64
ಸಂರಕ್ಷಣೆಗಾಗಿ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ದೇವರೇ, ನನ್ನ ಸ್ವರವನ್ನು ಕೇಳಿ,
ಶತ್ರುಭಯದಿಂದ ನನ್ನ ಜೀವವನ್ನು ರಕ್ಷಿಸು.
ದುಷ್ಟರ ಒಳಸಂಚಿಗೂ, ಕೆಡುಕರ ಗುಪ್ತ ಆಲೋಚನೆಗೂ ಸಿಕ್ಕದಂತೆ,
ನನ್ನನ್ನು ತಪ್ಪಿಸಿ ಭದ್ರಪಡಿಸು.
ಅವರು ನಾಲಿಗೆಯೆಂಬ ಕತ್ತಿಯನ್ನು ಮಸೆದಿದ್ದಾರೆ;
ವಿಷವಚನವೆಂಬ ಬಾಣವನ್ನು ಹೂಡಿದ್ದಾರೆ.
ಗುಪ್ತಸ್ಥಳಗಳಲ್ಲಿದ್ದು ಸಜ್ಜನನಿಗೆ ಗುರಿಯಿಟ್ಟಿದ್ದಾರೆ.
ಸ್ವಲ್ಪವೂ ಹೆದರದೆ ಅವನ ಮೇಲೆ ಫಕ್ಕನೆ ಎಸೆಯುತ್ತಾರೆ.
ದುಷ್ಕೃತ್ಯಕ್ಕಾಗಿ ಮನಸ್ಸನ್ನು ದೃಢಪಡಿಸಿಕೊಂಡು
ತಮ್ಮೊಳಗೆ, “ರಹಸ್ಯವಾಗಿ ಬಲೆಗಳನ್ನು ಒಡ್ಡೋಣ;
ನಮ್ಮನ್ನು* ನೋಡುವವರು ಯಾರು?” ಅಂದುಕೊಳ್ಳುತ್ತಾರೆ.
ಅವರು, “ಕೇಡನ್ನು ಕಲ್ಪಿಸಿ, ಒಳ್ಳೆಯ ಉಪಾಯವನ್ನು ಕಂಡುಕೊಂಡಿದ್ದೇವೆ” ಅಂದುಕೊಳ್ಳುತ್ತಾರೆ;
ಅವರ ಹೃದಯವೂ, ಅಂತರಂಗದ ಆಲೋಚನೆಯೂ ಅಶೋಧ್ಯವಾಗಿವೆ.
ಆದರೆ ದೇವರು ಬಾಣವನ್ನು ಎಸೆಯಲು,
ಫಕ್ಕನೆ ಅವರಿಗೆ ಗಾಯವಾಗುವುದು.
ಅವರ ನಾಲಿಗೆಗಳೇ ಅವರಿಗೆ ವಿಘ್ನವಾಗಿ ಅವರು ಎಡವಿಬೀಳುವರು;
ಆಗ ನೋಡುವವರೆಲ್ಲರು ತಲೆ ಅಲ್ಲಾಡಿಸಿ ಅಣಕಿಸುವರು.
ಎಲ್ಲಾ ಮನುಷ್ಯರು ಭಯಪಟ್ಟು ದೇವರ ಕೆಲಸವೆಂದು ಹೇಳಿ,
ಆತನ ಕೃತ್ಯಗಳನ್ನು ಆಲೋಚಿಸಿಕೊಳ್ಳುವರು.
10 ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು;
ಸರಳಹೃದಯದವರೆಲ್ಲರೂ ಹಿಗ್ಗುವರು.
* 64:5 ನಮ್ಮನ್ನು ಅಥವಾ ಅವರನ್ನು.