3
ಸಭೆಯೊಳಗಿದ್ದ ಪಕ್ಷಭೇದಗಳು
1 ಪ್ರಿಯರೇ, ನೀವು ದೇವರಾತ್ಮರಿಗೆ ತಕ್ಕಂತೆ ಬಾಳುವವರಾಗಿ ನಾನು ನಿಮ್ಮ ಸಂಗಡ ಮಾತನಾಡುತ್ತಾ ಇಲ್ಲ. ನೀವು ಇನ್ನೂ ಕ್ರಿಸ್ತ ಯೇಸುವಿನಲ್ಲಿ ಕೂಸುಗಳೂ ಪ್ರಾಪಂಚಿಕರೂ ಆಗಿರುವಿರೆಂದು ಭಾವಿಸಿ ನಿಮ್ಮ ಸಂಗಡ ಮಾತನಾಡಬೇಕಾಯಿತು.
2 ನಾನು ನಿಮಗೆ ಹಾಲು ಕೊಟ್ಟೆನು. ಗಟ್ಟಿ ಆಹಾರವನ್ನು ಕೊಡಲಿಲ್ಲ, ಏಕೆಂದರೆ ನಿಮಗೆ ಶಕ್ತಿ ಇರಲಿಲ್ಲ, ಈಗಲಾದರೂ ನಿಮಗೆ ಶಕ್ತಿಯಿಲ್ಲ.
3 ಏಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ಹೇಗೆಂದರೆ, ನಿಮ್ಮೊಳಗೆ ಅಸೂಯೆ, ಜಗಳಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದೀರಲ್ಲದೆ ಕೇವಲ ಮಾನವರಂತೆ ನಡೆಯುತ್ತೀರಲ್ಲವೇ?
4 ಒಬ್ಬನು, “ನಾನು ಪೌಲನವನು,” ಎಂದು ಮತ್ತೊಬ್ಬನು, “ನಾನು ಅಪೊಲ್ಲೋಸನವನು,” ಎಂದೂ ಹೇಳುತ್ತಿರುವಾಗ, ನೀವು ಕೇವಲ ಮಾನವರಂತೆ ಆಗಿದ್ದೀರಲ್ಲವೇ?
5 ಹಾಗಾದರೆ, ಅಪೊಲ್ಲೋಸನು ಯಾರು? ಪೌಲನು ಯಾರು? ಅವನವನಿಗೆ ಕರ್ತದೇವರು ನೇಮಿಸಿದ ಕಾರ್ಯದ ಪ್ರಕಾರ ಅವರವರ ಮುಖಾಂತರ ನೀವು ನಂಬಿದ್ದೀರಿ. ಅವರು ಕೇವಲ ಸೇವಕರಾಗಿದ್ದಾರೆ.
6 ನಾನು ಬೀಜವನ್ನು ಬಿತ್ತಿದೆನು, ಅಪೊಲ್ಲೋಸನು ನೀರು ಹಾಕಿದನು, ಆದರೆ ಬೆಳೆಸಿದವರು ದೇವರೇ.
7 ಹೀಗಿರಲಾಗಿ ನೆಡುವವನಾಗಲಿ, ನೀರು ಹಾಕುವವನಾಗಲಿ ಪ್ರಾಮುಖ್ಯರಾಗಿರದೆ, ಬೆಳೆಸುವ ದೇವರೇ ಬಹು ಪ್ರಾಮುಖ್ಯವಾದವರು.
8 ನೆಡುವವನೂ ನೀರು ಹಾಕುವವನೂ ಒಂದೇ ಉದ್ದೇಶವುಳ್ಳವರಾಗಿರುತ್ತಾರೆ. ಪ್ರತಿಯೊಬ್ಬನಿಗೆ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು.
9 ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
10 ದೇವರು ನನಗೆ ಕೊಟ್ಟ ಕೃಪೆಗೆ ಅನುಸಾರವಾಗಿ, ನಾನು ಜ್ಞಾನಿಯಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ಪ್ರತಿಯೊಬ್ಬನೂ ತಾನು ಅದರ ಮೇಲೆ ಎಷ್ಟು ಶ್ರದ್ಧೆಯಿಂದ ಕಟ್ಟುತ್ತಾನೆಂದು ನೋಡಿಕೊಳ್ಳಬೇಕು.
11 ಕ್ರಿಸ್ತ ಯೇಸುವೆಂಬ ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
12 ಯಾವನಾದರೂ ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನ, ಕಟ್ಟಿಗೆ, ಹುಲ್ಲು ಅಥವಾ ಜೊಂಡು ಮುಂತಾದವುಗಳಿಂದ ಕಟ್ಟಿದರೆ,
13 ಕ್ರಿಸ್ತ ಯೇಸುವಿನ ದಿನವು ಇದನ್ನು ಬಹಿರಂಗಕ್ಕೆ ತರುವಾಗ, ಅವನವನ ಕೆಲಸವು ಏನಾಗಿರುವುದೆಂಬುದು ವ್ಯಕ್ತವಾಗುವುದು. ಏಕೆಂದರೆ ಅದು ಬೆಂಕಿಯಿಂದ ಪ್ರಕಟವಾಗುವುದು. ಪ್ರತಿಯೊಬ್ಬನ ಕೆಲಸದ ಯೋಗ್ಯತೆಯನ್ನು ಬೆಂಕಿಯೇ ಪರೀಕ್ಷಿಸುವುದು.
14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಬೆಂಕಿಯಿಂದ ತಪ್ಪಿಸಿಕೊಂಡು ಉಳಿದರೆ, ಅವನಿಗೆ ಪ್ರತಿಫಲ ಸಿಕ್ಕುವುದು.
15 ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ, ಅವನಿಗೆ ನಷ್ಟವಾಗುವುದು, ಅವನಾದರೋ ರಕ್ಷಣೆಹೊಂದುವನು. ಆದರೆ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಂಡವನ ಹಾಗಿರುವನು.
16 ನೀವು ದೇವರ ಆಲಯವಾಗಿದ್ದೀರೆಂಬುದೂ ದೇವರ ಆತ್ಮ ನಿಮ್ಮಲ್ಲಿ ವಾಸ ಮಾಡುತ್ತಾರೆಂಬುದೂ ನಿಮಗೆ ಗೊತ್ತಿಲ್ಲವೋ?
17 ಯಾರಾದರೂ ದೇವರ ಆಲಯವನ್ನು ನಾಶಪಡಿಸಿದರೆ, ದೇವರು ಅವರನ್ನು ನಾಶಪಡಿಸುವರು. ಏಕೆಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
18 ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿರಿ. ನಿಮ್ಮಲ್ಲಿ ಯಾರಾದರೂ ಇಹಲೋಕ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸಿಕೊಂಡರೆ, ಅಂಥವನು ಜ್ಞಾನಿಯಾಗುವಂತೆ ಮೂರ್ಖನಾಗಲಿ.
19 ಏಕೆಂದರೆ ಇಹಲೋಕ ಜ್ಞಾನವು ದೇವರ ದೃಷ್ಟಿಯಲ್ಲಿ ಮೂರ್ಖತನವಾಗಿದೆ, ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, “ದೇವರು ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿಯೇ ಹಿಡಿಯುವರು,” ಎಂದೂ
20 “ಜ್ಞಾನಿಗಳ ಯೋಚನೆಗಳು ವ್ಯರ್ಥವಾದವುಗಳೆಂದು ಕರ್ತದೇವರು ತಿಳಿದುಕೊಳ್ಳುತ್ತಾರೆ,” ಎಂದೂ ಬರೆದಿದೆಯಲ್ಲಾ.
21 ಆದಕಾರಣ ಇನ್ನು ಮೇಲೆ ನಾಯಕರ ಬಗ್ಗೆ ಯಾರೂ ಹೊಗಳುವುದು ಬೇಡ! ಏಕೆಂದರೆ ಸಮಸ್ತವೂ ನಿಮ್ಮದು.
22 ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ, ಲೋಕವಾಗಲಿ, ಜೀವವಾಗಲಿ, ಮರಣವಾಗಲಿ, ವರ್ತಮಾನದ ಸಂಗತಿಗಳಾಗಲಿ, ಭವಿಷ್ಯತ್ಕಾಲದ ಸಂಗತಿಗಳಾಗಲಿ ಸಮಸ್ತವೂ ನಿಮ್ಮವೇ.
23 ನೀವು ಕ್ರಿಸ್ತ ಯೇಸುವಿನವರು, ಕ್ರಿಸ್ತ ಯೇಸು ದೇವರವರು.