11
ಪೇತ್ರನು ತನ್ನ ಸೇವೆಯ ಬಗ್ಗೆ ವಿವರಿಸಿದ್ದು
1 ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿದರೆಂಬ ವಾರ್ತೆಯನ್ನು ಅಪೊಸ್ತಲರೂ ಯೂದಾಯದಲ್ಲೆಲ್ಲಾ ಇದ್ದ ಸಹೋದರರೂ ಕೇಳಿದರು.
2 ಆದ್ದರಿಂದ ಪೇತ್ರನು ಯೆರೂಸಲೇಮಿಗೆ ಹೋದಾಗ ಸುನ್ನತಿಯಾದವರು ಅವನೊಂದಿಗೆ ವಾಗ್ವಾದಮಾಡಿ,
3 “ಸುನ್ನತಿ ಇಲ್ಲದವರ ಮನೆಯೊಳಗೆ ಹೋಗಿ ಅವರೊಂದಿಗೆ ಊಟಮಾಡಿದೆ,” ಎಂದರು.
4 ಆಗ ಸಂಭವಿಸಿದ್ದೆಲ್ಲವನ್ನು ಪೇತ್ರನು ಕ್ರಮವಾಗಿ ವಿವರಿಸಿ:
5 “ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆನು. ಆಗ ನಾನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡೆನು. ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಪರಲೋಕದಿಂದ ಕೆಳಗೆ ಇಳಿದು ನಾನಿದ್ದಲ್ಲಿಗೆ ಬರುವುದನ್ನು ಕಂಡೆನು.
6 ನಾನು ಅದರೊಳಗೆ ನೋಡಲು ಅದರಲ್ಲಿ ಭೂಲೋಕದ ಮೇಲೆ ತಿರುಗಾಡುವ ಪ್ರಾಣಿಗಳೂ ಕಾಡು ಮೃಗಗಳೂ ಕ್ರಿಮಿಕೀಟಗಳೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಇದ್ದುದನ್ನು ಕಂಡೆನು.
7 ಮಾತ್ರವಲ್ಲದೆ, ‘ಪೇತ್ರನೇ ಎದ್ದೇಳು, ಕೊಂದು ತಿನ್ನು,’ ಎಂದು ನನಗೆ ಹೇಳುವ ಒಂದು ವಾಣಿಯನ್ನು ಕೇಳಿಸಿಕೊಂಡೆನು.
8 “ಅದಕ್ಕೆ ನಾನು, ‘ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,’ ಎಂದು ಉತ್ತರಕೊಟ್ಟೆನು.
9 “ಆಗ ಪರಲೋಕದ ಆ ವಾಣಿಯು, ‘ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,’ ಎಂದು ಎರಡನೆಯ ಸಾರಿ ನನಗೆ ಹೇಳಿತು.
10 ಹೀಗೆ ಮೂರು ಬಾರಿಯಾದ ತರುವಾಯ ಅವೆಲ್ಲವನ್ನೂ ಪರಲೋಕಕ್ಕೆ ಹಿಂದಿರುಗಿ ತೆಗೆದುಕೊಳ್ಳಲಾಯಿತು.
11 “ಆ ಸಮಯಕ್ಕೆ ಸರಿಯಾಗಿ ಕೈಸರೈಯದಿಂದ ನನ್ನ ಬಳಿಗೆ ಕಳುಹಿಸಲಾದ ಮೂರು ಜನರು ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಬಂದು ನಿಂತರು.
12 ಏನೂ ಸಂಶಯಪಡದೇ ಅವರ ಜೊತೆಯಲ್ಲಿ ಹೋಗಬೇಕೆಂದು ಪವಿತ್ರಾತ್ಮ ದೇವರು ನನಗೆ ಅಪ್ಪಣೆಕೊಟ್ಟರು. ಇದಲ್ಲದೆ ಈ ಆರು ಜನ ಸಹೋದರರೂ ನನ್ನೊಂದಿಗೆ ಹೊರಟರು. ನಾವು ಆ ಮನುಷ್ಯನ ಮನೆಯೊಳಗೆ ಪ್ರವೇಶಿಸಿದೆವು.
13 ತನ್ನ ಮನೆಯಲ್ಲಿ ಒಬ್ಬ ದೇವದೂತನು ಪ್ರತ್ಯಕ್ಷನಾಗಿ, ‘ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಯೊಪ್ಪದಿಂದ ಕರೆಕಳುಹಿಸು.
14 ಅವನು ಕೊಡುವ ವಾಕ್ಯದ ಮೂಲಕ ನೀನೂ ನಿನ್ನ ಮನೆಯಲ್ಲಿರುವವರೆಲ್ಲರೂ ರಕ್ಷಣೆ ಹೊಂದುವಿರಿ,’ ಎಂದು ಹೇಳಿದ್ದನ್ನು ಅವನು ನಮಗೆ ವಿವರಿಸಿದನು.
15 “ನಾನು ಮಾತನಾಡಲು ಪ್ರಾರಂಭ ಮಾಡಿದಾಗ, ಪವಿತ್ರಾತ್ಮ ದೇವರು ಮೊದಲು ನಮ್ಮ ಮೇಲೆ ಇಳಿದಂತೆಯೇ ಅವರ ಮೇಲೆಯೂ ಇಳಿದು ಬಂದರು.
16 ‘ಯೋಹಾನನು ನೀರಿನಿಂದ ದೀಕ್ಷಾಸ್ನಾನ ಮಾಡಿಸಿದ್ದಾನೆ. ನೀವಾದರೋ ಪವಿತ್ರಾತ್ಮ ದೇವರಿಂದ ದೀಕ್ಷಾಸ್ನಾನ ಹೊಂದುವಿರಿ,’ ಎಂದು ಕರ್ತ ಯೇಸುವು ಹೇಳಿದ ಮಾತುಗಳನ್ನು ನಾನು ಆಗ ಜ್ಞಾಪಿಸಿಕೊಂಡೆನು.
17 ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಂಬಿಕೆಯನ್ನಿಟ್ಟ ನಮಗೆ ಕೊಟ್ಟ ಪವಿತ್ರಾತ್ಮ ವರವನ್ನೇ ದೇವರು ಅವರಿಗೂ ಕೊಟ್ಟಿರಲು, ದೇವರಿಗೆ ಅಡ್ಡಿಮಾಡಲು ನಾನು ಯಾರು?” ಎಂದನು.
18 ಯೆಹೂದಿ ವಿಶ್ವಾಸಿಗಳು ಇದನ್ನು ಕೇಳಿದಾಗ, ಅವರಿಗೆ ಯಾವ ಆಕ್ಷೇಪಣೆಯೂ ಇರಲಿಲ್ಲ. ಹಾಗಾದರೆ ದೇವರು, “ಯೆಹೂದ್ಯರಲ್ಲದವರಿಗೂ ಸಹ ಜೀವಕ್ಕಾಗಿ ಪಶ್ಚಾತ್ತಾಪವನ್ನು ಕೊಟ್ಟಿದ್ದಾರೆ,” ಎಂದು ಹೇಳಿ ದೇವರನ್ನು ಕೊಂಡಾಡಿದರು.
ಅಂತಿಯೋಕ್ಯದಲ್ಲಿದ್ದ ಸಭೆ
19 ಸ್ತೆಫನನ ಮರಣದ ನಂತರ ಸಂಭವಿಸಿದ ಹಿಂಸೆಯ ನಿಮಿತ್ತ ಚದರಿಹೋದವರು ಫೊಯಿನಿಕೆ, ಸೈಪ್ರಸ್ ಮತ್ತು ಅಂತಿಯೋಕ್ಯದವರೆಗೆ ಪ್ರಯಾಣಮಾಡಿದರು. ಹೀಗೆ ಅವರು ಯೆಹೂದ್ಯರಿಗೆ ಮಾತ್ರವೇ ವಾಕ್ಯವನ್ನು ಸಾರಿದರು.
20 ಆದರೆ ಅವರಲ್ಲಿ, ಕೆಲವರು ಅಂದರೆ ಸೈಪ್ರಸ್ ಮತ್ತು ಕುರೇನೆದ ಪುರುಷರು ಅಂತಿಯೋಕ್ಯಕ್ಕೆ ಹೋಗಿ ಗ್ರೀಕರಿಗೂ ಕರ್ತ ಯೇಸುವಿನ ಶುಭಸಮಾಚಾರ ಸಾರಲು ಪ್ರಾರಂಭಿಸಿದರು.
21 ಕರ್ತ ಯೇಸುವಿನ ಹಸ್ತವು ಅವರೊಂದಿಗಿತ್ತು ಬಹಳಷ್ಟು ಜನರು ನಂಬಿ ಕರ್ತ ಯೇಸುವಿನ ಕಡೆಗೆ ತಿರುಗಿಕೊಂಡರು.
22 ಈ ಸಮಾಚಾರ ಯೆರೂಸಲೇಮಿನ ಸಭೆಯವರಿಗೆ ತಿಳಿಯಿತು. ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿಕೊಟ್ಟರು.
23 ಅವನು ಅಲ್ಲಿಗೆ ಬಂದು ದೇವರ ಕೃಪೆಯನ್ನು ಕಂಡು ಹರ್ಷಭರಿತನಾಗಿ, ಅವರೆಲ್ಲರೂ ಕರ್ತನಿಗೆ ಹೃದಯಪೂರ್ವಕವಾಗಿ ಭಯಭಕ್ತಿ ಉಳ್ಳವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸಿದನು.
24 ಬಾರ್ನಬನು ಸತ್ಪುರುಷನೂ ಪವಿತ್ರಾತ್ಮಭರಿತನೂ ಪೂರ್ಣನಂಬಿಕೆಯುಳ್ಳವನೂ ಆಗಿದ್ದನು. ಅಲ್ಲಿ ಅನೇಕರು ಕರ್ತ ಯೇಸುವಿನ ಕಡೆಗೆ ಬಂದರು.
25 ಅನಂತರ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋದನು.
26 ಅಲ್ಲಿ ಸೌಲನನ್ನು ಭೇಟಿಯಾಗಿ, ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅನಂತರ ಇಡೀ ಒಂದು ವರ್ಷಕಾಲ ಬಾರ್ನಬನು, ಸೌಲನು ಅಲ್ಲಿ ಸಭೆಯವರೊಂದಿಗೆ ಇದ್ದುಕೊಂಡು ಬಹಳ ಜನರಿಗೆ ಬೋಧನೆ ಮಾಡಿದರು. ಶಿಷ್ಯರಿಗೆ ಪ್ರಥಮ ಬಾರಿ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲಿಯೇ.
27 ಈ ಸಮಯದಲ್ಲಿ ಯೆರೂಸಲೇಮಿನಿಂದ ಕೆಲವು ಪ್ರವಾದಿಗಳು ಅಂತಿಯೋಕ್ಯಕ್ಕೆ ಬಂದರು.
28 ಅವರಲ್ಲೊಬ್ಬ ಅಗಬ ಎಂಬವನು ಪವಿತ್ರಾತ್ಮ ಪ್ರೇರಿತನಾಗಿ ಎದ್ದು ನಿಂತುಕೊಂಡು ಲೋಕಕ್ಕೆಲ್ಲಾ ಭೀಕರ ಕ್ಷಾಮ ಬರುವುದೆಂದು ತಿಳಿಸಿದನು. ಇದು ಕ್ಲೌದ್ಯನ ಆಳ್ವಿಕೆಯಲ್ಲಿ ಸಂಭವಿಸಿತು.
29 ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ಸಹಾಯ ಒದಗಿಸಲು ಅನುಕೂಲಸ್ಥರಾದ ಶಿಷ್ಯರು ತಮ್ಮ ಶಕ್ತ್ಯಾನುಸಾರ ಕೊಡಲು ನಿರ್ಧರಿಸಿದರು.
30 ಇದಕ್ಕನುಗುಣವಾಗಿ ಬಾರ್ನಬ ಮತ್ತು ಸೌಲರ ಮುಖಾಂತರ ಹಿರಿಯರಿಗೆ ತಮ್ಮ ದೇಣಿಗೆಗಳನ್ನು ಕಳುಹಿಸಿದರು.