22
ಮೂರು ಕುಲದವರು ತಮ್ಮ ಮನೆಗಳಿಗೆ ಹೋದರು
1 ತರುವಾಯ ಯೆಹೋಶುವನು ರೂಬೇನ್ಯರನ್ನು, ಗಾದ್ಯರನ್ನು ಮತ್ತು ಮನಸ್ಸೆಕುಲದ ಅರ್ಧಜನರನ್ನು ಒಟ್ಟಿಗೆ ಸೇರಿಸಿದನು.
2 ಯೆಹೋಶುವನು ಅವರಿಗೆ, “ಯೆಹೋವನ ಸೇವಕನಾಗಿದ್ದ ಮೋಶೆಯು ಮಾಡಬೇಕೆಂದು ನಿಮಗೆ ಹೇಳಿದ್ದನ್ನೆಲ್ಲಾ ನೀವು ಮಾಡಿದಿರಿ; ಮತ್ತು ನನ್ನ ಆಜ್ಞೆಗಳನ್ನೆಲ್ಲ ನೀವು ಪಾಲಿಸಿದಿರಿ.
3 ಈವರೆಗೆ ನೀವು ಇಸ್ರೇಲಿನ ಉಳಿದ ಜನರಿಗೆಲ್ಲ ಬೆಂಬಲ ಕೊಟ್ಟಿದ್ದೀರಿ. ನಿಮ್ಮ ದೇವರಾದ ಯೆಹೋವನು ಕೊಟ್ಟ ಎಲ್ಲ ಆಜ್ಞೆಗಳನ್ನು ನೀವು ಜಾಗರೂಕತೆಯಿಂದ ಪಾಲಿಸಿದ್ದೀರಿ.
4 ನಿಮ್ಮ ದೇವರಾದ ಯೆಹೋವನು ಇಸ್ರೇಲರಿಗೆ ಶಾಂತಿಯನ್ನು ದಯಪಾಲಿಸುವುದಾಗಿ ವಾಗ್ದಾನ ಮಾಡಿದ್ದನು. ಈಗ ಯೆಹೋವನು ತನ್ನ ವಾಗ್ದಾನವನ್ನು ಪೂರ್ಣಗೊಳಿಸಿದ್ದಾನೆ. ಆದ್ದರಿಂದ ಈಗ ನೀವು ನಿಮ್ಮ ಮನೆಗಳಿಗೆ ಹೋಗಬಹುದು. ಯೆಹೋವನ ಸೇವಕನಾದ ಮೋಶೆಯು ನಿಮಗೆ ಜೋರ್ಡನ್ ನದಿಯ ಪೂರ್ವಕ್ಕೆ ಸ್ವಾಸ್ತ್ಯವನ್ನು ಕೊಟ್ಟಿದ್ದಾನೆ. ಈಗ ನೀವು ಆ ಪ್ರದೇಶದಲ್ಲಿರುವ ನಿಮ್ಮ ಮನೆಗಳಿಗೆ ಹೋಗಬಹುದು.
5 ಆದರೆ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶವನ್ನು ಮತ್ತು ವಿಧಿಗಳನ್ನು ಪಾಲಿಸಬೇಕೆಂಬುದನ್ನು ಜ್ಞಾಪಕದಲ್ಲಿಡಿ. ನೀವು ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸಬೇಕು ಮತ್ತು ಆತನ ಸೇವೆ ಮಾಡಬೇಕು. ನೀವು ಆತನನ್ನು ಅನುಸರಿಸುತ್ತಾ ನಿಮ್ಮಿಂದ ಸಾಧ್ಯವಾದಷ್ಟು ಆತನ ಸೇವೆ ಮಾಡಬೇಕು” ಎಂದು ಹೇಳಿದನು.
6 ಯೆಹೋಶುವನು ಅವರನ್ನು ಆಶೀರ್ವದಿಸಿ ಬೀಳ್ಕೊಟ್ಟನು. ಅವರು ತಮ್ಮತಮ್ಮ ಮನೆಗಳಿಗೆ ಹೋದರು.
7 ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನ್ ಪ್ರದೇಶವನ್ನು ಕೊಟ್ಟಿದ್ದನು. ಯೆಹೋಶುವನು ಮನಸ್ಸೆಕುಲದ ಉಳಿದರ್ಧ ಜನರಿಗೆ ಜೋರ್ಡನ್ ನದಿಯ ಪಶ್ಚಿಮಕ್ಕೆ ಭೂಮಿಯನ್ನು ಕೊಟ್ಟನು. ಯೆಹೋಶುವನು ಅವರನ್ನು ಆಶೀರ್ವದಿಸಿ ಮನೆಗೆ ಕಳುಹಿಸಿದನು.
8 ಅವನು, “ನೀವು ಬಹಳ ಶ್ರೀಮಂತರಾಗಿದ್ದೀರಿ, ನಿಮ್ಮಲ್ಲಿ ಬಹಳ ಪಶುಗಳಿವೆ; ನಿಮ್ಮಲ್ಲಿ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ರತ್ನಾಭರಣಗಳಿವೆ. ನಿಮ್ಮಲ್ಲಿ ಸುಂದರವಾದ ಅನೇಕ ಬಟ್ಟೆಗಳಿವೆ. ನೀವು ನಿಮ್ಮ ಶತ್ರುಗಳಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡಿದ್ದೀರಿ. ಈ ವಸ್ತುಗಳನ್ನು ನಿಮ್ಮ ಸಹೋದರರೊಂದಿಗೂ ಹಂಚಿಕೊಳ್ಳಿರಿ” ಅಂದನು.
9 ಆದ್ದರಿಂದ ರೂಬೇನ್ ಕುಲದವರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇಸ್ರೇಲಿನ ಬೇರೆ ಕುಲದ ಜನರನ್ನು ಬಿಟ್ಟು ಹೊರಟರು. ಅವರು ಕಾನಾನಿನ ಶೀಲೋವಿನಲ್ಲಿದ್ದರು. ಅವರು ಆ ಸ್ಥಳವನ್ನು ಬಿಟ್ಟು ಗಿಲ್ಯಾದ್ಗೆ ಹಿಂದಿರುಗಿ ಹೋದರು. ಮೋಶೆಯು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದ ತಮ್ಮ ಪ್ರದೇಶಕ್ಕೆ ಅವರು ಹೋದರು. ಅವರಿಗೆ ಈ ಪ್ರದೇಶವನ್ನು ಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದ್ದನು.
10 ಆಗ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಗೆಲಿಲೋತ್ ಎಂಬ ಸ್ಥಳಕ್ಕೆ ಹೋದರು. ಇದು ಕಾನಾನ್ ಪ್ರದೇಶದಲ್ಲಿ ಜೋರ್ಡನ್ ನದಿಯ ಹತ್ತಿರ ಇತ್ತು. ಆ ಸ್ಥಳದಲ್ಲಿ ಅವರು ಸುಂದರವಾದ ಒಂದು ಯಜ್ಞವೇದಿಕೆಯನ್ನು ಕಟ್ಟಿದರು.
11 ಇನ್ನೂ ಶೀಲೋವಿನಲ್ಲಿದ್ದ ಇಸ್ರೇಲಿನ ಉಳಿದ ಜನರು, ಈ ಮೂರು ಕುಲದವರು ಕಟ್ಟಿಸಿದ ಯಜ್ಞವೇದಿಕೆಯ ಬಗ್ಗೆ ಕೇಳಿದರು. ಕಾನಾನಿನ ಗಡಿಯ ಬಳಿಯಿರುವ ಗೆಲಿಲೋತ್ ಎಂಬಲ್ಲಿ ಇದನ್ನು ಕಟ್ಟಲಾಗಿದೆ ಎಂಬುದು ಅವರಿಗೆ ತಿಳಿಯಿತು. ಇದು ಇಸ್ರೇಲರಿಗೆ ಸೇರಿದ ಜೋರ್ಡನ್ ನದಿಯ ಸಮೀಪದಲ್ಲಿತ್ತು.
12 ಇಸ್ರೇಲರೆಲ್ಲರು ಈ ಮೂರು ಕುಲಗಳ ಮೇಲೆ ತುಂಬ ಕೋಪಗೊಂಡರು. ಅವರು ಒಟ್ಟಿಗೆ ಮೂರು ಕುಲಗಳ ವಿರುದ್ಧ ಯುದ್ಧಮಾಡಲು ನಿರ್ಧರಿಸಿದರು.
13-14 ಆದರೆ ಮೊದಲು ಇಸ್ರೇಲರು ರೂಬೇನ್ಯರ, ಗಾದ್ಯರ, ಮನಸ್ಸೆಕುಲದ ಅರ್ಧಜನರ ಸಂಗಡ ಮಾತನಾಡಲು ಕೆಲವು ಜನರನ್ನು ಕಳುಹಿಸಿದರು. ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನ ನೇತೃತ್ವದಲ್ಲಿ ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ವ್ಯಕ್ತಿಯಂತೆ ಹತ್ತು ಜನರನ್ನು ಕಳುಹಿಸಿದರು. ಈ ಹತ್ತು ಜನರು ತಮ್ಮ ಕುಲಗಳ ಮುಖ್ಯ ನಾಯಕರಾಗಿದ್ದರು.
15 ಈ ಹನ್ನೊಂದು ಮಂದಿ ಗಿಲ್ಯಾದಿಗೆ ಹೋಗಿ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಜೊತೆಗೆ ಮಾತನಾಡಿ ಹೀಗೆಂದರು:
16 “ಇಸ್ರೇಲರೆಲ್ಲರೂ ನಿಮ್ಮನ್ನು ಕೇಳುವುದೇನೆಂದರೆ, ‘ಇಸ್ರೇಲಿನ ದೇವರ ವಿರುದ್ಧವಾಗಿ ನೀವು ಹೀಗೆ ಮಾಡಿದ್ದೇಕೆ? ನೀವು ಯೆಹೋವನ ವಿರುದ್ಧವಾಗಿ ತಿರುಗಿದ್ದೇಕೆ? ನಿಮಗಾಗಿ ಯಜ್ಞವೇದಿಕೆಯನ್ನು ಕಟ್ಟಿಕೊಂಡದ್ದೇಕೆ? ಇದು ದೇವರ ಉಪದೇಶಗಳಿಗೆ ವಿರುದ್ಧವಾಗಿದೆ ಎಂಬುದನ್ನು ನೀವು ಬಲ್ಲಿರಿ.
17 ಪೆಗೋರ್ನಲ್ಲಿ ಏನಾಯಿತೆಂಬುದನ್ನು ಸ್ಮರಿಸಿಕೊಳ್ಳಿ ಆ ಪಾಪಕ್ಕಾಗಿ ನಾವು ಇನ್ನೂ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ದೇವರು ನಮ್ಮಲ್ಲಿ ಬಹಳಷ್ಟು ಜನರನ್ನು ರೋಗಗ್ರಸ್ತರನ್ನಾಗಿ ಮಾಡಿದನು. ಆ ರೋಗದಿಂದ ಇಂದಿಗೂ ನಾವು ಕಷ್ಟಪಡುತ್ತಿದ್ದೇವೆ.
18 ಈಗ ನೀವು ಅದನ್ನೇ ಮಾಡುತ್ತಿದ್ದೀರಿ. ನೀವು ಯೆಹೋವನಿಗೆ ವಿಮುಖರಾಗುತ್ತಿದ್ದೀರಿ. ನೀವು ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ, ಪ್ರತಿಯೊಬ್ಬ ಇಸ್ರೇಲಿನವನ ಮೇಲೆಯೂ ಯೆಹೋವನು ಕೋಪಿಸಿಕೊಳ್ಳುವನು.
19 “ ‘ನಿಮ್ಮ ಪ್ರದೇಶವು ದೇವಾರಾಧನೆ ಮಾಡಲು ಅಶುದ್ಧವಾಗಿದ್ದರೆ ನಮ್ಮ ಪ್ರದೇಶಕ್ಕೆ ಬಂದುಬಿಡಿ. ಯೆಹೋವನ ಗುಡಾರವು ನಮ್ಮ ಪ್ರದೇಶದಲ್ಲಿದೆ. ನೀವು ನಮ್ಮ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಅಲ್ಲಿ ವಾಸವಾಗಿರಬಹುದು. ಆದರೆ ಯೆಹೋವನಿಗೆ ವಿರುದ್ಧವಾಗಿ ಹೋಗಬೇಡಿ. ಬೇರೊಂದು ಯಜ್ಞವೇದಿಕೆಯನ್ನು ಕಟ್ಟಬೇಡಿ. ದೇವದರ್ಶನಗುಡಾರದಲ್ಲಿ ನಾವು ಈಗಾಗಲೇ ಯೆಹೋವನಾದ ನಮ್ಮ ದೇವರ ಯಜ್ಞವೇದಿಕೆಯನ್ನು ಹೊಂದಿದ್ದೇವೆ.
20 “ ‘ಜೆರಹನ ಮಗನಾದ ಆಕಾನನನ್ನು ನೆನಪು ಮಾಡಿಕೊಳ್ಳಿ ನಾಶಪಡಿಸಬೇಕಾಗಿದ್ದ ವಸ್ತುಗಳ ಬಗ್ಗೆ ಆತನ ಆಜ್ಞೆಯನ್ನು ತಿರಸ್ಕರಿಸಿದನು. ಅವನು ದೇವರ ನಿಯಮಗಳನ್ನು ಉಲ್ಲಂಘಿಸಿದನು; ಆದರೆ ಶಿಕ್ಷೆಯು ಇಸ್ರೇಲಿನ ಎಲ್ಲ ಜನರಿಗಾಯಿತು. ಆಕಾನನು ತನ್ನ ಪಾಪದಿಂದಾಗಿ ಸತ್ತನು. ಆದರೆ ಬಹಳಷ್ಟು ಬೇರೆ ಜನರೂ ಸತ್ತರು’ ” ಎಂದರು.
21 ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಆ ಹನ್ನೊಂದು ಜನರಿಗೆ ಹೀಗೆ ಉತ್ತರಿಸಿದರು:
22 “ನಮ್ಮ ದೇವರು ಯೆಹೋವನೇ! ನಮ್ಮ ದೇವರು ಯೆಹೋವನೇ ಎಂದು ಇನ್ನೊಮ್ಮೆ ನಾವು ಹೇಳುತ್ತೇವೆ. ನಾವು ಇದನ್ನು ಏಕೆ ಮಾಡಿದೆವೆಂಬುದು ದೇವರಿಗೆ ತಿಳಿದಿದೆ. ನೀವೂ ಅದನ್ನು ತಿಳಿದುಕೊಂಡಿರಬೇಕೆಂಬುದು ನಮ್ಮ ಆಶೆ. ನಾವು ಮಾಡಿದ್ದನ್ನು ನೀವು ವಿವೇಚಿಸಿ ನೋಡಬಹುದು. ನಾವೇನಾದರೂ ತಪ್ಪುಮಾಡಿದ್ದೇವೆಂದು ಅನಿಸಿದ್ದಲ್ಲಿ ಆಗ ನೀವು ನಮ್ಮನ್ನು ಕೊಲ್ಲಬಹುದು.
23 ನಾವು ದೇವರ ಕಟ್ಟಳೆಗಳನ್ನು ಉಲ್ಲಂಘಿಸಿದ್ದರೆ ಯೆಹೋವನೇ ನಮ್ಮನ್ನು ಶಿಕ್ಷಿಸಲಿ ಎಂದು ಆತನಲ್ಲಿ ಕೇಳಿಕೊಳ್ಳುತ್ತೇವೆ.
24 ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯಸಮರ್ಪಣೆ ಇವುಗಳನ್ನು ಸಮರ್ಪಿಸುವುದಕ್ಕೋಸ್ಕರ ಕಟ್ಟಿದ್ದೇವೆ ಎಂದು ನೀವು ತಿಳಿದಿರುವಿರೇನು? ಇಲ್ಲ! ನಾವು ಆ ಕಾರಣಕ್ಕಾಗಿ ಇದನ್ನು ಕಟ್ಟಲಿಲ್ಲ. ನಾವು ಈ ಯಜ್ಞವೇದಿಕೆಯನ್ನು ಕಟ್ಟಿರುವುದಕ್ಕೆ ಕಾರಣವೇನೆಂದರೆ ಮುಂದಿನ ಕಾಲದಲ್ಲಿ ನಿಮ್ಮ ಜನರು ನಮ್ಮನ್ನು ತಮ್ಮ ಜನಾಂಗದ ಒಂದು ಭಾಗವೆಂದು ಸ್ವೀಕರಿಸದೆ ಇಸ್ರೇಲಿನ ದೇವರಾದ ಯೆಹೋವನನ್ನು ಆರಾಧಿಸಲು ಅವಕಾಶಕೊಡದಿರಬಹುದು ಎಂಬ ಭಯ ನಮಗಿತ್ತು.
25 ದೇವರು ನಮಗೆ ಜೋರ್ಡನ್ ನದಿಯ ಮತ್ತೊಂದು ದಡದಲ್ಲಿ ಭೂಮಿಯನ್ನು ಕೊಟ್ಟಿದ್ದಾನೆ. ಅಂದರೆ ಜೋರ್ಡನ್ ನದಿಯು ನಮ್ಮನ್ನು ಬೇರ್ಪಡಿಸುತ್ತದೆ. ನಿಮ್ಮ ಮಕ್ಕಳು ದೊಡ್ಡವರಾಗಿ ನಿಮ್ಮ ಭೂಮಿಯನ್ನು ಆಳುವಾಗ, ನಾವು ನಿಮ್ಮ ಜನರೆಂಬುದನ್ನು ಮರೆತುಬಿಡಬಹುದು. ‘ರೂಬೇನ್ಯರು, ಗಾದ್ಯರು ಆದ ನೀವು ಇಸ್ರೇಲಿನ ಅಂಗವಾಗಿಲ್ಲ’ ಎಂದು ಹೇಳಿ ನಮ್ಮ ಮಕ್ಕಳು ಯೆಹೋವನನ್ನು ಆರಾಧಿಸದಂತೆ ನಿಮ್ಮ ಮಕ್ಕಳು ತಡೆಯಬಹುದು.
26 “ಅದಕ್ಕಾಗಿ ಈ ಯಜ್ಞವೇದಿಕೆಯನ್ನು ಕಟ್ಟಲು ನಾವು ನಿರ್ಧರಿಸಿದೆವು. ಆದರೆ ಅದನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸಲು ಕಟ್ಟಿಲ್ಲ.
27 ನೀವು ಆರಾಧಿಸುವ ದೇವರನ್ನೇ ನಾವೂ ಆರಾಧಿಸುತ್ತೇವೆಂಬುದನ್ನು ನಮ್ಮ ಜನರಿಗೆ ತೋರಿಸಿಕೊಡುವುದೇ ಈ ಯಜ್ಞವೇದಿಕೆಯ ನಿಜವಾದ ಉದ್ದೇಶವಾಗಿದೆ. ನಾವು ಯೆಹೋವನನ್ನು ಆರಾಧಿಸುತ್ತೇವೆ. ನಾವು ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಯೆಹೋವನ ಸಾನ್ನಿಧ್ಯದಲ್ಲಿ ಸಮರ್ಪಿಸುತ್ತೇವೆ ಎಂಬುದಕ್ಕೆ ಈ ಯಜ್ಞವೇದಿಕೆಯು ನಿಮಗೂ ನಮಗೂ ಮತ್ತು ನಮ್ಮ ಮುಂದಿನ ಪೀಳಿಗೆಗಳಿಗೂ ಸಾಕ್ಷಿಯಾಗಿರುತ್ತದೆ. ನಾವು ಸಹ ನಿಮ್ಮಂತೆಯೇ ಇಸ್ರೇಲಿನ ಜನರೆಂಬುದನ್ನು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳಿಗೆ ತಿಳಿದಿರಲಿ ಎಂಬುದು ನಮ್ಮ ಇಚ್ಛೆ.
28 ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳಿಗೆ ‘ನೀವು ಇಸ್ರೇಲಿಗೆ ಸಂಬಂಧಪಟ್ಟವರಲ್ಲ’ ಎಂದು ಹೇಳಿದರೆ, ನಮ್ಮ ಮಕ್ಕಳು ‘ಇಲ್ಲಿ ನೋಡಿ! ಗತಿಸಿಹೋದ ನಮ್ಮ ಪೂರ್ವಿಕರು ಒಂದು ಯಜ್ಞವೇದಿಕೆಯನ್ನು ಕಟ್ಟಿದ್ದಾರೆ. ಆ ಯಜ್ಞವೇದಿಕೆಯು ಪವಿತ್ರ ಗುಡಾರದಲ್ಲಿರುವ ಯಜ್ಞವೇದಿಕೆಯಂತಿದೆ. ನಾವು ಈ ಯಜ್ಞವೇದಿಕೆಯನ್ನು ಸರ್ವಾಂಗಹೋಮಗಳಿಗಾಗಲಿ ಯಜ್ಞಗಳಿಗಾಗಲಿ ಬಳಸುವುದಿಲ್ಲ. ನಾವು ಇಸ್ರೇಲಿಗೆ ಸೇರಿದವರೆಂಬುದಕ್ಕೆ ಈ ಯಜ್ಞವೇದಿಕೆ ಸಾಕ್ಷಿಯಾಗಿದೆ’ ಎಂದು ಹೇಳುವರು.
29 “ಯೆಹೋವನಿಗೆ ವಿರೋಧಿಗಳಾಗಲು ನಮಗೆ ನಿಜವಾಗಿಯೂ ಇಷ್ಟವಿಲ್ಲ. ಆತನಿಗೆ ಅವಿಧೇಯರಾಗುವುದಕ್ಕೂ ಇಷ್ಟವಿಲ್ಲ. ನಿಜವಾದ ಯಜ್ಞವೇದಿಕೆಯು ಪವಿತ್ರಗುಡಾರದ ಎದುರಿಗೆ ಮಾತ್ರ ಇದೆ. ಆ ಯಜ್ಞವೇದಿಕೆಯು ನಮ್ಮ ದೇವರಾದ ಯೆಹೋವನದು ಎಂಬುದನ್ನು ನಾವು ಬಲ್ಲೆವು” ಎಂಬುದಾಗಿ ಉತ್ತರಕೊಟ್ಟರು.
30 ಯಾಜಕನಾದ ಫೀನೆಹಾಸನು ಮತ್ತು ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಕುಲದ ಅರ್ಧಜನರ ಮಾತುಗಳನ್ನು ಕೇಳಿದರು. ಇವರು ಹೇಳುತ್ತಿರುವುದು ಸತ್ಯ ಎಂದು ಅವರಿಗೆ ಮನದಟ್ಟಾಯಿತು.
31 ಆಗ ಯಾಜಕನಾದ ಫೀನೆಹಾಸನು ಈ ಕುಲಗಳವರಿಗೆ, “ಯೆಹೋವನು ನಮ್ಮೊಂದಿಗಿದ್ದಾನೆಂಬುದು ಮತ್ತು ನೀವು ಆತನಿಗೆ ವಿರೋಧಿಗಳಾಗಿಲ್ಲವೆಂಬುದು ಈಗ ನಮಗೆ ತಿಳಿಯಿತು. ಯೆಹೋವನು ಇಸ್ರೇಲರನ್ನು ಶಿಕ್ಷಿಸುವುದಿಲ್ಲವೆಂದು ನಮಗೆ ಸಂತೋಷವಾಗಿದೆ” ಎಂದು ಹೇಳಿದನು.
32 ಆಗ ಫೀನೆಹಾಸನು ಮತ್ತು ಕುಲಾಧಿಪತಿಗಳು ಆ ಸ್ಥಳದಿಂದ ತಮ್ಮ ಮನೆಗಳಿಗೆ ಹೋದರು. ಅವರು ರೂಬೇನ್ಯರನ್ನು ಮತ್ತು ಗಾದ್ಯರನ್ನು ಗಿಲ್ಯಾದ್ ಪ್ರದೇಶದಲ್ಲಿ ಬಿಟ್ಟು ಕಾನಾನಿಗೆ ಹಿಂತಿರುಗಿ ನಡೆದ ಸಂಗತಿಯನ್ನು ಇಸ್ರೇಲರಿಗೆ ತಿಳಿಸಿದರು.
33 ಆಗ ಇಸ್ರೇಲರಿಗೆ ಸಮಾಧಾನವಾಯಿತು. ಅವರು ಸಂತೋಷಪಟ್ಟು ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅವರು ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆ ಕುಲದವರೊಡನೆ ಯುದ್ಧ ಮಾಡಬಾರದೆಂದೂ ಅವರು ವಾಸಮಾಡುತ್ತಿರುವ ಪ್ರದೇಶವನ್ನು ನಾಶಮಾಡಬಾರದೆಂದೂ ನಿರ್ಧರಿಸಿದರು.
34 ರೂಬೇನ್ಯರು ಮತ್ತು ಗಾದ್ಯರು, “ಯೆಹೋವನೇ ದೇವರು ಎಂಬುದಕ್ಕೆ ಈ ಯಜ್ಞವೇದಿಕೆಯೇ ಸಾಕ್ಷಿ” ಎಂದು ಅದಕ್ಕೆ “ಏದ್” ಎಂದು ಹೆಸರಿಟ್ಟರು.