2
ಅಳತೆಯ ನೂಲಿನ ವಿಷಯವಾದ ದರ್ಶನ
ನಾನು ಕಣ್ಣಿತ್ತಿ ನೋಡಲು ಇಗೋ, ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡಿದ್ದವನು ಕಾಣಿಸಿದನು. ನಾನು ಅವನನ್ನು, “ಎಲ್ಲಿಗೆ ಹೋಗುತ್ತಿ?” ಎಂದು ಕೇಳಲು ಅವನು ನನಗೆ, “ಯೆರೂಸಲೇಮಿನ ಅಗಲ, ಉದ್ದ ಎಷ್ಟಿರಬೇಕೆಂದು ಅಳೆದು ನೋಡುವುದಕ್ಕೆ ಹೋಗುತ್ತಿದ್ದೇನೆ” ಎಂದು ಹೇಳಿದನು.
ನನ್ನ ಸಂಗಡ ಮಾತನಾಡಿದ ದೇವದೂತನು ಬರುತ್ತಿರಲು ಇನ್ನೊಬ್ಬ ದೂತನು ಅವನನ್ನು ಎದುರುಗೊಂಡು ಹೀಗೆ ಹೇಳಿದನು, “ನೀನು ಓಡು, ಆ ಯುವಕನಿಗೆ ಈ ಮಾತನ್ನು ತಿಳಿಸು,
‘ಯೆರೂಸಲೇಮಿನಲ್ಲಿರುವ ಜನ ಮತ್ತು ಪಶುಗಳ ಸಂಖ್ಯೆಯು ಅಪಾರವಾಗಿರುವುದರಿಂದ
ಅದು ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿಗಳಂತೆ ಹರಡಿಕೊಂಡು ನೆಲೆಯಾಗಿರುವುದು.
ನಾನೇ, ಅದರ ಸುತ್ತಮುತ್ತಲೂ ಅಗ್ನಿಪ್ರಾಕಾರವಾಗಿ,
ಅದರೊಳಗೆ ವೈಭವವೂ ಆಗಿರುವೆನು’ ” ಎಂಬುದು ಯೆಹೋವನ ನುಡಿ.
ಸೆರೆಯಾಗಿ ಬಾಬೆಲಿನಲ್ಲಿ ಇರುವವರು ಚೀಯೋನಿಗೆ ಮರಳಿ ಬರಬೇಕೆಂಬ ಕರೆ
ಎಲೈ, ಎಲೈ ಉತ್ತರದೇಶದಿಂದ ಓಡಿ ಬನ್ನಿರಿ; ಇದು ಯೆಹೋವನ ನುಡಿ;
ಚತುರ್ದಿಕ್ಕಿನ ಗಾಳಿಗಳಂತೆ ನಿಮ್ಮನ್ನು ಚದುರಿಸಿದ್ದೆನಲ್ಲಾ; ಇದು ಯೆಹೋವನ ನುಡಿ.
ಎಲೈ, ಬಾಬೆಲ್ ಪುರಿಯಲ್ಲಿ ವಾಸಿಸುವ ಚೀಯೋನಿನವರೇ, ತಪ್ಪಿಸಿಕೊಂಡು ಬನ್ನಿರಿ.
ನಿಮ್ಮನ್ನು ತಾಕುವವನು ನನ್ನ* ಕಣ್ಣು ಗುಡ್ಡೆಯನ್ನು ತಾಕುವವನಾಗಿದ್ದಾನೆ.
ಆದಕಾರಣ ತನ್ನ ಪ್ರಸಿದ್ಧಿಗಾಗಿ ನನ್ನನ್ನು ಕಳುಹಿಸಿದ ಸೇನಾಧೀಶ್ವರ ಯೆಹೋವನು ನಿಮ್ಮನ್ನು ಸೂರೆಮಾಡಿದ ಜನಾಂಗಗಳ ವಿಷಯವಾಗಿ,
“ಆಹಾ, ನಾನು ಇವರ ಮೇಲೆ ಕೈಬೀಸುವೆನು; ಇವರು ತಮಗೆ ಅಡಿಯಾಳಾದವರಿಗೆ ಸೂರೆಯಾಗುವರು” ಎಂದು ಹೇಳುತ್ತಾನೆ.
ಆಗ ಸೇನಾಧೀಶ್ವರ ಯೆಹೋವನು ನನ್ನನ್ನು ಕಳುಹಿಸಿದ್ದಾನೆಂಬುದು ನಿಮಗೆ ಗೊತ್ತಾಗುವುದು.
10 ಯೆಹೋವನು ಇಂತೆನ್ನುತ್ತಾನೆ, “ಚೀಯೋನ್ ನಗರಿಯೇ, ಉಲ್ಲಾಸಗೊಳ್ಳು, ಹರ್ಷಧ್ವನಿಗೈ!
ಇಗೋ, ನಾನು ಬಂದು ನಿನ್ನ ಮಧ್ಯದಲ್ಲಿ ವಾಸಿಸುವೆನು.
11 ಆ ಕಾಲದಲ್ಲಿ ಬಹು ಜನಾಂಗಗಳು ಯೆಹೋವನಾದ ನನ್ನನ್ನು ಆಶ್ರಯಿಸಿಕೊಂಡು ನನ್ನ ಜನವಾಗುವರು;
ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು” ಆಗ, ಸೇನಾಧೀಶ್ವರನಾದ ಯೆಹೋವನೇ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂಬುದು ನಿನಗೆ ಗೊತ್ತಾಗುವುದು.
12 ಯೆಹೋವನು ಮೀಸಲಾದ ದೇಶದಲ್ಲಿ ಯೆಹೂದವನ್ನು ತನ್ನ ಸ್ವತ್ತಾಗಿ ಅನುಭವಿಸುವನು,
ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.
13 ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಎದ್ದು ಹೊರಟಿದ್ದಾನೆ; ನರಮಾನವರೇ, ನೀವೆಲ್ಲಾ ಆತನ ಮುಂದೆ ಮೌನವಾಗಿರಿ.
* 2:8 ನನ್ನ ಅಥವಾ ಆತನ.