6
ಯೆಶಾಯನಿಗೆ ಯೆಹೋವನ ಕರೆ
1 ಅರಸನಾದ ಉಜ್ಜೀಯನು ಮರಣಹೊಂದಿದ ವರ್ಷದಲ್ಲಿ ಕರ್ತನು ಉನ್ನತೋನ್ನತವಾಗಿ ಸಿಂಹಾಸನಾರೂಢನಾಗಿರುವುದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಆಲಯದಲ್ಲೆಲ್ಲಾ ಹರಡಿತ್ತು.
2 ಆತನ ಸುತ್ತಲು ಸೆರಾಫಿಯರು ಇದ್ದರು. ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ, ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು, ಇನ್ನೆರಡು ರೆಕ್ಕೆಗಳಿಂದ ಹಾರುತ್ತಿದ್ದನು.
3 ಆಗ ಒಬ್ಬನು ಮತ್ತೊಬ್ಬನಿಗೆ,
“ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ” ಎಂದು ಕೂಗಿ ಹೇಳಿದನು.
4 ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿದವು ಮತ್ತು ಧೂಮವು ಆಲಯದಲ್ಲೆಲ್ಲಾ ತುಂಬಿತು.
5 ಆಗ ನಾನು,
“ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ ನಾಶವಾದೆನಲ್ಲಾ! ನಾನು ಹೊಲಸು ತುಟಿಯವನು.
ಹೊಲಸು ತುಟಿಯವರ ಮಧ್ಯದಲ್ಲಿ ವಾಸಿಸುವವನು.
ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡೆವಲ್ಲಾ!” ಎಂದು ಕೂಗಿಕೊಳ್ಳಲು,
6 ಆಗ ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ಉರಿಯುವ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು,
7 ನನ್ನ ಬಾಯಿಗೆ ಮುಟ್ಟಿಸಿ,
“ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು. ನಿನ್ನ ದೋಷವು ನೀಗಿತು. ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು” ಎಂದನು.
8 ಆಗ, “ಯಾರನ್ನು ಕಳುಹಿಸಲಿ? ಯಾರು ನಮಗೋಸ್ಕರ ಹೋಗುವನು?” ಎಂಬ ಕರ್ತನ ನುಡಿಯನ್ನು ಕೇಳಿ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದೆನು.
9 ಅದಕ್ಕೆ ಆತನು, “ನೀನು ಈ ಜನರ ಬಳಿಗೆ ಹೋಗಿ,
ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ,
10 ಕಣ್ಣಿನಿಂದ ನೋಡದಂತೆಯೂ, ಕಿವಿಯಿಂದ ಕೇಳದಂತೆಯೂ, ತಮ್ಮ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರಿಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಈ ಜನರ ಹೃದಯವನ್ನು ಕೊಬ್ಬಿಸಿ,
ಕಿವಿಯನ್ನು ಮಂದಗೊಳಿಸಿ, ಅವರ ಕಣ್ಣಿಗೆ ಅಂಟು ಬಳಿ” ಎಂದು ನನಗೆ ಹೇಳಿದನು.
11 ಅದಕ್ಕೆ ನಾನು, “ಕರ್ತನೇ, ಇದು ಎಷ್ಟರವರೆಗೆ?” ಎಂದು ಕೇಳಲು ಅದಕ್ಕೆ ಆತನು,
“ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ನಾಶ ಹೆಚ್ಚಾಗಿ ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಜನರಿಲ್ಲದೆ,
ದೇಶವು ಸಂಪೂರ್ಣವಾಗಿ ಹಾಳಾಗುವವರೆಗೂ ಇದೇ ರೀತಿ ಇರುವುದು.
12 ಯೆಹೋವನು ಮನುಷ್ಯರನ್ನು ದೂರಮಾಡುವವರೆಗೂ, ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವವರೆಗೂ ಅದು ಹೀಗೆ ಇರುವುದು.
13 ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು.
ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ,
ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು.