35
ರಚನೆಗಾರ: ದಾವೀದ.
ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
ನನ್ನ ಯುದ್ಧಗಳಲ್ಲಿ ಹೋರಾಡು!
ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
ನನಗೆ ಸಹಾಯಕನಾಗಿ ನಿಲ್ಲು.
ಈಟಿಯನ್ನೂ ಭಲ್ಲೆಯನ್ನೂ* ತೆಗೆದುಕೊ.
ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.
 
ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
“ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”
11 ಸುಳ್ಳುಸಾಕ್ಷಿಗಳು ನನಗೆ ಕೇಡುಮಾಡಬೇಕೆಂದಿದ್ದಾರೆ.
ನನಗೆ ತಿಳಿಯದ ವಿಷಯಗಳ ಮೇಲೆ ಅವರು ಪ್ರಶ್ನೆಗಳನ್ನು ಕೇಳುವರು.
12 ನಾನು ಅವರಿಗೆ ಉಪಕಾರಗಳನ್ನು ಮಾಡಿದ್ದರೂ ಅವರು ನನಗೆ ಅಪಕಾರಗಳನ್ನೇ ಮಾಡುತ್ತಾರೆ.
ಯೆಹೋವನೇ, ನನಗೆ ಯೋಗ್ಯವಾದವುಗಳನ್ನು ದಯಪಾಲಿಸು.
13 ಅವರು ಅಸ್ವಸ್ಥರಾಗಿದ್ದಾಗ ನಾನು ದುಃಖಪಟ್ಟೆನು; ಉಪವಾಸ ಮಾಡಿದೆನು.
ನಾನು ಅವರಿಗೋಸ್ಕರ ಪ್ರಾರ್ಥಿಸಿದ್ದಕ್ಕೆ ಇದು ನನಗೆ ಪ್ರತಿಫಲವೇ?
14 ಅವರು ಅಸ್ವಸ್ಥರಾಗಿದ್ದಾಗ ಶೋಕವಸ್ತ್ರಗಳನ್ನು ಧರಿಸುತ್ತಿದ್ದೆನು.
ಅವರನ್ನು ನನ್ನ ಸ್ನೇಹಿತರಂತೆಯೂ ಸಹೋದರರಂತೆಯೂ ಉಪಚರಿಸಿದೆನು; ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅತ್ತೆನು.
15 ಆದರೆ ನಾನು ಆಪತ್ತಿನಲ್ಲಿದ್ದಾಗ ಅವರು ನನ್ನನ್ನು ಗೇಲಿಮಾಡಿದರು,
ಅವರು ನನ್ನ ನಿಜವಾದ ಸ್ನೇಹಿತರಲ್ಲ;
ಅವರ ಪರಿಚಯವೂ ನನಗಿರಲಿಲ್ಲ.
ಅವರು ನನ್ನ ಸುತ್ತಲೂ ಸೇರಿಬಂದು ನನ್ನ ಮೇಲೆ ಆಕ್ರಮಣ ಮಾಡಿದರು.
16 ಅವರು ಕೆಟ್ಟಮಾತಿನಿಂದ ನನ್ನನ್ನು ಹಾಸ್ಯಮಾಡಿದರು;
ನನ್ನ ಮೇಲಿನ ಕೋಪದಿಂದ ಹಲ್ಲುಕಡಿದರು.
 
17 ನನ್ನ ಒಡೆಯನೇ, ಇವುಗಳನ್ನು ಇನ್ನೆಷ್ಟುಕಾಲ ನೋಡುತ್ತಾ ಇರುವೆ?
ಅವರು ನನ್ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ.
ನನ್ನ ಪ್ರಾಣವನ್ನು ರಕ್ಷಿಸು; ಸಿಂಹಗಳಂತಿರುವ ಆ ದುಷ್ಟರಿಂದ ನನ್ನ ಪ್ರಿಯ ಪ್ರಾಣವನ್ನು ರಕ್ಷಿಸು.
 
18 ಆಗ ನಾನು ನಿನ್ನನ್ನು ಮಹಾಸಭೆಯಲ್ಲಿ ಸ್ತುತಿಸುವೆನು;
ಬಲಿಷ್ಠರ ಸಮೂಹದಲ್ಲಿ ನಿನ್ನನ್ನು ಕೊಂಡಾಡುವೆನು.
19 ಸುಳ್ಳುಗಾರರಾದ ನನ್ನ ವೈರಿಗಳು ಇನ್ನು ಮೇಲೆ ಹಿಗ್ಗಲಾರರು.
ನನ್ನ ವೈರಿಗಳು ತಮ್ಮ ಒಳಸಂಚುಗಳಿಗೆ ಖಂಡಿತವಾಗಿ ದಂಡಿಸಲ್ಪಡುವರು.
20 ನನ್ನ ವೈರಿಗಳು ಶಾಂತಿಸ್ಥಾಪನೆಗಾಗಿ ಯಾವ ಆಲೋಚನೆಗಳನ್ನೂ ಮಾಡುತ್ತಿಲ್ಲ.
ಈ ದೇಶದಲ್ಲಿ ಶಾಂತಿಯಿಂದಿರುವ ಜನರಿಗೆ ಕೇಡುಮಾಡಲು ಅವರು ಒಳಸಂಚುಗಳನ್ನು ಮಾಡುತ್ತಿದ್ದಾರೆ.
21 ನನ್ನ ವೈರಿಗಳು ನನ್ನನ್ನು ದೂಷಿಸುವರು.
“ಆಹಾ! ನೀನು ಮಾಡುತ್ತಿರುವುದು ನಮಗೆ ಗೊತ್ತು!” ಎನ್ನುವರು.
22 ಯೆಹೋವನೇ, ಇದೆಲ್ಲವನ್ನೂ ನೀನು ನೋಡಿರುವೆ,
ಆದ್ದಿರಂದ ಸುಮ್ಮನಿರಬೇಡ; ನನ್ನ ಕೈ ಬಿಡಬೇಡ.
23 ಎಚ್ಚರಗೊಳ್ಳು! ಎದ್ದೇಳು!
ನನ್ನ ದೇವರೇ, ಯೆಹೋವನೇ, ನನಗಾಗಿ ಹೋರಾಡು; ನನಗೆ ನ್ಯಾಯವನ್ನು ದೊರಕಿಸು.
24 ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗನುಸಾರವಾಗಿ ನನಗೆ ನ್ಯಾಯದೊರಕಿಸು.
ಅವರು ನನ್ನನ್ನು ನೋಡಿ ನಗಲು ಆಸ್ಪದ ಕೊಡಬೇಡ.
25 ಅವರು, “ಆಹಾ! ನಾವು ಬಯಸಿದ್ದನ್ನೇ ಪಡೆದೆವು!” ಎಂದು ಹೇಳಲು ಅವಕಾಶಕೊಡಬೇಡ.
“ನಾವು ಅವನನ್ನು ನಾಶಮಾಡಿದೆವು!” ಎಂದು ಹೇಳಲು ಅವರಿಗೆ ಆಸ್ಪದ ಕೊಡಬೇಡ.
26 ನನ್ನ ವೈರಿಗಳೆಲ್ಲಾ ಅವಮಾನಕ್ಕೂ ನಾಚಿಕೆಗೂ ಗುರಿಯಾಗಲಿ.
ನನಗೆ ಕೇಡಾದಾಗ ಅವರು ಸಂತೋಷಪಟ್ಟರು;
ತಮ್ಮನ್ನು ನನಗಿಂತಲೂ ಉತ್ತಮರೆಂದು ಭಾವಿಸಿಕೊಂಡರು!
ಆದ್ದರಿಂದ ಅವರನ್ನು ಅವಮಾನವೂ ನಾಚಿಕೆಯೂ ಆವರಿಸಿಕೊಳ್ಳಲಿ.
27 ನನಗೆ ನ್ಯಾಯ ದೊರೆಯಲೆಂದು ಅಪೇಕ್ಷಿಸುವವರು ಸಂತೋಷಪಡಲಿ.
“ಯೆಹೋವನು ಎಷ್ಟೋ ದೊಡ್ಡವನು!
ಆತನು ತನ್ನ ಸೇವಕನಿಗೆ ಅತ್ಯುತ್ತಮವಾದುದನ್ನೇ ಮಾಡಿದನು” ಎಂದು
ಅವರು ಹೇಳುತ್ತಲೇ ಇರಲಿ.
 
28 ನಿನ್ನ ನೀತಿಯ ಕುರಿತು ನಾನು ಜನರಿಗೆ ಹೇಳುವೆನು;
ಪ್ರತಿದಿನವೂ ನಿನ್ನನ್ನು ಸ್ತುತಿಸುವೆನು.
 
* 35:3 ಭಲ್ಲೆ ಈಟಿಯಂಥ ಒಂದು ಆಯುಧ.