15
ಸ್ವರ್ಗದಲ್ಲಿ ಆನಂದ
(ಮತ್ತಾಯ 18:12-14)
1 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು.
2 ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.
3 ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
4 “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು.
5 ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು.
6 ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು.
7 ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.
8 “ಒಬ್ಬ ಸ್ತ್ರೀಯ ಬಳಿ ಹತ್ತು ಬೆಳ್ಳಿನಾಣ್ಯಗಳು ಇವೆಯೆಂದು ಭಾವಿಸಿಕೊಳ್ಳಿರಿ. ಆಕೆಯು ಅವುಗಳಲ್ಲಿ ಒಂದನ್ನು ಕಳೆದುಕೊಳ್ಳುತ್ತಾಳೆ. ಆಕೆ ದೀಪವನ್ನು ತಂದು ಮನೆಯನ್ನು ಗುಡಿಸುತ್ತಾಳೆ. ಆ ನಾಣ್ಯವು ಸಿಕ್ಕುವ ತನಕ ಆಕೆ ಎಚ್ಚರಿಕೆಯಿಂದ ಹುಡುಕುತ್ತಾಳೆ.
9 ಕಳೆದುಹೋದ ಆ ನಾಣ್ಯ ಸಿಕ್ಕಿದಾಗ ಆಕೆ ತನ್ನ ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕರೆದು, ‘ನನ್ನೊಡನೆ ಸಂತೋಷಪಡಿರಿ ಕಳೆದುಹೋಗಿದ್ದ ನನ್ನ ನಾಣ್ಯ ಸಿಕ್ಕಿತು’ ಎಂದು ಹೇಳುವಳು.
10 ಅದೇರೀತಿ ಒಬ್ಬ ಪಾಪಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವಾಗ ದೇವದೂತರ ಮುಂದೆ ಸಂತೋಷವಾಗುವುದು.”
ಮನೆ ಬಿಟ್ಟುಹೋದ ಮಗನು
11 ಬಳಿಕ ಯೇಸು ಹೀಗೆಂದನು: “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು.
12 ಕಿರಿಯ ಮಗನು ತಂದೆಗೆ, ‘ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಡು’ ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಆಸ್ತಿಯನ್ನು ಹಂಚಿಕೊಟ್ಟನು.
13 “ಆಗ ಕಿರಿಮಗನು ತನಗೆ ದೊರೆತ ಪಾಲನ್ನೆಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿದನು. ಅಲ್ಲಿ ಅವನು ಪಟಿಂಗನಾಗಿ ಬದುಕಿ ತನ್ನ ಹಣವನ್ನೆಲ್ಲಾ ಹಾಳುಮಾಡಿಕೊಂಡನು.
14 ಸ್ವಲ್ಪಕಾಲದ ನಂತರ, ಆ ದೇಶದಲ್ಲಿ ಕ್ಷಾಮ ಉಂಟಾಯಿತು. ಆ ದೇಶದ ಯಾವ ಭಾಗದಲ್ಲಿಯೂ ಸಾಕಷ್ಟು ಆಹಾರವಿರಲಿಲ್ಲ. ಅವನು ಬಹಳ ಹಸಿವೆಗೊಂಡಿದ್ದನು. ಅವನಿಗೆ ಹಣದ ಅಗತ್ಯತೆಯಿತ್ತು.
15 ಆದ್ದರಿಂದ ಅವನು ಆ ದೇಶದ ನಿವಾಸಿಯೊಬ್ಬನ ಬಳಿ ಕೂಲಿಕೆಲಸಕ್ಕೆ ಸೇರಿಕೊಂಡನು. ಆ ಮನುಷ್ಯನು ಹಂದಿ ಮೇಯಿಸುವುದ್ಕಕಾಗಿ ಅವನನ್ನು ಹೊಲಕ್ಕೆ ಕಳುಹಿಸಿದನು.
16 ಆಗ ಅವನು ಬಹಳ ಹಸಿವೆಗೊಂಡಿದ್ದನು. ಆದ್ದರಿಂದ ಹಂದಿಗಳು ತಿನ್ನುತ್ತಿದ್ದ ಕಾಯಿಗಳನ್ನೇ ತಿನ್ನಲು ಹಂಬಲಿಸಿದನು. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
17 “ಆಗ ಅವನಿಗೆ ತಾನು ಮಾಡಿದ ಬುದ್ಧಿಹೀನ ಕಾರ್ಯದ ಅರಿವಾಯಿತು. ಅವನು ತನ್ನೊಳಗೆ, ‘ನನ್ನ ತಂದೆಯ ಬಳಿಯಲ್ಲಿರುವ ಸೇವಕರಿಗೆ ಬೇಕಾದಷ್ಟು ಆಹಾರವಿದೆ. ನಾನಾದರೋ ಇಲ್ಲಿ ಊಟವಿಲ್ಲದೆ ಸಾಯುತ್ತಿದ್ದೇನೆ.
18 ನಾನು ಇಲ್ಲಿಂದ ನನ್ನ ತಂದೆಯ ಬಳಿಗೆ ಹೊರಟುಹೋಗುತ್ತೇನೆ. ನಾನು ನನ್ನ ತಂದೆಗೆ, ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ.
19 ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ. ನೀನು ನನ್ನನ್ನು ನಿನ್ನ ಸೇವಕರಲ್ಲಿ ಒಬ್ಬನನ್ನಾಗಿ ಸೇರಿಸಿಕೊ ಎಂದು ಹೇಳುವೆನು’ ಅಂದುಕೊಂಡನು.
20 ಅಂತೆಯೇ ಅವನು ಹೊರಟು ತನ್ನ ತಂದೆಯ ಬಳಿಗೆ ಹೋದನು.
ಕಿರಿಮಗನು ಹಿಂತಿರುಗಿದನು
“ಮಗನು ಇನ್ನೂ ಬಹುದೂರದಲ್ಲಿ ಬರುತ್ತಿರುವಾಗಲೇ ತಂದೆಯು ಅವನನ್ನು ಗುರುತಿಸಿ ಕನಿಕರದಿಂದ ಅವನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು.
21 ಮಗನು ತನ್ನ ತಂದೆಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪಮಾಡಿದ್ದೇನೆ. ನಿನ್ನ ಮಗನೆಂದು ಕರೆಸಿಕೊಳ್ಳುವುದಕ್ಕೆ ನಾನು ಯೋಗ್ಯನಲ್ಲ’ ಎಂದು ಹೇಳಿದನು.
22 “ಆದರೆ ತಂದೆಯು ತನ್ನ ಸೇವಕರಿಗೆ, ‘ತ್ವರೆಮಾಡಿರಿ! ಉತ್ತಮವಾದ ಉಡುಪುಗಳನ್ನು ತಂದು ಇವನಿಗೆ ತೊಡಿಸಿರಿ. ಇವನ ಬೆರಳಿಗೆ ಉಂಗುರವನ್ನು ಹಾಕಿರಿ. ಪಾದಗಳಿಗೆ ಒಳ್ಳೆಯ ಪಾದರಕ್ಷೆಗಳನ್ನು ತೊಡಿಸಿರಿ.
23 ಕೊಬ್ಬಿದ ಕರುವನ್ನು ಕೊಯ್ದು ಉಲ್ಲಾಸಪಡೋಣ.
24 ನನ್ನ ಮಗನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತನಾಗಿ ಬಂದಿದ್ದಾನೆ! ಇವನು ತಪ್ಪಿಹೋಗಿದ್ದನು. ಈಗಲಾದರೋ ಮತ್ತೆ ಸಿಕ್ಕಿದ್ದಾನೆ!’ ಎಂದು ಹೇಳಿದನು. ಆದ್ದರಿಂದ ಅವರು ಉಲ್ಲಾಸಪಡುವುದಕ್ಕೆ ತೊಡಗಿದರು.
ಹಿರಿಮಗನು ಬಂದನು
25 “ಹಿರಿಯ ಮಗನು ಹೊಲದಲ್ಲಿದ್ದನು. ಅವನು ಮನೆಗೆ ಬರುತ್ತಿದ್ದಾಗ ವಾದ್ಯಗೋಷ್ಠಿಯ ಮತ್ತು ನೃತ್ಯದ ಶಬ್ದವನ್ನು ಕೇಳಿದನು.
26 ಆದ್ದರಿಂದ ಅವನು ತನ್ನ ಸೇವಕರಲ್ಲಿ ಒಬ್ಬನನ್ನು ಕರೆದು, ‘ಇದೇನು?’ ಎಂದು ವಿಚಾರಿಸಿದನು.
27 ಆ ಸೇವಕನು, ‘ನಿನ್ನ ತಮ್ಮ ಮರಳಿ ಬಂದಿದ್ದಾನೆ. ನಿನ್ನ ತಂದೆಯು ಕೊಬ್ಬಿದ ಕರುವನ್ನು ಕೊಯ್ಸಿದ್ದಾನೆ. ನಿನ್ನ ತಮ್ಮನು ಮನೆಗೆ ಸುರಕ್ಷಿತವಾಗಿ ಬಂದದ್ದಕ್ಕಾಗಿ ನಿನ್ನ ತಂದೆಯು ಸಂತೋಷಗೊಂಡಿದ್ದಾನೆ!’ ಎಂದು ಹೇಳಿದನು.
28 “ಆಗ ಹಿರಿಯ ಮಗನು ಕೋಪಗೊಂಡು ಔತಣಕೂಟಕ್ಕೆ ಹೋಗಲಿಲ್ಲ. ಆಗ ಅವನ ತಂದೆ ಹೊರಗೆ ಬಂದು ಅವನನ್ನು ಒಳಗೆ ಕರೆದನು.
29 ಹಿರಿಮಗನು ತಂದೆಗೆ, ‘ನಾನು ಗುಲಾಮನಂತೆ ನಿನಗೆ ಅನೇಕ ವರ್ಷಗಳವರೆಗೆ ಸೇವೆಮಾಡಿದೆನು! ನಾನು ಯಾವಾಗಲೂ ನಿನ್ನ ಅಪ್ಪಣೆಗಳಿಗೆ ವಿಧೇಯನಾದೆನು. ಆದರೆ ನೀನು ನನಗೋಸ್ಕರ ಎಂದೂ ಒಂದು ಆಡನ್ನಾಗಲಿ ಕೊಯ್ಯಲಿಲ್ಲ. ನನಗಾಗಿ ಮತ್ತು ನನ್ನ ಸ್ನೇಹಿತರಿಗಾಗಿ ನೀನೆಂದೂ ಒಂದು ಔತಣಕೂಟವನ್ನು ಏರ್ಪಡಿಸಲಿಲ್ಲ.
30 ಆದರೆ ನಿನ್ನ ಕಿರಿಯ ಮಗನು ನಿನ್ನ ಎಲ್ಲ ಹಣವನ್ನು ಸೂಳೆಯರಿಗೆ ಖರ್ಚುಮಾಡಿ ಮನೆಗೆ ಹಿಂತಿರುಗಿ ಬಂದಾಗ ನೀನು ಅವನಿಗಾಗಿ ಕೊಬ್ಬಿದ ಕರುವನ್ನು ಕೊಯ್ಸಿದ್ದಿ!’ ಅಂದನು.
31 “ಆದರೆ ತಂದೆಯು ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನೊಂದಿಗೆ ಇರುತ್ತೀ. ನನಗಿರುವುದೆಲ್ಲಾ ನಿನ್ನದೇ.
32 ನಾವು ಸಂತೋಷಪಡಬೇಕು. ಉಲ್ಲಾಸಪಡಬೇಕು, ಏಕೆಂದರೆ ನಿನ್ನ ತಮ್ಮನು ಸತ್ತುಹೋಗಿದ್ದನು, ಈಗಲಾದರೋ ಮತ್ತೆ ಜೀವಂತವಾಗಿ ಬಂದಿದ್ದಾನೆ. ಅವನು ಕಳೆದುಹೋಗಿದ್ದನು, ಈಗಲಾದರೋ ಮತ್ತೆ ಸಿಕ್ಕಿದ್ದಾನೆ’ ಅಂದನು.”