ಯೋಬನು
ಗ್ರಂಥಕರ್ತೃತ್ವ
ಯೋಬನ ಪುಸ್ತಕವನ್ನು ಬರೆದವರು ಯಾರೆಂದು ನಿಜವಾಗಿಯೂ ಯಾರಿಗೂ ತಿಳಿದಿರುವುದಿಲ್ಲ. ಯಾವ ಗ್ರಂಥಕರ್ತನನ್ನೂ ಗುರುತಿಸಲಾಗಿಲ್ಲ. ಬಹುಶಃ ಒಬ್ಬನಿಗಿಂತ ಹೆಚ್ಚು ಗ್ರಂಥಕರ್ತರು ಇರುವ ಸಾಧ್ಯತೆಗಳಿವೆ. ಸತ್ಯವೇದದ ಎಲ್ಲಾ ಪುಸ್ತಕಗಳಿಗಿಂತ ಯೋಬನು ಅತ್ಯಂತ ಹಳೆಯ ಪುಸ್ತಕವಾಗಿರುವ ಸಾಧ್ಯತೆಯಿದೆ. ಯೋಬನು ಅಸಹನೀಯ ದುರಂತಗಳನ್ನು ಅನುಭವಿಸಿದ ಒಳ್ಳೆಯ ಮತ್ತು ಭಕ್ತಿವಂತನಾದ ವ್ಯಕ್ತಿಯಾಗಿದ್ದನು ಮತ್ತು ಅಂತಹ ವಿಪತ್ತುಗಳು ಅವನಿಗೆ ಏಕೆ ಸಂಭವಿಸಿದ್ದವು ಎಂದು ಅವನು ಮತ್ತು ಅವನ ಸ್ನೇಹಿತರು ತಿಳಿದುಕೊಳ್ಳಲು ಪ್ರಯತ್ನಿಸಿದರು. ಈ ಪುಸ್ತಕದ ಪ್ರಮುಖ ವ್ಯಕ್ತಿಗಳಲ್ಲಿ ಯೋಬನು, ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಮತ್ತು ಬೂಜಿನವನಾದ ಎಲೀಹು ಸೇರಿದ್ದಾರೆ.
ಬರೆದ ದಿನಾಂಕ ಮತ್ತು ಸ್ಥಳ
ಗೊತ್ತಿಲ್ಲ.
ಇದು ಬಹಳಷ್ಟು ಕಾಲವಾದ ಮೇಲೆ ಬರೆಯಲ್ಪಟ್ಟಿತು ಎಂಬ ಲಕ್ಷಣಗಳನ್ನು ಈ ಪುಸ್ತಕದ ಬಹುತೇಕ ಭಾಗವು ತೋರಿಸುತ್ತದೆ, ಇದು ಸೆರೆವಾಸದ ಅಥವಾ ಅದಾದ ಸ್ವಲ್ಪಕಾಲದ ನಂತರದ ಸಮಯದಲ್ಲಿ ಬರೆಯಲ್ಪಟ್ಟಿರಬಹುದು ಮತ್ತು ಎಲೀಹುವಿನ ಅಧ್ಯಾಯಗಳು ಇದಾಗಿ ಇನ್ನೂ ಹೆಚ್ಚು ಕಾಲವಾದ ಮೇಲೆ ಬರೆಯಲ್ಪಟ್ಟಿರಬಹುದು.
ಸ್ವೀಕೃತದಾರರು
ಪ್ರಾಚೀನ ಯೆಹೂದ್ಯರು ಮತ್ತು ಸತ್ಯವೇದದ ಭವಿಷ್ಯದ ಓದುಗಾರರೆಲ್ಲರು. ಯೋಬನ ಪುಸ್ತಕದ ಮೂಲ ಪ್ರೇಕ್ಷಕರು ದಾಸರಾಗಿದ್ದ ಇಸ್ರಾಯೇಲ್ಯರ ಮಕ್ಕಳು ಎಂದು ಸಹ ನಂಬಲಾಗಿದೆ, ಐಗುಪ್ತದವರ ಅಧೀನತೆಯಲ್ಲಿ ಕಷ್ಟವನ್ನುಭವಿಸಿದಂತಹ ಅವರಿಗೆ ಕೊಂಚ ಸಾಂತ್ವನ ನೀಡಲು ಮೋಶೆಯು ಉದ್ದೇಶಿಸಿದ್ದನ್ನು ಎಂದು ನಂಬಲಾಗಿದೆ.
ಉದ್ದೇಶ
ಯೋಬನ ಪುಸ್ತಕವು ಈ ಕೆಳಗಿನವುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ: ಸೈತಾನನು ಆರ್ಥಿಕ ಮತ್ತು ದೈಹಿಕ ವಿನಾಶವನ್ನು ತರಲು ಸಾಧ್ಯವಿಲ್ಲ, ಸೈತಾನನು ಮಾಡಬಹುದಾದ ಮತ್ತು ಮಾಡಲಾಗದವುಗಳ ಮೇಲೆ ದೇವರು ಅಧಿಕಾರವುಳ್ಳವನಾಗಿದ್ದಾನೆ. ಲೋಕದ ಎಲ್ಲ ಸಂಕಷ್ಟಗಳ ಹಿಂದಿರುವ “ಯಾಕೆ” ಎಂಬ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಮಾನವ ಸಾಮರ್ಥ್ಯಕ್ಕೆ ಮೀಗಿಲಾದುದು ಆಗಿದೆ. ದುಷ್ಟರು ತಮ್ಮ ತಕ್ಕ ಪ್ರತಿಫಲವನ್ನು ಹೊಂದಿಕೊಳ್ಳುತ್ತಾರೆ. ಶುದ್ಧೀಕರಿಸಲು, ಪರೀಕ್ಷಿಸಲು, ಕಲಿಸಲು ಅಥವಾ ಆತ್ಮವನ್ನು ಬಲಪಡಿಸಲು ನಮ್ಮ ಜೀವನದಲ್ಲಿ ಕೆಲವೊಮ್ಮೆ ಸಂಕಷ್ಟಗಳು ಅನುಮತಿಸಲ್ಪಡಬಹುದು.
ಮುಖ್ಯಾಂಶ
ಕಷ್ಟಗಳ ಮೂಲಕ ಆಶೀರ್ವಾದಗಳು
ಪರಿವಿಡಿ
1. ಪೀಠಿಕೆ ಮತ್ತು ಸೈತಾನನ ಆಕ್ರಮಣ — 1:1-2:13
2. ತನ್ನ ಕಷ್ಟವನ್ನು ಕುರಿತು ಮೂವರು ಸ್ನೇಹಿತರ ಜೊತೆ ಯೋಬನ ಚರ್ಚೆ — 3:1-31:40
3. ಎಲೀಹು ದೇವರ ಒಳ್ಳೆಯತನವನ್ನು ಘೋಷಿಸಿದ್ದು — 32:1-37:24
4. ದೇವರು ಯೋಬನಿಗೆ ಸಾರ್ವಭೌಮತ್ವವನ್ನು ಪ್ರಕಟಿಸಿದ್ದು — 38:1-41:34
5. ದೇವರು ಯೋಬನನ್ನು ಪುನಃಸ್ಥಾಪಿಸಿದ್ದು — 42:1-17
1
ಯೋಬನು ಮತ್ತು ಅವನ ಕುಟುಂಬ
1 ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು.
2 ಅವನಿಗೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳೂ ಇದ್ದರು.
3 ಅವನಿಗೆ ಏಳು ಸಾವಿರ ಕುರಿಗಳೂ, ಮೂರು ಸಾವಿರ ಒಂಟೆಗಳೂ, ಐನೂರು ಜೋಡಿ ಎತ್ತುಗಳೂ, ಐನೂರು ಹೆಣ್ಣು ಕತ್ತೆಗಳೂ, ಬಹುಮಂದಿ ಸೇವಕರೂ ಇದ್ದುದರಿಂದ ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವತ್ತುಳ್ಳವನಾಗಿದ್ದನು.
4 ಅವನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ನಡೆಸುತ್ತಾ ಆ ಭೋಜನಕ್ಕೆ ತಮ್ಮ ಮೂವರು ಅಕ್ಕತಂಗಿಯರನ್ನೂ ಕರೆಕಳುಹಿಸುತ್ತಿದ್ದರು.
5 ಔತಣದ ಸರದಿ ತೀರಿದ ನಂತರ ಯೋಬನು, “ನನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು” ಎಂದು ಅವರನ್ನು ಕರೆಯಿಸಿ ಶುದ್ಧಿಪಡಿಸಿ, ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುವುದು ದೈನಂದಿನ ಕ್ರಮವಾಗಿತ್ತು.
ಯೋಬನ ಮೊದಲನೆಯ ಪರೀಕ್ಷೆ
6 ಒಂದು ದಿನ ದೇವದೂತರು ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು.
7 ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು.
8 ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು.
9 ಅದಕ್ಕೆ ಸೈತಾನನು, “ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?
10 ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.
11 ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು.
12 ಯೆಹೋವನು ಸೈತಾನನಿಗೆ, “ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ” ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.
13 ಇದಾದ ಬಳಿಕ ಒಂದು ದಿನ ಯೋಬನ ಗಂಡು ಹೆಣ್ಣು ಮಕ್ಕಳು ಹಿರಿಯವನ ಮನೆಯಲ್ಲಿ ಔತಣದಲ್ಲಿ ಊಟಮಾಡಿ ಕುಡಿಯುತ್ತಿರುವಾಗ,
14 ಒಬ್ಬ ದೂತನು ಯೋಬನ ಬಳಿಗೆ ಬಂದು, “ನಿನ್ನ ಎತ್ತುಗಳು ಉಳುತ್ತಾ ಇರುವಾಗ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇದ್ದವು.
15 ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ಈ ಸುದ್ದಿಯನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದು ಹೇಳಿದನು.
16 ಅವನು ಮಾತನಾಡುತ್ತಿರುವಾಗಲೇ ಮತ್ತೊಬ್ಬನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ, ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
17 ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
18 ಅವನು ಇನ್ನು ಮಾತನಾಡುತ್ತಿರುವಾಗಲೆ ಬೇರೊಬ್ಬನು ಬಂದು, “ನಿನ್ನ ಗಂಡು, ಹೆಣ್ಣು ಮಕ್ಕಳು ತಮ್ಮ ಅಣ್ಣನ ಮನೆಯಲ್ಲಿ ತಿಂದು ಕುಡಿಯುತ್ತಿರುವಾಗ,
19 ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
20 ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ,
21 “ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು.
22 ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.