14
ಅಬೀಯನ ಅಸ್ವಸ್ಥತೆ ಮತ್ತು ಅಹೀಯನ ಪ್ರವಾದನೆ
1 ಆ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು.
2 ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಹಾಕಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
3 ನೀನು ಹತ್ತು ರೊಟ್ಟಿಗಳನ್ನೂ, ಒಂದಷ್ಟು ಸಿಹಿಪದಾರ್ಥವನ್ನೂ ಮತ್ತು ಒಂದು ಕುಪ್ಪೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು” ಎಂದು ಹೇಳಿದನು.
4 ಆಕೆಯು ಅವನು ಹೇಳಿದಂತೆಯೇ ಮಾಡಿ ಶೀಲೋವಿನಲ್ಲಿದ್ದ ಅಹೀಯನ ಮನೆಗೆ ಹೋದಳು. ಮುಪ್ಪಿನ ದೆಸೆಯಿಂದ ಅಹೀಯನ ಕಣ್ಣುಗಳು ಮೊಬ್ಬಾಗಿ ಹೋಗಿದ್ದರಿಂದ ಅವನಿಗೆ ಏನು ಕಾಣಿಸುತ್ತಿರಲಿಲ್ಲ.
5 ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋಕ್ತಿಯನ್ನು ಕೇಳುವುದಕ್ಕೆ ತನ್ನನ್ನು ಅನ್ಯಳ ಹಾಗೆ ವೇಷಮರೆಸಿಕೊಂಡು ಬರುತ್ತಾಳೆಂದೂ, ಆಕೆಗೆ ಇಂಥಿಂಥ ಉತ್ತರ ಕೊಡಬೇಕು” ಎಂದು ತಿಳಿಸಿದ್ದನು.
6 ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುತ್ತಿರುವಾಗಲೇ ಅಹೀಯನು ಆಕೆಯ ಕಾಲು ಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ ಬಾ. ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
7 ನೀನು ಹೋಗಿ ಯಾರೊಬ್ಬಾಮನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಅಪ್ಪಣೆಯನ್ನು ತಿಳಿಸು. ಆತನು ಅವನಿಗೆ, ‘ನಾನು ನಿನ್ನನ್ನು ಜನರ ಮಧ್ಯದಿಂದ ಉನ್ನತಸ್ಥಾನಕ್ಕೆ ತಂದೆನು. ನಿನ್ನನ್ನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನನ್ನಾಗಿ ಮಾಡಿದೆನು.
8 ರಾಜ್ಯವನ್ನು ದಾವೀದನ ಕುಟುಂಬದವರಿಂದ ಕಿತ್ತುಕೊಂಡು ನಿನಗೆ ಕೊಟ್ಟೆನು. ಆದರೂ ನೀನು ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣ ಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ನನ್ನನ್ನು ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದನಂತೆ ನಡೆಯಲಿಲ್ಲ.
9 ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ. ನನ್ನನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ.
10 ಆದುದರಿಂದ ಯಾರೊಬ್ಬಾಮನೇ ಕೇಳು, ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು. ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು.
11 ಅವರು ನಿರ್ನಾಮವಾಗುವರು. ಅವರಲ್ಲಿ ಪಟ್ಟಣದೊಳಗೆ ಸಾಯುವಂಥವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವವು ಎಂದು ಹೇಳುತ್ತಾನೆ’. ಇದು ಯೆಹೋವನಾದ ನನ್ನ ಮಾತು. ನೀನು ಎದ್ದು ನಿನ್ನ ಮನೆಗೆ ಹೋಗು.
12 ನೀನು ಪಟ್ಟಣದೊಳಗೆ ಕಾಲಿಡುವಷ್ಟರಲ್ಲಿ ಹುಡುಗನು ಸಾಯುವನು.
13 ಇಸ್ರಾಯೇಲರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಅವನು ಮಾತ್ರ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಅವನೊಬ್ಬನೇ ಸಮಾಧಿಹೊಂದುವನು.
14 ಯೆಹೋವನು ಇಸ್ರಾಯೇಲರನ್ನು ಆಳಲು ಬೇರೊಬ್ಬ ಅರಸನನ್ನು ನೇಮಿಸುವನು. ಅವನು ಕೂಡಲೇ ಯಾರೊಬ್ಬಾಮನ ಮನೆಯವರನ್ನು ಸಂಹರಿಸಿಬಿಡುವನು. ಇನ್ನು ಏನೇನು ಸಂಭವಿಸುವದೋ?
15 ಯೆಹೋವನು ಇಸ್ರಾಯೇಲರನ್ನು ಹೊಡೆಯುವನು. ಆಗ ಅವರು ನೀರಿನಲ್ಲಿರುವ ಆಪುಹುಲ್ಲೋ ಎಂಬಂತೆ ಹೊಯ್ದಾಡುವರು. ಅವರು ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಆತನಿಗೆ ಕೋಪವನ್ನೆಬ್ಬಿಸಿದ್ದರಿಂದ ಆತನು ಅವರನ್ನು ಅವರ ಪೂರ್ವಿಕರಿಗೆ ಕೊಟ್ಟ ದೇಶದಿಂದ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದೊಳಗೆ ಚದುರಿಸಿಬಿಡುವನು.
16 ಯೆಹೋವನು ಯಾರೊಬ್ಬಾಮನ ಪಾಪಗಳ ನಿಮಿತ್ತವಾಗಿಯೂ ಅವನ ಪ್ರೇರಣೆಯಿಂದ ಇಸ್ರಾಯೇಲರು ಮಾಡಿದ ಅಪರಾಧಗಳ ನಿಮಿತ್ತವಾಗಿಯೂ ಅವರನ್ನು ಶತ್ರುಗಳಿಗೆ ಒಪ್ಪಿಸುವನು” ಎಂದು ಆಕೆಗೆ ಹೇಳಿದನು.
ಅಬೀಯ ಮತ್ತು ಯಾರೊಬ್ಬಾಮನ ಮರಣ
17 ಯಾರೊಬ್ಬಾಮನ ಹೆಂಡತಿಯು ತಿರ್ಚಾ ಊರಿಗೆ ಹೊರಟುಹೋಗಿ ತನ್ನ ಮನೆಯ ಹೊಸ್ತಿಲಲ್ಲಿ ಕಾಲಿಟ್ಟ ಕೂಡಲೇ ಹುಡುಗನು ಸತ್ತನು.
18 ಯೆಹೋವನು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಎಲ್ಲಾ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು.
19 ಯಾರೊಬ್ಬಾಮನ ಇತರ ಕೃತ್ಯಗಳೂ ಅವನ ಯುದ್ಧ ಮತ್ತು ರಾಜ್ಯಭಾರಗಳ ವಿವರವೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
20 ಅವನು ಇಪ್ಪತ್ತೆರಡು ವರ್ಷ ಆಳಿ ಪೂರ್ವಿಕರ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗನಾದ ನಾದಾಬನು ಅರಸನಾದನು.
ಯೆಹೂದ್ಯರ ಅರಸನಾದ ರೆಹಬ್ಬಾಮನು
21 ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ಅರಸನಾದನು. ಅವನು ಪಟ್ಟಕ್ಕೆ ಬಂದಾಗ ನಲ್ವತ್ತೊಂದು ವರ್ಷದವನಾಗಿದ್ದು, ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
22 ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ತಮ್ಮ ಪೂರ್ವಿಕರಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
23 ತಮ್ಮ ಪೂರ್ವಿಕರಂತೆಯೇ ಅವರೂ ತಮಗೋಸ್ಕರ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಂಡರು. ಪ್ರತಿಯೊಂದು ದಿಣ್ಣೆಗಳ ಮೇಲೆ ಹಾಗೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಕಲ್ಲಿನ ಕಂಬಗಳನ್ನೂ ಮತ್ತು ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.
24 ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿರುವ ದೇವದಾಸ, ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ಆಚರಿಸುವವರಾದರು.
25 ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರುದ್ಧವಾಗಿ ದಂಡೆತ್ತಿ ಬಂದನು.
26 ಅವನು ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಹಾಗೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.
27 ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು.
28 ಅರಸನು ಯೆಹೋವನ ಆಲಯಕ್ಕೆ ಹೋಗುವಾಗಲೆಲ್ಲಾ ಅವರು ಅವುಗಳನ್ನು ಹಿಡಿದುಕೊಳ್ಳುವರು. ಅಲ್ಲಿಂದ ಅರಸನು ಹಿಂತಿರುಗಿ ಹೋದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿಡುವರು.
29 ರೆಹಬ್ಬಾಮನ ಉಳಿದ ಚರಿತ್ರೆಯು ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
30 ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
31 ರೆಹಬ್ಬಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದೊಳಗೆ ಅವನ ಹಿರಿಯರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. ಅನಂತರ ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಅರಸನಾದನು.