6
ದಾವೀದನು ಯೆಹೋವನ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು
1 ಅನಂತರ ದಾವೀದನು ಇಸ್ರಾಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ಅವರ ಸಂಗಡ
2 ದೇವರ ಮಂಜೂಷವನ್ನು ತರುವುದಕ್ಕಾಗಿ ಯೆಹೂದ ದೇಶದ ಬಾಳಾ ಎಂಬಲ್ಲಿಗೆ ಹೋದನು. ಆ ಮಂಜೂಷವು ದೇವನಾಮದಿಂದ ಅಂದರೆ ಕೆರೂಬಿಯರ ನಡುವೆ ಆಸೀನನಾಗಿರುವ ಸೇನಾಧೀಶ್ವರನಾದ ಯೆಹೋವನ ನಾಮದಿಂದ ಪ್ರಸಿದ್ಧವಾಗಿತ್ತು.
3 ಅವರು ದೇವರ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು, ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಮತ್ತು ಅಹಿಯೋವನೂ ಬಂಡಿಯನ್ನು ಮಾರ್ಗ ತೋರಿಸುತ್ತಾ ಮುನ್ನಡೆಸಿದರು.
4 ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲ್ಪಟ್ಟ ದೇವರ ಮಂಜೂಷದ ಮುಂದೆ ಅಹಿಯೋವನೂ ಹೋಗುತ್ತಿದ್ದನು.
5 ದಾವೀದನೂ ಎಲ್ಲಾ ಇಸ್ರಾಯೇಲರೂ ಶಂಕುಮರದಿಂದ (ಸೈಪ್ರಸ್ ಮರ) ಮಾಡಿದ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತೆಗಳನ್ನು ಹಾಡುತ್ತಾ, ಯೆಹೋವನ ಮುಂದೆ ನರ್ತನ ಮಾಡುತ್ತಾ ಹೋದರು.
6 ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
7 ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು, ಈ ತಪ್ಪಿಗೆ ಅವನನ್ನು ಸಂಹರಿಸಿದನು. ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು.
8 ಯೆಹೋವನು ಉಜ್ಜನನ್ನು ಹತ್ಯಮಾಡಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ “ಪೆರೆಚ್ ಉಜ್ಜಾ” ಎಂದು ಹೆಸರಿಟ್ಟನು. ಅದಕ್ಕೆ ಇಂದಿನ ವರೆಗೂ ಅದೇ ಹೆಸರಿರುತ್ತದೆ.
9 ಆ ದಿನ ದಾವೀದನು ಯೆಹೋವನಿಗೆ ಭಯಪಟ್ಟು, “ಯೆಹೋವನ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದುಕೊಂಡು,
10 ಅದನ್ನು ದಾವೀದನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
11 ಯೆಹೋವನ ಮಂಜೂಷವು ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ದಿನಗಳಲ್ಲಿ ಯೆಹೋವನು ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದನು.
12 ಯೆಹೋವನು ಹೀಗೆ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ, ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸಾಹದಿಂದ ದಾವೀದನಗರಕ್ಕೆ ತಂದನು.
13 ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ, ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು.
14 ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ, ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು.
15 ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲರೂ ಅರ್ಭಟಿಸುತ್ತಾ, ತುತ್ತೂರಿ ಊದುತ್ತಾ, ಯೆಹೋವನ ಮಂಜೂಷವನ್ನು ತಂದರು.
16 ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಿಕಿಯಿಂದ ಇಣಿಕಿ ನೋಡಿ, ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ, ಕುಣಿಯುತ್ತಾ ಇರುವುದನ್ನು ಕಂಡು, ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು
17 ಜನರು ಯೆಹೋವನ ಮಂಜೂಷವನ್ನು ತಂದು ದಾವೀದನು ಹಾಕಿಸಿದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿಟ್ಟರು. ಆಗ ದಾವೀದನು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು.
18 ಇದಾದ ಮೇಲೆ ಅವನು ಸೇನಾಧೀಶ್ವರನಾದ ಯೆಹೋವನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
19 ಸಭೆಯಾಗಿ ಸೇರಿ ಬಂದಿರುವ ಇಸ್ರಾಯೇಲರ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ, ಒಂದು ತುಂಡು ಮಾಂಸವನ್ನೂ ಮತ್ತು ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಕೊಡಿಸಿದರು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
20 ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದು, “ಈ ಹೊತ್ತು ಇಸ್ರಾಯೇಲರ ಅರಸನು ಎಂಥ ಗೌರವದಿಂದ ನಡೆದುಕೊಂಡನು. ಹುಚ್ಚರಲ್ಲೊಬ್ಬನಂತೆ ತನ್ನ ಜನರ ದಾಸಿಯರ ಮುಂದೆ ಬೆತ್ತಲೆಯಾಗಿದ್ದನಲ್ಲಾ” ಅಂದಳು.
21 ಆಗ ದಾವೀದನು ಮೀಕಲಳಿಗೆ, “ಇದನ್ನು ಯೆಹೋವನ ಸನ್ನಿಧಿಯಲ್ಲಿ ಮಾಡಿದ್ದೇನಷ್ಟೇ, ನಿನ್ನ ತಂದೆಯನ್ನೂ ಅವರ ಮನೆಯವರೆಲ್ಲರನ್ನೂ ಬಿಟ್ಟು, ನನ್ನನ್ನೇ ಆರಿಸಿಕೊಂಡು, ತನ್ನ ಪ್ರಜೆಗಳಾದ ಇಸ್ರಾಯೇಲರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಸಂತೋಷದಿಂದ ಕುಣಿದಾಡುವೆನು.
22 ಇದಕ್ಕಿಂತ ಇನ್ನೂ ಹೆಚ್ಚಾಗಿ ತಿರಸ್ಕಾರ ಹೊಂದುವುದಕ್ಕೂ ನನ್ನನ್ನು ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ಸಿದ್ಧನಾಗಿದ್ದೇನೆ. ನೀನು ಹೇಳಿದ ದಾಸಿಯರಾದರೋ ಹೇಗೂ ನನ್ನನ್ನು ಸನ್ಮಾನಿಸುವರು” ಎಂದನು.
23 ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವ ವರೆಗೂ ಮಕ್ಕಳೇ ಆಗಲಿಲ್ಲ.