4
ಯೆಹೂದನ ವಂಶಾವಳಿ
1 ಯೆಹೂದನ ಸಂತಾನದವರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.
2 ಶೋಬಾಲನ ಮಗನಾದ ರೆವಾಯನು ಯಹತನನ್ನು ಪಡೆದನು. ಯಹತನು ಅಹೂಮೈ ಮತ್ತು ಲಹದ್ ಇವರನ್ನು ಪಡೆದನು. ಇವರು ಚೊರ್ರದ ಕುಟುಂಬದವರು.
3 ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್ ಇವರು ಎಟಾಮಿನವರ ಮೂಲಪುರುಷರು. ಹಚೆಲೆಲ್ಪೋನೀ ಎಂಬವಳು ಇವರ ತಂಗಿ.
4 ಗೆದೋರಿನ ಮೂಲಪುರುಷನು ಪೆನೂವೇಲನು. ಹೂಷಾಹ್ಯರ ಮೂಲಪುರುಷನು ಏಜೆರ್. ಇವರು ಎಫ್ರಾತಾಹಳ ಚೊಚ್ಚಲ ಮಗನಾದ ಹೂರನ ಮಕ್ಕಳು. ಈ ಹೂರನೇ ಬೇತ್ಲೆಹೇಮ್ಯರ ಮೂಲಪುರುಷನು.
5 ತೆಕೋವದವರ ಮೂಲಪುರುಷನಾದ ಅಷ್ಹೂರನಿಗೆ ಹೆಲಾಹ ಮತ್ತು ನಾರ ಎಂಬ ಇಬ್ಬರು ಹೆಂಡತಿಯರಿದ್ದರು.
6 ಅಹುಜ್ಜಾಮ್, ಹೇಫೆರ್ ತೇಮಾನ್ಯರೂ ಮತ್ತು ಅಹಷ್ಟಾರ್ಯರೂ ಎಂಬುವವರು ನಾರಳ ಸಂತಾನದವರು.
7 ಹೆಲಾಹಳ ಮಕ್ಕಳು: ಚೆರೆತ್ ಇಚ್ಹಾರ್ ಮತ್ತು ಎತ್ನಾನ್ ಎಂಬುವವರು.
8 ಕೋಚನಿಂದ ಅನೂಬ್ ಮತ್ತು ಚೊಬೇಬ್ ಹುಟ್ಟಿದರು. ಅಹರ್ಹೇಲನು ಹಾರುಮನ ಮಗನು. ಕೋಚನು ಇವರ ವಂಶದ ಮೂಲ ಪುರುಷ.
9 ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಗೌರವವುಳ್ಳವನಾಗಿದ್ದನು. ಇವನನ್ನು ಬಹು ವೇದನೆಯಿಂದ ಹೆತ್ತೆನೆಂದು ಇವನ ತಾಯಿ ಇವನಿಗೆ ಯಾಬೇಚನೆಂದು ಹೆಸರಿಟ್ಟಳು.
10 ಯಾಬೇಚನು ಇಸ್ರಾಯೇಲಿನ ದೇವರಿಗೆ, “ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ, ನನ್ನ ಪ್ರಾಂತ್ಯವನ್ನು ವಿಸ್ತರಿಸಿ, ನಿನ್ನ ಕೃಪಾಹಸ್ತದಲ್ಲಿ ನನ್ನನ್ನು ಇರಿಸಿ ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ಕೇಡಿನಿಂದ ರಕ್ಷಿಸಬಾರದೇ?” ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು.
11 ಶೂಹನ ಸಹೋದರನಾದ ಕೆಲೂಬನು ಮೆಹೀರನನ್ನು ಪಡೆದನು. ಮೆಹೀರನು ಎಷ್ಟೋನನ ತಂದೆ.
12 ಎಷ್ಟೋನನಿಂದ ಬೇತ್ರಾಫ, ಪಾಸೇಹ, ತೆಹಿನ್ನ ಎಂಬ ಮೂರು ಗಂಡು ಮಕ್ಕಳಿದ್ದರು. ಇವರು ರೇಕಾಹ್ಯರು. ತೆಹಿನ್ನನು ನಾಹಷ್ ಪಟ್ಟಣದವರ ಮೂಲಪುರುಷನು.
13 ಕೆನಜನ ಮಕ್ಕಳು ಒತ್ನೀಯೇಲ್ ಮತ್ತು ಸೆರಾಯ ಎಂಬುವವರು. ಒತ್ನೀಯೇಲನ ಮಕ್ಕಳು ಹತತ್ ಮತ್ತು ಮೆಯೋನೋತೈ.
14 ಮೆಯೋನೊತೈಯು ಒಫ್ರಾಹನನ್ನು ಪಡೆದನು. ಸೆರಾಯನು ಶಿಲ್ಪಿಗಳಾದ ಗೇಹರಾಷೀಮ್ಯರ ಮೂಲಪುರುಷನಾದ ಯೋವಾಬನನ್ನು ಪಡೆದನು.
15 ಯೆಫುನ್ನೆಯ ಮಗನಾದ ಕಾಲೇಬನ ಸಂತಾನದವರು ಈರು, ಏಲಹ್ ಮತ್ತು ನಾಮ್. ಏಲನ ಮಗನಾದ ಕೆನಜ್.
16 ಯೆಹಲ್ಲೆಲೇಲನ ಮಕ್ಕಳು: ಜೀಫ್, ಜೀಫಾ, ತೀರ್ಯ ಮತ್ತು ಅಸರೇಲ್ ಎಂಬುವವರು.
17 ಎಜ್ರನ ಮಕ್ಕಳು: ಯೆತೆರ್, ಮೆರೆದ್, ಏಫೆರ್ ಮತ್ತು ಯಾಲೋನ್ ಎಂಬುವವರು. ಮೆರೆದನು ಫರೋಹನ ಮಗಳಾದ ಬಿತ್ಯೆಳನ್ನು ಮದುವೆಮಾಡಿಕೊಂಡನು. ಈಕೆಯು ಅವನಿಂದ ಗರ್ಭಿಣಿಯಾಗಿ ಮಿರ್ಯಾಮ್, ಶಮ್ಮೈ, ಎಷ್ಟೆಮೋವದವರ ಮೂಲಪುರುಷನಾದ ಇಷ್ಬಹ ಇವರನ್ನು ಹೆತ್ತಳು.
18 ಯೆಹೂದ್ಯಳಾದ ಅವನ ಇನ್ನೊಬ್ಬ ಹೆಂಡತಿಯು ಗೆದೋರ್ಯರ ಮೂಲಪುರುಷನಾದ ಯೆರೆದ್, ಸೋಕೋವಿನವರ ಮೂಲಪುರುಷನಾದ ಹೆಬೆರ್ ಮತ್ತು ಜಾನೋಹದವರ ಮೂಲಪುರುಷನಾದ ಯೆಕೂತೀಯೇಲ್ ಇವರನ್ನು ಹೆತ್ತಳು.
19 ನಹಮನ ತಂಗಿಯೂ, ಹೋದೀಯನ ಹೆಂಡತಿಯ ಇಬ್ಬರು ಮಕ್ಕಳಲ್ಲಿ ಒಬ್ಬನು ಗರ್ಮ್ಯದ ಕೆಯೀಲದವರ ಮೂಲಪುರುಷನಾದನು, ಮತ್ತೊಬ್ಬನು ಎಷ್ಟೆಮೋವದವರ ಮಾಕಾತ್ಯ ಸಂತಾನದ ಮೂಲಪುರುಷನಾದನು.
20 ಶೀಮೋನನ ಮಕ್ಕಳು: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್. ಇಷ್ಷೀಯನ ಮಕ್ಕಳು: ಜೋಹೇತ್ ಮತ್ತು ಬೆನ್ಜೊಹೇತ್.
21 ಯೆಹೂದನ ಮಗನಾದ ಶೇಲಹನ ಸಂತಾನದವರು: ಲೇಕಾಹ್ಯರ ಮೂಲಪುರುಷನಾದ ಏರ್, ಮರೇಷದವರ ಮೂಲಪುರುಷನಾದ ಲದ್ದ, ಬೇತಷ್ಬೇಯದಲ್ಲಿರುವ ನೇಯಿಗಾರರ ಕುಟುಂಬಗಳವರು,
22 ಯೊಕೀಮನು ಕೋಜೇಬದವರು ಮೋವಾಬ್ ದೇಶದಲ್ಲಿ ದೊರೆತನ ನಡಿಸಿ ಬೇತ್ಲೆಹೇಮಿಗೆ ತಿರುಗಿ ಬಂದ ಯೋವಾಷ್ ಮತ್ತು ಸಾರಾಫ್ ಇವರೇ. (ಇವು ಪೂರ್ವಕಾಲದಲ್ಲಿ ನಡೆದ ಸಂಗತಿಗಳು.)
23 ಮೇಲೆ ಕಂಡ ಜನರು ಕುಂಬಾರರು. ಅವರು ನೆಟಾಯಿಮ್ ಮತ್ತು ಗೆದೇರ ಎಂಬ ಊರುಗಳಲ್ಲಿ ವಾಸಿಸುತ್ತಾ ಅರಸನ ಸೇವೆಯನ್ನು ಮಾಡುತ್ತಿದ್ದರು.
ಸಿಮೆಯೋನನ ವಂಶಾವಳಿ
24 ಸಿಮೆಯೋನನ ಮಕ್ಕಳು: ನೆಮೂವೇಲ್, ಯಾಮೀನ್, ಯಾರೀಬ್, ಜೆರಹ ಮತ್ತು ಸೌಲ.
25 ಸೌಲನ ಮಗ ಶಲ್ಲುಮ್. ಇವನ ಮಗ ಮಿಬ್ಸಾಮ್. ಮಿಬ್ಸಾಮನ ಮಗ ಮಿಷ್ಮ.
26 ಮಿಷ್ಮಾನ ಸಂತಾನದವರು: ಇವನ ಮಗ ಹಮ್ಮೂವೇಲ್, ಇವನ ಮೊಮ್ಮಗ ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ.
27 ಶಿಮ್ಮೀಗೆ ಹದಿನಾರು ಜನರು ಗಂಡು ಮಕ್ಕಳೂ ಮತ್ತು ಆರು ಜನರು ಹೆಣ್ಣು ಮಕ್ಕಳೂ ಇದ್ದರು. ಅವನ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಆದುದರಿಂದ ಅವರ ಕುಲವು ಯೆಹೂದ ಕುಲದಷ್ಟು ಅಭಿವೃದ್ಧಿಯಾಗಲಿಲ್ಲ.
28 ದಾವೀದನ ಆಳ್ವಿಕೆಯ ತನಕ ಅವರು ವಾಸವಾಗಿದ್ದ ಪಟ್ಟಣಗಳು ಇವು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ,
29 ಬಿಲ್ಹ, ಎಚೆಮ್, ತೋಲಾದ್,
30 ಬೆತೂವೇಲ್, ಹೊರ್ಮ, ಚಿಕ್ಲಗ್,
31 ಬೇತ್ ಮರ್ಕಾಬೋತ್, ಹಚರ್ ಸೂಸೀಮ್, ಬೆತ್ ಬಿರೀ ಮತ್ತು ಶಾರಯಿಮ್.
32 ಇವುಗಳಲ್ಲಿ ಸೇರಿದ ಐದು ಗ್ರಾಮಗಳು ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್.
33 ಅವುಗಳ ಸುತ್ತಣ ಪ್ರದೇಶದಲ್ಲಿ ಬಾಲ್ ಊರಿನ ವರೆಗಿರುವ ಗ್ರಾಮಗಳೂ ಅವರ ನಿವಾಸಸ್ಥಾನಗಳಾಗಿದ್ದವು. ಅವರು ವಂಶಾವಳಿಯ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು.
34 ಮೆಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ,
35 ಯೋವೇಲ್, ಯೊಷಿಬ್ಯನ ಮಗನೂ, ಸೆರಾಯನ ಮೊಮ್ಮಗನೂ, ಅಸಿಯೇಲನ ಮರಿಮಗನೂ ಆಗಿರುವ ಯೇಹೂ,
36 ಎಲ್ಯೋವೇನೈ, ಯಾಕೋಬ, ಯೆಷೋಹಾಯ, ಅಸಾಯ, ಅದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು
37 ಶೆಮಾಯನ ಮಗನಾದ ಶಿಮ್ರಿಯಿಂದ ಹುಟ್ಟಿದ ಯೆದಾಯನ ಮರಿಮಗನೂ, ಅಲ್ಲೋನನ ಮೊಮ್ಮಗನೂ, ಶಿಪ್ಫಿಯ ಮಗನು ಆದ ಜೀಜ ಎಂಬ ಹೆಸರುಳ್ಳವರು ತಮ್ಮ ತಮ್ಮ ಗೋತ್ರಗಳಲ್ಲಿ ಪ್ರಮುಖರಾಗಿದ್ದರು.
38 ಅವರ ಕುಟುಂಬಗಳು ಬೆಳೆಯುತ್ತಾ ಅಭಿವೃದ್ಧಿಯಾದವು.
39 ಅವರು ತಮ್ಮ ಆಡು, ಕುರಿಗಳಿಗೋಸ್ಕರ ಹುಲ್ಲುಗಾವಲುಗಳನ್ನು ಹುಡುಕುತ್ತಾ ಗೆದೋರಿಗೆ ಹೋಗುವ ಕಣಿವೆಯನ್ನು ದಾಟಿ, ಆಚೆಯ ತಗ್ಗಿನ ಪೂರ್ವದಿಕ್ಕಿಗೆ ಹೋದಾಗ ಅಲ್ಲಿ ಶ್ರೇಷ್ಠವಾದ ಹಸಿರು ಹುಲ್ಲುಗಾವಲುಗಳನ್ನು ಕಂಡರು.
40 ದೇಶವು ಎಲ್ಲಾ ಕಡೆಗಳಲ್ಲಿ ವಿಸ್ತಾರವಾಗಿದ್ದು ಸುಖ ಸಮಾಧಾನಗಳಿಂದ ಕೂಡಿತ್ತು. ಅಲ್ಲಿ ಮೊದಲಿನಿಂದಲೂ ವಾಸವಾಗಿದ್ದವರು ಹಾಮ್ಯರೇ.
41 ಮೇಲೆ ಹೇಳಿದ ಪ್ರಭುಗಳು ಯೆಹೂದ ರಾಜನಾದ ಹಿಜ್ಕೀಯನ ಕಾಲದಲ್ಲಿ ಅಲ್ಲಿಗೆ ಹೋಗಿ ಆ ಹಾಮ್ಯರ ಪಾಳೆಯಗಳನ್ನೂ, ಅಲ್ಲಿ ಸಿಕ್ಕಿದ ಮೆಗೂನ್ಯರನ್ನೂ ಗೆದ್ದು, ಎಲ್ಲರನ್ನೂ ನಿರ್ನಾಮಮಾಡಿದರು. ಅವರು ತಮ್ಮ ಆಡುಕುರಿಗಳಿಗೆ ಅಲ್ಲಿ ಮೇವು ಸಿಕ್ಕಿದ್ದರಿಂದ ಅಲ್ಲೇ ವಾಸಿಸಿದರು. ಅಲ್ಲಿನ ಮೂಲನಿವಾಸಿಗಳು ಯಾರೂ ಉಳಿಯಲಿಲ್ಲ.
42 ಇದಲ್ಲದೆ ಸಿಮೆಯೋನನ ಕುಲದ ಐನೂರು ಜನರು ಸೇಯೀರ್ ಪರ್ವತಕ್ಕೆ ಹೋದರು. ಇಷ್ಷೀಯ ಮಕ್ಕಳಾದ ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್ ಎಂಬುವವರು ಅವರ ಮುಖ್ಯಸ್ಥರು.
43 ಅವರು ಅಮಾಲೇಕ್ಯರಲ್ಲಿ ಉಳಿದವರನ್ನು ಸಂಹರಿಸಿ ಅಲ್ಲೇ ನೆಲೆಸಿದರು.