ರೋಮಾಪುರದವರಿಗೆ
ಗ್ರಂಥಕರ್ತೃತ್ವ
ರೋಮಾಪುರದವರಿಗೆ ಬರೆದ ಪತ್ರಿಕೆಯ ಗ್ರಂಥಕರ್ತನು ಪೌಲನು ಎಂದು ರೋಮಾ 1:1 ಸೂಚಿಸುತ್ತದೆ, ರೋಮ್ನ ಚಕ್ರವರ್ತಿಯಾಗಿ 16 ವರ್ಷ ವಯಸ್ಸಿನ ನೀರೋ ಸಿಂಹಾಸನಕ್ಕೆ ಏರಿ ಕೇವಲ ಮೂರು ವರ್ಷಗಳಾದ ನಂತರ ಪೌಲನು ಗ್ರೀಕ್ ಪಟ್ಟಣವಾದ ಕೊರಿಂಥದಿಂದ ರೋಮಾಪುರದವರಿಗೆ ಈ ಪತ್ರಿಕೆಯನ್ನು ಬರೆದನು. ಪ್ರಮುಖವಾದ ಈ ಗ್ರೀಕ್ ಪಟ್ಟಣವು ಲೈಂಗಿಕ ಅನೈತಿಕತೆಯ ಮತ್ತು ವಿಗ್ರಹಾರಾಧನೆಯ ತಿಪ್ಪೆಗುಂಡಿಯಾಗಿತ್ತು. ಆದ್ದರಿಂದ ಪೌಲನು ರೋಮಾಪುರದವರಿಗೆ ಮನುಷ್ಯರ ಪಾಪದ ಅಥವಾ ಅದ್ಭುತವಾಗಿ ಮತ್ತು ಸಂಪೂರ್ಣವಾಗಿ ಜೀವನವನ್ನು ಬದಲಾಯಿಸುವ ದೇವರ ಕೃಪೆಯ ಶಕ್ತಿಯನ್ನು ಬಗ್ಗೆ ಬರೆಯುವಾಗ, ಅವನು ತಾನು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಅವನಿಗೆ ತಿಳಿದಿತ್ತು. ಪೌಲನು ಕ್ರೈಸ್ತೀಯ ಸುವಾರ್ತೆಯ ಮೂಲಭೂತ ವಿಷಯಗಳ, ಎಲ್ಲಾ ಪ್ರಮುಖ ಅಂಶಗಳನ್ನು ತಾಕುತ್ತಾ ಮುಖ್ಯಾಂಶದ ರೂಪುರೇಖೆಯನ್ನು ರಚಿಸುತ್ತಾನೆ: ದೇವರ ಪವಿತ್ರತೆ, ಮಾನವಕುಲದ ಪಾಪ, ಮತ್ತು ಯೇಸು ಕ್ರಿಸ್ತನಿಂದ ಒದಗಿಸಲ್ಪಟ್ಟ ರಕ್ಷಿಸುವ ಕೃಪೆ.
ಬರೆದ ದಿನಾಂಕ ಮತ್ತು ಸ್ಥಳ
ಸರಿಸುಮಾರು ಕ್ರಿ.ಶ. 57 ರ ನಡುವೆ ಕೊರಿಂಥದಿಂದ ಬರೆಯಲ್ಪಟ್ಟಿದೆ.
ಬರವಣಿಗೆಯ ಪ್ರಮುಖ ಸ್ಥಳ ರೋಮ್ ಆಗಿರಬಹುದು.
ಸ್ವೀಕೃತದಾರರು
ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ಹಾಗು ದೇವಜನರಾಗುವುದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ, ಅಂದರೆ ರೋಮ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ರೋಮಾಪುರದ ಸಭೆಯ ಸದಸ್ಯರೆಲ್ಲರಿಗೆ (ರೋಮಾ 1:7).
ಉದ್ದೇಶ
ರೋಮಾಪುರದವರಿಗೆ ಬರೆದ ಪತ್ರಿಕೆಯು ಕ್ರೈಸ್ತೀಯ ಸಿದ್ಧಾಂತದ ಸ್ಪಷ್ಟವಾದ ಮತ್ತು ಅತ್ಯಂತ ವ್ಯವಸ್ಥಿತವಾದ ನಿರೂಪಣೆಯಾಗಿದೆ. ಎಲ್ಲಾ ಮನುಷ್ಯರ ಪಾಪಿಷ್ಠತೆಯನ್ನು ಚರ್ಚಿಸುವುದರ ಮೂಲಕ ಪೌಲನು ಪ್ರಾರಂಭಿಸಿದನು. ದೇವರ ವಿರುದ್ಧವಾಗಿರುವ ನಮ್ಮ ದಂಗೆಯಿಂದಾಗಿ ಎಲ್ಲ ಮನುಷ್ಯರನ್ನು ಖಂಡಿಸಲಾಯಿತು. ಆದರೂ, ದೇವರು ತನ್ನ ಕೃಪೆಯಿಂದ ತನ್ನ ಮಗನಾದ ಯೇಸುವಿನಲ್ಲಿಡುವ ನಂಬಿಕೆಯ ಮೂಲಕ ನಮಗೆ ನೀತಿಕರಣವನ್ನು ನೀಡುತ್ತಾನೆ. ನಾವು ದೇವರಿಂದ ನೀತಿಕರಿಸಲ್ಪಟ್ಟಾಗ, ಕ್ರಿಸ್ತನ ರಕ್ತವು ನಮ್ಮ ಪಾಪವನ್ನು ಮುಚ್ಚುವುದ್ದರಿಂದ ನಾವು ವಿಮೋಚನೆಯನ್ನು ಅಥವಾ ರಕ್ಷಣೆಯನ್ನು ಹೊಂದಿಕೊಳ್ಳುತ್ತೇವೆ. ಈ ವಿಷಯಗಳ ಬಗೆಗಿನ ಪೌಲನ ಪ್ರತಿಪಾದನೆಯು ಒಬ್ಬ ವ್ಯಕ್ತಿಯು ತನ್ನ ಪಾಪದ ಶಿಕ್ಷೆಯಿಂದ ಮತ್ತು ಅವನ ಅಥವಾ ಅವಳ ಪಾಪದ ಶಕ್ತಿಯಿಂದ ಹೇಗೆ ರಕ್ಷಿಸಲ್ಪಡುವುದು ಎಂಬ ತಾರ್ಕಿಕವಾದ ಮತ್ತು ಸಂಪೂರ್ಣವಾದ ನಿರೂಪಣೆಯನ್ನು ನೀಡುತ್ತದೆ.
ಮುಖ್ಯಾಂಶ
ದೇವರ ನೀತಿ
ಪರಿವಿಡಿ
1. ಪಾಪದ ಖಂಡನೆಯ ಸ್ಥಿತಿ ಮತ್ತು ನೀತಿಯ ಅವಶ್ಯಕತೆ — 1:18-3:20
2. ನೀತಿಯು ನೀತಿಕರಣವನ್ನು ಉಂಟುಮಾಡುತ್ತದೆ — 3:21-5:21
3. ನೀತಿಯು ಪವಿತ್ರೀಕರಣವನ್ನು ನೀಡುತ್ತದೆ — 6:1-8:39
4. ಇಸ್ರಾಯೇಲರಿಗೆ ದೈವಿಕ ಒದಗಿಸುವಿಕೆ — 9:1-11:36
5. ನೀತಿಯ ನಡವಳಿಕೆಯನ್ನು ಕಾರ್ಯಗತಗೊಳಿಸುವುದು — 12:1-15:13
6. ಸಮಾಪ್ತಿ: ವೈಯಕ್ತಿಕ ಸಂದೇಶ — 15:14-16:27
1
ಪೀಠಿಕೆ
ಯೇಸು ಕ್ರಿಸ್ತನ ದಾಸನೂ, *ಅಪೊಸ್ತಲನಾಗುವುದಕ್ಕೆ ಕರೆಯಲ್ಪಟ್ಟವನೂ, ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಿಸಲ್ಪಟ್ಟವನೂ ಆಗಿರುವ ಪೌಲನು, ರೋಮಾಪುರದಲ್ಲಿ ದೇವರಿಗೆ ಪ್ರಿಯರೂ ಹಾಗು ದೇವಜನರಾಗುವುದಕ್ಕೆ ಕರೆಯಲ್ಪಟ್ಟವರೂ ಆಗಿರುವವರೆಲ್ಲರಿಗೆ ಬರೆಯುವ ಪತ್ರ; ನಮ್ಮ ತಂದೆಯಾಗಿರುವ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ.
ದೇವರು ಮುಂಚಿತವಾಗಿ ಪವಿತ್ರ ಗ್ರಂಥಗಳಲ್ಲಿ ತನ್ನ ಪ್ರವಾದಿಗಳ ಮೂಲಕ ತಿಳಿಸಲ್ಪಟ್ಟ ವಾಗ್ದಾನ ಮಾಡಿದ ಈ ಸುವಾರ್ತೆಯು ದೇವರ ಮಗನೂ ನಮ್ಮ ಕರ್ತನೂ ಆಗಿರುವ ಯೇಸು ಕ್ರಿಸ್ತನ ಕುರಿತಾದದ್ದು. ಆತನು ವಂಶಕ್ರಮದಿಂದ ದಾವೀದನ ಸಂತಾನದಲ್ಲಿ ಹುಟ್ಟಿದವನೂ ಪವಿತ್ರವಾದ ಆತ್ಮನ ಶಕ್ತಿಗನುಸಾರವಾಗಿ ಸತ್ತಮೇಲೆ ಜೀವಿತನಾಗಿ ಎದ್ದು ಬಂದು ದೇವಕುಮಾರನೆಂದು ನಿರ್ಣಯಿಸಲ್ಪಟ್ಟವನೂ ಆಗಿದ್ದಾನೆ. ಯೇಸು ಕ್ರಿಸ್ತನಲ್ಲಿ ಸೇರುವುದಕ್ಕೆ ಕರೆಯಲ್ಪಟ್ಟ ನೀವೂ ಸಹ ಆ ಅನ್ಯಜನರೊಳಗಿನವರಾದ್ದರಿಂದ ನಿಮಗೆ, ಆತನ ಹೆಸರಿನ ಪ್ರಸಿದ್ಧಿಗಾಗಿ ನಂಬಿಕೆಯೆಂಬ ವಿಧೇಯತ್ವವು ಉಂಟಾಗುವುದಕ್ಕೋಸ್ಕರ ನಾವು ಆತನ ಮೂಲಕವಾಗಿ §ಕೃಪೆಯನ್ನೂ ಮತ್ತು ಅಪೊಸ್ತಲತನವನ್ನೂ ಹೊಂದಿದೆವು.
ಮೊದಲು *ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮೂಲಕ ನನ್ನ ದೇವರಿಗೆ ಸ್ತೋತ್ರ ಮಾಡುತ್ತೇನೆ. ನಾನು ಪ್ರಾರ್ಥನೆ ಮಾಡುವಾಗೆಲ್ಲಾ ಎಡೆಬಿಡದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತೇನೆ. ದೇವರ ಮಗನ ಸುವಾರ್ತೆಯನ್ನು ಸಾರುತ್ತಾ ದೈವಸೇವೆಯನ್ನು ಮನಃಪೂರ್ವಕವಾಗಿ ಮಾಡಿಕೊಂಡು ಬರುತ್ತಿರುವ ದೇವರೇ ನನಗೆ ಸಾಕ್ಷಿ. 10 ದೈವಚಿತ್ತದಿಂದ ನಾನು ನಿಮ್ಮಲ್ಲಿಗೆ ಬರಲು ಈಗಲಾದರೂ ಅನುಕೂಲವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. 11-12 ನನ್ನ ಮುಖಾಂತರ ನಿಮಗೆ ಆತ್ಮೀಕ ವರವೇನಾದರೂ ದೊರಕಿ ನೀವು ದೃಢವಾಗುವುದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ಮತ್ತು ನೀವು ನನ್ನ ನಂಬಿಕೆಯಿಂದ ಸಹಾಯ ಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವುದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.
13 ಪ್ರಿಯರೇ, ನನ್ನ ಕೆಲಸವು ಇತರ ಅನ್ಯಜನಗಳಲ್ಲಿ ಸಫಲವಾದಂತೆ ನಿಮ್ಮಲ್ಲಿಯೂ ಸಫಲವಾದೀತೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಮನಸ್ಸು ಮಾಡಿಕೊಂಡಿದ್ದಾಗ್ಯೂ ಇಂದಿನವರೆಗೂ ಅಡ್ಡಿಯಾಯಿತೆಂಬುದು ನೀವು ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ. 14 ಗ್ರೀಕರಿಗೂ ಇತರ ಜನಗಳಿಗೂ, ಜ್ಞಾನಿಗಳಿಗೂ, ಮೂಢರಿಗೂ §ತೀರಿಸಬೇಕಾದ ಒಂದು ಋಣ ನನ್ನ ಮೇಲಿದೆ. 15 ಹೀಗಿರುವುದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.
ಸುವಾರ್ತೆಯ ಶಕ್ತಿ
16 *ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ಮೊದಲು ಯೆಹೂದ್ಯರಿಗೆ ಆ ಮೇಲೆ ಗ್ರೀಕರಿಗೆ ಅಂತೂ ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವ ದೇವರ ಬಲಸ್ವರೂಪವಾಗಿದೆ. 17 ಹೇಗೆಂದರೆ §ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ತೋರಿಬರುತ್ತದೆ. *“ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ” ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ವೃದ್ಧಿಪಡಿಸುವಂಥದಾಗಿದೆ.
ಎಲ್ಲಾ ಮನುಷ್ಯರು ದೇವರ ಸನ್ನಿಧಿಯಲ್ಲಿ ಅಪರಾಧಿಗಳು
18 ಅನೀತಿಯಿಂದ ಸತ್ಯವನ್ನು ಅಡ್ಡಿಮಾಡುವವರಾದ ದುಷ್ಟಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆಯ ಮೇಲೆಯೂ, ದುಷ್ಟತನದ ಮೇಲೆಯೂ ದೇವರ ಕೋಪವು ಪರಲೋಕದಿಂದ ಇಳಿದುಬರುತ್ತದೆ, 19 ಯಾಕೆಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದಿದೆ. ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿರುವನು. 20 ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು §ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ. 21 ಯಾಕೆಂದರೆ ದೇವರ ವಿಷಯವಾಗಿ ಅವರಿಗೆ ತಿಳಿವಳಿಕೆಯಿದ್ದರೂ ಅವರು ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ. ಆತನ ಉಪಕಾರಗಳನ್ನು ನೆನಸಿ ಆತನನ್ನು ಸ್ತುತಿಸಲಿಲ್ಲ. *ಅವರು ಎಷ್ಟೇ ವಿಚಾರ ಮಾಡಿದರೂ ಫಲ ಕಾಣಲಿಲ್ಲ. ವಿವೇಕವಿಲ್ಲದ ಅವರ ಮನಸ್ಸು ಕತ್ತಲಾಗಿಬಿಟ್ಟಿದೆ. 22 ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚರಾದರು. 23 ಲಯವಿಲ್ಲದ §ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು.
24 ಆದಕಾರಣ ಅವರು ಮನಸ್ಸಿನ ದುರಾಶೆಗಳಂತೆ ನಡೆದು ತಮ್ಮ ತಮ್ಮ ದೇಹಗಳನ್ನು ತಮ್ಮೊಳಗೆ ಮಾನಹೀನಮಾಡಿಕೊಳ್ಳಲಿ ಎಂದು *ದೇವರು ಅವರನ್ನು ಹೊಲಸಾದ ಕೆಟ್ಟ ನಡತೆಗಳಿಗೆ ಒಪ್ಪಿಸಿಬಿಟ್ಟನು. 25 ಅವರು ಸತ್ಯ ದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿ ಕರ್ತನನ್ನು ಆರಾಧಿಸದೆ ಸೃಷ್ಟಿಯನ್ನೇ ಪೂಜಿಸಿ ಆರಾಧಿಸುವವರಾದರು. ಆದರೆ, ಆತನೇ ನಿರಂತರ ಸ್ತುತಿ ಹೊಂದತಕ್ಕವನು, ಆಮೆನ್. 26 ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗಳಿಗೆ ಒಪ್ಪಿಸಿಬಿಟ್ಟನು. ಅವರ ಹೆಂಗಸರು ಸ್ವಾಭಾವಿಕವಾದ ಭೋಗವನ್ನು ತೊರೆದು ಸ್ವಭಾವಕ್ಕೆ ವಿರುದ್ಧವಾದ ಕಾಮಕೃತ್ಯಗಳನ್ನು ಮಾಡಿದರು. 27 ಅದರಂತೆ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಸಂಗವನ್ನು ತೊರೆದು ತಮ್ಮತಮ್ಮಲಿಯೇ ಕಾಮೋದ್ರೇಕಗೊಂಡರು; ಸಲಿಂಗಕಾಮಿಗಳಾದರು; ಲಜ್ಜಾಹೀನರಾಗಿ ವರ್ತಿಸಿದರು; ತಮ್ಮ ದುರ್ನಡತೆಗೆ ತಕ್ಕ ಶಿಕ್ಷೆಯನ್ನು ತಮ್ಮ ಮೇಲೆ ಬರಮಾಡಿಕೊಂಡರು.
28 ಇದಲ್ಲದೆ ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ಮಾಡಬಾರದ ಕೃತ್ಯಗಳನ್ನು ನಡಿಸುವವರಾಗುವಂತೆ §ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟನು. 29 ಹೇಗೆಂದರೆ ಅವರು ಸಕಲವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ ದುಷ್ಟತ್ವಗಳಿಂದಲೂ ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ, ಹಗೆತನಗಳಿಂದ ತುಂಬಿದವರಾದರು. 30 ಅವರು ಸುಳ್ಳುಸುದ್ದಿ ಹಬ್ಬಿಸುವವರೂ, ಚಾಡಿಹೇಳುವವರೂ, ದೇವರನ್ನು ದ್ವೇಷಿಸುವವರೂ, ಸೊಕ್ಕಿನವರೂ, ಅಹಂಕಾರಿಗಳೂ, ಬಡಾಯಿಕೊಚ್ಚುವವರೂ, ಕೇಡನ್ನು ಕಲ್ಪಿಸುವವರೂ, 31 ತಂದೆತಾಯಿಗಳ ಮಾತನ್ನು ಕೇಳದವರೂ ವಿವೇಕವಿಲ್ಲದವರೂ, ಮಾತಿಗೆ ತಪ್ಪುವವರೂ, ಮಮತೆಯಿಲ್ಲದವರೂ, ಕರುಣೆಯಿಲ್ಲದವರೂ ಆದರು. 32 ಇಂಥವುಗಳನ್ನು ನಡಿಸುವವರು *ಮರಣಕ್ಕೆ ಪಾತ್ರರಾಗಿದ್ದಾರೆಂಬ ದೇವವಿಧಿಯು ಅವರಿಗೆ ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಮಾಡುವವರನ್ನೂ ಹೊಗಳುತ್ತಾ ಪ್ರೇರೇಪಿಸುತ್ತಾರೆ.
* 1:1 1 ಕೊರಿ 1:1; 9:1; 2 ಕೊರಿ 1:1 1:3 1 ಕೊರಿ 1:3, 2 ಕೊರಿ 1:2 1:5 ಅ. ಕೃ. 13:33 § 1:7 ರೋಮಾ. 12:3, 15:15, ಎಫೆ 3:2-3 * 1:8 ರೋಮಾ. 16:19 1:8 1 ಕೊರಿ 1:4, ಎಫೆ 1:16, ಫಿಲಿ. 1:3-4 1:11-12 ರೋಮಾ. 15:22-23 § 1:14 1 ಕೊರಿ 9:16 * 1:16 ಕೀರ್ತ 40:9-10 1:16 1 ಕೊರಿ 18:18,24: 1:16 ಅಂದರೆ ಅನ್ಯಜನರಿಗೆ § 1:17 ದೇವರ ನೀತಿ * 1:17 ಹಬ 2:4, ಗಲಾ. 3:11, ಇಬ್ರಿ. 10:38 1:18 ಎಫೆ 5:6, ಕೊಲೊ 3:6 1:19 ರೋಮಾ. 2:14-15 § 1:20 ಕೀರ್ತ 19:1-6 * 1:21 ಎಫೆ 4:17-18 1:22 1 ಕೊರಿ 1:20 1:23 1 ತಿಮೊ. 1:17 § 1:23 ಕೀರ್ತ 106:20, ಯೆರೆ 2:11, * 1:24 ರೋಮಾ. 1:26,28 1:25 ರೋಮಾ. 9:5 1:26 ರೋಮಾ. 1:24,28 § 1:28 ರೋಮಾ. 1:24,26 * 1:32 ರೋಮಾ. 6:21