19
ಕೆಂಪು ಹಸುವಿನ ಬೂದಿ
1 ಯೆಹೋವನು ಮೋಶೆ ಮತ್ತು ಆರೋನರೊಡನೆ ಮಾತಾಡಿ ಹೀಗೆಂದನು:
2 “ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು.
3 ಅದನ್ನು ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿರಿ. ಅವನು ಅದನ್ನು ಪಾಳೆಯದ ಹೊರಗೆ ಹೊಡಿಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು.
4 ಬಳಿಕ ಅವನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು.
5 ಬಳಿಕ ಅವನು ಆ ಹಸುವನ್ನು ಚರ್ಮ, ಮಾಂಸ, ರಕ್ತ ಮತ್ತು ಕಲ್ಮಶಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಬೇಕು.
6 ಯಾಜಕನು ದೇವದಾರು ಮರದ ಕಟ್ಟಿಗೆಯನ್ನೂ ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನೂ ಕೆಂಪು ದಾರವನ್ನೂ ತೆಗೆದುಕೊಂಡು, ಉರಿಯುತ್ತಿರುವ ಆ ಹಸುವಿನ ಮೇಲೆ ಎಸೆಯಬೇಕು.
7 ಆ ಯಾಜಕನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
8 ಆ ಹಸುವನ್ನು ಸುಟ್ಟು ಹಾಕಿದವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿಕೊಳ್ಳಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
9 “ಆಗ ಶುದ್ಧನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇಸ್ರೇಲರ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಆ ಬೂದಿಯನ್ನು ಉಪಯೋಗಿಸಬೇಕು. ಅದು ದೋಷಪರಿಹಾರಕವಾದದ್ದು.
10 “ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
“ಇದು ಇಸ್ರೇಲರಿಗೂ ಅವರ ಮಧ್ಯದಲ್ಲಿ ಇಳಿದುಕೊಂಡಿರುವ ಪರದೇಶಸ್ಥರಿಗೂ ಶಾಶ್ವತ ನಿಯಮ.
11 ಯಾವನಾದರೂ ಮನುಷ್ಯ ಶವವನ್ನು ಮುಟ್ಟಿದರೆ, ಏಳು ದಿನಗಳವರೆಗೆ ಅಶುದ್ಧನಾಗಿರುವನು.
12 ಅವನು ಶುದ್ಧೀಕರಣದ ನೀರಿನಿಂದ ಮೂರನೆಯ ದಿನದಲ್ಲಿ ಮತ್ತು ತಿರುಗಿ ಏಳನೆಯ ದಿನದಲ್ಲಿ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು. ಆಗ ಅವನು ಶುದ್ಧನಾಗಿರುವನು.
13 ಒಬ್ಬನು ಮನುಷ್ಯ ಶವವನ್ನು ಮುಟ್ಟಿ ತನ್ನನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಅವನು ಯೆಹೋವನ ಪವಿತ್ರ ಗುಡಾರವನ್ನು ಅಶುದ್ಧಮಾಡುತ್ತಾನೆ. ಆದ್ದರಿಂದ ಆ ವ್ಯಕ್ತಿಯನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣದ ವಿಶೇಷ ನೀರು ಅವನ ಮೇಲೆ ಚಿಮಿಕಿಸಲ್ಪಡದ ಕಾರಣ ಅವನು ಅಶುದ್ಧನಾಗಿಯೇ ಇರುವನು. ಅವನ ಅಶುದ್ಧತ್ವ ಅವನಲ್ಲಿ ನೆಲೆಸುವುದು. ಅವನು ಅಶುದ್ಧನಾಗಿಯೇ ಇರುವನು.
14 “ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು.
15 ಮತ್ತು ಮುಚ್ಚಳವಿಲ್ಲದಿರುವ ಪ್ರತಿಯೊಂದು ಪಾತ್ರೆಯೂ ಅಶುದ್ಧವಾಗಿರುವುದು.
16 ಹೊರಗೆ ಹೋಗಿರುವವನು ಯುದ್ಧದಲ್ಲಿ ಸತ್ತವನ ಶವವನ್ನಾಗಲಿ ಸಹಜವಾಗಿ ಸತ್ತವನ ಶವವನ್ನಾಗಲಿ ಮನುಷ್ಯನ ಮೂಳೆಯನ್ನಾಗಲಿ ಅಥವಾ ಸಮಾಧಿಯನ್ನಾಗಲಿ ಮುಟ್ಟಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರವನು.
17 “ಆದ್ದರಿಂದ ಅಶುದ್ಧ ವ್ಯಕ್ತಿಯನ್ನು ಶುದ್ಧೀಕರಿಸುವುದಕ್ಕಾಗಿ ಶುದ್ಧೀಕರಣ ಯಜ್ಞದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ತೆಗೆದುಕೊಂಡು ಹರಿಯುವ ನೀರನ್ನು ಅದರ ಮೇಲೆ ಸುರಿಯಬೇಕು.
18 ಆಗ ಶುದ್ಧನಾಗಿರುವ ಒಬ್ಬನು ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನು ಆ ನೀರಿನಲ್ಲಿ ಅದ್ದಿ ಗುಡಾರದ ಮೇಲೆಯೂ ಪಾತ್ರೆಗಳ ಮೇಲೆಯೂ ಮತ್ತು ಅದರೊಳಗಿದ್ದ ವ್ಯಕ್ತಿಗಳ ಮೇಲೆಯೂ ಚಿಮಿಕಿಸಬೇಕು. ಸತ್ತವನ ದೇಹವನ್ನು ಮುಟ್ಟಿದವನಿಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟವನ ದೇಹವನ್ನು ಮುಟ್ಟಿದವನಿಗೂ ಸತ್ತವನ ಮೂಳೆಗಳನ್ನು ಮುಟ್ಟಿದವನಿಗೂ ನೀವು ಹೀಗೆ ಮಾಡಲೇಬೇಕು.
19 “ಶುದ್ಧನಾಗಿರುವವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಚಿಮಿಕಿಸಬೇಕು. ಹೀಗೆ ಅವನು ಏಳನೆಯ ದಿನದಲ್ಲಿ ಶುದ್ಧನಾಗುವನು. ಬಳಿಕ ಅಶುದ್ಧನಾದವನು ತನ್ನ ಬಟ್ಟೆಯನ್ನು ತೊಳೆದುಕೊಳ್ಳಬೇಕು.
20 “ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ.
21 ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
22 ಅಶುದ್ಧನಾದವನು ಮುಟ್ಟುವುದೆಲ್ಲಾ ಅಶುದ್ಧವಾಗುತ್ತದೆ. ಅಲ್ಲದೆ ಅವನನ್ನು ಮಟ್ಟುವವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.”