12
ದಾವೀದನೊಂದಿಗೆ ಸೇರಿದ ಪರಾಕ್ರಮಶಾಲಿಗಳು
1 ದಾವೀದನು ಚಿಕ್ಲಗಿನಲ್ಲಿದ್ದಾಗ ಕೆಲವು ಪರಾಕ್ರಮಶಾಲಿಗಳು ಬಂದು ದಾವೀದನೊಂದಿಗೆ ಸೇರಿಕೊಂಡರು. ಕೀಷನ ಮಗನಾದ ಸೌಲನಿಂದ ತಪ್ಪಿಸಿಕೊಳ್ಳಲು ದಾವೀದನು ಚಿಕ್ಲಗಿನಲ್ಲಿ ಅಡಗಿಕೊಂಡಿದ್ದನು. ಇವರು ಯುದ್ಧದಲ್ಲಿ ದಾವೀದನಿಗೆ ನೆರವಾದರು.
2 ಇವರು ತಮ್ಮ ಎಡಗೈಯಿಂದಲೂ ಬಲಗೈಯಿಂದಲೂ ಬಿಲ್ಲುಗಳಿಂದ ಬಾಣಗಳನ್ನೂ ಕವಣೆಗಳಿಂದ ಕಲ್ಲುಗಳನ್ನೂ ಗುರಿಯಿಟ್ಟು ಹೊಡೆಯಬಲ್ಲವರಾಗಿದ್ದರು. ಇವರೆಲ್ಲರೂ ಬೆನ್ಯಾಮೀನನ ಕುಲದವನಾದ ಸೌಲನ ಕುಟುಂಬದವರು. ಅವರ ಹೆಸರುಗಳು ಇಂತಿವೆ:
3 ಅವರ ನಾಯಕರು ಅಹೀಯೆಜೆರ್ ಮತ್ತು ಯೋವಾಷ್ (ಇವರಿಬ್ಬರೂ ಗಿಬೆಯದವನಾದ ಹಷ್ಷೆಮಾಹನ ಗಂಡುಮಕ್ಕಳು); ಅಜ್ಮಾವೆತನ ಗಂಡುಮಕ್ಕಳಾದ ಯೆಜೀಯೇಲ್ ಮತ್ತು ಪೆಲೆಟ; ಅನತೋತ್ ಊರಿನವರಾದ ಬೆರಾಕಾ ಮತ್ತು ಯೇಹು.
4 ಗಿಬ್ಯೋನ್ ಊರಿನವನಾದ ಇಷ್ಮಾಯನು. (ಇವನು ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. ಅಲ್ಲದೆ ಅವರ ನಾಯಕನಾಗಿದ್ದನು.) ಯೆರೆಮೀಯ, ಯಹಜೀಯೇಲ್, ಯೋಹಾನಾನ್ ಮತ್ತು ಯೋಜಾಬಾದ್. ಇವರೆಲ್ಲಾ ಗೆದೆರಾಯರು,
5 ಹರೀಫ್ಯದವರಾದ ಎಲ್ಲೂಜೈ, ಏಯೆರೀಮೋತ್, ಬೆಯಲ್ಯ, ಶೆಮರ್ಯ ಮತ್ತು ಶೆಫಟ್ಯ.
6 ಕೋರಹನ ಗೋತ್ರದವರಾದ ಎಲ್ಕಾನ, ಇಷ್ಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಾಮ.
7 ಗೆದೋರ್ ಊರಿನವನಾದ ಯೆರೋಹಾಮನ ಗಂಡುಮಕ್ಕಳಾದ ಯೋವೇಲ ಮತ್ತು ಜೆಬದ್ಯ.
ಗಾದ್ಯರು
8 ಅರಣ್ಯದಲ್ಲಿದ್ದ ಕೋಟೆಯಲ್ಲಿ ಗಾದ್ ಕುಲದ ಕೆಲವರು ದಾವೀದನನ್ನು ಸೇರಿಕೊಂಡರು. ಇವರು ಯುದ್ಧದಲ್ಲಿ ನುರಿತ ಸೈನಿಕರಾಗಿದ್ದರು. ಈಟಿ ಬರ್ಜಿಗಳಲ್ಲಿ ಪರಿಣಿತರು; ಸಿಂಹಗಳಂತೆ ಕ್ರೂರಿಗಳು; ಬೆಟ್ಟದ ಮೇಲೆ ಜಿಂಕೆಯ ತರಹ ವೇಗವಾಗಿ ಓಡಬಲ್ಲವರು.
9 ಗಾದ್ ಕುಲದ ಸೈನ್ಯಾಧಿಕಾರಿ ಏಜೆರ; ಎರಡನೆಯ ಅಧಿಕಾರಿ ಓಬದ್ಯ; ಎಲೀಯಾಬನು ಮೂರನೆಯ ಅಧಿಕಾರಿ;
10 ನಾಲ್ಕನೆಯ ಅಧಿಕಾರಿ ಮಷ್ಮನ್ನ; ಐದನೆಯ ಅಧಿಕಾರಿ ಯೆರೆಮೀಯ;
11 ಆರನೆಯ ಅಧಿಕಾರಿ ಅತ್ತೈ; ಏಳನೆಯ ಅಧಿಕಾರಿ ಎಲೀಯೇಲ;
12 ಎಂಟನೆಯ ಅಧಿಕಾರಿ ಯೋಹಾನಾನ; ಒಂಭತ್ತನೆಯ ಅಧಿಕಾರಿ ಎಲ್ಜಾಬಾದ;
13 ಹತ್ತನೆಯ ಅಧಿಕಾರಿ ಯೆರೆಮೀಯ; ಹನ್ನೊಂದನೆಯ ಅಧಿಕಾರಿ ಮಕ್ಬನ್ನೈ.
14 ಇವರೆಲ್ಲಾ ಗಾದ್ಯರ ಸೇನಾಧಿಪತಿಗಳಾಗಿದ್ದರು. ಇವರಲ್ಲಿ ಅತಿಬಲಹೀನನಾದವನು ನೂರು ಮಂದಿ ವೈರಿಗಳೊಂದಿಗೆ ಕಾದಾಡಲು ಶಕ್ತನಾಗಿದ್ದನು. ಅವರಲ್ಲಿ ಎಲ್ಲರಿಗಿಂತ ಪರಾಕ್ರಮಿಯು ಒಂದು ಸಾವಿರ ವೈರಿಗಳೊಂದಿಗೆ ಕಾದಾಡಲು ಶಕ್ತನು.
15 ಜೋರ್ಡನ್ ನದಿಯು ದಡಮೀರಿ ಹರಿಯುತ್ತಿರುವಾಗ ಗಾದ್ ಕುಲದವರು ಅದನ್ನು ದಾಟಿ ಆಚೆಪ್ರದೇಶದಲ್ಲಿ ವಾಸವಾಗಿದ್ದ ಜನರನ್ನೆಲ್ಲಾ ಪೂರ್ವಕ್ಕೂ ಪಶ್ಚಿಮಕ್ಕೂ ಓಡಿಸಿ ಅವರ ಸ್ಥಳವನ್ನು ಆಕ್ರಮಿಸಿಕೊಂಡರು.
ದಾವೀದನೊಂದಿಗೆ ಸೇರಿದ ಇತರ ಸೈನಿಕರು
16 ಬೆನ್ಯಾಮೀನ್ ಮತ್ತು ಯೆಹೂದ ಕುಲದ ಇತರ ಜನರೂ ದಾವೀದನು ಕೋಟೆಯಲ್ಲಿ ದಾವೀದನೊಂದಿಗೆ ಸೇರಿಕೊಂಡರು.
17 ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯ ಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚುಹಾಕಲು ಬಂದಿರುವುದಾದರೆ ನಾನು ನಿರಪರಾಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.
18 ಮೂವತ್ತು ಮಂದಿ ಶೂರರ ನಾಯಕನಾದ ಅಮಾಸೈಯು ಆತ್ಮನಿಂದ ತುಂಬಿದವನಾಗಿ ಹೇಳಿದ್ದೇನೆಂದರೆ:
“ದಾವೀದನೇ, ನಾವು ನಿನ್ನವರು.
ಇಷಯನ ಮಗನೇ, ನಾವು ನಿನಗೆ ಸೇರಿದವರು;
ನಿನಗೆ ಸಮಾಧಾನ ಕೋರುವವರು;
ನಿನಗೆ ಸಹಾಯ ಮಾಡುವವರಿಗೆ ಸಮಾಧಾನ ಕೋರುವೆವು;
ಯಾಕೆಂದರೆ ನಿನ್ನ ದೇವರು ನಿನಗೆ ಸಹಾಯಮಾಡುತ್ತಿದ್ದಾನೆ.”
ದಾವೀದನು ಇವರನ್ನು ಸ್ವಾಗತಿಸಿ ತನ್ನ ಸೈನ್ಯಾಧಿಪತಿಗಳನ್ನಾಗಿ ಮಾಡಿದನು.
19 ಮನಸ್ಸೆಕುಲದಿಂದಲೂ ಕೆಲವರು ದಾವೀದನನ್ನು ಸೇರಿಕೊಂಡರು. ದಾವೀದನು ಸೌಲನೊಂದಿಗೆ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಸೇರಿಕೊಂಡಾಗ ಮನಸ್ಸೆಯವರು ದಾವೀದನ ಬಳಿಗೆ ಬಂದರು. ದಾವೀದನೂ ಅವನ ಜನರೂ ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಿರಲಿಲ್ಲ. ಫಿಲಿಷ್ಟಿಯ ಪ್ರಧಾನರು ದಾವೀದನು ಯುದ್ಧಕ್ಕೆ ಬರಬಾರದೆಂದು ಹೇಳಿ ಹಿಂದಕ್ಕೆ ಕಳುಹಿಸಿದರು. “ಇವನು ತನ್ನ ಅರಸನೊಟ್ಟಿಗೆ ಸೇರಿದರೆ ನಮ್ಮ ರುಂಡಗಳೇ ಕತ್ತರಿಸಲ್ಪಡುವವು” ಎಂದರು.
20 ದಾವೀದನು ಚಿಕ್ಲಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ: ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಲತೈ. ಇವರೆಲ್ಲರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು.
21 ದಾವೀದನು ದುಷ್ಟ ಜನರ ವಿರುದ್ಧವಾಗಿ ಮಾಡಿದ ಯುದ್ಧದಲ್ಲಿ ಅವರು ಸಹಾಯಮಾಡಿದರು. ಈ ದುಷ್ಟ ಜನರು ದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ದರೋಡೆ ಮಾಡುತ್ತಿದ್ದರು. ಮನಸ್ಸೆಕುಲದಿಂದ ಸೇರಿದ ಜನರೆಲ್ಲಾ ಧೈರ್ಯಶಾಲಿಗಳಾಗಿದ್ದರು. ಅವರು ದಾವೀದನ ಸೈನ್ಯದಲ್ಲಿ ಅಧಿಕಾರಿಗಳಾದರು.
22 ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಬಂದು ದಾವೀದನನ್ನು ಸೇರಿಕೊಂಡಿದ್ದರಿಂದ ದಾವೀದನ ಸೈನ್ಯವು ಬಲಗೊಂಡಿತು.
ಹೆಬ್ರೋನಿನಲ್ಲಿ ಸೇರಿದ ಇತರ ಜನರು
23 ದಾವೀದನು ಹೆಬ್ರೋನಿನಲ್ಲಿದ್ದಾಗ ಯುದ್ಧಸನ್ನದ್ಧರಾಗಿದ್ದವರು ದಾವೀದನಿಗೆ ಸೌಲನ ರಾಜ್ಯವನ್ನು ಕೊಡಲು ಬಂದರು. ಇದು ಯೆಹೋವನು ಮುಂತಿಳಿಸಿದಂತೆ ಆಯಿತು. ಅವರ ಸಂಖ್ಯೆಯು ಹೀಗಿದೆ:
24 ಯೆಹೂದಕುಲದಿಂದ ಆರು ಸಾವಿರದ ಎಂಟನೂರು ಮಂದಿ. ಅವರು ಈಟಿ ಮತ್ತು ಗುರಾಣಿಗಳನ್ನು ಹಿಡಿದ ಸೈನಿಕರಾಗಿದ್ದರು.
25 ಸಿಮೆಯೋನ್ ಕುಲದಿಂದ ಏಳು ಸಾವಿರದ ನೂರು ಮಂದಿ.
26 ಲೇವಿಕುಲದಿಂದ ನಾಲ್ಕ ಸಾವಿರದ ಆರುನೂರು ಮಂದಿ.
27 ಯೆಹೋಯಾದಾವನು ಅವರಲ್ಲಿದ್ದನು. ಇವನು ಆರೋನನ ಕುಲಪ್ರಧಾನನಾಗಿದ್ದನು. ಇವನೊಂದಿಗೆ ಮೂರು ಸಾವಿರದ ಏಳುನೂರ ಮಂದಿ.
28 ಆ ಗುಂಪಿನಲ್ಲಿ ಚಾದೋಕನೂ ಇದ್ದನು. ಇವನೂ ಪರಾಕ್ರಮಶಾಲಿಯಾಗಿದ್ದನು. ಇವನು ತನ್ನ ಇಪ್ಪತ್ತೆರಡು ಮಂದಿ ಅಧಿಕಾರಿಗಳೊಂದಿಗೆ ಸೇರಿದನು.
29 ಬೆನ್ಯಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರೆಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.
30 ಎಫ್ರಾಯೀಮ್ ಕುಲದಿಂದ ಇಪ್ಪತ್ತು ಸಾವಿರದ ಎಂಟನೂರು ಮಂದಿ ಇದ್ದರು. ಇವರೆಲ್ಲರೂ ಧೈರ್ಯಶಾಲಿ ಸೈನಿಕರು ಮತ್ತು ತಮ್ಮ ಕುಲದವರಿಗೆ ನಾಯಕರಾಗಿದ್ದರು.
31 ಮನಸ್ಸೆಯ ಅರ್ಧಕುಲದಿಂದ ಹದಿನೆಂಟು ಸಾವಿರ ಮಂದಿ ಇದ್ದರು. ದಾವೀದನನ್ನು ಅರಸನನ್ನಾಗಿ ಮಾಡಲು ಇವರನ್ನು ಹೆಸರುಹೆಸರಾಗಿ ಕರೆಸಲಾಗಿತ್ತು.
32 ಇಸ್ಸಾಕಾರ್ ಕುಲದಿಂದ ಇನ್ನೂರು ಮಂದಿ ಜ್ಞಾನಿಗಳು ಬಂದಿದ್ದರು. ಇವರು ಸಮಯೋಚಿತ ಜ್ಞಾನವುಳ್ಳವರಾಗಿದ್ದರು ಮತ್ತು ಇಸ್ರೇಲರಿಗೆ ಯೋಗ್ಯವಾದದ್ದನ್ನು ತಿಳಿದವರಾಗಿದ್ದರು; ಇವರ ಸಂಬಂಧಿಕರೂ ಇವರೊಂದಿಗಿದ್ದರು ಮತ್ತು ಇವರ ಆಜ್ಞೆಗೆ ಒಳಪಟ್ಟವರೂ ಆಗಿದ್ದರು.
33 ಜೆಬುಲೂನ್ ಕುಲದಿಂದ ಐವತ್ತು ಸಾವಿರ ನುರಿತ ಸೈನಿಕರು ಬಂದರು. ಅವರು ಎಲ್ಲಾ ತರಹ ಆಯುಧಗಳನ್ನು ಉಪಯೋಗಿಸಲು ತರಬೇತಿ ಹೊಂದಿದವರು. ಇವರು ದಾವೀದನಿಗೆ ನಂಬಿಗಸ್ತರಾಗಿದ್ದರು.
34 ನಫ್ತಾಲಿಕುಲದಿಂದ ಒಂದು ಸಾವಿರ ಮಂದಿ ಅಧಿಪತಿಗಳು ಮತ್ತು ಮೂವತ್ತೇಳು ಸಾವಿರ ಮಂದಿ ಸೈನಿಕರು ಇದ್ದರು. ಇವರೆಲ್ಲಾ ಈಟಿ ಮತ್ತು ಗುರಾಣಿಗಳನ್ನು ಹಿಡಿದ ಸೈನಿಕರಾಗಿದ್ದರು.
35 ದಾನ್ಕುಲದಿಂದ ಇಪ್ಪತ್ತೆಂಟು ಸಾವಿರದ ಆರು ನೂರು ಮಂದಿ ಯುದ್ಧಕ್ಕೆ ತಯಾರಾದವರು ಇದ್ದರು.
36 ಅಶೇರ್ಕುಲದಿಂದ ನಲವತ್ತು ಸಾವಿರ ಮಂದಿ ಯುದ್ಧಕ್ಕೆ ತಯಾರಾದವರು ಇದ್ದರು.
37 ಜೋರ್ಡನ್ ಹೊಳೆಯ ಪೂರ್ವಪ್ರಾಂತ್ಯದಲ್ಲಿದ್ದ ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧಕುಲಗಳಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ. ಇವರು ಎಲ್ಲಾ ತರದ ಆಯುಧಗಳಲ್ಲಿ ಪರಿಣತರಾಗಿದ್ದರು.
38 ಇವರೆಲ್ಲರೂ ಧೈರ್ಯಶಾಲಿ ಯೋಧರಾಗಿದ್ದರು. ಇವರೆಲ್ಲಾ ದಾವೀದನನ್ನು ಅರಸನನ್ನಾಗಿ ಮಾಡುವ ಉದ್ದೇಶದಿಂದ ಹೆಬ್ರೋನಿಗೆ ಬಂದರು. ದಾವೀದನು ತಮ್ಮ ಅರಸನಾಗುವುದಕ್ಕೆ ಇಸ್ರೇಲಿನ ಬೇರೆ ಜನರೆಲ್ಲರೂ ಒಪ್ಪಿಗೆಕೊಟ್ಟರು.
39 ಈ ಜನರೆಲ್ಲಾ ದಾವೀದನೊಂದಿಗೆ ಮೂರು ದಿನಗಳನ್ನು ಕಳೆದರು. ಅವರ ಕುಟುಂಬದವರು ತಯಾರಿಸಿದ ಆಹಾರವನ್ನು ಅವರು ಊಟಮಾಡಿದರು.
40 ಇದಲ್ಲದೆ ಇವರ ನೆರೆಹೊರೆಯವರಾದ ಇಸ್ಸಾಕಾರ್, ನಫ್ತಾಲಿ, ಜೆಬುಲೂನ್ ಕುಲದವರು ಸಹ ಅಡಿಗೆ ಮಾಡಿಸಿ ಒಂಟೆಗಳ, ಹೇಸರಕತ್ತೆಗಳ, ಎತ್ತುಗಳ ಮತ್ತು ದನಕರುಗಳ ಮೇಲೆ ಹೇರಿಕೊಂಡು ಬಂದು ಒದಗಿಸಿದರು. ಅವರು ಬೇಕಾದಷ್ಟು ಗೋಧಿಹಿಟ್ಟನ್ನು, ಒಣಅಂಜೂರವನ್ನು, ದ್ರಾಕ್ಷಿಯನ್ನು, ದ್ರಾಕ್ಷಾರಸವನ್ನು, ಎಣ್ಣೆಯನ್ನು, ದನಕರುಗಳನ್ನು ಮತ್ತು ಕುರಿಗಳನ್ನು ಒದಗಿಸಿದರು. ಇಸ್ರೇಲರೆಲ್ಲರೂ ಹರ್ಷದಿಂದ ತುಂಬಿದರು.