22
ಘೋರಬಾಧೆಪಟ್ಟ ಭಕ್ತನ ಮನಃಪೂರ್ವಕ ಪ್ರಾರ್ಥನೆ
(ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಉದಯದ ಜಿಂಕೆ ಎಂಬ ರಾಗದ ಮೇಲೆ ಹಾಡತಕ್ಕದ್ದು; ದಾವೀದನ ಕೀರ್ತನೆ.)
ಕೀರ್ತ 69; 71; 102; ಯೆಶಾ 55
1 ನನ್ನ ದೇವರೇ, ನನ್ನ ದೇವರೇ, ಏಕೆ ನನ್ನನ್ನು ಕೈಬಿಟ್ಟಿದ್ದೀ?
ನೀನು ಏಕೆ ನನಗೆ ಸಹಾಯಮಾಡದೆಯೂ, ನನ್ನ ಕೂಗನ್ನು ಕೇಳದೆಯೂ ದೂರವಾಗಿದ್ದೀ?
2 ನನ್ನ ದೇವರೇ, ಹಗಲಿನಲ್ಲಿ ಮೊರೆಯಿಡುತ್ತೇನೆ; ಪ್ರತ್ಯುತ್ತರವೇ ಇಲ್ಲ;
ರಾತ್ರಿಯಲ್ಲಿಯೂ ನನಗೆ ಉಪಶಮನವಿಲ್ಲ.
3 ಇಸ್ರಾಯೇಲರ ಸ್ತೋತ್ರಸಿಂಹಾಸನದಲ್ಲಿ ಇರುವಾತನೇ,
ನೀನು ಪವಿತ್ರಸ್ವರೂಪನು.
4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟರು;
ನಿನ್ನನ್ನು ನಂಬಿ ಉದ್ಧಾರವಾದರು.
5 ನಿನಗೆ ಮೊರೆಯಿಟ್ಟು ವಿಮುಕ್ತರಾದರು;
ನಿನ್ನಲ್ಲಿ ವಿಶ್ವಾಸವಿಟ್ಟು ಆಶಾಭಂಗಪಡಲಿಲ್ಲ.
6 ನಾನಾದರೋ ಹುಳದಂಥವನೇ ಹೊರತು ಮನುಷ್ಯನಲ್ಲ;
ಮನುಷ್ಯರಿಂದ ನಿಂದಿಸಲ್ಪಟ್ಟು ಜನರಿಂದ ತಿರಸ್ಕಾರ ಹೊಂದಿದ್ದೇನೆ.
7 ನನ್ನನ್ನು ನೋಡುವವರೆಲ್ಲರೂ ಹಾಸ್ಯಮಾಡುತ್ತಾರೆ;
ಅವರು ಓರೇ ತುಟಿ ಮಾಡಿ ತಲೆ ಆಡಿಸುತ್ತಾ,
8 “ಯೆಹೋವನು ತನ್ನನ್ನು ರಕ್ಷಿಸುವನೆಂದು ಆತನಲ್ಲಿ ಭರವಸವಿಟ್ಟಿದ್ದಾನಲ್ಲಾ;
ಆತನು ಇವನನ್ನು ಮೆಚ್ಚಿದ್ದಾದರೆ ರಕ್ಷಿಸಲಿ” ಎಂದು ಹೇಳುತ್ತಾರೆ.
9 ತಾಯಿಯ ಗರ್ಭದೊಳಗಿಂದ ನನ್ನನ್ನು ಬರಮಾಡಿದವನು ನೀನೇ ಅಲ್ಲವೇ.
ತಾಯಿಯ ಎದೆಯಲ್ಲಿ ನನ್ನನ್ನು ನಿಶ್ಚಿಂತೆಯಿಂದ ಇರಿಸಿದವನು ನೀನೇ ಅಲ್ಲವೇ.
10 ಹುಟ್ಟಿದಂದಿನಿಂದ ನೀನೇ ನನಗೆ ಆಧಾರ;
ತಾಯಿ ಹೆತ್ತಂದಿನಿಂದ ನನ್ನ ದೇವರು ನೀನೇ.
11 ನನಗೀಗ ಕಷ್ಟವು ಪ್ರಾಪ್ತವಾಗಿದೆ;
ಸಹಾಯಕರು ಯಾರೂ ಇಲ್ಲ, ದೂರವಾಗಿರಬೇಡ.
12 ಬಹಳ ಗೂಳಿಗಳು ನನ್ನನ್ನು ಸುತ್ತಿಕೊಂಡಿವೆ;
ಬಾಷಾನಿನ ಬಲವುಳ್ಳ ಹೋರಿಗಳು ನನ್ನನ್ನು ಮುತ್ತಿಕೊಂಡಿವೆ.
13 ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವುದಕ್ಕೆ ಬಾಯಿ ತೆರೆದಿದ್ದಾರೆ.
14 ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ;
ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿದೆ.
ನನ್ನ ಹೃದಯ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.
15 ನನ್ನ ಶಕ್ತಿಯು ಬೋಕಿಯ ಹಾಗೆ ಒಣಗಿಹೋಗಿದೆ;
ನನ್ನ ನಾಲಿಗೆಯು ಬಾಯಿಯ ಅಂಗಳಕ್ಕೆ ಹತ್ತಿಹೋಗಿದೆ.
ನೀನು ನನ್ನನ್ನು ಮಣ್ಣಿಗೆ ಸೇರಿಸುತ್ತೀ.
16 ನಾಯಿಗಳು ನನ್ನನ್ನು ಸುತ್ತಿಕೊಂಡಿವೆ;
ದುಷ್ಟರ ಗುಂಪು ನನ್ನನ್ನು ಆವರಿಸಿಕೊಂಡಿದೆ.
ನನ್ನ ಕೈಕಾಲುಗಳನ್ನು ತಿವಿದಿದ್ದಾರೆ.
17 ನನ್ನ ಎಲುಬುಗಳನ್ನೆಲ್ಲಾ ಎಣಿಸುವುದಕ್ಕಾಗುವುದು;
ಅವರೋ ನನ್ನನ್ನು ನೋಡಿ ನೋಡಿ ಹಿಗ್ಗುತ್ತಾರೆ.
18 ನನ್ನ ಮೇಲ್ಹೊದಿಕೆಯನ್ನು ತಮ್ಮಲ್ಲಿ ಪಾಲು ಮಾಡಿಕೊಳ್ಳುತ್ತಾರೆ;
ನನ್ನ ಅಂಗಿಗಾಗಿ ಚೀಟುಹಾಕುತ್ತಾರೆ.
19 ಯೆಹೋವನೇ, ನನ್ನ ರಕ್ಷಕನೇ, ನೀನಾದರೋ ದೂರವಾಗಿರಬೇಡ;
ಬೇಗ ಬಂದು ಸಹಾಯಮಾಡು.
20 ಕತ್ತಿಗೆ ಸಿಕ್ಕದಂತೆ ನನ್ನನ್ನು ತಪ್ಪಿಸು;
ನನ್ನ ಪ್ರಿಯ ಪ್ರಾಣವು ನಾಯಿಯ ವಶವಾಗದಂತೆ ಕಾಪಾಡು.
21 ಸಿಂಹಗಳ ಬಾಯಿಂದ ರಕ್ಷಿಸು, ಕಾಡುಕೋಣಗಳ ಕೊಂಬುಗಳಿಂದ ನನ್ನನ್ನು ತಪ್ಪಿಸು.
22 ನಿನ್ನ ನಾಮ ಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು;
ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
23 ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ;
ಯಾಕೋಬ ವಂಶದವರೇ, ನೀವೆಲ್ಲರೂ ಆತನನ್ನು ಕೊಂಡಾಡಿರಿ.
ಇಸ್ರಾಯೇಲ್ ವಂಶಸ್ಥರೇ, ನೀವೆಲ್ಲರೂ ಆತನಲ್ಲಿ ಭಯಭಕ್ತಿಯುಳ್ಳವರಾಗಿರಿ.
24 ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ,
ಅದಕ್ಕೆ ಅಸಹ್ಯಪಡಲಿಲ್ಲ;
ತನ್ನ ಮುಖವನ್ನು ಅವನಿಗೆ ಮರೆಮಾಡದೆ,
ಅವನ ಪ್ರಾರ್ಥನೆಗೆ ಕಿವಿಗೊಟ್ಟನು.
25 ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ದೀನರು ಉಂಡು ತೃಪ್ತರಾಗುವರು;
ಯೆಹೋವನ ಭಕ್ತರೆಲ್ಲರೂ ಆತನನ್ನು ಕೊಂಡಾಡುವರು.
ಅವರ ಅಂತರಾತ್ಮವು ಯಾವಾಗಲು ಚೈತನ್ಯವುಳ್ಳದ್ದಾಗಿರಲಿ.
27 ಭೂಮಂಡಲದವರೆಲ್ಲರೂ ಎಚ್ಚರಗೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳುವರು;
ಯೆಹೋವನೇ, ಎಲ್ಲಾ ಜನಾಂಗಗಳವರು ನಿನಗೆ ಅಡ್ಡಬೀಳುವರು.
28 ರಾಜ್ಯವು ಯೆಹೋವನದೇ;
ಎಲ್ಲಾ ಜನಾಂಗಗಳಿಗೂ ಆತನೇ ಒಡೆಯನು.
29 ಭೂಲೋಕದಲ್ಲಿರುವ ಪುಷ್ಟರೆಲ್ಲರೂ ಆರಾಧಿಸುವರು;
ತಮ್ಮ ಜೀವವನ್ನು ಉಳಿಸಿಕೊಳ್ಳಲಾರದೆ ಮಣ್ಣು ಪಾಲಾಗುವವರೆಲ್ಲರೂ ಆತನಿಗೆ ಅಡ್ಡಬೀಳುವರು.
30 ಆತನನ್ನು ಸೇವಿಸುವವರ ಸಂತಾನದವರು
ಯೆಹೋವನ ಸಂತಾನದವರೆಂದು ಎಣಿಸಲ್ಪಡವರು.
31 ಅವರು ಬಂದು ಆತನ ನೀತಿಯನ್ನೂ,
ಆತನು ನಡೆಸಿದ ಕಾರ್ಯಗಳನ್ನೂ ಮುಂದೆ ಹುಟ್ಟುವ ಜನಕ್ಕೆ ತಿಳಿಸುವರು.