13
ಅಮ್ನೋನನು ತಾಮಾರಳನ್ನು ಮೋಹಿಸಿದ್ದು
ದಾವೀದನಿಗೆ ಅಬ್ಷಾಲೋಮನೆಂಬ ಮಗನಿದ್ದನು. ಅವನಿಗೆ ತಾಮಾರಳೆಂಬ ತಂಗಿಯಿದ್ದಳು. ಆಕೆ ಬಹಳ ಸುಂದರಿಯಾಗಿದ್ದಳು. ದಾವೀದನ ಮತ್ತೊಬ್ಬ ಮಗನಾದ ಅಮ್ನೋನನು, ತಾಮಾರಳನ್ನು ಮೋಹಿಸಿದನು. ತಾಮಾರಳು ಕನ್ಯೆಯಾಗಿದ್ದಳು. ಈ ಕಾರಣದಿಂದ ಅವನು ಆಕೆಗೆ ಏನು ಮಾಡಲೂ ಸಾಧ್ಯವಿರಲಿಲ್ಲ. ಅವಳ ಮೋಹದಲ್ಲಿಯೇ ಅಮ್ನೋನನು ಬಲಹೀನನಾದನು.*
ಅಮ್ನೋನನಿಗೆ ಶಿಮ್ಮನ ಮಗನಾದ ಯೋನಾದ್ವಾನೆಂಬ ಹೆಸರಿನ ಗೆಳೆಯನಿದ್ದನು. (ಶಿಮ್ಮನು ದಾವೀದನ ಸೋದರ.) ಯೋನಾದ್ವಾನು ಬಹಳ ಯುಕ್ತಿಯುಳ್ಳ ಮನುಷ್ಯ. ಯೋನಾದ್ವಾನು ಅಮ್ನೋನನಿಗೆ, “ದಿನದಿಂದ ದಿನಕ್ಕೆ ನೀನು ತೆಳ್ಳಗಾಗುತ್ತಲೇ ಇರುವೆ. ನೀನು ರಾಜನ ಮಗ, ನಿನ್ನ ಬಳಿ ತಿನ್ನಲು ಬಹಳ ಇದ್ದರೂ ನೀನು ತೆಳ್ಳಗಾಗುತ್ತಿರುವುದು ಏಕೆ? ನನಗೆ ತಿಳಿಸು” ಎಂದು ಕೇಳಿದನು.
ಅಮ್ನೋನನು ಯೋನಾದ್ವಾನಿಗೆ, “ನಾನು ತಾಮಾರಳನ್ನು ಮೋಹಿಸಿದ್ದೇನೆ. ಆದರೆ ಅವಳು ನನ್ನ ಸೋದರನಾದ ಅಬ್ಷಾಲೋಮನ ತಂಗಿ” ಎಂದು ಹೇಳಿದನು.
ಯೋನಾದ್ವಾನು ಅಮ್ನೋನನಿಗೆ, “ನೀನು ಹೋಗಿ ಹಾಸಿಗೆಯಲ್ಲಿ ಮಲಗಿಕೋ. ನೀನು ಕಾಯಿಲೆಯವನಂತೆ ನಟಿಸು. ಆಗ ನಿನ್ನನ್ನು ನೋಡಲು ನಿನ್ನ ತಂದೆಯು ಬರುತ್ತಾನೆ. ಆಗ ನೀನು ಅವನಿಗೆ, ‘ದಯವಿಟ್ಟು ನನ್ನ ಸೋದರಿಯಾದ ತಾಮಾರಳು ಇಲ್ಲಿಗೆ ಬಂದು, ನನಗೆ ಊಟವನ್ನು ಕೊಡಲಿ. ಅವಳು ನನ್ನ ಎದುರಿನಲ್ಲೇ ಅಡಿಗೆಯನ್ನು ಮಾಡಲಿ. ನಾನು ಅದನ್ನು ಕಣ್ಣಾರೆ ಕಂಡು ಅವಳ ಕೈಗಳಿಂದ ಊಟಮಾಡುತ್ತೇನೆ’ ಎಂದು ಹೇಳು” ಎಂಬುದಾಗಿ ಹೇಳಿಕೊಟ್ಟನು.
ಅಮ್ನೋನನು ಹಾಸಿಗೆಯಲ್ಲಿ ಮಲಗಿ ಕಾಯಿಲೆಯವನಂತೆ ನಟಿಸಿದನು. ಅವನನ್ನು ನೋಡಲು ರಾಜನಾದ ದಾವೀದನು ಅಲ್ಲಿಗೆ ಬಂದನು. ಅಮ್ನೋನನು ರಾಜನಾದ ದಾವೀದನಿಗೆ, “ದಯವಿಟ್ಟು ನನ್ನ ಸೋದರಿಯಾದ ತಾಮಾರಳನ್ನು ಒಳಕ್ಕೆ ಕರೆಯಿರಿ. ನಾನು ನೋಡುತ್ತಿರುವಂತೆ ಅವಳು ನನಗಾಗಿ ಎರಡು ಸಿಹಿ ರೊಟ್ಟಿಗಳನ್ನು ತಯಾರಿಸಲಿ. ಅವಳ ಕೈಗಳಿಂದ ಮಾಡಿದ ರೊಟ್ಟಿಗಳನ್ನೇ ನಾನು ತಿನ್ನುತ್ತೇನೆ” ಎಂದು ಬೇಡಿಕೊಂಡನು.
ದಾವೀದನು ತಾಮಾರಳ ಮನೆಗೆ ಸಂದೇಶಕರನ್ನು ಕಳುಹಿಸಿದನು. ಸಂದೇಶಕರು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಸ್ವಲ್ಪ ಊಟವನ್ನು ತಯಾರಿಸು” ಎಂದರು.
ತಾಮಾರಳು ತನ್ನ ಸೋದರನಾದ ಅಮ್ನೋನನ ಮನೆಗೆ ಹೋದಳು. ಅಮ್ನೋನನು ಹಾಸಿಗೆಯಲ್ಲಿ ಮಲಗಿದ್ದನು. ತಾಮಾರಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ಕಲಸಿ ಅಮ್ನೋನನ ಕಣ್ಣೆದುರಿನಲ್ಲಿಯೇ ನಾದಿದಳು. ನಂತರ ಅವಳು ನಾದಿದ ಹಿಟ್ಟನ್ನು ಸುಟ್ಟು, ರೊಟ್ಟಿಗಳನ್ನು ಮಾಡಿದಳು. ತಾಮಾರಳು ರೊಟ್ಟಿಗಳನ್ನು, ರೊಟ್ಟಿಮಾಡುವ ಪಾತ್ರೆಯಿಂದ ಹೊರ ತೆಗೆದು ಅಮ್ನೋನನಿಗೋಸ್ಕರ ಅವುಗಳನ್ನು ಬಡಿಸಿದಳು. ಆದರೆ ಅಮ್ನೋನನು ತಿನ್ನಲಿಲ್ಲ. ಅಮ್ನೋನನು ತನ್ನ ಸೇವಕರೆಲ್ಲರಿಗೆ, “ನೀವೆಲ್ಲರೂ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟು ಹೋಗಿ!” ಎಂದನು. ಆದ್ದರಿಂದ ಸೇವಕರೆಲ್ಲರೂ ಅಮ್ನೋನನ ಕೊಠಡಿಯಿಂದ ಹೊರಗೆ ಹೋದರು.
ಅಮ್ನೋನನು ತಾಮಾರಳನ್ನು ಕೆಡಿಸಿದ್ದು
10 ಅಮ್ನೋನನು ತಾಮಾರಳಿಗೆ, “ರೊಟ್ಟಿಗಳನ್ನು ಒಳ ಕೋಣೆಗೆ ತೆಗೆದುಕೊಂಡು ಬಾ. ನಾನು ನಿನ್ನ ಕೈಗಳಿಂದಲೇ ತಿನ್ನುತ್ತೇನೆ” ಎಂದನು.
ತಾಮಾರಳು ತನ್ನ ಸೋದರನಾದ ಅಮ್ನೋನನಿದ್ದ ಒಳಕೋಣೆಗೆ ಹೋದಳು. ಅವಳು ತಾನು ಮಾಡಿದ ರೊಟ್ಟಿಗಳನ್ನು ತಂದಳು. 11 ತನ್ನ ಕೈಗಳಿಂದಲೇ ಅಮ್ನೋನನು ತಿನ್ನಲಿ ಎಂಬುದಕ್ಕಾಗಿ ಅವಳು ಅವನ ಬಳಿಗೆ ಹೋದಳು. ಆದರೆ ಅಮ್ನೋನನು ತಾಮಾರಳನ್ನು ಬಿಗಿಯಾಗಿ ಹಿಡಿದುಕೊಂಡನು. ಅವನು ಅವಳಿಗೆ, “ತಂಗಿಯೇ, ಬಂದು ನನ್ನ ಜೊತೆಯಲ್ಲಿ ಮಲಗು” ಎಂದು ಹೇಳಿದನು.
12 ತಾಮಾರಳು ಅಮ್ನೋನನಿಗೆ, “ಸೋದರನೇ ಬೇಡ! ನನ್ನನ್ನು ಬಲಾತ್ಕರಿಸದಿರು! ಇಸ್ರೇಲಿನಲ್ಲಿ ಇಂತಹ ಕಾರ್ಯ ಎಂದೆಂದಿಗೂ ನಡೆಯಬಾರದು! ಅಪಮಾನಕರವಾದ ಈ ಕಾರ್ಯವನ್ನು ಮಾಡಬೇಡ! 13 ನನಗಾದ ಈ ಕಳಂಕವನ್ನು ಎಂದೆಂದಿಗೂ ನಾನು ತೊಡೆದುಹಾಕಲಾಗುವುದಿಲ್ಲ. ಇಸ್ರೇಲಿನ ಜನರಲ್ಲಿ ತಮ್ಮ ಅಪಮಾನಕರವಾದ ಕಾರ್ಯಗಳಿಂದ ನೀಚರೆನಿಸಿಕೊಳ್ಳುವ ಜನರಂತೆ ನೀನೂ ಆಗಿಬಿಡುವೆ. ದಯವಿಟ್ಟು ರಾಜನೊಂದಿಗೆ ಮಾತನಾಡು. ಅವನು ನಿನ್ನ ಜೊತೆಯಲ್ಲಿ ನನ್ನ ಮದುವೆ ಮಾಡಲಿ” ಎಂದಳು.
14 ಆದರೆ ತಾಮಾರಳ ಮಾತುಗಳನ್ನು ಅಮ್ನೋನನು ಕೇಳಲಿಲ್ಲ. ಅವನು ತಾಮಾರಳಿಗಿಂತ ಬಲಶಾಲಿಯಾಗಿದ್ದುದರಿಂದ ಅವಳ ಮೇಲೆ ಬಲಾತ್ಕಾರ ಮಾಡಿದನು. 15 ಅನಂತರ ಅಮ್ನೋನನು ತಾಮಾರಳನ್ನು ದ್ವೇಷಿಸಿದನು. ಅಮ್ನೋನನು ತಾನು ಅವಳನ್ನು ಮೊದಲು ಮೋಹಿಸಿದುದಕ್ಕಿಂತ ಹೆಚ್ಚಾಗಿ ದ್ವೇಷಿಸಿದನು. ಅಮ್ನೋನನು ತಾಮಾರಳಿಗೆ, “ಮೇಲೇಳು, ಹೊರಟುಹೋಗು!” ಎಂದನು.
16 ತಾಮಾರಳು ಅಮ್ನೋನನಿಗೆ, “ಇಲ್ಲ! ನನ್ನನ್ನು ಹೊರಗೆ ಕಳುಹಿಸುವುದು ನೀನು ಮೊದಲು ಮಾಡಿದ್ದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯವಾಗಿದೆ” ಎಂದು ಹೇಳಿದಳು.
ಆದರೆ ಅಮ್ನೋನನು ತಾಮಾರಳ ಮಾತುಗಳನ್ನು ಆಲಿಸಲಿಲ್ಲ. 17 ಅಮ್ನೋನನು ತನ್ನ ಕಿರಿಯ ಸೇವಕನೊಬ್ಬನನ್ನು ಕರೆದು, “ಈ ಹುಡುಗಿಯನ್ನು ಈಗಲೇ ಈ ಕೊಠಡಿಯಿಂದ ಹೊರಗೆ ನೂಕು! ಅವಳು ಹೋದ ನಂತರ ಬಾಗಿಲಿಗೆ ಬೀಗಹಾಕು” ಎಂದು ಹೇಳಿದನು.
18 ಅಮ್ನೋನನ ಸೇವಕನು ತಾಮಾರಳನ್ನು ಹೊರನೂಕಿ ಅವಳು ಹೋದ ನಂತರ ಬಾಗಿಲಿಗೆ ಬೀಗವನ್ನು ಹಾಕಿದನು.
ತಾಮಾರಳು ನಾನಾ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ರಾಜನ ಹೆಣ್ಣುಮಕ್ಕಳು ಕನ್ಯೆಯರಾಗಿದ್ದಾಗ ಇಂತಹ ನಿಲುವಂಗಿಗಳನ್ನು ಧರಿಸುತ್ತಿದ್ದರು. 19 ತಾಮಾರಳು ಬೂದಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಸುರಿದುಕೊಂಡು ತನ್ನ ನಿಲುವಂಗಿಯನ್ನು ಹರಿದುಕೊಂಡಳು; ತನ್ನ ತಲೆಯ ಮೇಲೆ ಕೈಗಳನ್ನಿಟ್ಟುಕೊಂಡು ಗಟ್ಟಿಯಾಗಿ ಗೋಳಾಡಿದಳು.
20 ತಾಮಾರಳ ಸೋದರನಾದ ಅಬ್ಷಾಲೋಮನು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನು ನಿನ್ನನ್ನು ಕೆಡಿಸಿ ಬಿಟ್ಟನಲ್ಲವೇ? ಅಮ್ನೋನನು ನಿನ್ನ ಸೋದರ. ತಂಗಿಯೇ, ಈಗ ಸದ್ಯಕ್ಕೆ ಸುಮ್ಮನಿರು. ಇದರಿಂದ ನೀನು ಹೆಚ್ಚು ಗಲಿಬಿಲಿಯಾಗದಿರು” ಎಂದು ಹೇಳಿದನು. ತಾಮಾರಳು ಏನನ್ನೂ ಹೇಳಲಿಲ್ಲ. ಅವಳು ಅಬ್ಷಾಲೋಮನ ಮನೆಯಲ್ಲಿ ವಾಸಿಸಲು ಹೋದಳು.
21 ರಾಜನಾದ ದಾವೀದನಿಗೆ ಈ ವರ್ತಮಾನವು ತಿಳಿದು ಬಹಳ ಕೋಪಗೊಂಡನು. 22 ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು. ಅಬ್ಷಾಲೋಮನು ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಏನನ್ನೂ ಅಮ್ನೋನನಿಗೆ ಹೇಳಲಿಲ್ಲ. ಅಮ್ನೋನನು ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು.
ಅಬ್ಷಾಲೋಮನ ಪ್ರತೀಕಾರ
23 ಎರಡು ವರ್ಷಗಳ ನಂತರ, ಅಬ್ಷಾಲೋಮನ ಕುರಿಗಳ ತುಪ್ಪಟವನ್ನು ಕತ್ತರಿಸುವುದಕ್ಕಾಗಿ ಕೆಲವು ಜನರು ಬಾಳ್‌ಹಾಚೋರಿಗೆ ಬಂದರು. ಇದನ್ನು ಬಂದು ನೋಡುವಂತೆ ರಾಜನ ಮಕ್ಕಳಿಗೆಲ್ಲ ಅಬ್ಷಾಲೋಮನು ಆಹ್ವಾನವನ್ನು ನೀಡಿದನು. 24 ಅಬ್ಷಾಲೋಮನು ರಾಜನ ಬಳಿಗೆ ಹೋಗಿ, “ನನ್ನ ಕುರಿಗಳ ತುಪ್ಪಟವನ್ನು ಕತ್ತರಿಸಲು ಕೆಲವು ಜನರು ಬರುತ್ತಾರೆ. ದಯವಿಟ್ಟು ನೀವು ನಿಮ್ಮ ಸೇವಕರೊಂದಿಗೆ ಬಂದು ಅದನ್ನು ಗಮನಿಸಿ” ಎಂದನು.
25 ರಾಜನಾದ ದಾವೀದನು ಅಬ್ಷಾಲೋಮನಿಗೆ, “ಮಗನೇ, ನಾವೆಲ್ಲ ಬರುವುದಿಲ್ಲ. ಅದು ನಿನಗೆ ಬಹಳ ತೊಂದರೆಯಾಗುತ್ತದೆ” ಎಂದು ಹೇಳಿದನು.
ಅಬ್ಷಾಲೋಮನು ಬೇಡಿಕೊಂಡರೂ ದಾವೀದನು ಹೋಗಲಿಲ್ಲ; ಆದರೆ ದಾವೀದನು ಅವನನ್ನು ಆಶೀರ್ವದಿಸಿದನು.
26 ಅಬ್ಷಾಲೋಮನು, “ನೀನು ಬರಲು ಇಚ್ಛಿಸದಿದ್ದರೆ, ದಯವಿಟ್ಟು ನನ್ನ ಸೋದರನಾದ ಅಮ್ನೋನನನ್ನು ಕಳುಹಿಸು” ಎಂದು ಕೇಳಿದನು.
ರಾಜನಾದ ದಾವೀದನು ಅಬ್ಷಾಲೋಮನಿಗೆ, “ನಿನ್ನ ಜೊತೆಯಲ್ಲಿ ಅವನೇಕೆ ಬರಬೇಕು?” ಎಂದನು.
27 ಅಬ್ಷಾಲೋಮನು ದಾವೀದನನ್ನು ಬಹಳವಾಗಿ ಬೇಡಿಕೊಂಡನು. ಕೊನೆಗೆ ದಾವೀದನು ಅಮ್ನೋನನನ್ನು ಮತ್ತು ರಾಜನ ಗಂಡುಮಕ್ಕಳೆಲ್ಲರನ್ನು ಅಬ್ಷಾಲೋಮನ ಜೊತೆಯಲ್ಲಿ ಹೋಗಲು ಹೇಳಿದನು.
ಅಮ್ನೋನನನ್ನು ಕೊಂದುಹಾಕಿದ್ದು
28 ಆಗ ಅಬ್ಷಾಲೋಮನು ತನ್ನ ಸೇವಕರಿಗೆ ಈ ರೀತಿ ಆಜ್ಞೆ ಮಾಡಿದನು: “ಅಮ್ನೋನನನ್ನು ಗಮನಿಸುತ್ತಿರಿ. ಅವನು ಮತ್ತನಾಗಿ ಆನಂದಿಸುತ್ತಿರುವಾಗ ನಾನು ಆಜ್ಞೆಯನ್ನು ಕೊಡುತ್ತೇನೆ. ಆಗ ನೀವು ಅವನ ಮೇಲೆ ಆಕ್ರಮಣಮಾಡಿ ಕೊಲ್ಲಬೇಕು. ನಿಮಗೆ ಶಿಕ್ಷೆಯಾಗುತ್ತದೆ ಎಂಬ ಭಯವಿಲ್ಲದಿರಲಿ, ಯಾಕೆಂದರೆ ನೀವು ನನ್ನ ಆಜ್ಞೆಯನ್ನು ಪಾಲಿಸಿದಿರಷ್ಟೇ, ಆದ್ದರಿಂದ ಶಕ್ತರಾಗಿಯೂ ಧೈರ್ಯವಂತರಾಗಿಯೂ ಇರಿ” ಎಂದನು.
29 ಅಬ್ಷಾಲೋಮನ ಸೇವಕರು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದುಬಿಟ್ಟರು. ಆದರೆ ದಾವೀದನ ಇತರ ಗಂಡುಮಕ್ಕಳೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನೇರಿ ತಪ್ಪಿಸಿಕೊಂಡರು.
ಅಮ್ನೋನನ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿತು
30 ರಾಜನ ಗಂಡುಮಕ್ಕಳು ತಮ್ಮ ಮಾರ್ಗದಲ್ಲಿ ಬರುತ್ತಿರುವಾಗಲೇ ದಾವೀದನಿಗೆ ಈ ಸುದ್ದಿಯು ತಲುಪಿತು. “ಅಬ್ಷಾಲೋಮನು ರಾಜನ ಮಕ್ಕಳೆಲ್ಲರನ್ನೂ ಕೊಂದುಹಾಕಿದನು; ಒಬ್ಬ ಮಗನನ್ನೂ ಜೀವಂತವಾಗಿ ಬಿಟ್ಟಿಲ್ಲ” ಎಂಬುದೇ ಆ ಸುದ್ದಿ.
31 ರಾಜನಾದ ದಾವೀದನು ಬಟ್ಟೆಗಳನ್ನು ಹರಿದುಕೊಂಡು ನೆಲದ ಮೇಲೆ ಬಿದ್ದನು. ದಾವೀದನ ಸುತ್ತಲೂ ನಿಂತಿದ್ದ ಅವನ ಸೇವಕರೂ ತಮ್ಮತಮ್ಮ ಬಟ್ಟೆಗಳನ್ನು ಹರಿದುಕೊಂಡರು.
32 ಆದರೆ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದ್ವಾನು ದಾವೀದನಿಗೆ, “ರಾಜನ ಗಂಡುಮಕ್ಕಳೆಲ್ಲರನ್ನೂ ಕೊಂದುಹಾಕಿದರೆಂದು ಯೋಚಿಸುವುದು ಸರಿಯಲ್ಲ. ಅಮ್ನೋನನು ಮಾತ್ರ ಸತ್ತಿರಬೇಕು. ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಅಮ್ನೋನನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಆ ದಿನದಿಂದ ಅವನನ್ನು ಕೊಲ್ಲಲು ಯೋಜನೆವಾಡುತ್ತಿದ್ದನು. 33 ರಾಜನಾದ ನನ್ನ ಒಡೆಯನೇ, ರಾಜನ ಮಕ್ಕಳೆಲ್ಲರೂ ಸತ್ತರೆಂದು ಯೋಚಿಸಬೇಡ. ಅಮ್ನೋನನು ಮಾತ್ರ ಸತ್ತುಹೋದನು” ಎಂದನು.
34 ಅಬ್ಷಾಲೋಮನು ಓಡಿಹೋದನು.
ಆ ನಗರದ ಗೋಡೆಯ ಮೇಲೆ ಒಬ್ಬ ಕಾವಲುಗಾರನು ನಿಂತಿದ್ದನು. ಬೆಟ್ಟದ ಬೇರೊಂದು ಕಡೆಯಿಂದ ಅಂದರೆ ಹೋರೋನಿನ ಮಾರ್ಗವಾಗಿ ಅನೇಕ ಜನರು ಬರುತ್ತಿರುವುದನ್ನು ಅವನು ನೋಡಿದನು. 35 ಯೋನಾದ್ವಾನು ರಾಜನಾದ ದಾವೀದನಿಗೆ, “ನಾನು ಹೇಳಿದ್ದು ಸರಿ. ಅಲ್ಲಿ ನೋಡು, ರಾಜನ ಗಂಡುಮಕ್ಕಳೆಲ್ಲರೂ ಬರುತ್ತಿದ್ದಾರೆ” ಎಂದನು.
36 ಯೋನಾದ್ವಾನು ಈ ಮಾತುಗಳನ್ನು ಹೇಳಿ ಮುಗಿಸುವಷ್ಟರಲ್ಲಿ ರಾಜನ ಗಂಡುಮಕ್ಕಳೆಲ್ಲರೂ ಬಂದರು. ಅವರು ಗಟ್ಟಿಯಾಗಿ ಅಳುತ್ತಿದ್ದರು. ದಾವೀದನು ಮತ್ತು ಅವನ ಸೇವಕರೆಲ್ಲ ಅಳರಾಂಭಿಸಿದರು. ಅವರೆಲ್ಲರೂ ಮತ್ತಷ್ಟು ಜೋರಾಗಿ ಗೋಳಾಡಿದರು. 37 ದಾವೀದನು ತನ್ನ ಮಗನಿಗಾಗಿ ಪ್ರತಿನಿತ್ಯವೂ ಗೋಳಾಡುತ್ತಿದ್ದನು.
ಅಬ್ಷಾಲೋಮನು ಗೆಷೂರಿಗೆ ತಪ್ಪಿಸಿಕೊಂಡು ಹೋದದ್ದು
ಗೆಷೂರಿನ ರಾಜನೂ ಅಮ್ಮೀಹೂದನ ಮಗನೂ ಆದ ತಲ್ಮೈನ ಹತ್ತಿರಕ್ಕೆ ಅಬ್ಷಾಲೋಮನು ಓಡಿಹೋದನು. 38 ಅಬ್ಷಾಲೋಮನು ಗೆಷೂರಿಗೆ ಓಡಿಹೋದ ನಂತರ, ಅಲ್ಲಿ ಅವನು ಮೂರು ವರ್ಷಗಳ ಕಾಲ ನೆಲೆಸಿದನು. 39 ಅಮ್ನೋನನ ಮರಣದ ವಿಷಯದಲ್ಲಿ ರಾಜನಾದ ದಾವೀದನು ಸಂತೈಸಿಕೊಂಡನು. ಆದರೆ ಅವನು ಅಬ್ಷಾಲೋಮನನ್ನು ಕಾಣಲು ಬಹಳವಾಗಿ ಹಾತೊರೆಯತೊಡಗಿದನು.
* 13:2 ಅವಳ … ಬಲಹೀನನಾದನು ಅಥವಾ “ಅಮ್ನೋನನು ಕಾಯಿಲೆಯವನಂತೆ ನಟಿಸಿದನು.” 13:37 ಗೆಷೂರಿನ … ತಲ್ಮೈ ಅಬ್ಷಾಲೋಮನ ಅಜ್ಜ ತಲ್ಮೈ.