52
ಜೆರುಸಲೇಮಿನ ಪತನ
ಚಿದ್ಕೀಯನು ಯೆಹೂದದ ರಾಜನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು. ಚಿದ್ಕೀಯನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಹಮೂಟಲ್. ಈಕೆ ಯೆರೆಮೀಯನ* ಮಗಳು. ಹಮೂಟಲಳ ಮನೆತನದವರು ಲಿಬಐ ಪಟ್ಟಣದ ನಿವಾಸಿಗಳಾಗಿದ್ದರು. ರಾಜನಾದ ಯೆಹೋಯಾಕೀಮನು ಮಾಡಿದಂತೆ ಚಿದ್ಕೀಯನು ದುಷ್ಕೃತ್ಯಗಳನ್ನು ಮಾಡಿದನು. ಚಿದ್ಕೀಯನು ಆ ದುಷ್ಕೃತ್ಯಗಳನ್ನು ಮಾಡಿದ್ದು ಯೆಹೋವನಿಗೆ ಒಪ್ಪಿಗೆಯಾಗಲಿಲ್ಲ. ಯೆಹೋವನಿಗೆ ಅವರ ಮೇಲೆ ಕೋಪ ಬಂದುದರಿಂದ ಜೆರುಸಲೇಮ್ ಮತ್ತು ಯೆಹೂದಗಳಿಗೆ ವಿಪತ್ತುಗಳು ಸಂಭವಿಸಿದವು. ಕೊನೆಗೆ, ಯೆಹೋವನು ಜೆರುಸಲೇಮ್ ಮತ್ತು ಯೆಹೂದದ ಜನರನ್ನು ತನ್ನಿದ ದೂರ ಎಸೆದುಬಿಟ್ಟನು.
ಚಿದ್ಕೀಯನು ಬಾಬಿಲೋನ್ ರಾಜನ ವಿರುದ್ಧವಾಗಿ ದಂಗೆ ಎದ್ದನು. ಆದ್ದರಿಂದ ಚಿದ್ಕೀಯನು ತನ್ನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ದಂಡಯಾತ್ರೆ ಕೈಗೊಂಡನು. ನೆಬೂಕದ್ನೆಚ್ಚರನ ಸಂಗಡ ಅವನ ಇಡೀ ಸೈನ್ಯವಿತ್ತು. ಬಾಬಿಲೋನ್ ಸೈನ್ಯವು ಜೆರುಸಲೇಮಿನ ಹೊರಭಾಗದಲ್ಲಿ ಬೀಡುಬಿಟ್ಟಿತು. ಆ ನಗರವನ್ನು ಹತ್ತಲು ಅನುಕೂಲವಾಗುವಂತೆ ಅವರು ನಗರದ ಪೌಳಿಗೋಡೆಗೆ ಅಲ್ಲಲ್ಲಿ ಇಳಿಜಾರಾದ ಗೋಡೆಗಳನ್ನು ಕಟ್ಟಿದ್ದರು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದವರೆಗೆ ಬಾಬಿಲೋನಿನ ಸೈನ್ಯವು ಜೆರುಸಲೇಮ್ ನಗರವನ್ನು ಮುತ್ತಿಗೆ ಹಾಕಿತ್ತು. ಆ ವರ್ಷದ ನಾಲ್ಕನೆ ತಿಂಗಳಿನ ಒಂಭತ್ತನೆ ದಿನದವರೆಗೆ ಆ ನಗರದಲ್ಲಿ ಹಸಿವಿನ ಹಾವಳಿ ತುಂಬ ಹೆಚ್ಚಾಗಿತ್ತು. ಆ ನಗರದಲ್ಲಿ ಜನರಿಗೆ ತಿನ್ನಲು ಆಹಾರವೇ ಇರಲಿಲ್ಲ. ಆ ದಿನ ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿ ನುಗ್ಗಿತ್ತು. ಜೆರುಸಲೇಮಿನ ಸೈನಿಕರು ಓಡಿಹೋದರು. ಅವರು ರಾತ್ರಿಯ ಸಮಯದಲ್ಲಿ ಎರಡು ಗೋಡೆಗಳ ಮಧ್ಯದ ಬಾಗಿಲಿನಿಂದ ನಗರದಿಂದ ಓಡಿಹೋದರು. ಆ ಬಾಗಿಲು ರಾಜನ ಉದ್ಯಾನವನದ ಹತ್ತಿರ ಇತ್ತು. ಬಾಬಿಲೋನಿನ ಸೈನಿಕರು ಜೆರುಸಲೇಮ್ ನಗರವನ್ನು ಮುತ್ತಿದ್ದರೂ ಜೆರುಸಲೇಮಿನ ಸೈನಿಕರು, ಮರುಭೂಮಿಯ ಕಡೆಗೆ ಓಡಿಹೋದರು.
ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬೆನ್ನಟ್ಟಿದರು. ಅವರು ಅವನನ್ನು ಜೆರಿಕೊವಿನ ಬಯಲಿನಲ್ಲಿ ಹಿಡಿದರು. ಚಿದ್ಕೀಯನ ಎಲ್ಲಾ ಸೈನಿಕರು ಓಡಿಹೋದರು. ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬಂಧಿಸಿ ಅವನನ್ನು ರಿಬ್ಲದಲ್ಲಿದ್ದ ತಮ್ಮ ರಾಜನ ಬಳಿಗೆ ಹಿಡಿದುಕೊಂಡು ಹೋದರು. ರಿಬ್ಲವು ಹಮಾತ್ ಪ್ರದೇಶದಲ್ಲಿದೆ. ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಬಗ್ಗೆ ತನ್ನ ತೀರ್ಪನ್ನು ಪ್ರಕಟಪಡಿಸಿದನು. 10 ರಿಬ್ಲ ನಗರದಲ್ಲಿ ಬಾಬೆಲಿನ ರಾಜನು ಚಿದ್ಕೀಯನ ಮಕ್ಕಳನ್ನು ಸಂಹರಿಸಿದನು. ಚಿದ್ಕೀಯನು ತನ್ನ ಮಕ್ಕಳ ಕೊಲೆಯನ್ನು ಕಣ್ಣಾರೆ ನೋಡುವಂತೆ ಮಾಡಲಾಯಿತು. ಬಾಬಿಲೋನಿನ ರಾಜನು ಯೆಹೂದದ ರಾಜನ ಎಲ್ಲಾ ಅಧಿಕಾರಿಗಳನ್ನು ಸಹ ಕೊಲ್ಲಿಸಿದನು. 11 ತರುವಾಯ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣುಗಳನ್ನು ಸಹ ಕೀಳಿಸಿದನು. ಅವನಿಗೆ ಕಂಚಿನ ಸರಪಳಿಗಳನ್ನು ಬಿಗಿಸಿದನು. ಆಮೇಲೆ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಬಾಬಿಲೋನಿನಲ್ಲಿ ಚಿದ್ಕೀಯನನ್ನು ಸೆರೆಮನೆಯಲ್ಲಿ ಇಟ್ಟನು. ಚಿದ್ಕೀಯನು ಸಾಯುವವರೆಗೆ ಸೆರೆಮನೆಯಲ್ಲಿದ್ದನು.
12 ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಭತ್ತನೆ ವರ್ಷದ ಐದನೆ ತಿಂಗಳಿನ ಹತ್ತನೆ ದಿನ ಬಾಬಿಲೋನಿನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಜೆರುಸಲೇಮಿಗೆ ಬಂದನು. ನೆಬೂಜರದಾನನು ಬಾಬಿಲೋನಿನ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. 13 ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು. 14 ಬಾಬಿಲೋನಿನ ಇಡೀ ಸೈನ್ಯವು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆದುಹಾಕಿತು. ಆ ಸೈನ್ಯವು ರಾಜನ ವಿಶೇಷ ರಕ್ಷಕದಳದ ಅಧಿಪತಿಯ ಅಧಿನದಲ್ಲಿತ್ತು. 15 ಸೇನಾಧಿಪತಿಯಾದ ನೆಬೂಜರದಾನನು ಜೆರುಸಲೇಮಿನಲ್ಲಿ ಇನ್ನೂ ಉಳಿದುಕೊಂಡಿದ್ದ ಜನರನ್ನು ಬಂಧಿಗಳನ್ನಾಗಿ ಮಾಡಿಕೊಂಡನು. ಈ ಮುಂಚೆ ಬಾಬಿಲೋನಿನ ರಾಜನಿಗೆ ಶರಣಾಗತರಾದವರನ್ನು ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನ್ನು ಸಹ ಅವನು ತೆಗೆದುಕೊಂಡು ಹೋದನು. 16 ಆದರೆ ಕೆಲವು ಜನ ಕಡುಬಡವರನ್ನು ನೆಬೂಜರದಾನನು ಆ ಪ್ರದೇಶದಲ್ಲಿಯೇ ಬಿಟ್ಟುಹೋದನು. ಅವನು ಆ ಜನರನ್ನು ದ್ರಾಕ್ಷಿತೋಟಗಳಲ್ಲಿ ಮತ್ತು ಹೊಲಗಳಲ್ಲಿ ಕೆಲಸ ಮಾಡಲು ಬಿಟ್ಟುಹೋದನು.
17 ಬಾಬಿಲೋನಿನ ಸೈನಿಕರು ಪವಿತ್ರಾಲಯದ ಕಂಚಿನ ಕಂಬಗಳನ್ನು ಮುರಿದರು. ಅವರು ಯೆಹೋವನ ಆಲಯದಲ್ಲಿದ್ದ ಪೀಠಗಳನ್ನು ಮತ್ತು ಕಂಚಿನ ಸರೋವರಗಳನ್ನು ಸಹ ಮುರಿದುಬಿಟ್ಟರು. ಅವರು ಎಲ್ಲಾ ಕಂಚಿನ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 18 ಬಾಬಿಲೋನಿನ ಸೈನಿಕರು ಪವಿತ್ರಾಲಯದಿಂದ ಪಾತ್ರೆಗಳು, ಸಲಿಕೆಗಳು, ಕತ್ತರಿಗಳು, ದೊಡ್ಡ ಬೋಗುಣಿಗಳು, ತಟ್ಟೆಗಳು ಮತ್ತು ಪವಿತ್ರಾಲಯದ ಸೇವೆಗಾಗಿ ಉಪಯೋಗಿಸಲಾಗುವ ಕಂಚಿನ ಸಾಮಾನುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 19 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಬೋಗುಣಿಗಳನ್ನು, ಧೂಪಾರತಿಗಳನ್ನು, ದೊಡ್ಡ ಬಟ್ಟಲುಗಳನ್ನು, ಪಾತ್ರೆಗಳನ್ನು, ದೀಪಸ್ತಂಭಗಳನ್ನು, ತಟ್ಟೆಗಳನ್ನು, ಪಾನನೈವೇದ್ಯಕ್ಕೆ ಉಪಯೋಗಿಸುವ ಬೋಗುಣಿಗಳನ್ನು ತೆಗೆದುಕೊಂಡು ಹೋದನು. ಚಿನ್ನ ಅಥವಾ ಬೆಳ್ಳಿಯ ಪ್ರತಿಯೊಂದು ವಸ್ತುವನ್ನು ಅವನು ತೆಗೆದುಕೊಂಡನು. 20 ಎರಡು ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಅದನ್ನು ಹೊತ್ತುಕೊಂಡಿರುವ ಹನ್ನೆರಡು ಕಂಚಿನ ಹೋರಿಗಳು ಮತ್ತು ಚಲಿಸಬಲ್ಲ ಅಡ್ಡಣಿಗಳು ಬಹಳ ಭಾರವಾಗಿದ್ದವು. ರಾಜನಾದ, ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಆ ವಸ್ತುಗಳನ್ನು ಮಾಡಿಸಿದ್ದನು. ಆ ವಸ್ತುಗಳಿಗಾಗಿ ಉಪಯೋಗಿಸಲಾದ ಕಂಚು ತೂಕ ಮಾಡಲಾರದಷ್ಟು ಭಾರವಾಗಿತ್ತು.
21 ಪ್ರತಿಯೊಂದು ಕಂಚಿನ ಕಂಬ ಇಪ್ಪತ್ತೇಳು ಅಡಿ ಎತ್ತರವಾಗಿದ್ದು ಅದರ ಸುತ್ತಳತೆ ಹದಿನೆಂಟು ಅಡಿ ಇತ್ತು. ಪ್ರತಿಯೊಂದು ಕಂಬ ಟೊಳ್ಳಾಗಿದ್ದು ಅದರ ತಗಡು ನಾಲ್ಕು ಅಂಗುಲ ದಪ್ಪವಾಗಿತ್ತು. 22 ಮೊದಲನೇ ಕಂಬದ ಮೇಲೆ ಏಳುವರೆ ಅಡಿ ಎತ್ತರದ ಕಂಚಿನ ಕಂಬವಿತ್ತು. ಅದು ಅಲ್ಲಲ್ಲಿ ಜಾಲರಿಗಳಿಂದ ಮತ್ತು ಕಂಚಿನ ದಾಳಿಂಬೆಗಳಿಂದ ಅಲಂಕೃತವಾಗಿತ್ತು. ಎರಡನೆಯ ಕಂಬದಲ್ಲಿಯೂ ದಾಳಿಂಬೆಗಳು ಶೋಭಿಸುತ್ತಿದ್ದವು. ಅದು ಮೊದಲನೆ ಕಂಬದಂತೆ ಇತ್ತು. 23 ಕಂಬಗಳ ಪಕ್ಕದಲ್ಲಿ ತೊಂಭತ್ತಾರು ದಾಳಿಂಬೆಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಾಗಿ ನೂರು ದಾಳಿಂಬೆ ಹಣ್ಣುಗಳಿದ್ದವು.
24 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೆರಾಯ ಮತ್ತು ಚೆಫನ್ಯರನ್ನು ಸೆರೆಹಿಡಿದನು. ಸೆರಾಯನು ಮಹಾ ಯಾಜಕನಾಗಿದ್ದನು ಮತ್ತು ಚೆಫನ್ಯನು ಅವರ ತರುವಾಯದ ಶ್ರೇಷ್ಠ ಯಾಜಕನಾಗಿದ್ದನು. ಮೂರು ಜನ ದ್ವಾರಪಾಲಕರನ್ನು ಕೂಡ ಸೆರೆಹಿಡಿಯಲಾಯಿತು. 25 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೈನ್ಯದ ವ್ಯವಸ್ಥಾಪಕನ ಅಧಿಕಾರಿಯನ್ನು ಬಂಧಿಸಿದನು. ಅವನು ರಾಜನ ಏಳು ಜನ ಆಪ್ತ ಮಂತ್ರಿಗಳನ್ನು ಸಹ ಸೆರೆಹಿಡಿದನು. ಅವರೆಲ್ಲ ಇನ್ನೂ ಜೆರುಸಲೇಮಿನಲ್ಲಿದ್ದರು. ಯುದ್ಧಕ್ಕೆ ಹೋಗುವವರ ಪಟ್ಟಿಯನ್ನು ಮಾಡುವ ಲಿಪಿಗಾರನನ್ನು ಸಹ ಅವನು ಸೆರೆಹಿಡಿದನು. ನಗರದಲ್ಲಿದ್ದ ಅರವತ್ತು ಮಂದಿ ಜನಸಾಮಾನ್ಯರನ್ನು ಸಹ ಅವನು ಸೆರೆಹಿಡಿದನು. 26-27 ಸೇನಾಧಿಪತಿಯಾದ ನೆಬೂಜರದಾನನು ಆ ಜನರನ್ನೆಲ್ಲ ಸೆರೆಹಿಡಿದನು. ಬಾಬಿಲೋನಿನ ರಾಜನಲ್ಲಿಗೆ ತಂದನು. ಬಾಬಿಲೋನಿನ ರಾಜನು ರಿಬ್ಲ ನಗರದಲ್ಲಿದ್ದನು. ರಿಬ್ಲ ನಗರವು ಹಮಾತ್ ಪ್ರದೇಶದಲ್ಲಿದೆ. ಆ ರಿಬ್ಲ ನಗರದಲ್ಲಿಯೇ ರಾಜನು ಅವರನ್ನೆಲ್ಲ ವಧಿಸಬೇಕೆಂದು ಅಪ್ಪಣೆ ಮಾಡಿದನು. ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. 28 ನೆಬೂಕದ್ನೆಚ್ಚರನು ಸೆರೆಹಿಡಿದುಕೊಂಡವರ ವಿವರ ಹೀಗಿದೆ:
 
ರಾಜನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಏಳನೇ ವರ್ಷದಲ್ಲಿ ಯೆಹೂದದಿಂದ ಒಯ್ಯಲ್ಪಟ್ಟ ಜನರು 3,023.
29 ನೆಬೂಕದ್ನೆಚ್ಚರನ ಹದಿನೆಂಟನೇ ವರ್ಷದಲ್ಲಿ§ ಜೆರುಸಲೇಮಿನಿಂದ 832.
30 ನೆಬೂಕದ್ನೆಚ್ಚರನ ಇಪ್ಪತ್ಮೂರನೇ ವರ್ಷದಲ್ಲಿ** ನೆಬೂಜರದಾನನು 745 ಜನ ಯೆಹೂದಿಯರನ್ನು ಸೆರೆಹಿಡಿದನು. ನೆಬೂಜರದಾನನು ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು.
 
ಒಟ್ಟಿನಲ್ಲಿ 4,600 ಜನರನ್ನು ಸೆರೆಹಿಡಿಯಲಾಗಿತ್ತು.
ಯೆಹೋಯಾಖೀನನ ಬಿಡುಗಡೆ
31 ಯೆಹೂದದ ರಾಜನಾಗಿದ್ದ ಯೆಹೋಯಾಖೀನನು ಮೂವತ್ತೇಳು ವರ್ಷ ಬಾಬಿಲೋನಿನ ಸೆರೆಮನೆಯಲ್ಲಿದ್ದನು. ಆತನ ಕಾರಾಗೃಹವಾಸದ ಮೂವತ್ತೇಳನೇ ವರ್ಷದಲ್ಲಿ ಬಾಬಿಲೋನಿನ ರಾಜನಾದ ಎವೀಲ್ಮೆರೋದಕನು ಯೆಹೋಯಾಖೀನನ ಮೇಲೆ ದಯೆತೋರಿದನು. ಆ ವರ್ಷ ಅವನು ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದನು. ಇದೇ ವರ್ಷ ಎವೀಲ್ಮೆರೋದಕನು ಯೆಹೋಯಾಖೀನನನ್ನು ಆ ವರ್ಷದ ಹನ್ನೆರಡನೆ ತಿಂಗಳಿನ ಇಪ್ಪತ್ತೈದನೆ ದಿನ ಬಿಡುಗಡೆ ಮಾಡಿದನು. 32 ಎವೀಲ್ಮೆರೋದಕನು ಯೆಹೋಯಾಖೀನನೊಂದಿಗೆ ಪ್ರೀತಿಯಿಂದ ಮಾತನಾಡಿದನು. ಅವನು ತನ್ನ ಸಂಗಡ ಬಾಬಿಲೋನಿನಲ್ಲಿದ್ದ ಎಲ್ಲಾ ರಾಜರುಗಳಿಗಿಂತ ಉನ್ನತಸ್ಥಾನವನ್ನು ಯೆಹೋಯಾಖೀನನಿಗೆ ಕೊಟ್ಟನು. 33 ಯೆಹೋಯಾಖೀನನು ತನ್ನ ಸೆರೆಮನೆಯ ಬಟ್ಟೆಗಳನ್ನು ತೆಗೆದುಹಾಕಿದನು. ಅವನು ಬಂದುಕಿರುವವರೆಗೂ ರಾಜನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು. 34 ಪ್ರತಿದಿನ ಬಾಬಿಲೋನಿನ ರಾಜನು ಯೆಹೋಯಾಖೀನನಿಗೆ ಭತ್ಯವನ್ನು ಕೊಡುತ್ತಿದ್ದನು. ಯೆಹೋಯಾಖೀನನು ಸಾಯುವವರೆಗೆ ಈ ಕ್ರಮ ಮುಂದುವರೆಯಿತು.
* 52:1 ಯೆರೆಮೀಯ ಇವನು ಯೆರೆಮೀಯ ಪ್ರವಾದಿಯಲ್ಲ. ಅದೇ ಹೆಸರಿನ ಬೇರೆಯವನು. 52:4 ಹತ್ತನೆಯ ದಿನ 9ನೇ ವರ್ಷದ 10ನೇ ತಿಂಗಳಿನ 10ನೇ ದಿನ ಕ್ರಿ.ಪೂ. 588 ಜನವರಿ ತಿಂಗಳು. 52:28 ನೆಬೂಕದ್ನೆಚ್ಚರನ … ಎಳನೇ ವರ್ಷ ಕ್ರಿ.ಪೂ. 598 ಮಧ್ಯದಿಂದ 597 ಮಧ್ಯದವರೆಗೆ. § 52:29 ನೆಬೂಕದ್ನೆಚ್ಚರನ ಹದಿನೆಂಟನೇ ವರ್ಷ ಕ್ರಿ.ಪೂ. 588 ಮಧ್ಯದಿಂದ 587 ಮಧ್ಯದವರೆಗೆ. ** 52:30 ನೆಬೂಕದ್ನೆಚ್ಚರನ ಇಪ್ಪತ್ಮೂರನೇ ವರ್ಷ ಕ್ರಿ.ಪೂ. 582 ಮಧ್ಯದಿಂದ 581 ಮಧ್ಯದವರೆಗೆ.