15
ಯೆಹೋವನ ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು
1 ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವರ ಮಂಜೂಷಕ್ಕಾಗಿಯೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು.
2 ಆ ಕಾಲದಲ್ಲಿ ದಾವೀದನು, “ಲೇವಿಯರ ಹೊರತಾಗಿ ಯಾರೂ ಮಂಜೂಷವನ್ನು ಹೊರಬಾರದು, ಅದನ್ನು ಹೊರುವುದಕ್ಕೂ, ಸದಾಕಾಲ ತನ್ನ ಸೇವೆಮಾಡುವುದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆ” ಎಂದು ಹೇಳಿದನು.
3 ಅನಂತರ ದಾವೀದನು ಯೆಹೋವನ ಮಂಜೂಷವನ್ನು ತಾನು ಸಿದ್ಧಮಾಡಿದ ಸ್ಥಳಕ್ಕೆ ತರುವುದಕ್ಕೋಸ್ಕರ ಎಲ್ಲಾ ಇಸ್ರಾಯೇಲರನ್ನು ಯೆರೂಸಲೇಮಿಗೆ ಕರೆಯಿಸಿದನು.
4 ದಾವೀದನು ಕರೆಯಿಸಿದ ಆರೋನನ ವಂಶದವರು, ಲೇವಿಯರು,
5 ಕೆಹಾತ್ಯರಲ್ಲಿ ಊರೀಯೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರಿಪ್ಪತ್ತು ಜನರು,
6 ಮೆರಾರೀಯರಲ್ಲಿ ಅಸಾಯನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಇನ್ನೂರಿಪ್ಪತ್ತು ಜನರು,
7 ಗೇರ್ಷೋಮ್ಯರಲ್ಲಿ ಯೋವೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರಮೂವತ್ತು ಜನರು,
8 ಎಲೀಚಾಫಾನ್ಯರಲ್ಲಿ ಶೆಮಾಯನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಇನ್ನೂರು ಜನರು,
9 ಹೆಬ್ರೋನ್ಯರಲ್ಲಿ ಎಲೀಯೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಎಂಭತ್ತು ಜನರು
10 ಉಜ್ಜೀಯೇಲ್ಯರಲ್ಲಿ ಅಮ್ಮೀನಾದಾಬನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರ ಹನ್ನೆರಡು ಜನರೊಂದಿಗೆ ಬಂದನು.
11 ಆ ಮೇಲೆ ದಾವೀದನು ಚಾದೋಕ್, ಎಬ್ಯಾತಾರ್ ಎಂಬ ಯಾಜಕರನ್ನೂ, ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್ ಎಂಬ ಲೇವಿಯರನ್ನು ಕರೆದು ಅವರಿಗೆ, “ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವು,
12 ನಿಮ್ಮ ಸಹೋದರರೂ ನಿಮ್ಮನ್ನು ಶುದ್ಧಿಪಡಿಸಿಕೊಂಡು, ಇಸ್ರಾಯೇಲರ ದೇವರಾದ ಯೆಹೋವನ ಮಂಜೂಷವನ್ನು ನಾನು ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬನ್ನಿರಿ.
13 ನೀವು ಮೊದಲನೆಯ ಸಾರಿ ಇರಲಿಲ್ಲವಾದುದರಿಂದ ನಮ್ಮ ದೇವರಾದ ಯೆಹೋವನು ತನ್ನ ಸನ್ನಿಧಿಗೆ ಧರ್ಮವಿಧಿ ವಿರೋಧವಾಗಿ ನಮ್ಮಲ್ಲಿಗೆ ಬಂದ ಒಬ್ಬನನ್ನು ಸಂಹರಿಸಿದನು” ಎಂದು ಹೇಳಿದನು.
14 ಆಗ ಯಾಜಕರೂ ಮತ್ತು ಲೇವಿಯರೂ ಇಸ್ರಾಯೇಲರ ದೇವರಾದ ಯೆಹೋವನ ಮಂಜೂಷವನ್ನು ತರುವುದಕ್ಕೋಸ್ಕರ ತಮ್ಮನ್ನು ಶುದ್ಧಪಡಿಸಿಕೊಂಡರು.
15 ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾನುಸಾರವಾಗಿ ಲೇವಿಯರು ದೇವರ ಮಂಜೂಷವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದರು.
16 ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು.
17 ಆಗ ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬುವರನ್ನಲ್ಲದೆ,
18 ತಮ್ಮ ಸಹೋದರರೊಳಗೆ ಎರಡನೆಯ ದರ್ಜೆಯವರಾದ ಜೆಕರ್ಯ, ಬೇನ್, ಯಾಜೀಯೇಲ್ ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ ಎಲೀಫೆಲೇಹು, ಮಿಕ್ನೇಯ ದ್ವಾರಪಾಲಕರಾದ ಓಬೇದೆದೋಮ ಮತ್ತು ಯೆಗೀಯೇಲ್ ಇವರನ್ನು ನೇಮಿಸಿದನು.
19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಬಾರಿಸಿವವರು.
20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್,, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಎಂಬುವವರು ತಾರಕಸ್ಥಾಯಿಯ ಸ್ವರಮಂಡಲಗಳನ್ನು ಬಾರಿಸುವವರು.
21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ದ್ವಾರಪಾಲಕರಾದ ಓಬೇದೆದೋಮ ಯೆಗೀಯೇಲರು ಅಹಜ್ಯ ಎಂಬವರು ಗಾಯಕ ನಾಯಕರಾಗಿದ್ದು ಮಂದರಸ್ಥಾಯಿಯ ಕಿನ್ನರಿಗಳನ್ನು ನುಡಿಸುವವರನ್ನು ನೆಮಿಸಿಕೊಂಡನು.
22 ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಲೇವಿಯರಲ್ಲಿ ನಾಯಕನೂ ಆಗಿದ್ದ ಕೆನನ್ಯನು ಮಂಜೂಷ ಹೊತ್ತವರಿಗೆ ಮೇಲ್ವಿಚಾರಕನಾಗಿದ್ದನು.
23 ಬೆರೆಕ್ಯ ಮತ್ತು ಎಲ್ಕಾನ ಇವರು ಮಂಜೂಷದ ದ್ವಾರಪಾಲಕರಾಗಿದ್ದರು.
24 ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಎಂಬ ಯಾಜಕರು ತುತ್ತೂರಿಗಳನ್ನು ಊದುತ್ತಾ ದೇವ ಮಂಜೂಷದ ಮುಂದೆ ಹೋಗುವವರು. ಓಬೇದೆದೋಮ್ ಮತ್ತು ಯೆಹೀಯ ಎಂಬುವವರು ಮಂಜೂಷದ ದ್ವಾರಪಾಲಕರಾಗಿದ್ದರು.
25 ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಮತ್ತು ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ಒಡಂಬಡಿಕೆ ಮಂಜೂಷವನ್ನು ಉತ್ಸಾಹದಿಂದ ತರುತ್ತಿರುವಾಗ,
26 ಯೆಹೋವನ ಒಡಂಬಡಿಕೆ ಮಂಜೂಷವನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದ್ದರಿಂದ ಏಳು ಹೋರಿಗಳನ್ನೂ ಮತ್ತು ಏಳು ಟಗರುಗಳನ್ನೂ ಯಜ್ಞಮಾಡಿದರು.
27 ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯನುಡಿಸುವ ಎಲ್ಲಾ ಲೇವಿಯರೂ, ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದನು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು.
28 ಹೀಗೆ ಎಲ್ಲಾ ಇಸ್ರಾಯೇಲರು ಆನಂದ ಘೋಷಣೆಗಳಿಂದಲೂ, ಕೊಂಬು ಮತ್ತು ತುತ್ತೂರಿಗಳನ್ನು, ತಾಳ, ತಂತಿ ವಾದ್ಯಗಳ ಸಂಗೀತದಿಂದ ತಾಳಹಾಕುತ್ತಾ ಕಿನ್ನರಿ ಸ್ವರಮಂಡಲಗಳನ್ನು ನುಡಿಸುತ್ತಾ, ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತಂದರು.
29 ಯೆಹೋವನ ಒಡಂಬಡಿಕೆ ಮಂಜೂಷವು ದಾವೀದನ ನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿನೋಡಿ ದಾವೀದನು ಜಿಗಿಯುತ್ತಾ, ಕುಣಿಯುತ್ತಾ, ನೃತ್ಯಮಾಡುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.