82
ಅನೀತಿವಂತರಾದ ಅಧಿಪತಿಗಳಿಗೆ ನ್ಯಾಯ ವಿಧಿಸುವ ದೇವರು
ಆಸಾಫನ ಕೀರ್ತನೆ.
ಕೀರ್ತ 58
ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ,
ದೇವರುಗಳೆಂದು *ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ.
“ನೀವು ಅನ್ಯಾಯವಾಗಿ ತೀರ್ಪುಕೊಡುವುದೂ,
ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ?
ಸೆಲಾ.
ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ,
ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ.
ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.”
ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ.
ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ.
“ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,
ಆದರೂ ನರರಂತೆ ಸತ್ತೇ ಹೋಗುವಿರಿ,
ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ”
ಎಂದು ನಾನು ಹೇಳಿದೆನು.
ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು.
ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ?
* 82:1 ದೇವರುಗಳೆಂದು ಅಥವಾ ದೇವದೂತರು ಅಥವಾ ಪರಲೋಕದಲ್ಲಿ ದೇವರನ್ನು ಆರಾಧಿಸುವವರು.