129
ಯೆಹೋವನು ತನ್ನ ಭಕ್ತರನ್ನು ಶತ್ರುಗಳಿಂದ ಬಿಡಿಸುವನೆಂಬ ನಿರೀಕ್ಷೆ
ಯಾತ್ರಾಗೀತೆ.
ಕೀರ್ತ 124
“ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ”
ಎಂದು ಇಸ್ರಾಯೇಲರು ಹೇಳಲಿ.
“ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ,
ಅವರು ನಮ್ಮನ್ನು ಜಯಿಸಲಿಲ್ಲ.
ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ,
ಉದ್ದವಾದ ಗೆರೆಗಳನ್ನು ಹಾಕಿದರು.”
ಆದರೆ ನೀತಿಸ್ವರೂಪನಾದ ಯೆಹೋವನು,
*ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು.
ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ.
ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ;
ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ;
ಅದನ್ನು ಕೊಯ್ಯುವವನ ಹಿಡಿಯೂ,
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
ಹಾದುಹೋಗುವವರು, “ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು,
ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ” ಎಂದೂ ಹೇಳುವುದಿಲ್ಲ.
* 129:4 ಅಥವಾ ದುಷ್ಟರ ಬಂಧನಗಳಿಂದ ಬಿಡಿಸಿದನು.