16
ಪೌಲ ಸೀಲರೊಡನೆ ತಿಮೊಥೆಯನು
1 ಪೌಲನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಅಲ್ಲಿ, ತಿಮೊಥೆಯನೆಂಬ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನ ತಾಯಿ ವಿಶ್ವಾಸಿಯಾಗಿದ್ದ ಯೆಹೂದ್ಯ ಸ್ತ್ರೀ. ಆದರೆ ಅವನ ತಂದೆ ಒಬ್ಬ ಗ್ರೀಕನಾಗಿದ್ದನು.
2 ಲುಸ್ತ್ರ ಹಾಗೂ ಇಕೋನ್ಯಗಳಲ್ಲಿದ್ದ ಸಹೋದರರು ತಿಮೊಥೆಯನ ಬಗ್ಗೆ ಒಳ್ಳೆಯ ಸಾಕ್ಷಿ ಹೇಳುತ್ತಿದ್ದರು.
3 ತಿಮೊಥೆಯನನ್ನು ಪೌಲನು ತನ್ನೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಬೇಕೆಂದು ಅಪೇಕ್ಷಿಸಿ, ಆ ಪ್ರದೇಶದಲ್ಲಿ ನೆಲೆಸಿದ ಯೆಹೂದ್ಯರ ನಿಮಿತ್ತ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು. ಏಕೆಂದರೆ ಅವನ ತಂದೆ ಗ್ರೀಕನು ಎಂಬುದನ್ನು ಅವರೆಲ್ಲರೂ ತಿಳಿದಿದ್ದರು.
4 ಅವರು ಪಟ್ಟಣಗಳಲ್ಲಿ ಪ್ರಯಾಣಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು, ಹಿರಿಯರು ತೆಗೆದುಕೊಂಡ ತೀರ್ಮಾನಗಳನ್ನು ಜನರು ಅನುಸರಿಸಿ ನಡೆಯುವಂತೆ ಅವರಿಗೆ ಬೋಧಿಸಿದರು.
5 ಹೀಗೆ ಸಭೆಗಳು ವಿಶ್ವಾಸದಲ್ಲಿ ಬಲಗೊಂಡು ಸಂಖ್ಯೆಯಲ್ಲಿ ಅನುದಿನ ಹೆಚ್ಚುತ್ತಾ ಬಂದವು.
ಪೌಲನಿಗೆ ಉಂಟಾದ ಮಕೆದೋನ್ಯ ಮನುಷ್ಯನ ದರ್ಶನ
6 ಏಷ್ಯಾ ಪ್ರಾಂತದಲ್ಲಿ ಸುವಾರ್ತೆ ಸಾರಬಾರದೆಂದು ಪವಿತ್ರಾತ್ಮ ತಡೆದದ್ದರಿಂದ ಪೌಲ ಮತ್ತು ಅವನ ಜೊತೆಯವರು ಫ್ರುಗ್ಯ ಹಾಗೂ ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.
7 ಮೂಸ್ಯದ ಸೀಮೆಯನ್ನು ತಲುಪಿದಾಗ ಬಿಥೂನ್ಯವನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಅನುಮತಿಸಲಿಲ್ಲ.
8 ಆದ್ದರಿಂದ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.
9 ಆ ರಾತ್ರಿಯಲ್ಲಿ ಪೌಲನಿಗೆ ಒಂದು ದರ್ಶನವಾಯಿತು. ಅದರಲ್ಲಿ ಮಕೆದೋನ್ಯದವನೊಬ್ಬನು ನಿಂತುಕೊಂಡು, “ಮಕೆದೋನ್ಯ ದಾಟಿ ಬಂದು ನಮಗೆ ಸಹಾಯಮಾಡು,” ಎಂದು ಅವನನ್ನು ಬೇಡಿಕೊಂಡನು.
10 ಪೌಲನಿಗೆ ಈ ದರ್ಶನವಾದಾಗ ಆ ಜನರಿಗೆ ಸುವಾರ್ತೆ ಸಾರಲು ದೇವರು ನಮ್ಮನ್ನು ಕರೆಯುತ್ತಿದ್ದಾರೆಂದು ತಿಳಿದುಕೊಂಡು ಕೂಡಲೇ ಮಕೆದೋನ್ಯಕ್ಕೆ ಹೊರಡಲು ಸಿದ್ಧರಾದೆವು.
ಫಿಲಿಪ್ಪಿಯಲ್ಲಿ ಲುದ್ಯಳ ಪರಿವರ್ತನೆ
11 ನಾವು ನೌಕೆ ಹತ್ತಿ ತ್ರೋವದಿಂದ ನೇರವಾಗಿ ಸಮೊಥ್ರಾಕೆಗೆ ಹೊರಟೆವು. ಮರುದಿನ ನೆಯಾಪೊಲಿಗೆ ತಲುಪಿದೆವು.
12 ಅಲ್ಲಿಂದ ಮಕೆದೋನ್ಯ ಪ್ರಾಂತದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ಪ್ರವಾಸ ಸ್ಥಳವಾಗಿತ್ತು. ನಾವು ಆ ಪಟ್ಟಣದಲ್ಲಿ ಕೆಲವು ದಿನ ಉಳಿದುಕೊಂಡೆವು.
13 ಪ್ರಾರ್ಥನೆಯ ಸ್ಥಳ ಸಿಕ್ಕಬಹುದೆಂದು ಭಾವಿಸಿ ಸಬ್ಬತ್ ದಿನದಂದು ಪಟ್ಟಣದ ದ್ವಾರದ ಹೊರಗಿದ್ದ ನದಿತೀರಕ್ಕೆ ಹೋದೆವು. ಅಲ್ಲಿ ಕುಳಿತುಕೊಂಡು ಕೂಡಿಬಂದಿದ್ದ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸಿದೆವು.
14 ಅವರಲ್ಲಿ ಒಬ್ಬ ಮಹಿಳೆಯ ಹೆಸರು ಲುದ್ಯ ಎಂದಿತ್ತು. ಆಕೆ ಥುವತೈರ ಊರಿನವಳೂ ಕೆನ್ನೀಲಿ ಬಣ್ಣದ ಬಟ್ಟೆಗಳ ವ್ಯಾಪಾರಿಯೂ ದೇವರನ್ನು ಆರಾಧಿಸುವವಳೂ ಆಗಿದ್ದಳು. ಪೌಲನು ಹೇಳಿದ್ದನ್ನು ಲಕ್ಷ್ಯಕೊಡುವಂತೆ ಕರ್ತ ಯೇಸು ಆಕೆಯ ಹೃದಯವನ್ನು ತೆರೆದರು.
15 ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಹೊಂದಿದಾಗ, “ನಾನು ಕರ್ತ ಯೇಸುವಿಗೆ ನಂಬಿಗಸ್ತಳೆಂದು ನೀವು ತೀರ್ಮಾನಿಸಿಕೊಂಡರೆ, ಬಂದು ನನ್ನ ಮನೆಯಲ್ಲಿ ತಂಗಿರಿ,” ಎಂದು ನಮ್ಮನ್ನು ಒತ್ತಾಯ ಮಾಡಿದಳು.
ಪೌಲ ಸೀಲರು ಸೆರೆಮನೆಯಲ್ಲಿ
16 ಒಂದು ದಿನ ನಾವು ಪ್ರಾರ್ಥನೆಯ ಸ್ಥಳಕ್ಕೆ ಹೋಗುತ್ತಿದ್ದೆವು, ಆಗ ಭವಿಷ್ಯ ಹೇಳುವ ದುರಾತ್ಮವುಳ್ಳ ದಾಸಿಯೊಬ್ಬಳು ನಮ್ಮನ್ನು ಭೇಟಿಯಾದಳು. ಭವಿಷ್ಯ ಹೇಳುವುದರಿಂದ ಆಕೆ ತನ್ನ ಯಜಮಾನನಿಗೆ ಬಹಳ ಹಣ ಸಂಪಾದಿಸುತ್ತಿದ್ದಳು.
17 ಅವಳು, “ಈ ಮನುಷ್ಯರು ಮಹೋನ್ನತ ದೇವರ ದಾಸರು. ರಕ್ಷಣೆಯ ಮಾರ್ಗವನ್ನು ನಿಮಗೆ ಸಾರುತ್ತಾರೆ,” ಎಂದು ಗಟ್ಟಿಯಾಗಿ ಕೂಗುತ್ತಾ ಪೌಲನ ಮತ್ತು ನಮ್ಮ ಹಿಂದೆಯೇ ಬಂದಳು.
18 ಹೀಗೆ ಬಹಳ ದಿನ ಮಾಡುತ್ತಲೇ ಇದ್ದಳು. ಆದರೆ ಪೌಲನು ಬಹು ಬೇಸರಗೊಂಡು ಹಿಂದಿರುಗಿ ಆ ದುರಾತ್ಮಕ್ಕೆ, “ಇವಳನ್ನು ಈಗಲೇ ಬಿಟ್ಟು ಹೊರಗೆ ಬರಬೇಕೆಂದು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ,” ಎಂದು ಹೇಳಲು, ಅದೇ ಗಳಿಗೆಯಲ್ಲಿ ಆ ದುರಾತ್ಮವು ಆಕೆಯನ್ನು ಬಿಟ್ಟುಹೋಯಿತು.
19 ಅವಳ ಯಜಮಾನರು ತಾವು ಹಣ ಸಂಪಾದಿಸುವ ನಿರೀಕ್ಷೆಯೇ ಹೋಯಿತೆಂದು ತಿಳಿದು, ಪೌಲ ಸೀಲರನ್ನು ಹಿಡಿದು ಸಂತೆಸ್ಥಳದಲ್ಲಿದ್ದ ಅಧಿಕಾರಿಗಳ ಮುಂದೆ ವಿಚಾರಣೆಗಾಗಿ ಎಳೆದುಕೊಂಡು ಹೋದರು.
20 ಅವರನ್ನು ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಯೆಹೂದ್ಯರಾಗಿರುವ ಇವರು, ನಮ್ಮ ಪಟ್ಟಣದಲ್ಲಿ ಬಹು ಗಲಿಬಿಲಿ ಮಾಡುತ್ತಿದ್ದಾರೆ.
21 ರೋಮನವರಾದ ನಾವು ಸ್ವೀಕರಿಸಲೂ ಇಲ್ಲವೆ ಅನುಸರಿಸಲೂ ಆಗದಂಥಾ ಆಚಾರಗಳನ್ನು ಪ್ರಕಟಿಸುತ್ತಿದ್ದಾರೆ,” ಎಂದರು.
22 ಪೌಲ, ಸೀಲರಿಗೆ ವಿರೋಧವಾಗಿ ಜನಸಮೂಹವೆಲ್ಲಾ ಕೂಡಿಕೊಂಡಿತು. ನ್ಯಾಯಾಧಿಪತಿಗಳು ಪೌಲ, ಸೀಲರ ಬಟ್ಟೆಗಳನ್ನು ಕಿತ್ತುಹಾಕಿಸಿ ಛಡಿಗಳಿಂದ ಹೊಡೆಯಬೇಕೆಂದು ಆಜ್ಞಾಪಿಸಿದರು.
23 ಅವರನ್ನು ಛಡಿ ಏಟುಗಳಿಂದ ಬಹಳವಾಗಿ ಥಳಿಸಿ ಸೆರೆಮನೆಗೆ ಹಾಕಲಾಯಿತು. ಅವರನ್ನು ಜಾಗರೂಕತೆಯಿಂದ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಆಜ್ಞಾಪಿಸಲಾಯಿತು.
24 ಇಂಥಾ ಆಜ್ಞೆಯನ್ನು ಪಡೆದು, ಅವನು ಸೆರೆಮನೆಯ ಒಳಕೋಣೆಯಲ್ಲಿ ಅವರನ್ನು ಹಾಕಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಂಧಿಸಿದರು.
25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ, ಸೀಲರು ಪ್ರಾರ್ಥನೆ ಮಾಡುವವರಾಗಿ ಸ್ತುತಿಗೀತೆಯಿಂದ ದೇವರಿಗೆ ಸ್ತೋತ್ರ ಮಾಡುತ್ತಿದ್ದರು. ಸೆರೆಮನೆಯಲ್ಲಿ ಇತರ ಕೈದಿಗಳು ಅದನ್ನು ಆಲಿಸುತ್ತಿದ್ದರು.
26 ಆಗ ತಕ್ಷಣವೇ ಭೀಕರವಾದ ಭೂಕಂಪವಾಗಿ ಸೆರೆಮನೆಯ ಅಸ್ತಿವಾರವು ಕದಲಿತು. ಕೂಡಲೇ ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದವು. ಎಲ್ಲರನ್ನು ಬಂಧಿಸಿದ್ದ ಸರಪಣಿಗಳು ಸಡಿಲಗೊಂಡವು.
27 ಸೆರೆಮನೆಯ ಅಧಿಕಾರಿ ಎಚ್ಚತ್ತುಕೊಂಡು, ಸೆರೆಮನೆಯ ಬಾಗಿಲುಗಳು ತೆರೆದಿರುವುದನ್ನು ಕಂಡು, ಸೆರೆಯಾಳುಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿ, ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು.
28 ಆದರೆ ಪೌಲನು, “ನೀನು ಹಾನಿ ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲಿಯೇ ಇದ್ದೇವೆ,” ಎಂದು ಗಟ್ಟಿಯಾಗಿ ಕೂಗಿದನು.
29 ಅವನು ದೀಪ ತರಬೇಕೆಂದು ಹೇಳಿ ಓಡಿಹೋಗಿ ಭಯದಿಂದ ನಡುಗುತ್ತಾ ಪೌಲ, ಸೀಲರ ಮುಂದೆ ಅಡ್ಡಬಿದ್ದನು.
30 ಆಮೇಲೆ ಅವರನ್ನು ಹೊರಗೆ ಕರೆದುಕೊಂಡು ಬಂದು, “ಮಹನೀಯರೇ, ನಾನು ರಕ್ಷಣೆ ಹೊಂದಲು ಏನು ಮಾಡಬೇಕು?” ಎಂದನು.
31 “ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಡು. ನೀನು ರಕ್ಷಣೆ ಹೊಂದುವೆ, ನಿನ್ನ ಮನೆಯವರೂ ರಕ್ಷಣೆಹೊಂದುವರು,” ಎಂದರು.
32 ಆಮೇಲೆ ಅವರು ಅವನಿಗೂ ಅವನ ಮನೆಯವರೆಲ್ಲರಿಗೂ ಕರ್ತ ಯೇಸುವಿನ ಸುವಾರ್ತೆಯನ್ನು ತಿಳಿಸಿದರು.
33 ಆ ಅಧಿಕಾರಿ, ರಾತ್ರಿಯ ಅದೇ ಗಳಿಗೆಯಲ್ಲಿ ಪೌಲ, ಸೀಲರನ್ನು ಕರೆದುಕೊಂಡು ಹೋಗಿ, ಅವರ ಗಾಯಗಳನ್ನು ತೊಳೆದನು. ಆಮೇಲೆ ಅವನೂ ಅವನ ಮನೆಯವರೆಲ್ಲರೂ ದೀಕ್ಷಾಸ್ನಾನವನ್ನು ಹೊಂದಿದರು.
34 ಸೆರೆಮನೆಯ ಅಧಿಕಾರಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅವರಿಗೆ ಊಟಬಡಿಸಿದನು ಮತ್ತು ಅವನೂ ತನ್ನ ಮನೆಯವರೆಲ್ಲರೂ ದೇವರಲ್ಲಿ ವಿಶ್ವಾಸವಿಟ್ಟಿದ್ದಕ್ಕಾಗಿ ಉಲ್ಲಾಸಗೊಂಡನು.
35 ಬೆಳಗಾದ ತರುವಾಯ ನ್ಯಾಯಾಧಿಪತಿಗಳು ತಮ್ಮ ಅಧಿಕಾರಿಗಳನ್ನು ಸೆರೆಮನೆಯ ಅಧಿಕಾರಿಯ ಬಳಿಗೆ ಕಳುಹಿಸಿ, “ಆ ಮನುಷ್ಯರನ್ನು ಬಿಡುಗಡೆಮಾಡು,” ಎಂದು ತಿಳಿಸಿದರು.
36 ಸೆರೆಮನೆಯ ಅಧಿಕಾರಿ ಪೌಲನಿಗೆ, “ನಿನ್ನನ್ನು ಸೀಲನನ್ನು ಬಿಟ್ಟುಬಿಡಲು ನ್ಯಾಯಾಧಿಪತಿಗಳು ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಬಹುದು,” ಎಂದು ಪ್ರಕಟಿಸಿದನು.
37 ಆದರೆ ಪೌಲನು ಅಧಿಕಾರಿಗಳಿಗೆ, “ನಾವು ರೋಮ್ ಪೌರರಾಗಿದ್ದು ಯಾವ ನ್ಯಾಯವಿಚಾರಣೆ ಮಾಡದೇ ಬಹಿರಂಗವಾಗಿ ನಮ್ಮನ್ನು ಛಡಿಯಿಂದ ಹೊಡೆಸಿ, ನಮ್ಮನ್ನು ಸೆರೆಮನೆಗೆ ತಳ್ಳಿದ್ದಾರೆ. ಈಗ ರಹಸ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೋ? ಇಲ್ಲ, ಅವರು ತಾವೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಲಿ,” ಎಂದನು.
38 ಅಧಿಕಾರಿಗಳು ಹೋಗಿ ಇದನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಪೌಲ, ಸೀಲರು ರೋಮ್ ಪೌರರೆಂದು ಕೇಳಿ ಅವರು ಗಾಬರಿಗೊಂಡರು.
39 ಆದುದರಿಂದ ನ್ಯಾಯಾಧಿಪತಿಗಳು ಬಂದು ಶಾಂತಪಡಿಸಿ ಸೆರೆಮನೆಯಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.
40 ಪೌಲ, ಸೀಲರು ಸೆರೆಮನೆಯಿಂದ ಹೊರಗೆ ಬಂದ ಮೇಲೆ ಲುದ್ಯಳ ಮನೆಗೆ ಹೋಗಿ, ಅಲ್ಲಿ ಸಹೋದರರನ್ನು ಭೇಟಿಯಾಗಿ ಅವರನ್ನು ಪ್ರೋತ್ಸಾಹಿಸಿ, ಅಲ್ಲಿಂದ ಹೊರಟು ಹೋದರು.