವಾಸಮಾಡಿದೆ. 10 ನೀವು ಕ್ರಿಸ್ತ ಯೇಸುವಿನಲ್ಲಿ ಪರಿಪೂರ್ಣರಾಗಿದ್ದೀರಿ. ಅವರೇ ಎಲ್ಲಾ ಆಳಿಕೆಗೂ, ಅಧಿಕಾರಕ್ಕೂ ಶಿರಸ್ಸಾಗಿದ್ದಾರೆ. 11 ನೀವು ಕ್ರಿಸ್ತ ಯೇಸುವಿನಲ್ಲಿ ಸ್ವೀಕರಿಸಿದ ಸುನ್ನತಿಯು ಕೈಯಿಂದ ಮಾಡಿದ್ದಲ್ಲ, ಅದು ನಿಮ್ಮ ಮಾಂಸಭಾವವನ್ನು ಆಳುವ ಇಡೀ ಸ್ವಾರ್ಥವನ್ನೇ ಬಿಟ್ಟುಬಿಡುವ ಆತ್ಮಿಕ ಸುನ್ನತಿಯಾಗಿದೆ. 12 ದೀಕ್ಷಾಸ್ನಾನದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಸಮಾಧಿಯಾದಿರಿ ಮತ್ತು ಕ್ರಿಸ್ತ ಯೇಸುವನ್ನು ಮರಣದಿಂದ ಜೀವಂತವಾಗಿ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಕ್ರಿಸ್ತ ಯೇಸುವಿನೊಂದಿಗೆ ಮರಣದಿಂದ ಜೀವಂತವಾಗಿ ಎದ್ದು ಬಂದಿರಿ.
13 ನಿಮ್ಮ ಪಾಪಗಳಿಂದಲೂ ನಿಮ್ಮ ಸುನ್ನತಿಯಿಲ್ಲದ ಪಾಪ ಸ್ವಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಕ್ರಿಸ್ತ ಯೇಸುವಿನೊಂದಿಗೆ ಜೀವಿತರನ್ನಾಗಿ ಮಾಡಿ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದರು. 14 ನಮಗೆ ವಿರೋಧವಾಗಿ ನಿಂತು ನಮ್ಮ ಮೇಲೆ ತಪ್ಪು ಹೊರಿಸುವಂತೆ ಬರೆಯಲಾಗಿದ್ದ ಶಾಸನಗಳನ್ನು ಕ್ರಿಸ್ತ ಯೇಸು ರದ್ದುಮಾಡಿದರು. ಅವುಗಳನ್ನು ಶಿಲುಬೆಯ ಮೇಲೆ ಜಡಿದು ಇಲ್ಲದಂತೆ ಮಾಡಿದರು. 15 ಕ್ರಿಸ್ತ ಯೇಸುವು ಆಳುವ ಅದೃಶ್ಯ ಶಕ್ತಿಗಳನ್ನೂ ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ ಶಿಲುಬೆಯಲ್ಲಿ ಅವುಗಳ ಮೇಲೆ ಜಯಹೊಂದಿ, ಬಹಿರಂಗವಾಗಿ ಪ್ರದರ್ಶಿಸಿದರು.
ಮಾನವೀಯ ಬೋಧನೆಗಳಿಂದ ವಿಮೋಚನೆ
16 ಹೀಗಿರಲಾಗಿ, ಅನ್ನಪಾನಗಳ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತ್ ದಿನ ಮುಂತಾದವುಗಳ ವಿಷಯದಲ್ಲಿಯೂ ಯಾರೂ ನಿಮ್ಮನ್ನು ತೀರ್ಪು ಮಾಡದಿರಲಿ. 17 ಇವು ಬರಬೇಕಾಗಿದ್ದವುಗಳ ಛಾಯೆಯಾಗಿವೆ, ಆದರೆ ನಿಜಸ್ವರೂಪವು ಕ್ರಿಸ್ತ ಯೇಸುವೇ. 18 ಕೆಲವರು ತಾವು ದರ್ಶನ ಕಂಡದ್ದರ ಬಗ್ಗೆ ಬಹಳ ಮಾತನಾಡಿ, ತಮ್ಮ ನಿರರ್ಥಕವಾದ ಪ್ರಾಪಂಚಿಕ ಬುದ್ಧಿಯಿಂದ ಉಬ್ಬಿಕೊಳ್ಳುತ್ತಾರೆ. ಇಂಥವರು ಕಪಟ ದೀನತೆಯಲ್ಲಿಯೂ ದೂತರ ಆರಾಧನೆಯಲ್ಲಿಯೂ ಆನಂದಿಸುವವರಾಗಿರುತ್ತಾರೆ. ಇವರು ನಿಮ್ಮ ಬಳಿಗೆ, ನೀವು ಪ್ರತಿಫಲಹೊಂದದೆ ಇರುವಂತೆ ಅಡ್ಡಿಮಾಡಲು ಅವಕಾಶಕೊಡಬೇಡಿರಿ. 19 ಇಂಥವರು ಶಿರಸ್ಸಾಗಿರುವ ಕ್ರಿಸ್ತ ಯೇಸುವಿನನೊಂದಿಗೆ ಸಂಬಂಧ ಕಳೆದುಕೊಂಡವರಾಗಿದ್ದಾರೆ. ಏಕೆಂದರೆ, ಕ್ರಿಸ್ತನಿಂದಲೇ ದೇಹವೆಲ್ಲಾ ಕೀಲು ನರಗಳ ಮೂಲಕ ಪೋಷಣೆ ಪಡೆದು ಒಂದಾಗಿ ಜೋಡಿಸಲಾಗಿ ದೇವರು ಬೆಳೆಸುವಂತೆ ಬೆಳೆಯುತ್ತದೆ.
20 ಪ್ರಾಪಂಚಿಕ ಬಾಲಬೋಧನೆಗಳಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದೀರಿ. ಹಾಗಾದರೆ ನೀವು ಇನ್ನೂ ಪ್ರಾಪಂಚಿಕ ನಿಯಮಗಳಿಗೆ ಅಧೀನರಾಗಿರುವುದೇಕೆ? 21 “ಹಿಡಿಯಬೇಡ! ರುಚಿನೋಡಬೇಡ! ಮುಟ್ಟಬೇಡ!” 22 ಈ ಶಾಸನಗಳು ಮಾನವ ಆಜ್ಞೆಗಳ ಹಾಗೂ ಬೋಧನೆಗಳ ಅನುಸಾರವಾಗಿ ಬಳಕೆಯಿಂದ ಅಳಿದುಹೋಗುತ್ತವೆ! 23 ಇಂಥ ಉಪದೇಶಗಳು ತಾವೇ ತಂದುಕೊಂಡ ಆರಾಧನೆಯಲ್ಲಿಯೂ ಸುಳ್ಳು ದೀನತ್ವದಲ್ಲಿಯೂ ದೇಹದಂಡನೆಯಲ್ಲಿಯೂ ಜ್ಞಾನದ ತೋರಿಕೆಯುಳ್ಳದ್ದಾಗಿರುವುದು ನಿಜವೇ. ಆದರೆ ಇವು ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸಲು ಪ್ರಯೋಜನವಿಲ್ಲದವುಗಳಾಗಿವೆ.
* 2:8 2:8 ಈ ಲೋಕವನ್ನು ನಿಯಂತ್ರಿಸುವ ದುಷ್ಟ ಶಕ್ತಿಗೆ