2
ಸಭೆಯ ಪ್ರಾರ್ಥನೆ ಮತ್ತು ಆರಾಧನೆ
1 ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.
2 ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ, ಗೌರವದಿಂದಲೂ ಜೀವಿಸುವಂತೆ, ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.
3 ಹಾಗೆ ಮಾಡುವುದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಒಳ್ಳೆಯದು, ಮೆಚ್ಚಿಕೆಯಾಗಿಯೂ ಇದೆ.
4 ಎಲ್ಲಾ ಜನರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದೇ ಆತನ ಚಿತ್ತವಾಗಿದೆ.
5 ಏಕೆಂದರೆ ದೇವರು ಒಬ್ಬನೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ, ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ.
6 ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಇದೇ ತಕ್ಕ ಸಮಯಗಳಲ್ಲಿ ಹೇಳಬೇಕಾದ ಸಾಕ್ಷಿಯಾಗಿದೆ.
7 ಆ ಸಾಕ್ಷಿಯನ್ನು ಪ್ರಸಿದ್ಧಿಪಡಿಸುವುದಕ್ಕಾಗಿಯೇ ನಾನು ಸಂದೇಶಕನಾಗಿಯೂ, ಅಪೊಸ್ತಲನಾಗಿಯೂ, ನಂಬಿಕೆಯಿಂದಲೂ ಸತ್ಯದಿಂದಲೂ ಅನ್ಯಜನರಿಗೆ ಬೋಧಿಸುವವನಾಗಿಯೂ ನೇಮಿಸಲ್ಪಟ್ಟಿದ್ದೇನೆ. ನಾನು ಸುಳ್ಳಾಡದೇ ಸತ್ಯವನ್ನೇ ಹೇಳುತ್ತೇನೆ.
8 ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ, ಭಕ್ತಿಪೂರ್ವಕವಾಗಿ ಪವಿತ್ರ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ.
9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಸಭ್ಯತೆಯುಳ್ಳವರಾಗಿಯೂ ಇದ್ದು, ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆಯನ್ನು ಹೆಣೆಯುವುದು, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ
10 ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.
11 ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು.
12 ಉಪದೇಶಮಾಡುವುದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವುದಿಲ್ಲ. ಅವರು ಮೌನವಾಗಿರಬೇಕು.
13 ಮೊದಲು ಸೃಷ್ಟಿಸಲ್ಪಟವನು ಆದಾಮನಲ್ಲವೇ, ಆಮೇಲೆ ಹವ್ವಳು.
14 ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ, ಸ್ತ್ರೀಯು ವಂಚಿಸಲ್ಪಟ್ಟು ಅಪರಾಧಿಯಾದಳು.
15 ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆಯಲ್ಲಿಯೂ, ಪ್ರೀತಿಯಲ್ಲಿಯೂ, ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆಹೊಂದುವರು.