15
ದೇಹದಿಂದುಂಟಾಗುವ ಸ್ರಾವಗಳ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು
1 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ:
2 “ಇಸ್ರೇಲರಿಗೆ ಹೀಗೆ ಹೇಳಿರಿ: ಒಬ್ಬನ ದೇಹದಿಂದ ಸ್ರಾವವಾದಾಗ ಆ ವ್ಯಕ್ತಿ ಅಶುದ್ಧನಾಗಿದ್ದಾನೆ.
3 ಆ ಸ್ರಾವವು ಹರಿಯುತ್ತಿದ್ದರೂ ನಿಂತುಹೋಗಿದ್ದರೂ ಅವನು ಅಶುದ್ಧನೇ.
4 “ಸ್ರಾವವಾಗುತ್ತಿರುವ ವ್ಯಕ್ತಿ ಯಾವ ಹಾಸಿಗೆಯ ಮೇಲೆ ಮಲಗಿದರೂ ಆ ಹಾಸಿಗೆ ಅಶುದ್ಧವಾಗುತ್ತದೆ.
5 ಯಾವನಾದರೂ ಆ ವ್ಯಕ್ತಿಯ ಹಾಸಿಗೆಯನ್ನು ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
6 ಸ್ರಾವವುಳ್ಳವನು ಕುಳಿತುಕೊಳ್ಳುವ ವಸ್ತುವಿನ ಮೇಲೆ ಯಾವನಾದರೂ ಕುಳಿತುಕೊಂಡರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
7 ಅಲ್ಲದೆ ಸ್ರಾವವುಳ್ಳ ವ್ಯಕ್ತಿಯನ್ನು ಯಾವನಾದರೂ ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
8 “ಸ್ರಾವವುಳ್ಳ ವ್ಯಕ್ತಿ ಶುದ್ಧವ್ಯಕ್ತಿಯ ಮೇಲೆ ಉಗುಳಿದರೆ, ಶುದ್ಧವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಿಂದ ಸ್ನಾನಮಾಡಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
9 ಸ್ರಾವವುಳ್ಳ ವ್ಯಕ್ತಿ ಯಾವ ತಡಿಯ ಮೇಲೆ ಕುಳಿತರೂ ಅದು ಅಶುದ್ಧವಾಗುವುದು.
10 ಆದ್ದರಿಂದ ಯಾವನಾದರೂ ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ಯಾವದೇ ವಸ್ತುಗಳನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ವಸ್ತುಗಳನ್ನು ತೆಗೆದುಕೊಂಡುಹೋಗುವ ಯಾವನಾದರೂ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
11 ಒಂದುವೇಳೆ ಸ್ರಾವವುಳ್ಳ ಒಬ್ಬನು ತನ್ನ ಕೈಗಳನ್ನು ನೀರಿನಲ್ಲಿ ತೊಳೆಯದೆ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೆ, ಆಗ ಆ ಇನ್ನೊಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
12 “ಸ್ರಾವವುಳ್ಳ ವ್ಯಕ್ತಿ ಮಣ್ಣಿನ ಮಡಿಕೆಯನ್ನು ಮುಟ್ಟಿದರೆ, ಆ ಮಡಿಕೆಯನ್ನು ಒಡೆದುಹಾಕಬೇಕು. ಸ್ರಾವವುಳ್ಳ ವ್ಯಕ್ತಿ ಮರದ ಬಟ್ಟಲನ್ನು ಮುಟ್ಟಿದರೆ, ಆ ವಸ್ತುವನ್ನು ನೀರಿನಲ್ಲಿ ತೊಳೆಯಬೇಕು.
13 “ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ, ಅವನು ಶುದ್ಧಮಾಡಿಕೊಳ್ಳುವುದಕ್ಕೆ ಏಳು ದಿನಗಳವರೆಗೆ ಕಾಯಬೇಕು. ಬಳಿಕ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗುವನು.
14 ಎಂಟನೆಯ ದಿನದಲ್ಲಿ ಆ ವ್ಯಕ್ತಿ ತನಗೋಸ್ಕರ ಎರಡು ಬೆಳವಕ್ಕಿಗಳನ್ನು ಅಥವಾ ಎರಡು ಪಾರಿವಾಳದ ಮರಿಗಳನ್ನು ತೆಗೆದುಕೊಳ್ಳಬೇಕು. ಅವನು ದೇವದರ್ಶನ ಗುಡಾರದ ಬಾಗಿಲಿನ ಬಳಿ ಯೆಹೋವನ ಸನ್ನಿಧಿಗೆ ಬರಬೇಕು. ಆ ವ್ಯಕ್ತಿ ಎರಡು ಪಕ್ಷಿಗಳನ್ನು ಯಾಜಕನಿಗೆ ಕೊಡಬೇಕು.
15 ಯಾಜಕನು ಈ ಪಕ್ಷಿಗಳಲ್ಲಿ ಒಂದನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸುವನು. ಹೀಗೆ ಯಾಜಕನು ಅವನ ಅಶುದ್ಧವಾದ ಸ್ರಾವಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.
16 “ಒಬ್ಬನಿಗೆ ವೀರ್ಯಸ್ಖಲನವಾದರೆ, ಅವನು ನೀರಿನಲ್ಲಿ ಸರ್ವಾಂಗಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
17 ಯಾವ ಬಟ್ಟೆಯ ಮೇಲಾಗಲಿ ತೊಗಲಿನ ವೇಲಾಗಲಿ ವೀರ್ಯವು ಬಿದ್ದರೆ, ಆ ಬಟ್ಟೆ ಅಥವಾ ತೊಗಲನ್ನು ನೀರಿನಿಂದ ತೊಳೆಯಬೇಕು. ಅದು ಸಾಯಂಕಾಲವರೆಗೆ ಅಶುದ್ಧವಾಗಿರುವುದು.
18 ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ, ಆಗ ಅವರಿಬ್ಬರೂ ಸ್ನಾನಮಾಡಬೇಕು. ಅವರು ಸಾಯಂಕಾಲದವರೆಗೆ ಅಶುದ್ಧರಾಗಿರುವರು.
19 “ಸ್ತ್ರೀಗೆ ಅವಳ ತಿಂಗಳ ಮುಟ್ಟಿನಿಂದ ಸ್ರಾವವಿದ್ದರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಯಾವನಾದರೂ ಆಕೆಯನ್ನು ಮುಟ್ಟಿದರೆ, ಆ ವ್ಯಕ್ತಿಯೂ ಸಾಯಂಕಾಲದವರೆಗೆ ಆಶುದ್ಧನಾಗಿರುವನು.
20 ಅಲ್ಲದೆ, ಸ್ತ್ರೀಯು ತನ್ನ ಮುಟ್ಟಿನ ದಿನಗಳಲ್ಲಿ ಯಾವುದರ ಮೇಲೆ ಮಲಗಿದರೂ ಅದು ಅಶುದ್ಧವಾಗಿರುವುದು ಮತ್ತು ಆ ಸಮಯದಲ್ಲಿ ಆಕೆಯು ಯಾವುದರ ಮೇಲೆ ಕುಳಿತುಕೊಂಡರೂ ಅದು ಅಶುದ್ಧವಾಗಿರುವುದು.
21 ಯಾವನಾದರೂ ಅವಳ ಹಾಸಿಗೆಯನ್ನು ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
22 ಯಾವನಾದರೂ ಅವಳು ಕುಳಿತುಕೊಂಡಿದ್ದ ಯಾವ ವಸ್ತುವನ್ನಾದರೂ ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
23 ಅವನು ಅವಳ ಹಾಸಿಗೆಯನ್ನಾಗಲಿ ಅಥವಾ ಅವಳು ಕುಳಿತ್ತಿದ್ದ ಸ್ಥಳದಲ್ಲಿ ಇದ್ದ ಯಾವದನ್ನಾದರೂ ಮುಟ್ಟಿದರೆ ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
24 “ಪುರುಷನು ಸ್ತ್ರೀಯ ಮುಟ್ಟಿನ ಸಮಯದಲ್ಲಿ ಆಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದರೆ, ಆಗ ಅವನು ಏಳು ದಿನಗಳವರೆಗೆ ಅಶುದ್ಧನಾಗಿರುವನು. ಅವನು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾಗುವುದು.
25 “ಸ್ತ್ರೀಗೆ ತನ್ನ ಮುಟ್ಟಿನ ದಿನಗಳ ಹೊರತಾಗಿ ಅನೇಕ ದಿನಗಳವರೆಗೆ ರಕ್ತಸ್ರಾವವಾದರೆ ಅಥವಾ ಮುಟ್ಟಿನ ದಿನಗಳ ನಂತರ ಅವಳಿಗೆ ಸ್ರಾವವಾದರೆ, ಆಕೆಯು ತನ್ನ ಮುಟ್ಟಿನ ದಿನಗಳಲ್ಲಿ ಅಶುದ್ಧಳಾಗಿರುವಂತೆ, ಅಶುದ್ಧಳಾಗಿರುವಳು. ಅವಳಿಗೆ ಸ್ರಾವವಾಗುವ ದಿನಗಳೆಲ್ಲಾ ಅವಳು ಅಶುದ್ಧಳಾಗಿರುವಳು.
26 ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಮಲಗಿರುವ ಹಾಸಿಗೆಯಂತೆಯೇ ಅಶುದ್ಧವಾಗಿರುವುದು. ಅವಳು ಯಾವುದರ ಮೇಲೆ ಕುಳಿತರೂ ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಕುಳಿತಿದ್ದ ವಸ್ತುವಿನಂತೆಯೇ ಅಶುದ್ಧವಾಗಿರುವುದು.
27 ಯಾವನಾದರೂ ಆ ವಸ್ತುಗಳನ್ನು ಮುಟ್ಟಿದರೆ, ಆ ವ್ಯಕ್ತಿ ಅಶುದ್ಧನಾಗಿರುವನು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
28 ಸ್ತ್ರೀಗೆ ಸ್ರಾವವು ನಿಂತ ನಂತರ, ಅವಳು ಏಳು ದಿನಗಳವರೆಗೆ ಕಾಯಬೇಕು. ಅದರ ನಂತರ ಅವಳು ಶುದ್ಧಳಾಗಿರುವಳು.
29 ಬಳಿಕ ಎಂಟನೆಯ ದಿನದಲ್ಲಿ ಸ್ತ್ರೀಯು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಳ್ಳಬೇಕು. ಅವಳು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು.
30 ತರುವಾಯ ಯಾಜಕನು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದು ಪಕ್ಷಿಯನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಹೀಗೆ ಯಾಜಕನು ಅವಳಿಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.
31 “ಆದ್ದರಿಂದ ಅಶುದ್ಧತ್ವದ ಕುರಿತು ನೀವು ಇಸ್ರೇಲರನ್ನು ಎಚ್ಚರಿಸಬೇಕು. ನೀವು ಜನರನ್ನು ಎಚ್ಚರಿಸದಿದ್ದರೆ ಅವರು ನನ್ನ ಪವಿತ್ರ ಗುಡಾರವನ್ನು ಅಶುದ್ಧಮಾಡಿ ಸಾವಿಗೀಡಾಗುವರು”
32 ಸ್ರಾವವುಳ್ಳ ಜನರು ಅನುಸರಿಸಬೇಕಾದ ನಿಯಮಗಳು ಇವುಗಳೇ. ವೀರ್ಯಸ್ಖಲನದಿಂದ ಅಶುದ್ಧರಾದ ಪುರುಷರು ಅನುಸರಿಸಬೇಕಾದ ನಿಯಮಗಳು ಇವುಗಳೇ.
33 ತಮ್ಮ ತಿಂಗಳ ಮುಟ್ಟಿನಿಂದ ಅಶುದ್ಧರಾಗುವ ಸ್ತ್ರೀಯರು, ಸ್ರಾವವಾಗುವ ಗಂಡಸರು ಮತ್ತು ಸ್ತ್ರೀಯರು ಅನುಸರಿಸಬೇಕಾದ ನಿಯಮಗಳು ಇವುಗಳೇ. ಅಶುದ್ಧಳಾದ ಸ್ತ್ರೀಯೊಡನೆ ಮಲಗುವುದರಿಂದ ಅಶುದ್ಧನಾಗುವ ಯಾವನಾದರೂ ಅನುಸರಿಸಬೇಕಾದ ನಿಯಮಗಳು ಇವುಗಳೇ.