2
ಯೆಹೋವನಿಂದ ಅಭಿಷೇಕಿಸಲ್ಪಟ್ಟವನ ಸರ್ವಾಧಿಪತ್ಯ
1 ಅನ್ಯಜನಾಂಗಗಳು ದಂಗೆಗೆ ಏಳುವುದೂ,
ಜನಾಂಗಗಳು ವ್ಯರ್ಥಕಾರ್ಯಗಳನ್ನು ಯೋಚಿಸುವುದೂ ಏಕೆ?
2 ಅರಸರು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ.
ದೇಶಾಧಿಪತಿಗಳು ಯೆಹೋವನಿಗೂ ಮತ್ತು ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರುದ್ಧವಾಗಿ ಸನ್ನದ್ಧರಾಗಿ ನಿಂತಿದ್ದಾರೆ,
3 “ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತುಹಾಕಿ,
ಬೇಡಿಗಳನ್ನು ಮುರಿದು ಬಿಸಾಡೋಣ” ಎಂದು ಮಾತನಾಡಿಕೊಳ್ಳುತ್ತಾರಲ್ಲಾ.
4 ಪರಲೋಕದಲ್ಲಿ ಆಸೀನನಾಗಿರುವಾತನು ಅದಕ್ಕೆ ನಗುವನು;
ಕರ್ತನು ಅವರನ್ನು ಪರಿಹಾಸ್ಯಮಾಡುವನು.
5 ಅನಂತರ ಆತನು ಸಿಟ್ಟಾಗಿ, ಕೋಪಾವೇಶದಿಂದ ಅವರನ್ನು ಕಳವಳಗೊಳಿಸಿ,
6 “ನಾನು ನೇಮಿಸಿದ ಅರಸನನ್ನು
ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು” ಎಂದು ಹೇಳುವನು.
7 ನಾನು ಯೆಹೋವನ ಆಜ್ಞೆಯನ್ನು ತಿಳಿಸುತ್ತೇನೆ, ಕೇಳಿರಿ;
ಆತನು ನನಗೆ, “ನನಗೆ ನೀನು ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
8 ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು;
ಭೂಮಿಯ ಕಟ್ಟಕಡೆಯವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವತ್ತಾಗಿ ಕೊಡುವೆನು.
9 ನೀನು ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ;
ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ” ಎಂದು ಹೇಳಿದನು.
10 ಆದುದರಿಂದ ಅರಸುಗಳಿರಾ, ವಿವೇಕಿಗಳಾಗಿರಿ;
ದೇಶಾಧಿಪತಿಗಳಿರಾ, ಬುದ್ಧಿವಾದಕ್ಕೆ ಕಿವಿಗೊಡಿರಿ.
11 ಯೆಹೋವನನ್ನು ಭಯಭಕ್ತಿಯಿಂದ ಸೇವಿಸಿರಿ;
ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ಮುದ್ದಿಡಿರಿ;
ಇಲ್ಲವಾದರೆ ಯೆಹೋವನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ.
ಯೆಹೋವನನ್ನು ಆಶ್ರಯಿಸುವವರೆಲ್ಲರು ಧನ್ಯರು.