2
ಪಶ್ಚಾತ್ತಾಪಕ್ಕೆ ಕರೆ 
 
1 ನಾಚಿಕೆಗೇಡಿ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ,  
ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವುದಕ್ಕೆ ಮೊದಲೇ  
ಯೆಹೋವನ ಸಿಟ್ಟಿನ ದಿನವೂ ಉರಿದು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ,  
ನೀವೆಲ್ಲರೂ ಸೇರಿ ಬನ್ನಿರಿ, ಒಟ್ಟಾಗಿ ಕೂಡಿರಿ.   
2 ಆ ಕಾಲವು ಹೊಟ್ಟಿನಂತೆ ಹಾರಿಹೋಗುತ್ತದಲ್ಲಾ.   
3 ಯೆಹೋವನ ನಿಯಮವನ್ನು ಕೈಕೊಂಡು ನಡೆಯುವ ಲೋಕದ ದೀನರೇ,  
ನೀವೆಲ್ಲರೂ ಯೆಹೋವನ ನೀತಿಯನ್ನು ಅನುಸರಿಸಿರಿ, ಧರ್ಮವನ್ನು ಅಭ್ಯಾಸಿಸಿರಿ, ನಮ್ರತೆಯನ್ನು ಹೊಂದಿಕೊಳ್ಳಿರಿ;  
ಬಹುಶಃ ಯೆಹೋವನ ಸಿಟ್ಟಿನ ದಿನದಲ್ಲಿ ನೀವು ಮರೆಯಾಗುವಿರಿ.   
ಫಿಲಿಷ್ಟಿಯರ ದುರ್ಗತಿ 
 
4 ಗಾಜ ಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು,  
ಅಷ್ಡೋದ್ ನಿವಾಸಿಗಳನ್ನು ನಡು ಮಧ್ಯಾಹ್ನದಲ್ಲಿ ಆಕ್ರಮಿಸಿ ಓಡಿಸಿಬಿಡುವರು, ಎಕ್ರೋನ್ ನಗರ ನಿರ್ಮೂಲವಾಗುವುದು.   
5 ಅಯ್ಯೋ, ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನಾಂಗವೇ, ನಿನ್ನ ಗತಿಯನ್ನು ಏನು ಹೇಳಲಿ!  
ಕಾನಾನೇ, ಫಿಲಿಷ್ಟಿಯ ದೇಶವೇ, ಯೆಹೋವನ ನುಡಿಯು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ವಾಸಿಸುವ ಜನರೇ ನಿಲ್ಲದಂತೆ ನಿನ್ನನ್ನು ನಾಶಮಾಡುವೆನು.   
6 ಸಮುದ್ರ ತೀರದ ಆ ಪ್ರಾಂತ್ಯವು ಹುಲ್ಲುಗಾವಲಾಗಿ, ಕುರುಬರ ಗುಡಿಸಲಾಗಿ, ಹಿಂಡುಗಳ ದೊಡ್ಡಿಗಳು ಇವೇ ಅಲ್ಲಿರುವವು.   
7 ಆ ಕರಾವಳಿಯು ಉಳಿದ ಯೆಹೂದ್ಯರ ಪಾಲಾಗುವುದು;  
ದನಕುರಿಗಳನ್ನು ಅಲ್ಲೇ ಮೇಯಿಸುವರು; ಸಂಜೆಗೆ ಅಷ್ಕೆಲೋನಿನ ಮನೆಗಳಲ್ಲಿ ಮಲಗಿಕೊಳ್ಳುವರು;  
ಅವರ ದೇವರಾದ ಯೆಹೋವನು ಅವರನ್ನು ಪರಾಂಬರಿಸಿ ಅವರ ದುರವಸ್ಥೆಯನ್ನು ತಪ್ಪಿಸುವನು.   
ಮೋವಾಬ್ಯರ ಮತ್ತು ಅಮ್ಮೋನಿಯರ ದುರ್ಗತಿ 
 
8 ಮೋವಾಬ್ಯರೂ, ಅಮ್ಮೋನ್ಯರೂ ಅಹಂಕಾರದಿಂದ ನನ್ನ ಜನರ ಮೇರೆಯನ್ನು ಮೀರಿ,  
ಅವರನ್ನು ನಿಂದಿಸಿ, ಅವರ ಮೇಲೆ ಹೊರಿಸಿರುವ ದೂರುದೂಷಣೆಗಳು ನನ್ನ ಕಿವಿಗೆ ಬಿದ್ದಿವೆ.   
9 ಇಸ್ರಾಯೇಲರ ದೇವರಾದ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,  
“ನನ್ನ ಜೀವದಾಣೆ, ಸೊದೋಮಿನ ಗತಿಯೇ ಮೋವಾಬಿಗೂ ಆಗುವುದು. ಗೊಮೋರದ ದುರ್ದಶೆಯೇ ಅಮ್ಮೋನ್ಯರಿಗೆ ಸಂಭವಿಸುವುದು;  
ಆ ಪ್ರಾಂತ್ಯಗಳು ಮುಳ್ಳುಗಿಡಗಳಿಂದಲೂ, ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯ ನಾಶನಕ್ಕೆ ಈಡಾಗುವವು;  
ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆಮಾಡುವರು.  
ಅಳಿದುಳಿದ ನನ್ನ ಜನರಿಗೆ ಅವು ಸ್ವಾಸ್ತ್ಯವಾಗುವವು.”   
10 ಆ ಪ್ರಾಂತ್ಯಗಳವರು ಸೇನಾಧೀಶ್ವರನಾದ ಯೆಹೋವನ ಜನರನ್ನು ದೂಷಿಸಿ, ಅವರ ಮೇಲೆ ಉಬ್ಬಿಕೊಂಡು ಬಂದುದ್ದರಿಂದ ಅವರ ಅಹಂಕಾರದ ನಿಮಿತ್ತವೇ ಅವರಿಗೆ ಈ ಗತಿಯಾಗುವುದು!  
11 ಯೆಹೋವನು ಅವರಿಗೆ ಭಯಂಕರನಾಗುವನು; ಲೋಕದ ದೇವರುಗಳನ್ನೆಲ್ಲಾ ನಾಶಮಾಡುವನು; ಸಮಸ್ತ ಜನರು, ಪ್ರತಿಯೊಂದು ಪ್ರಾಂತ್ಯದ ನಿವಾಸಿಗಳು ಸಕಲ ಜನಾಂಗಗಳವರು ತಮ್ಮ ತಮ್ಮ ಸ್ಥಳಗಳಲ್ಲೇ ಆತನನ್ನು ಆರಾಧಿಸುವರು.   
ಕೂಷಿನ ದುರ್ಗತಿ 
 
12 ಕೂಷಿನವರೇ, ನೀವು ಸಹ ನನ್ನ ಖಡ್ಗದಿಂದ ಹತರಾಗುವಿರಿ.   
ಅಶ್ಶೂರ್ಯರ ದುರ್ಗತಿ 
 
13 ಯೆಹೋವನು ಉತ್ತರಕ್ಕೆ ಕೈಚಾಚಿ ಅಶ್ಶೂರವನ್ನು ಧ್ವಂಸ ಮಾಡುವನು;  
ನಿನವೆಯನ್ನು ಹಾಳುಮಾಡಿ ನೀರಿಲ್ಲದ ಮರುಭೂಮಿಯಂತೆ ಒಣಗಿಸಿಬಿಡುವನು.   
14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು;  
ಕೊಕ್ಕರೆಯೂ, ಮುಳ್ಳುಹಂದಿಯೂ ಹಟ್ಟಿಗಳಲ್ಲಿ ವಾಸಮಾಡಿಕೊಳ್ಳುವವು.  
ಗೂಬೆಯು ಕಿಟಕಿಗಳಲ್ಲಿ ಮನೆಕಂಬಗಳ ಮೇಲೆ ಚಿಲಿಪಿಲಿ ಗಾನವು ತಂಗುವವು; ಕಾಗೆಗಳ ಕೂಗು ಹೊಸ್ತಿಲುಗಳಲ್ಲಿ ಕೇಳುವುದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು.   
15 ಈ ನಿನವೆಯು ಮೊದಲು ಉಲ್ಲಾಸದ ನಗರಿಯಾಗಿ ನೆಮ್ಮದಿಯಿಂದ ನೆಲೆಗೊಂಡಿದ್ದು  
ತನ್ನ ಹೃದಯದೊಳಗೆ, “ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ” ಅಂದುಕೊಳ್ಳುತ್ತಿತ್ತು;  
ಅಯ್ಯೋ, ಎಷ್ಟೋ ಹಾಳಾಗಿ ಹೋಗಿ ಮೃಗಗಳು ತಂಗುವ ಕೊಟ್ಟಿಗೆಯ ಬೀಡಾಗಿದೆ!  
ಅದರ ಮುಂದೆ ಹಾದುಹೋಗುವವರೆಲ್ಲರು ಸಿಳ್ಳು ಹಾಕಿ ಅಪಹಾಸ್ಯ ಮಾಡುತ್ತಾರೆ.